ಮೇರು ಕಲಾವಿದ ಅನಂತ್ನಾಗ್ ಅವರಿಗೆ ಈ ಬಾರಿಯೂ ಇಲ್ಲ ಪದ್ಮ ಪ್ರಶಸ್ತಿ – ಕನ್ನಡ ಚಿತ್ರರಂಗದ ಬಗ್ಗೆ ಯಾಕೆ ನಿರ್ಲಕ್ಷ್ಯ?
ಜನವರಿ 25ರಂದು ಕೇಂದ್ರ ಸರ್ಕಾರ ಅತ್ಯುತ್ತಮ ನಾಗರೀಕ ಪ್ರಶಸ್ತಿಗಳಾದ ಪದ್ಮ ಪ್ರಶಸ್ತಿ ವಿಜೇತರನ್ನು ಘೋಷಣೆ ಮಾಡಿದೆ. ವಿವಿಧ ಕ್ಷೇತ್ರದಲ್ಲಿ ಸೇವೆ ಮಾಡಿದ ಗಣ್ಯರನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಆದರೆ, ಕನ್ನಡ ಚಿತ್ರರಂಗದ ಮೇರು ಕಲಾವಿದ ಅನಂತ್ನಾಗ್ ಅವರನ್ನ ಈ ಬಾರಿಯೂ ಕೇಂದ್ರ ಸರ್ಕಾರ ನಿರ್ಲಕ್ಷಿಸಿರುವುದು ಕನ್ನಡಿಗರಿಗೆ ಬೇಸರ ತಂದಿದೆ.
ಇದನ್ನೂ ಓದಿ: ಆಸ್ಕರ್ ರೇಸ್ನಲ್ಲಿ ಭಾರತದ ಸಾಕ್ಷ್ಯಚಿತ್ರ! – ‘ಟು ಕಿಲ್ ಎ ಟೈಗರ್’ಪ್ರಶಸ್ತಿಗೆ ನಾಮನಿರ್ದೇಶನ
ಮೆಗಾಸ್ಟಾರ್ ಚಿರಂಜೀವಿ ಈಗಾಗಲೇ ಪದ್ಮಭೂಷಣ ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು. ಇದೀಗ ಪದ್ಮ ವಿಭೂಷಣ ಗೌರವ ದೊರಕಿದೆ. ಇವರಲ್ಲದೇ ಮಿಥುನ್ ಚಕ್ರವರ್ತಿ, ವೈಜಯಂತಿ, ಉಷಾ ಉತ್ತಪ್ ಇನ್ನೂ ಕೆಲವರಿಗೆ ಕಲಾ ವಿಭಾಗದಲ್ಲಿ ಪದ್ಮ ಪ್ರಶಸ್ತಿಗಳು ದೊರಕಿವೆ. ಆದರೆ ಕನ್ನಡ ಮಾತ್ರವೇ ಅಲ್ಲದೆ ಹಲವು ಭಾಷೆಗಳಲ್ಲಿ ನಟಿಸಿರುವ, ದಶಕಗಳಿಂದಲೂ ತಮ್ಮ ನಟನೆಯ ಮೂಲಕ ಮನರಂಜನೆ ಹಾಗೂ ಸಿನಿಮಾಗಳ ಮೂಲಕ ಸಾಮಾಜಿಕ ಬದಲಾವಣೆಗಾಗಿ ದುಡಿಯುತ್ತಿರುವ ಅನಂತ್ ನಾಗ್ ಅವರನ್ನು ನಿರ್ಲಕ್ಷಿಸಲಾಗಿದೆ. ಕಳೆದ ಕೆಲ ವರ್ಷಗಳಿಂದ ಪ್ರತಿ ಬಾರಿ ಪದ್ಮ ಪ್ರಶಸ್ತಿಗಳು ಘೋಷಣೆಯಾದಾಗಲೂ ಅನಂತ್ ನಾಗ್ ಹೆಸರು ಚರ್ಚೆಗೆ ಬರುತ್ತಲೇ ಇದೆ. ಆದರೆ ಪ್ರತಿ ಬಾರಿಯೂ ಕನ್ನಡ ಸಿನಿಮಾ ಅಭಿಮಾನಿಗಳಿಗೆ ನಿರಾಸೆಯಾಗುತ್ತಿದೆ.
ವರನಟ ಡಾ. ರಾಜ್ ಕುಮಾರ್ ಅವರಿಗೆ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ದೊರೆತದ್ದ ಹೊರತುಪಡಿಸಿದರೆ, ವಿಷ್ಣುವರ್ಧನ್, ಅಂಬರೀಶ್ ಅವರಿಗೂ ಪದ್ಮ ಪ್ರಶಸ್ತಿ ಲಭಿಸಿಲ್ಲ. ಇನ್ನೂ ಹಲವು ಅರ್ಹ ನಟ-ನಟಿಯರು, ತಂತ್ರಜ್ಞರು ಕನ್ನಡ ಚಿತ್ರರಂಗದಲ್ಲಿದ್ದಾರೆ ಆದರೆ ಹಲವರಿಗೆ ನಾಗರೀಕ ಪ್ರಶಸ್ತಿಗೆ ಪರಿಗಣಿಸಲಾಗಿಲ್ಲ. ಇದೀಗ ಅನಂತ್ ನಾಗ್ ಅವರಿಗೆ ಪದ್ಮ ಪ್ರಶಸ್ತಿ ಸಿಗದೇ ಇರುವ ಬಗ್ಗೆ ಟ್ವೀಟ್ ಮಾಡಿರು ನಿರ್ದೇಶಕ ಹೇಮಂತ್ ರಾವ್, ‘ಅನಂತ್ ನಾಗ್ ಅವರಿಗೆ ಮತ್ತೊಂದು ವರ್ಷ ಪದ್ಮ ಪ್ರಶಸ್ತಿ ಸಿಗಲಿಲ್ಲ, ಇದೆಂಥಹಾ ಅವಮಾನ’ ಎಂದಿದ್ದಾರೆ. ಮತ್ತೊಂದು ಟ್ವೀಟ್ನಲ್ಲಿ, ‘ಇತರ ರಾಜ್ಯಗಳ ಚಿತ್ರರಂಗದ ಉದ್ಯಮಗಳ ಶ್ರೇಷ್ಠರನ್ನು ನಡೆಸಿಕೊಳ್ಳುವ ರೀತಿಯನ್ನು ನೋಡಿ ಅಸೂಯೆ ಪಡುವುದನ್ನು ತಡೆಯಲು ನನಗೆ ಸಾಧ್ಯವಾಗುತ್ತಿಲ್ಲ. ನಾಲ್ಕು ದಶಕಗಳಿಂದ ಉತ್ಕೃಷ್ಟ ಕಾರ್ಯವನ್ನು ಮಾಡುತ್ತಾ ಬರುತ್ತಿರುವ ವ್ಯಕ್ತಿಯ ಬಗ್ಗೆ ಇಂಥಹಾ ದಿವ್ಯ ನಿರ್ಲಕ್ಷ್ಯ ತಳೆದಿರುವುದು ಅತ್ಯಂತ ಖೇದಕರ’ ಎಂದಿದ್ದಾರೆ.