ಬಿಡಿಡಿಸಿ ಅಧ್ಯಕ್ಷ ಸ್ಥಾನಕ್ಕೆ ಆನಂದ್ ಸಿಂಗ್ ರಾಜೀನಾಮೆ – ರಾಷ್ಟ್ರ ರಾಜಕಾರಣದತ್ತ ಮಾಜಿ ಸಚಿವರ ಚಿತ್ತ?

ಬಿಡಿಡಿಸಿ ಅಧ್ಯಕ್ಷ ಸ್ಥಾನಕ್ಕೆ ಆನಂದ್ ಸಿಂಗ್ ರಾಜೀನಾಮೆ – ರಾಷ್ಟ್ರ ರಾಜಕಾರಣದತ್ತ ಮಾಜಿ ಸಚಿವರ ಚಿತ್ತ?

ಬಿಜೆಪಿ ಸರ್ಕಾರದ ಅವಧಿಯಲ್ಲಿ ಹೆಚ್ಚು ಸದ್ದು ಮಾಡಿದವರಲ್ಲಿ ಮಾಜಿ ಸಚಿವ ಆನಂದ್ ಸಿಂಗ್ ಕೂಡ ಒಬ್ಬರು. ಅಖಂಡ ಬಳ್ಳಾರಿ ಜಿಲ್ಲೆಯನ್ನ ವಿಭಜನೆ ಮಾಡಿಸಿ ವಿಜಯನಗರ ಪ್ರತ್ಯೇಕ ಜಿಲ್ಲೆ ಮಾಡುವಲ್ಲಿ ಆನಂದ್ ಸಿಂಗ್ ಪಾತ್ರ ಬಹಳ ದೊಡ್ಡದಿತ್ತು. ಆದರೆ 2023ರ ವಿಧಾನಸಭಾ ಚುನಾವಣೆಯಲ್ಲಿ ವಿಜಯನಗರ ಕ್ಷೇತ್ರದಿಂದ ಪುತ್ರನನ್ನು ಕಣಕ್ಕಿಳಿಸಿ ಸೋಲು ಕಂಡಿರುವ ಮಾಜಿ ಸಚಿವ ಆನಂದ್ ಸಿಂಗ್ ಇದೀಗ ಮತ್ತೊಂದು ಮಹತ್ವದ ಹುದ್ದೆಗೆ ಗುಡ್​ಬೈ ಹೇಳಿದ್ದಾರೆ.

ಇದನ್ನೂ ಓದಿ : ಲೋಕಸಭಾ ಚುನಾವಣೆ ಮೇಲೆ ಕಣ್ಣಿಟ್ಟ ವಿ.ಸೋಮಣ್ಣ – ಬೆಂಗಳೂರು ದಕ್ಷಿಣ ಕ್ಷೇತ್ರದ ಟಿಕೆಟ್ ಆಕಾಂಕ್ಷಿ ಎಂದು ಬಹಿರಂಗ ಹೇಳಿಕೆ

ಬಳ್ಳಾರಿ ಮತ್ತು ವಿಜಯನಗರ ಅವಳಿ ಜಿಲ್ಲೆಯ ಪ್ರತಿಷ್ಠಿತ ಬಿಡಿಸಿಸಿ ಬ್ಯಾಂಕ್(BDCC Bank) ಅಧ್ಯಕ್ಷ ಸ್ಥಾನಕ್ಕೆ ಮಾಜಿ ಸಚಿವ ಆನಂದ್ ಸಿಂಗ್ (Anand Singh) ರಾಜೀನಾಮೆ ನೀಡಿದ್ದಾರೆ. ವೈಯಕ್ತಿಕ ಕಾರಣ ನೀಡಿ ಜುಲೈ 1ರಿಂದಲೇ ಅನ್ವಯ ಆಗುವಂತೆ ಆನಂದ್ ಸಿಂಗ್ ರಾಜೀನಾಮೆ ಸಲ್ಲಿಸಿದ್ದಾರೆ. ಗ್ರಾಮೀಣ ಭಾಗದ ರೈತರ ಹಿತದೃಷ್ಟಿಯಿಂದ ಸ್ಥಾಪಿಸಲಾಗಿದ್ದ ಪ್ರತಿಷ್ಠಿತ ಬಿಡಿಸಿಸಿ ಬ್ಯಾಂಕ್ (ಬಳ್ಳಾರಿ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್) ​ 100 ವರ್ಷದ ಇತಿಹಾಸ ಹೊಂದಿದೆ. ಇದೀಗ ಏಕಾಏಕಿ ಮಾಜಿ ಸಚಿವ ಆನಂದ್ ಸಿಂಗ್ ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು ಭಾರೀ ಚರ್ಚೆಗೆ ಗ್ರಾಸವಾಗಿದೆ.

2018ರಲ್ಲಿ ಕಾಂಗ್ರೆಸ್ ಪಕ್ಷದಿಂದ ಗೆದ್ದಿದ್ದ ಆನಂದ್ ಸಿಂಗ್ ಜಿಲ್ಲೆಯ ಇಬ್ಭಾಗ ವಿಚಾರವಾಗಿ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ್ದರು. ಬಳಿಕ ವಿಜಯನಗರವನ್ನು ನೂತನ ಜಿಲ್ಲೆಯನ್ನಾಗಿ ಮಾಡುವಲ್ಲಿ ಯಶಸ್ವಿಯಾಗಿದ್ದರು. ಆದ್ರೆ, ವಿಜಯನಗರ ಜಿಲ್ಲೆಯಾಗಿ ರಚನೆಯಾದ ಮೇಲೆ ಇದೇ ಮೊದಲ ಬಾರಿಗೆ ನಡೆದಿದ್ದ ವಿಧಾನಸಭೆ ಚುನಾವಣೆಯಲ್ಲಿ ಆನಂದ್ ಸಿಂಗ್ ತಮ್ಮ ಪುತ್ರ ಸಿದ್ಧಾರ್ಥ್ ಸಿಂಗ್​ಗೆ ಬಿಜೆಪಿ ಟಿಕೆಟ್ ಕೊಡಿಸುವಲ್ಲಿ ಸಹ ಸಫಲರಾಗಿದ್ದರು. ಆದ್ರೆ, ಸಿದ್ಧಾರ್ಥ್​​​ ಸೋಲು ಕಂಡಿದ್ದಾರೆ. ಇದರಿಂದ ಆನಂದ್ ಸಿಂಗ್​ಗೆ ತೀವ್ರ ಮುಖಭಂಗವಾದಂತಾಗಿದೆ. ಇದರ ಬೆನ್ನಲ್ಲೇ ಇದೀಗ ಆನಂದ್ ಸಿಂಗ ಪ್ರತಿಷ್ಠಿತ ಬ್ಯಾಂಕ್ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಇನ್ನು ಆನಂದ್ ಸಿಂಗ್ ಅವರು ರಾಷ್ಟ್ರ ರಾಜಕಾರಣಕ್ಕೆ ತೆರಳುತ್ತಾರೆ ಎನ್ನುವ ಸುದ್ದಿ ಹರಿದಾಡುತ್ತಿದೆ. ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಕೊಪ್ಪಳ ಕ್ಷೇತ್ರದಿಂದ ಸ್ಪರ್ಧೆ ಮಾಡುತ್ತಾರೆ ಎನ್ನುವ ಮಾತುಗಳು ಕೇಳಿಬಂದಿವೆ. ಆದ್ರೆ, ಈ ಬಗ್ಗೆ ಆನಂದ್ ಸಿಂಗ್ ಯಾವುದೇ ಸ್ಪಷ್ಟನೆ ನೀಡಿಲ್ಲ.

 

suddiyaana