ಆನ್‌ಲೈನ್ ನಲ್ಲಿ ಆರ್ಡರ್ ಮಾಡಿದ್ದು ಎಲೆಕ್ಟ್ರಾನಿಕ್​ ಉಪಕರಣ.. ಬಂದಿದ್ದು ವ್ಯಕ್ತಿಯ ಶವ!

ಆನ್‌ಲೈನ್ ನಲ್ಲಿ ಆರ್ಡರ್ ಮಾಡಿದ್ದು ಎಲೆಕ್ಟ್ರಾನಿಕ್​ ಉಪಕರಣ.. ಬಂದಿದ್ದು ವ್ಯಕ್ತಿಯ ಶವ!

ಆನ್‌ಲೈನ್ ಶಾಪಿಂಗ್ ಇಂದು ತುಂಬಾ ಜನಪ್ರಿಯ. ಕೋವಿಡ್ ನಂತರ ಆನ್‌ಲೈನ್ ಶಾಪಿಂಗ್‌ಗೆ ಹೆಚ್ಚಿನ ಜನಪ್ರಿಯತೆ ದೊರೆತಿದೆ. ಅಂಗಡಿ, ಅಂಗಡಿ ಸುತ್ತೋದು ಯಾರು ಅಂತಾ ಅನೇಕರು ಆನ್‌ಲೈನ್‌ ಶಾಪಿಂಗ್‌ ಮಾಡ್ತಾರೆ. ಕೆಲವೊಂದು ಬಾರಿ ಆನ್‌ಲೈನ್‌ ಶಾಪಿಂಗ್‌ ವೇಳೆ  ಇಟ್ಟಿಗೆಗಳು, ಕಲ್ಲುಗಳು, ಸೋಪ್​ಗಳು ಬಂದಿರೋ ಉದಾಹರಣೆ ಸಾಕಷ್ಟು ಇದೆ. ಇದೀಗ ಎಲೆಕ್ಟ್ರಾನಿಕ್ ಉಪಕರಣಗಳನ್ನು ಆರ್ಡರ್​ ಮಾಡಿದ್ದ ಮಹಿಳೆಗೆ ಪಾರ್ಸೆಲ್​ನಲ್ಲಿ ವ್ಯಕ್ತಿಯ ಶವ ಬಂದಿದೆ.

ಇದನ್ನೂ ಓದಿ: ಫೈರ್‌ ಬ್ರ್ಯಾಂಡ್‌ ‌ಹ್ಯಾಟ್ರಿಕ್‌ ಕಳಪೆ – ಚೈತ್ರಾ ಕುಂದಾಪುರಗೆ ಮತ್ತೆ ಜೈಲು

ಈ ಘಟನೆ ನಡೆದಿದ್ದು, ಆಂಧ್ರಪ್ರದೇಶದ ಪಶ್ಚಿಮ ಗೋದಾವರಿ ಜಿಲ್ಲೆಯ ಉಂಡಿ ಮಂಡಲದ ಯಂಡಗಂಡಿ ಗ್ರಾಮದಲ್ಲಿ ನಡೆದ ಘಟನೆ ಇದಾಗಿದೆ. ಸ್ಥೆಯೊಂದರಿಂದ ಎಲೆಕ್ಟ್ರಾನಿಕ್ ವಸ್ತುಗಳನ್ನು ಆರ್ಡರ್ ಮಾಡಿದ್ದರು. ಆದರೆ, ಪಾರ್ಸೆಲ್ ತೆರೆದು ನೋಡಿದಾಗ ಒಳಗಿದ್ದ ವ್ಯಕ್ತಿಯ ಮೃತದೇಹ ಕಂಡು ಬೆಚ್ಚಿಬಿದ್ದಿದ್ದಾರೆ. ಸದ್ಯ ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಲಾಗಿದ್ದು, ಬಳಿಕ ತನಿಖೆ ನಡೆಸಲಾಗುತ್ತಿದೆ. ಯಂಡಗುಂದಿ ಗ್ರಾಮದಲ್ಲಿ ವಾಸವಾಗಿರುವ ನಾಗ ತುಳಸಿ ಕ್ಷತ್ರಿಯ ಸೇವಾ ಸಮಿತಿಯಲ್ಲಿ ಧನ ಸಹಾಯಕ್ಕಾಗಿ ಅರ್ಜಿ ಸಲ್ಲಿಸಿದ್ದರು. ಇದಾದ ನಂತರ ಸಮಿತಿಯು ಮಹಿಳೆಗೆ ಟೈಲ್ಸ್ ಕಳುಹಿಸಿದೆ.

ಇದಾದ ನಂತರ ತುಳಸಿ ಮತ್ತೊಮ್ಮೆ ನಿರ್ಮಾಣಕ್ಕೆ ಸಹಾಯಕ್ಕಾಗಿ ಸಮಿತಿಗೆ ಮನವಿ ಮಾಡಿದ್ದು, ಅದರಲ್ಲಿ ವಿದ್ಯುತ್ ಉಪಕರಣಗಳನ್ನು ಕಳುಹಿಸುವ ಬಗ್ಗೆ ಮಾಹಿತಿ ನೀಡಲಾಗಿದೆ. ಸಮಿತಿಯು ಲೈಟ್‌ಗಳು, ಫ್ಯಾನ್‌ಗಳು ಮತ್ತು ಸ್ವಿಚ್‌ಗಳಂತಹ ಎಲೆಕ್ಟ್ರಾನಿಕ್ಸ್ ವಸ್ತುಗಳ ಪಾರ್ಸೆಲ್ ಅನ್ನು ಕಳುಹಿಸುತ್ತಿದೆ ಎಂದು ಮಹಿಳೆಗೆ ವಾಟ್ಸಾಪ್‌ನಲ್ಲಿ ಮಾಹಿತಿ ನೀಡಲಾಗಿತ್ತು.

ಗುರುವಾರ ರಾತ್ರಿ ವ್ಯಕ್ತಿಯೊಬ್ಬ ಪೆಟ್ಟಿಗೆಯನ್ನು ತಲುಪಿಸುವ ಬಗ್ಗೆ ತನಗೆ ತಿಳಿಸಿದ್ದ, ಅವನು ಪಾರ್ಸೆಲ್ ಅನ್ನು ಮನೆಯ ಬಾಗಿಲಿಗೆ ತಂದಿಟ್ಟು ಹೋಗಿದ್ದ. ಸ್ವಲ್ಪ ಸಮಯದ ನಂತರ ಪಾರ್ಸೆಲ್ ತೆರೆದಾಗ ಅದರಲ್ಲಿ ಶವ ಪತ್ತೆಯಾಗಿದೆ. ಇಡೀ ಕುಟುಂಬ ಭಯಭೀತರಾಗಿ ಪೊಲೀಸರಿಗೆ ವಿಷಯ ತಿಳಿಸಿದ್ದಾರೆ. ಪೊಲೀಸರು ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಸರ್ಕಾರಿ ಆಸ್ಪತ್ರೆಗೆ ರವಾನಿಸಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.

ತನಿಖೆಯ ವೇಳೆ ಪಾರ್ಸೆಲ್‌ನಲ್ಲಿ 1.30 ಕೋಟಿ ರೂಪಾಯಿ ಹಣ ನೀಡುವಂತೆ ಬರೆದಿರುವ ಪತ್ರವೊಂದು ಪೊಲೀಸರಿಗೆ ಸಿಕ್ಕಿದೆ. ಅಲ್ಲದೆ, ಈ ಕುಟುಂಬವು ಹಣವನ್ನು ಪಾವತಿಸದಿದ್ದರೆ ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಬೆದರಿಕೆ ಹಾಕಲಾಗಿದೆ. ಪಾರ್ಸೆಲ್ ತಲುಪಿಸಿದವರ ಪತ್ತೆಗೆ ಪೊಲೀಸರು ಪ್ರಯತ್ನಿಸುತ್ತಿದ್ದಾರೆ.

ಇದೇ ವೇಳೆ ಕ್ಷತ್ರಿಯ ಸೇವಾ ಸಮಿತಿಯ ಪ್ರತಿನಿಧಿಗಳಿಗೂ ಸಮನ್ಸ್‌ ಕಳುಹಿಸಲಾಗಿದೆ. ಮೃತದೇಹ ಸುಮಾರು 45 ವರ್ಷದ ವ್ಯಕ್ತಿಯದ್ದು ಎಂದು ಪೊಲೀಸರು ತಿಳಿಸಿದ್ದಾರೆ. ನಾಲ್ಕೈದು ದಿನಗಳ ಹಿಂದೆ ಅವರು ಮೃತಪಟ್ಟಿದ್ದಾರೆ ಎಂದು ನಂಬಲಾಗಿದೆ. ತನಿಖೆಯ ಭಾಗವಾಗಿ, ಸುತ್ತಮುತ್ತಲಿನ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಪೊಲೀಸರು ಕಾಣೆಯಾದವರ ದೂರುಗಳ ಬಗ್ಗೆ ಪರಿಶೀಲನೆ ನಡೆಸುತ್ತಿದ್ದಾರೆ.

Shwetha M