ಸತ್ತಿರುವ ಪೂನಂ ದಿಢೀರ್ ಪ್ರತ್ಯಕ್ಷ – ಪೂನಂ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಭುಗಿಲೆದ್ದ ಜನಾಕ್ರೋಶ
ನಟಿ ಹಾಗೂ ಮಾಡೆಲ್ ಪೂನಂ ಪಾಂಡೆ ಬಗ್ಗೆ ಕಂಬನಿ ಮಿಡಿದಿದ್ದ ಲಕ್ಷಾಂತರ ಜನ ಈಗ ಬಾಯಿಗೆ ಬಂದಂತೆ ಬೈತಿದ್ದಾರೆ. ಯಾಕಂದ್ರೆ ಸದಾ ವಿವಾದಗಳಿಂದಲೇ ಸದ್ದು ಮಾಡುತ್ತಿದ್ದ ನಟಿ ಸಾವಿನ ವಿಚಾರವಾಗಿ ಜನ್ರನ್ನ ಮಂಗ ಮಾಡಿದ್ದಾರೆ. ಶುಕ್ರವಾರವಷ್ಟೇ ನಟಿ ಪೂನಂ ಪಾಂಡೆ ಗರ್ಭಕಂಠ ಕ್ಯಾನ್ಸರ್ ಗೆ ಬಲಿಯಾಗಿದ್ದಾರೆ ಎಂಬ ಸುದ್ದಿ ದೇಶಾದ್ಯಂತ ಸಂಚಲನ ಮೂಡಿಸಿತ್ತು. 32 ವರ್ಷ ವಯಸ್ಸಿನಲ್ಲೇ ಪ್ರಾಣ ಬಿಟ್ಟರಾ ಅಂತಾ ಮರುಕ ಪಟ್ಟಿದ್ರು. ಆದ್ರೆ ಶನಿವಾರ ಪ್ರತ್ಯಕ್ಷ ಆಗಿರೋ ಪೂನಂ ಪಾಂಡೆ ನಾನಿನ್ನು ಸತ್ತಿಲ್ಲ ಬದುಕಿದ್ದೇನೆ ಎಂದಿದ್ದಾರೆ. ಶನಿವಾರ ಬೆಳಗ್ಗೆ ವಿಡಿಯೋ ಹೇಳಿಕೆ ಮೂಲಕ ಪೂನಂ ಪಾಂಡೆ ಸಾವಿನ ಸುದ್ದಿಗೆ ಬ್ರೇಕ್ ಹಾಕಿದ್ದಾರೆ. ನಿಮ್ಮೆಲ್ಲರೊಂದಿಗೆ ಮಹತ್ವದ ವಿಷಯವನ್ನು ಹಂಚಿಕೊಳ್ಳಲು ನಾನು ಬಯಸುತ್ತಿದ್ದೇನೆ. ನಾನು ಜೀವಂತವಾಗಿದ್ದೇನೆ. ಗರ್ಭಕಂಠದ ಕ್ಯಾನ್ಸರ್ ಬಗ್ಗೆ ಜಾಗೃತಿ ಮೂಡಿಸುವುದೇ ತನ್ನ ಸಾವಿನ ಸುದ್ದಿಯ ಉದ್ದೇಶ ಎಂದು ಪೂನಂ ಪಾಂಡೆ ವಿಡಿಯೋದಲ್ಲಿ ಹೇಳಿದ್ದಾರೆ.
ಹಲೋ ನಾನು ಪೂನಂ. ನನ್ನನ್ನು ಕ್ಷಮಿಸಿ, ನಾನು ನೋಯಿಸಿದವರಿಗೆ ಕ್ಷಮೆಯಾಚಿಸುತ್ತೇನೆ. ಎಲ್ಲರನ್ನೂ ಅಚ್ಚರಿಗೊಳಿಸುವುದು ನನ್ನ ಉದ್ದೇಶವಾಗಿತ್ತು. ಏಕೆಂದರೆ ನಾವು ಹೆಚ್ಚು ಮಾತನಾಡದ ಗರ್ಭಕಂಠದ ಕ್ಯಾನ್ಸರ್ ಬಗ್ಗೆ ಚರ್ಚಿಸಲು ನಾನು ಬಯಸುತ್ತೇನೆ. ಹೌದು, ನನ್ನ ಸಾವಿನ ಬಗ್ಗೆ ಸುಳ್ಳು, ಸುದ್ದಿ ಹಬ್ಬಿಸಿದ್ದೇನೆ. ಇದ್ದಕ್ಕಿದ್ದಂತೆ ನಾವೆಲ್ಲರೂ ಗರ್ಭಕಂಠದ ಕ್ಯಾನ್ಸರ್ ಬಗ್ಗೆ ಮಾತನಾಡಲು ಪ್ರಾರಂಭಿಸಿದ್ದೇವೆ. ಇದು ನಿಮ್ಮ ಜೀವನವನ್ನು ಮೌನವಾಗಿ ಕಸಿದುಕೊಳ್ಳುವ ರೋಗ. ಈ ರೋಗದ ಬಗ್ಗೆ ಹೆಚ್ಚು ಮಾತನಾಡುವ ಅವಶ್ಯಕತೆಯಿದೆ. ನನ್ನ ಸಾವಿನ ಸುದ್ದಿಯಿಂದಾಗಿ ಎಲ್ಲರಿಗೂ ಈ ಕಾಯಿಲೆಯ ಬಗ್ಗೆ ತಿಳಿಯಲಾರಂಭಿಸಿದ್ದಾರೆ ಎಂದು ನಾನು ಹೆಮ್ಮೆಪಡುತ್ತೇನೆ ಎಂದು ತಿಳಿಸಿದ್ದಾರೆ.
ಪೂನಂರ ಈ ಹುಚ್ಚಾಟಕ್ಕೆ ಅಭಿಮಾನಿಗಳು ಕೆರಳಿ ಕೆಂಡವಾಗಿದ್ದಾರೆ. ಜಾಗೃತಿ ಮೂಡಿಸಲು ಮತ್ಯಾವ ದಾರಿಯೂ ಸಿಗಲಿಲ್ವಾ ಎಂದು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಪೂನಂ ಈ ಹುಚ್ಚಾಟದ ಬಗ್ಗೆ ಅಸಲಿಗೆ ಬಾಲಿವುಡ್ ಮಂದಿಗೂ ಕೂಡ ತಿಳಿದಿರಲಿಲ್ಲ. ಅವ್ರೂ ಕೂಡ ಸೋಶಿಯಲ್ ಮೀಡಿಯಾಗಳಲ್ಲಿ ಸಂತಾಪ ಸೂಚಿಸಿದ್ದರು. ಕೆಲವ್ರಿಗೆ ಸಾವಿನ ಬಗ್ಗೆ ಅನುಮಾನಗಳೂ ಮೂಡಿತ್ತು. ಅಷ್ಟಕ್ಕೂ ನಟಿಯ ಈ ಚೆಲ್ಲಾಟದಿಂದ ಜೈಲು ಸೇರುವ ಸಾಧ್ಯತೆಯೂ ಇದೆ.
ಜೈಲು ಶಿಕ್ಷೆಯಾಗಬಹುದು!
ವಾಸ್ತವವಾಗಿ, ಸುಳ್ಳು ಸುದ್ದಿಗಳನ್ನು ಹರಡಿದ ಪೂನಂಗೆ ಜೈಲು ಶಿಕ್ಷೆಯಾಗಬಹುದು. ಇದರೊಂದಿಗೆ ದಂಡವನ್ನೂ ವಿಧಿಸಬಹುದು. ಐಟಿ ಕಾಯಿದೆ 2000 ಸೆಕ್ಷನ್ 67 ರ ಅಡಿಯಲ್ಲಿ ಯಾರಾದರೂ ಮೊದಲ ಬಾರಿಗೆ ಸಾಮಾಜಿಕ ಮಾಧ್ಯಮದಲ್ಲಿ ವದಂತಿಗಳನ್ನು ಹರಡಿ ತಪ್ಪಿತಸ್ಥರಾಗಿದ್ದರೆ, ಅವರಿಗೆ ಮೂರು ವರ್ಷಗಳವರೆಗೆ ಜೈಲು ಶಿಕ್ಷೆ ವಿಧಿಸಬಹುದು. ಅಲ್ಲದೆ 5 ಲಕ್ಷದವರೆಗೆ ದಂಡ ತೆರಬೇಕಾಗಬಹುದು. ಅದೇ ಅಪರಾಧ ಪುನರಾವರ್ತನೆಯಾದರೆ, ಅಪರಾಧಿಗೆ 5 ವರ್ಷ ಜೈಲು ಮತ್ತು 10 ಲಕ್ಷದವರೆಗೆ ದಂಡ ತೆರಬೇಕಾಗಬಹುದು.
ಪೂನಂ ಪಾಂಡೆ ಈ ರೀತಿ ಹುಚ್ಚುಚ್ಚಾಗಿ ಪಬ್ಲಿಸಿಟಿ ತಗೊಳ್ಳೋದು ಇದೇ ಮೊದಲೇನಲ್ಲ. 2011 ರ ಕ್ರಿಕೆಟ್ ವಿಶ್ವಕಪ್ನಲ್ಲಿ ಟೀಮ್ ಇಂಡಿಯಾ ಗೆದ್ದರೆ ಬೆತ್ತಲೆಯಾಗಿ ಕಾಣಿಸಿಕೊಳ್ಳುವುದಾಗಿ ಹೇಳಿ ಸುದ್ದಿಯಾಗಿದ್ದರು. ಬಳಿಕ ತನ್ನ ನೆಚ್ಚಿನ ತಂಡ ಕೋಲ್ಕತ್ತಾ ನೈಟ್ ರೈಡರ್ಸ್ ಐಪಿಎಲ್ ಗೆದ್ದಾಗ ನಗ್ನ ಫೋಟೋವನ್ನು ಪೋಸ್ಟ್ ಮಾಡಿದ್ದಳು. ತನ್ನ ಅರೆನಗ್ನ ಫೋಟೋ, ವಿಡಿಯೋ ಮತ್ತು ವಿವಾದಿತ ಮಾತುಗಳಿಂದ ಸದಾ ಸುದ್ದಿಯಲ್ಲಿರುತ್ತಿದ್ದ ಪೂನಂ ಇತ್ತೀಚೆಗೆ ಅಷ್ಟೊಂದು ಸುದ್ದಿಯಲ್ಲಿರಲಿಲ್ಲ. ಇದೀಗ ಸಾವಿನ ಸುದ್ದಿಯನ್ನ ಮುಂದಿಟ್ಟುಕೊಂಡು ಮತ್ತೊಮ್ಮೆ ಟ್ರೆಂಡಿಂಗ್ಗೆ ಬಂದಿದ್ದಾರೆ. ಜನರಲ್ಲಿ ಗರ್ಭಕಂಠದ ಬಗ್ಗೆ ಜಾಗೃತಿ ಮೂಡಿಸೋದು ಒಳ್ಳೆಯ ವಿಚಾರವೇ. ಆದ್ರೆ ಸಾವಿನ ಸುದ್ದಿ ಮುಂದಿಟ್ಟುಕೊಂಡು ಪ್ರಚಾರ ಮಾಡಿದ್ದು ಆಕ್ರೋಶಕ್ಕೆ ಕಾರಣವಾಗಿದೆ.