ಎತ್ತರದ ಕಟ್ಟಡದಲ್ಲಿದ್ದರೆ ಈ ಸಾಧನ ಬೇಕು! – ಆನಂದ್ ಮಹೀಂದ್ರಾ ಹೀಗೆ ಹೇಳಿದ್ದು ಯಾಕೆ?
ದೊಡ್ಡ ದೊಡ್ಡ ಕಟ್ಟಡಗಳಲ್ಲಿ, ಅಪಾರ್ಟ್ಮೆಂಟ್ಗಳಲ್ಲಿ ಬೆಂಕಿ ಕಾಣಿಸಿಕೊಳ್ಳುತ್ತದೆ. ಈ ವೇಳೆ ಅಲ್ಲಿರುವ ನಿವಾಸಿಗಳು ತಮ್ಮ ಪ್ರಾಣ ಉಳಿಸಿಕೊಳ್ಳಲು ನಾನಾ ಪ್ರಯತ್ನ ಮಾಡುತ್ತಾರೆ. ಕೆಲವರು ಸುರಕ್ಷತಾ ಸಾಧನವಿಲ್ಲದೆ ಎತ್ತರದಿಂದ ಜಿಗಿಯುತ್ತಾರೆ. ಈ ರೀತಿ ಎತ್ತರದಿಂದ ಜಿಗಿಯುವುದರಿಂದಾಗಿ ಅನೇಕ ಮಂದಿ ತಮ್ಮ ಪ್ರಾಣ ಕಳೆದುಕೊಳ್ಳುತ್ತಾರೆ. ಇನ್ನೂ ಕೆಲವರು ಇದರಿಂದಾಗಿ ಗಂಭೀರವಾಗಿ ಗಾಯಗೊಂಡು ಜೀವನ ಪರ್ಯಂತ ನರಕಯಾತನೆ ಅನುಭವಿಸುತ್ತಾರೆ. ಇಂತಹ ಘಟನೆ ಬಗ್ಗೆ ಸಾಕಷ್ಟು ಬಾರಿ ಕೇಳಿದ್ದೇವೆ. ಹಾಗಾಗಿ ದೊಡ್ಡ ದೊಡ್ಡ ಕಟ್ಟಡಗಳಿಂದ ಜಿಗಿಯುವಾಗ ಸುರಕ್ಷತಾ ಕ್ರಮ ಕೈಗೊಳ್ಳುವುದು ಬಹಳ ಮುಖ್ಯ. ಈ ಬಗ್ಗೆ ಆನಂದ ಮಹೀಂದ್ರಾ ತಮ್ಮ ಟ್ವಿಟರ್ ಖಾತೆಯಲ್ಲಿ ವಿಡಿಯೋವೊಂದನ್ನು ಹಂಚಿಕೊಂಡಿದ್ದಾರೆ.
ಇದನ್ನೂ ಓದಿ: ವಿಶ್ವದ ಹಿರಿಯ ನಾಯಿಯ ಗಿನ್ನೆಸ್ ರೆಕಾರ್ಡ್ – ಅಬ್ಬಬ್ಬಾ.. ಈ ಶ್ವಾನದ ವಯಸ್ಸೆಷ್ಟು ಗೊತ್ತಾ?
ಆನಂದ್ ಮಹೀಂದ್ರಾ ತಮ್ಮ ಟ್ವಿಟರ್ ಖಾತೆಯಲ್ಲಿ ಕುತೂಹಲಕಾರಿ ವಿಡಿಯೋಗಳನ್ನು ಆಗಾಗ ಹಂಚಿಕೊಳ್ಳುತ್ತಿರುತ್ತಾರೆ. ಇದೀಗ ಇನ್ನೊಂದು ಎನಿಮೇಟೆಡ್ ವಿಡಿಯೋವೊಂದನ್ನು ಹಂಚಿಕೊಂಡಿದ್ದಾರೆ. ಕಟ್ಟಡಗಳಲ್ಲಿ ಬೆಂಕಿ ಅವಘಡ ಸಂಭವಿಸಿದಾಗ ಹೆಚ್ಚಿನ ಜನರು ಯಾವುದೇ ಸುರಕ್ಷತಾ ಕ್ರಮಗಳನ್ನು ತೆಗೆದುಕೊಳ್ಳದೆ ಎತ್ತರದಿಂದ ಜಿಗಿಯುತ್ತಾರೆ. ಇಂತಹ ಸಂದರ್ಭಗಳಲ್ಲಿ ಜೀವ ಉಳಿಸುವ ಸಾಧನಗಳಿದ್ದರೆ ಉತ್ತಮ ಎಂದು ಎನಿಮೇಟೆಡ್ ವಿಡಿಯೋ ಶೇರ್ ಮಾಡಿದ್ದಾರೆ. ‘ಇದು ಅತ್ಯುತ್ತಮ ಸಾಧನ, ಇಂಥವನ್ನು ಕೆಲ ಕಂಪನಿಗಳು ತಯಾರಿಸುತ್ತವೆ ಎಂದುಕೊಂಡಿದ್ದೇನೆ. ನಾನೇನಾದರೂ ಎತ್ತರದ ಕಟ್ಟಡದಲ್ಲಿ ವಾಸ ಮಾಡಿದರೆ ಇದನ್ನು ಖರೀದಿಸುವುದು ನನ್ನ ಮೊದಲ ಆದ್ಯತೆ’ ಎಂದು ಬರೆದುಕೊಂಡಿದ್ದಾರೆ.
40 ಸೆಕೆಂಡುಗಳ ಎನಿಮೇಟೆಡ್ ವಿಡಿಯೋವನ್ನು ಲರ್ನ್ ಸಮ್ಥಿಂಗ್ ಎಂಬ ಖಾತೆಯಿಂದ ಹಂಚಿಕೊಂಡಿದ್ದಾರೆ. ಈಗಾಗಲೇ 3.9 ಮಿಲಿಯನ್ ಜನರು ಈ ವಿಡಿಯೋ ನೋಡಿದ್ದಾರೆ. 61,000 ಜನರು ಇಷ್ಟಪಟ್ಟಿದ್ದಾರೆ. ಸಾವಿರಾರು ಜನರು ರೀಟ್ವೀಟ್ ಮಾಡಿ ಪ್ರತಿಕ್ರಿಯಿಸಿದ್ದಾರೆ. “ಇದು ಭಾರತದಲ್ಲಿ ಲಭ್ಯವಿಲ್ಲ ಎನ್ನಿಸುತ್ತದೆ. ಖಂಡಿತ ಇದು ಎತ್ತರದ ಕಟ್ಟಡಗಳಲ್ಲಿ ವಾಸಿಸುವ ಪ್ರತಿಯೊಬ್ಬರೂ ಖರೀದಿಸಬೇಕಾದ ಸಾಧನ. ಇದು ಒಳ್ಳೆಯ ಕಾನ್ಸೆಪ್ಟ್, ಈ ಬಗ್ಗೆ ಹೆಚ್ಚಿನ ಸಂಶೋಧನೆಗಳು ಆಗಬೇಕು. ಏಕೆಂದರೆ ಅಪಾರ್ಟ್ಮೆಂಟ್ ನ ಎದುರಿಗಿರುವ ವಿದ್ಯುತ್ ತಂತಿಗಳಿಂದ ಅಪಾಯ ಸಂಭವಿಸುವ ಸಾಧ್ಯತೆ ಇದೆ” ಎಂದು ಪ್ರತಿಕ್ರಿಯಿಸಿದ್ದಾರೆ.
I hope this is for real and some company is manufacturing it. If I lived in a high-rise, this would be a priority purchase! Very innovative. pic.twitter.com/BLkzMyWGtZ
— anand mahindra (@anandmahindra) February 5, 2023