ಸೋಲಿನೊಂದಿಗೆ ಆ್ಯಂಡ್ರೆ ರಸೆಲ್ ವಿದಾಯ- ಅಂತಾರಾಷ್ಟ್ರೀಯ ಕ್ರಿಕೆಟ್ಗೆ ದಿಗ್ಗಜ ಕ್ರಿಕೆಟರ್ ಗುಡ್‌ ಬೈ

ಸೋಲಿನೊಂದಿಗೆ ಆ್ಯಂಡ್ರೆ ರಸೆಲ್ ವಿದಾಯ- ಅಂತಾರಾಷ್ಟ್ರೀಯ ಕ್ರಿಕೆಟ್ಗೆ ದಿಗ್ಗಜ ಕ್ರಿಕೆಟರ್ ಗುಡ್‌ ಬೈ

ಜಮೈಕಾದ ಸೆಬಿನಾ ಪಾರ್ಕ್​ ಮೈದಾನದಲ್ಲಿ ಭಾವುಕತೆಯ ಕ್ಷಣ ಸೃಷ್ಟಿಯಾಗಿತ್ತು. ವೆಸ್ಟ್ ಇಂಡೀಸ್‌ನ ಆಲ್‌ರೌಂಡರ್ ಆ್ಯಂಡ್ರೆ ರಸೆಲ್ 4 ಸಿಕ್ಸರ್ ಸಿಡಿಸಿದಾಗ ಮೈದಾನದ ತುಂಬೆಲ್ಲಾ ಅಭಿಮಾನಿಗಳು ಖುಷಿಯಲ್ಲಿ ಕುಣಿದು ಕುಪ್ಪಳಿಸಿದ್ರೂ ಕೂಡಾ ಕಣ್ಣಂಚಿನಲ್ಲಿ ನೀರು ಜಿನುಗುತ್ತಿತ್ತು. ಯಾಕೆಂದರೆ, ಅಭಿಮಾನಿಗಳ ಪ್ರೀತಿಯ ರಸೆಲ್ ಅವರ ಕೊನೇ ಪಂದ್ಯ ಅದಾಗಿತ್ತು. ಕೊನೆಗೂ ರಸೆಲ್ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ವಿದಾಯ ಹೇಳಿದ್ದಾರೆ. ಅದು ಕೂಡಾ ಸೋಲಿನೊಂದಿಗೆ ವಿದಾಯ ಹೇಳಿದ್ದಾರೆ.

ಇದನ್ನೂ ಓದಿ:ಮ್ಯಾಂಚೆಸ್ಟರ್ ಕೋಟೆ ಭೇದಿಸುತ್ತಾ ಭಾರತ? – 89 ವರ್ಷಗಳ ಶಾಪ ವಿಮೋಚನೆಯಾಗುತ್ತಾ?

ವೆಸ್ಟ್ ಇಂಡೀಸ್ ತಂಡದ ಸ್ಟಾರ್ ಆಲ್​ರೌಂಡರ್ ಆ್ಯಂಡ್ರೆ ರಸೆಲ್ (Andre Russell) ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ವಿದಾಯ ಹೇಳಿದ್ದಾರೆ. ಜಮೈಕಾದ ಸೆಬಿನಾ ಪಾರ್ಕ್​ ಮೈದಾನದಲ್ಲಿ ನಡೆದ ಆಸ್ಟ್ರೇಲಿಯಾ ವಿರುದ್ಧದ 2ನೇ ಪಂದ್ಯ ಆಡುವ ಮೂಲಕ ರಸೆಲ್ ಅಭಿಮಾನಿಗಳ ಮುಂದೆ ವಿದಾಯ ಹೇಳಿದ್ದಾರೆ. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ವೆಸ್ಟ್ ಇಂಡೀಸ್ ಪರ ಆ್ಯಂಡ್ರೆ ರಸೆಲ್ 15 ಎಸೆತಗಳಲ್ಲಿ 4 ಸಿಕ್ಸ್ ಹಾಗೂ 2 ಫೋರ್​ಗಳೊಂದಿಗೆ 36 ರನ್ ಚಚ್ಚಿದ್ದರು. ಈ ಸ್ಫೋಟಕ ಬ್ಯಾಟಿಂಗ್​ನ ನೆರವಿನೊಂದಿಗೆ ವೆಸ್ಟ್ ಇಂಡೀಸ್ ತಂಡವು 20 ಓವರ್​ಗಳಲ್ಲಿ 8 ವಿಕೆಟ್ ಕಳೆದುಕೊಂಡು 172 ರನ್ ಕಲೆಹಾಕಿತು. ಈ ಗುರಿಯನ್ನು ಬೆನ್ನತ್ತಿದ ಆಸ್ಟ್ರೇಲಿಯಾ ಪರ ಜೋಶ್ ಇಂಗ್ಲಿಸ್ ಭರ್ಜರಿ 78 ರನ್ ಸಿಡಿಸಿದ್ರು. ಹಾಗೂ ಕ್ಯಾಮರೋನ್ ಗ್ರೀನ್ 56 ರನ್‌ಗಳ ಭರ್ಜರಿ ಅರ್ಧಶತಕ ಬಾರಿಸಿದ್ದರು. ಈ ಮೂಲಕ ಆಸ್ಟ್ರೇಲಿಯಾ ತಂಡ 15.2 ಓವರ್​ಗಳಲ್ಲಿ 173 ರನ್​ಗಳಿಸಿ 8 ವಿಕೆಟ್​ಗಳ ಭರ್ಜರಿ ಜಯ ಸಾಧಿಸಿದೆ. ಇದರೊಂದಿಗೆ ರಸೆಲ್ ಅವರ ಅಂತಾರಾಷ್ಟ್ರೀಯ ಕೆರಿಯರ್ ಸೋಲಿನೊಂದಿಗೆ ಕೊನೆಗೊಂಡಿತು.

2011 ರಲ್ಲಿ ಪಾಕಿಸ್ತಾನ್ ವಿರುದ್ದ ಕಣಕ್ಕಿಳಿಯುವ ಮೂಲಕ ವೆಸ್ಟ್ ಇಂಡೀಸ್​ ಪರ ಟಿ20 ಕೆರಿಯರ್ ಆರಂಭಿಸಿದ್ದ ಆ್ಯಂಡ್ರೆ ರಸೆಲ್ 86 ಪಂದ್ಯಗಳನ್ನಾಡಿದ್ದಾರೆ. ಈ ವೇಳೆ 75 ಇನಿಂಗ್ಸ್​ಗಳಲ್ಲಿ ಬ್ಯಾಟ್ ಬೀಸಿರುವ ಅವರು 3 ಅರ್ಧಶತಕಗೊಂದಿಗೆ 1122 ರನ್ ಕಲೆಹಾಕಿದ್ದಾರೆ. ಹಾಗೆಯೇ ಬೌಲಿಂಗ್​ನಲ್ಲಿ 61 ವಿಕೆಟ್ ಕಬಳಿಸಿ ಮಿಂಚಿದ್ದಾರೆ. ಇನ್ನು 2011 ರಲ್ಲಿ ಐರ್ಲೆಂಡ್ ವಿರುದ್ಧದ ಪಂದ್ಯದ ಮೂಲಕ ಏಕದಿನ ಕ್ರಿಕೆಟ್ ಕೆರಿಯರ್ ಆರಂಭಿಸಿದ್ದ ಆ್ಯಂಡ್ರೆ ರಸೆಲ್ ಈವರೆಗೆ ಆಡಿರುವುದು 56 ಪಂದ್ಯಗಳನ್ನು ಮಾತ್ರ. ಈ ವೇಳೆ 4 ಅರ್ಧಶತಕಗಳೊಂದಿಗೆ 1034 ರನ್ ಕಲೆಹಾಕಿದ್ದಾರೆ. ಇನ್ನು 55 ಏಕದಿನ ಇನಿಂಗ್ಸ್​ಗಳಲ್ಲಿ ಬೌಲಿಂಗ್ ಮಾಡಿರುವ ಅವರು ಒಟ್ಟು 70 ವಿಕೆಟ್​ಗಳನ್ನು ಸಹ ಕಬಳಿಸಿದ್ದಾರೆ. ಇದೀಗ 14 ವರ್ಷಗಳ ಅಂತಾರಾಷ್ಟ್ರೀಯ ಕ್ರಿಕೆಟ್​ ಕೆರಿಯರ್​ಗೆ ಗುಡ್ ಬೈ ಹೇಳಿರುವ ರಸೆಲ್, ಮುಂದಿನ ದಿನಗಳಲ್ಲಿ ಟಿ20 ಲೀಗ್​ಗಳಲ್ಲಿ ಮುಂದುವರೆಯುವುದಾಗಿ ತಿಳಿಸಿದ್ದಾರೆ.

 

Sulekha