ಹಸಿವಾಯ್ತು ಅಂತಾ ಬಾಂಬ್‌ ಕಚ್ಚಿದ! – ಎಣ್ಣೆ ಮತ್ತಲ್ಲಿ ಇದೆಲ್ಲಾ ಬೇಕಿತ್ತಾ?

ಹಸಿವಾಯ್ತು ಅಂತಾ ಬಾಂಬ್‌ ಕಚ್ಚಿದ! – ಎಣ್ಣೆ ಮತ್ತಲ್ಲಿ ಇದೆಲ್ಲಾ ಬೇಕಿತ್ತಾ?

ಕಂಠಪೂರ್ತಿ ಕುಡಿದವರಿಗೆ ಪ್ರಪಂಚದ ಅರಿವೇ ಇರೋದಿಲ್ಲ. ಊರಿಗೆ ತಾನೇ ರಾಜ.. ತಾನು ಮಾಡಿದ್ದೇ ಸರಿ ಅಂತಾ ಎಣ್ಣೆ ಏಟಲ್ಲಿ ಹೇಗೇಗೋ ವರ್ತಿಸುತ್ತಾನೆ. ಇಲ್ಲೊಬ್ಬ ಕಂಠಪೂರ್ತಿ ಕುಡಿದಿದ್ದಾನೆ. ತಿನ್ನಲು ಏನು ಸಿಗಲಿಲ್ಲ ಅಂತಾ ಬಾಂಬ್‌ ಅನ್ನೇ ತಿನ್ನಲು ಹೋಗಿ, ದುರಂತ ಅಂತ್ಯ ಕಂಡಿದ್ದಾನೆ.

ಏನಿದು ಘಟನೆ?

ಈ ವಿಚಿತ್ರ ಘಟನೆ ಆಂಧ್ರ ಪ್ರದೇಶದ ಚಿತ್ತೂರು ಜಿಲ್ಲೆಯಲ್ಲಿ ಸೋಮವಾರ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಗಡ್ಡಂವರಿ ಪಲ್ಲಿ ಗ್ರಾಮದ ನಿವಾಸಿ ಎಂ. ಚಿರಂಜೀವಿ ಎಂಬಾತ ಕುಡಿತದ ಚಟ ಹೊಂದಿದ್ದ. ಈ ದುರಭ್ಯಾಸವೇ  ಆತನ ಜೀವಕ್ಕೆ ಮುಳುವಾಗಿದೆ. ಸೋಮವಾರ ಚಿರಂಜೀವಿ ಕಂಠಪೂರ್ತಿ ಕುಡಿದಿದ್ದಾನೆ. ಎಣ್ಣೆ ಏಟಲ್ಲಿದ್ದಾತ ಬಾಂಬ್‌ ಅನ್ನು ಕಚ್ಚಿದ್ದಾನೆ. ಬಾಂಬ್‌ ಬಾಯಿಯಲ್ಲೇ ಸ್ಪೋಟಗೊಂಡಿದ್ದು, ಆತ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.

ಮನೆ ಬಿಟ್ಟು ಹೋಗಿದ್ದ ಪತ್ನಿ!

ಚಿರಂಜೀವಿ ವಿಪರೀತ ಕುಡಿತದ ಚಟಕ್ಕೆ ಒಳಗಾಗಿದ್ದ. ಪ್ರತಿ ದಿನ ವಿಪರೀತ ಕುಡಿದು ಮನೆಗೆ ಬರುತ್ತಿದ್ದ. ಈ ಕಾರಣಕ್ಕೆ ಚಿರಂಜೀವಿ ಜೊತೆ ಆತನ ಹೆಂಡತಿ ಜಗಳ ಆಡಿ ಕೆಲ ದಿನಗಳ ಹಿಂದೆ ಮನೆ ಬಿಟ್ಟು ಹೋಗಿದ್ದಳು. ಆಕೆ ಮನೆ ಬಿಟ್ಟು ಹೋದ ಬಳಿಕ ಇನ್ನೂ ಹೆಚ್ಚು ಕುಡಿಯಲು ಪ್ರಾರಂಭಿಸಿದ್ದ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.

ಇದನ್ನೂ ಓದಿ: ಸೋತ ಪಾಕಿಸ್ತಾನ ಪರವಾಗಿ Sorry ಕೇಳಿದ ಅಬ್ದುಲ್ಲಾ ಶಫೀಕ್ – ಪಾಕ್ ತಂಡದ ಫಿಟ್‌ನೆಸ್ ಬಗ್ಗೆ ಮಾಜಿ ನಾಯಕ ವಾಸಿಂ ಅಕ್ರಮ್ ಟೀಕೆ

ಹಸಿವಾಯ್ತು ಅಂತಾ ಬಾಂಬ್‌ ಕಚ್ಚಿದ!

ಚಿರಂಜೀವಿ ಎಂದಿನಂತೆ ಸೋಮವಾರ ಕೂಡ ವಿಪರೀತ ಕುಡಿದಿದ್ದ. ಆ ದಿನ ಆತನಿಗೆ ಜೋರು ಹಸಿವಾಗಿದೆ. ಕುಡಿದ ಅಮಲಿನಲ್ಲಿ ಆತನ ಕೈಗೆ ಏನೂ ಸಿಕ್ಕಿರಲಿಲ್ಲ. ಗ್ರಾಮದಲ್ಲಿ ಆತನಿಗೆ ಕಚ್ಚಾ ಬಾಂಬ್ ಒಂದು ಸಿಕ್ಕಿತು. ಅದನ್ನು ತಿನ್ನುವ ವಸ್ತು ಎಂದು ಭಾವಿಸಿದ ಚಿರಂಜೀವಿ, ಕುಡಿದ ಅಮಲಿನಲ್ಲಿ ಬಾಂಬ್ ಅನ್ನು ಕಡಿದಿದ್ದಾನೆ. ಹೀಗಾಗಿ, ಬಾಂಬ್ ಆತನ ಬಾಯಿಯಲ್ಲೇ ಸ್ಫೋಟಗೊಂಡಿದೆ. ಇದರ ಪರಿಣಾಮವಾಗಿ ಚಿರಂಜೀವಿಯ ತಲೆ ಛಿದ್ರಗೊಂಡಿದೆ.

ಗ್ರಾಮದಲ್ಲಿ ಭಾರೀ ಸ್ಪೋಟದ ಸದ್ದು ಕೇಳಿದ್ದೇ ತಡ ಗ್ರಾಮಸ್ಥರು ಚಿರಂಜೀವಿ ಮನೆಯತ್ತ ದೌಡಾಯಿಸಿದ್ದಾರೆ. ಆರಂಭದಲ್ಲಿ ಆತನಿಗೆ ಏನಾಯ್ತು ಎಂದು ಜನರಿಗೆ ಅರಿವಾಗಿಲ್ಲ. ಕೂಡಲೇ ಆತನನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ, ಆತನನ್ನು ಬಂಗಾರು ಪಾಳ್ಯಂ ಆಸ್ಪತ್ರೆಗೆ ಕರೆದೊಯ್ಯವ ವೇಳೆಗಾಗಲೇ ಆತ ಮೃತಪಟ್ಟಿದ್ದ ಎಂದು ವೈದ್ಯರು ಘೋಷಿಸಿದ್ದಾರೆ.

ಬಳಿಕ ಪೊಲೀಸ್ ತನಿಖೆ ವೇಳೆ ಹಾಗೂ ಮರಣೋತ್ತರ ಪರೀಕ್ಷೆ ವೇಳೆ ಆತ ತನ್ನ ಬಾಯಿಯಲ್ಲಿ ಬಾಂಬ್ ಕಡಿದಿರುವ ಬಗ್ಗೆ ಸುಳಿವು ಸಿಕ್ಕಿದೆ. ಆದರೆ, ಈ ಗ್ರಾಮದಲ್ಲಿ ದೇಶೀಯ ನಿರ್ಮಿತ ಕಚ್ಚಾ ಬಾಂಬ್ ಹೇಗೆ ಬಂತು ಎಂದು ಯಾರಿಗೂ ಗೊತ್ತಿಲ್ಲ. ಈ ಪ್ರಕರಣ ಸಂಬಂಧ ಪೊಲೀಸರು ಕೇಸ್ ದಾಖಲಿಸಿಕೊಂಡು ಮರಣೋತ್ತರ ಪರೀಕ್ಷೆ ಬಳಿಕ ಚಿರಂಜೀವಿಯ ಮೃತ ದೇಹವನ್ನು ಆತನ ಕುಟುಂಬಸ್ಥರಿಗೆ ಒಪ್ಪಿಸಿದ್ದಾರೆ.

ಗ್ರಾಮದಲ್ಲಿ ಚಿರಂಜೀವಿಗೆ ಕಚ್ಚಾ ಬಾಂಬ್ ಹೇಗೆ ಸಿಕ್ಕಿತು ಅನ್ನೋ ಪೊಲೀಸರ ಪ್ರಶ್ನೆಗೆ ಇನ್ನೂ ಉತ್ತರ ಸಿಕ್ಕಿಲ್ಲ. ಅದು ದೀಪಾವಳಿ ಹಬ್ಬಕ್ಕೆ ತಯಾರಿಸಲಾಗಿದ್ದ ಪಟಾಕಿಯೋ? ಅಥವಾ ದುಷ್ಕೃತ್ಯ ಎಸಗಲು ಸಿದ್ದಪಡಿಸಿದ್ದ ಅಸಲಿ ಬಾಂಬ್ ಇರಬಹುದೋ ಎಂಬ ಶಂಕೆ ಪೊಲೀಸರನ್ನು ಕಾಡುತ್ತಿದೆ.

Shwetha M