ನಟ ಜಗ್ಗೇಶ್ ಗೆ ರಿಲೀಫ್ ನೀಡಿದ ಹೈಕೋರ್ಟ್ – ಅರಣ್ಯ ಇಲಾಖೆಯ ನೋಟಿಸ್ ಗೆ ತಡೆ

ನಟ ಜಗ್ಗೇಶ್ ಗೆ ರಿಲೀಫ್ ನೀಡಿದ ಹೈಕೋರ್ಟ್ – ಅರಣ್ಯ ಇಲಾಖೆಯ ನೋಟಿಸ್ ಗೆ ತಡೆ

ಬೆಂಗಳೂರು: ರಾಜ್ಯದಲ್ಲೀಗ ಯಾರ ಬಾಯಲ್ಲಿ ಕೇಳಿದ್ರೂ ಹುಲಿ ಉಗುರಿನದ್ದೇ ಮಾತು. ಬಿಗ್‌ಬಾಸ್‌ ಸ್ಪರ್ಧಿ ವರ್ತೂರು ಸಂತೋಷ್‌ ಅರೆಸ್ಟ್‌ ಆದ ಬೆನ್ನಲ್ಲೇ ಸೆಲೆಬ್ರಿಟಿಗಳು ಕೂಡ ಕಾನೂನು ಸಂಕಷ್ಟ ಎದುರಿಸುತ್ತಿದ್ದಾರೆ. ಇವರಲ್ಲಿ ನಟ, ರಾಜ್ಯಸಭಾ ಸದಸ್ಯ ಜಗ್ಗೇಶ್ ಅವರು ತೊಂದರೆ ಅನುಭವಿಸುತ್ತಿದ್ದಾರೆ. ಇದೀಗ ಅವರಿಗೆ ಬಿಗ್‌ ರಿಲೀಫ್‌ ಸಿಕ್ಕಿದೆ.

ನಟ ಜಗ್ಗೇಶ್‌ ಅವರು ಹುಲಿ ಉಗುರು ಹೊಂದಿದ್ದಾರೆ ಎಂದು ಅವರ ಮೇಲೆ ದೂರು ದಾಖಲಾಗಿತ್ತು. ಈ ಹಿನ್ನಲೆಯಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳಿಂದ ಜಗ್ಗೇಶ್​ಗೆ ನೋಟಿಸ್ ಕೂಡ ನೀಡಲಾಗಿತ್ತು. ಇದಕ್ಕೆ ತಡೆನೀಡಬೇಕು ಎಂದು ಜಗ್ಗೇಶ್ ಅವರು ಹೈಕೋರ್ಟ್​ ಮೆಟ್ಟಿಲು ಏರಿದ್ದರು. ಜಗ್ಗೇಶ್ ಪರವಾಗಿ ಕೋರ್ಟ್​ ಆದೇಶ ನೀಡಿದೆ. ಜಗ್ಗೇಶ್ ವಿರುದ್ಧ ಅರಣ್ಯಾಧಿಕಾರಿಗಳ ನೋಟಿಸ್​ಗೆ ಹೈಕೋರ್ಟ್ ತಡೆ ನೀಡಿದೆ. ಇದರಿಂದ ಜಗ್ಗೇಶ್​ ಅವರಿಗೆ ದೊಡ್ಡ ರಿಲೀಫ್ ಸಿಕ್ಕಂತೆ ಆಗಿದೆ.

ಇದನ್ನೂ ಓದಿ: ಹುಲಿ ಉಗುರು ಅಷ್ಟೊಂದು ಪವರ್ ಫುಲ್ ಇದ್ಯಾ? – ಹುಲಿ ಉಗುರು ಧರಿಸುವುದರ ಹಿಂದಿದೆ ಈ ಕಾರಣ!

ರಾಜ್ಯಸಭಾ ಸದಸ್ಯ ಜಗ್ಗೇಶ್ ವಿರುದ್ಧದ ಕ್ರಮ ಕಾನೂನುಬಾಹಿರವೆಂದು ಜಗ್ಗೇಶ್ ಪರ ಹಿರಿಯ ವಕೀಲ ಪ್ರಭುಲಿಂಗ್ ನಾವದಗಿ ವಾದಿಸಿದರು. ವಾದವನ್ನು ಕೇಳಿದ ಬಳಿಕ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಹೈಕೋರ್ಟ್ ಪೀಠ ಈ ಆದೇಶ ನೀಡಿದೆ.

ಕೋರ್ಟ್ಗೆ ಜಗ್ಗೇಶ್ ಮಾಡಿದ ಮನವಿ ಏನು?

ಅರಣ್ಯ ಇಲಾಖೆ ಕ್ರಮವನ್ನು ಜಗ್ಗೇಶ್ ಪ್ರಶ್ನೆ ಮಾಡಿದ್ದರು. ‘ಅರಣ್ಯಾಧಿಕಾರಿಗಳು ನೀಡಿದ ನೋಟಿಸ್ ರದ್ದು ಮಾಡಬೇಕು. ನಾವು ಇದಕ್ಕೆ ಉತ್ತರಿಸುವ ಮೊದಲೇ 14 ಅಧಿಕಾರಿಗಳು ದಾಳಿ ಮಾಡಿದ್ದಾರೆ. ಮನೆಯಲ್ಲಿನ ವಸ್ತುಗಳನ್ನು ಚೆಲ್ಲಾಪಿಲ್ಲಿ ಮಾಡಲಾಗಿದೆ. ಸಂದರ್ಶನದಲ್ಲಿ ಹೇಳಿದ ಮಾತನ್ನು ಆಧರಿಸಿ ತೇಜೋವಧೆ ಮಾಡಲಾಗಿದೆ. ಅರಣ್ಯಾಧಿಕಾರಿಗಳ ಕ್ರಮವನ್ನು ಕಾನೂನುಬಾಹಿರವೆಂದು ಘೋಷಿಸಬೇಕು’ ಎಂಬುದಾಗಿ ಜಗ್ಗೇಶ್ ವಕೀಲರು ಅರ್ಜಿಯಲ್ಲಿ ಕೋರಿದ್ದರು.

Shwetha M