ಡಿಕೆಶಿ ಓಟಕ್ಕೆ ಬ್ರೇಕ್  ಹಾಕಲಿದ್ಯಾ ಸಿದ್ದು ಆಪ್ತ ಬಣ?  – ಸುರ್ಜೇವಾಲ ಮುಂದೆ 3 ಡಿಸಿಎಂ ಹುದ್ದೆ ಬೇಡಿಕೆ ಇಟ್ಟ ಪಕ್ಷದ ಹಲವು ನಾಯಕರು!

ಡಿಕೆಶಿ ಓಟಕ್ಕೆ ಬ್ರೇಕ್  ಹಾಕಲಿದ್ಯಾ ಸಿದ್ದು ಆಪ್ತ ಬಣ?  – ಸುರ್ಜೇವಾಲ ಮುಂದೆ 3 ಡಿಸಿಎಂ ಹುದ್ದೆ ಬೇಡಿಕೆ ಇಟ್ಟ ಪಕ್ಷದ ಹಲವು ನಾಯಕರು!

ಲೋಕಸಭೆ ಚುನಾವಣೆ ಅಭ್ಯರ್ಥಿ ಆಯ್ಕೆ ಕಸರತ್ತು ನಡುವೆ ಕಾಂಗ್ರೆಸ್‌ನಲ್ಲಿ ಮೂರು ಡಿಸಿಎಂ ಹುದ್ದೆ ವಿಚಾರವೂ ಮುನ್ನಲೆಗೆ ಬರುತ್ತಿದೆ. ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಮುಂದೆ 3 ಡಿಸಿಎಂ ಹುದ್ದೆ ವಿಚಾರವಾಗಿ ಸಿದ್ದರಾಮಯ್ಯ ಆಪ್ತ ಸಚಿವರು ಮತ್ತೆ ಬೇಡಿಕೆ ಇಟ್ಟಿದ್ದಾರೆ ಎನ್ನಲಾಗಿದೆ. ಇದರಿಂದಾಗಿ ಕಾಂಗ್ರೆಸ್‌ ಹೈಕಮಾಂಡ್‌ಗೆ ಹೊಸ ತಲೆನೋವು ಶುರುವಾಗಿದೆ.

ಸದ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಅವರು ರಾಜ್ಯ ಪ್ರವಾಸದಲ್ಲಿದ್ದಾರೆ. ಅವರ ಮುಂದೆ ಸಿದ್ದರಾಮಯ್ಯ ಸಂಪುಟದ ಸಚಿವರು ಸೇರಿದಂತೆ ಹಲವು ಪಕ್ಷದ ಹಲವು ನಾಯಕರು ಹೆಚ್ಚುವರಿ ಉಪ ಮುಖ್ಯಮಂತ್ರಿ ಹುದ್ದೆಗಾಗಿ ಬೇಡಿಕೆ ಇಟ್ಟಿದ್ದಾರೆ. ಹೆಚ್ಚುವರಿ ಡಿಸಿಎಂ ಹುದ್ದೆಯ ಅಗತ್ಯ ಕುರಿತು ಹೈಕಮಾಂಡ್’ಗೆ ತಿಳಿಸುವಂತೆ ಸುರ್ಜೇವಾಲಾ ಅವರ ಬಳಿ ಆಗ್ರಹಿಸಿದ್ದಾರೆ ಎಂದು ಹೇಳಲಾಗಿದೆ.

ಇದನ್ನೂ ಓದಿ: ಭಾರತ – ಮಾಲ್ಡೀವ್ಸ್ ವಿವಾದ – ಹೆಚ್ಚೆಚ್ಚು ಪ್ರವಾಸಿಗರನ್ನು ಕಳುಹಿಸುವಂತೆ ಚೀನಾಗೆ ಮಾಲ್ಡೀವ್ಸ್ ಅಧ್ಯಕ್ಷ ಮುಯಿಝು ಒತ್ತಾಯ!

ಬೆಂಗಳೂರಿಗೆ ಆಗಮಿಸಿರುವ ಸುರ್ಜೇವಾಲಾ ಅವರು ಸೋಮವಾರ ಕೆಲವು ಸಚಿವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು. ಇದರಂತೆ ಮಂಗಳವಾರ ಕೂಡ ಪಕ್ಷದ ಹಿರಿಯ ನಾಯಕರನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು. ಬುಧವಾರ ಕೂಡ ಕೆಪಿಸಿಸಿ ಕಚೇರಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್, ಕೆಪಿಸಿಸಿ ಕಾರ್ಯಾಧ್ಯಕ್ಷರು, ಸಚಿವರು ಹಾಗೂ ಪಕ್ಷದ ಮುಖಂಡರು ಸೇರಿದಂತೆ ಇತರರ ಜತೆ ಸಭೆ ನಡೆಸಲಿದ್ದಾರೆಂದು ವರದಿಗಳು ತಿಳಿಸಿವೆ.

ಈ ನಡುವೆ ನಿನ್ನೆ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಸತೀಶ್ ಜಾರಕಿಹೊಳಿಯವರು, ಹೆಚ್ಚುವರಿ ಡಿಸಿಎಂ ಹುದ್ದೆ ಸೃಷ್ಟಿಸುವಂತೆ ಪಕ್ಷದ ಕೆಲ ನಾಯಕರು ಒತ್ತಾಯಿಸುತ್ತಿದ್ದಾರೆ. ಈ ಹಿಂದೆ ಕೂಡ ಹೆಚ್ಚುವರಿ ಡಿಸಿಎಂ ನೇಮಕ ಮಾಡುವ ಕುರಿತು ಚರ್ಚೆಗಳು ನಡೆದಿದ್ದವು. ಸೋಮವಾರ ಸಭೆ ನಡೆಸದ್ದು, ಬುಧವಾರ ಬೆಂಗಳೂರಿನಲ್ಲಿ ಮತ್ತೊಂದು ಸುತ್ತಿನ ಸಭೆ ನಡೆಸಲಾಗುತ್ತಿದೆ ಎಂದು ಹೇಳಿದರು.

ಇದಲ್ಲದೆ, ಜನವರಿ 11 ರಂದು ದೆಹಲಿಯಲ್ಲಿ ಮತ್ತೊಂದು ಸುತ್ತಿನ ಸಭೆ ಕರೆಯಲಾಗಿದೆ. ನಾವು ನಮ್ಮ ನಿಲುವನ್ನು ಪಕ್ಷದ ಪ್ರಧಾನ ಕಾರ್ಯದರ್ಶಿಗಳ ಮುಂದಿಟ್ಟಿದ್ದೇವೆ. ಹೆಚ್ಚುವರಿ ಡಿಸಿಎಂ ಹುದ್ದೆಗಳ ಸೃಷ್ಟಿ ಮಾಡುವುದರಿಂದ ಹಲವಾರು ಸಮುದಾಯಗಳು ಪಕ್ಷಕ್ಕೆ ಬೆಂಬಲ ನೀಡುತ್ತವೆ. ಸಮುದಾಯಗಳನ್ನು ಸಂಪುಟದಲ್ಲಿ ಪ್ರತಿನಿಧಿಸುವ ಅವಶ್ಯಕತೆಯೂ ಇದೆ. ಇದನ್ನು ಪಕ್ಷದ ಹೈಕಮಾಂಡ್ ಗಮನಕ್ಕೆ ತರುವಂತೆ ಪ್ರಧಾನ ಕಾರ್ಯದರ್ಶಿಗಳಿಗೆ ತಿಳಿಸಿದ್ದೇವೆ. ಈ ಕ್ರಮವು ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್’ಗೆ ಸಹಾಯ ಮಾಡಲಿದೆ ಎಂದು ತಿಳಿಸಿದರು.

Shwetha M