ತನ್ನ ಪ್ರಾಣದ ಹಂಗು ತೊರೆದು ಮನೆಯವರ ಜೀವ ಉಳಿಸಿದ ದತ್ತು ಪಡೆದ ಶ್ವಾನ

ನಿಯತ್ತಿಗೆ ಇನ್ನೊಂದು ಹೆಸರೇ ನಾಯಿ. ಅನ್ನ ಹಾಕಿದ ಮಾಲೀಕನನ್ನು ಎಂದಿಗೂ ಮರೆಯುವುದಿಲ್ಲ. ತನ್ನ ಕಡೇಯ ಉಸಿರು ಇರುವವರೆಗೂ ನಿಯತ್ತಾಗಿ ಮನೆ ಕಾಯುತ್ತದೆ. ಅವುಗಳು ಎಂದಿಗೂ ತನ್ನ ನಂಬಿದವರ ಕೈ ಬಿಡುವುದಿಲ್ಲ. ಶ್ವಾನಗಳು ತಮ್ಮ ಜೀವದ ಹಂಗು ತೊರೆದು ತನ್ನ ಮಾಲೀಕನ ಜೀವ ಉಳಿಸಿದಂತಹ ಹಲವು ಘಟನೆಗಳು ಈಗಾಗಲೇ ನಡೆದಿವೆ. ಅದೇ ರೀತಿ ಇಲ್ಲೊಂದು ಕಡೆ ಶ್ವಾನವೊಂದು ಮನೆಯವರ ಜೀವ ಉಳಿಸಿದೆ.
ಹೌದು, ಈ ಘಟನೆ ನಡೆದಿರುವುದು ಅಮೆರಿಕದಲ್ಲಿ. ರಾತ್ರಿ ವೇಳೆ ಮನೆಗೆ ಕಳ್ಳನೊಬ್ಬ ನುಗ್ಗಿದ್ದಾನೆ. ಈ ವೇಳೆ ಮನೆ ಮಂದಿಯೆಲ್ಲಾ ಬೆಡ್‌ರೂಮ್‌ನಲ್ಲಿ ಮಲಗಿದ್ದರು. ಮುಟ್ಟು ಎಂಬ ಶ್ವಾನ ಕೂಡ ಮನೆಯವರೊಂದಿಗೆ ಬೆಡ್‌ರೂಮ್‌ನಲ್ಲೇ ಮಲಗಿತ್ತು. ಮನೆಯ ಕಿಟಕಿ ಶಟರ್ ಎಳೆದ ಸದ್ದು ಕೇಳಿದ ಕೂಡಲೇ ಶ್ವಾನ ಮುಟ್ಟು ಓಡಿ ಹೋಗಿ ದರೋಡೆಕೋರನನ್ನು ಎದುರಿಸಿದೆ. ಮುರಿದ ಕಿಟಕಿಯ ಮೂಲಕ ಶ್ವಾನ ಕಳ್ಳನ ಬೆನ್ನಟಿ ಹೋಗಿದ್ದು, ಮನೆ ಮುಂಭಾಗದಲ್ಲೆಲ್ಲಾ ಬೆನ್ನಟ್ಟಿ ಕಳ್ಳನ್ನು ಓಡಿಸಿದೆ. ಈ ವೇಳೆ ಶ್ವಾನದ ಕಾಲಿಗೆ ಬಲವಾದ ಗಾಯವಾಗಿದ್ದು, ಕಾಲಿನಲ್ಲಿ ರಕ್ತ ದರದರನೇ ಸುರಿಯುತ್ತಿತ್ತು. ಕಳ್ಳನನ್ನು ಓಡಿಸುತ್ತಾ ಹೋಗುವ ವೇಳೆ ಕಿಟಕಿಯ ತುಂಡಾದ ಗಾಜಿನ ಮೇಲೆ ಕಾಲಿಟ್ಟಿದ್ದರಿಂದ ಶ್ವಾನದ ಕಾಲು ಕುಯ್ದು ಹೋಗಿತ್ತು. ಬಳಿಕ ಆ ಮನೆ ಮಂದಿ ಶ್ವಾನಕ್ಕೆ ಪ್ರಥಮ ಚಿಕಿತ್ಸೆ ನೀಡಿ, ಬೆಳಗಾಗುವವರೆಗೆ ಕಾದು ಪಶು ವೈದ್ಯರ ಬಳಿ ಕರೆದುಕೊಂಡು ಹೋಗಿದ್ದಾರೆ.
ಇದನ್ನೂ ಓದಿ: ಕದ್ದಿದ್ದು ಐಫೋನ್ ಅಲ್ಲ.. ಆಂಡ್ರಾಯ್ಡ್ ಫೋನ್.. – ಬಿಎಂಡಬ್ಲ್ಯು ಕಾರಿನಲ್ಲಿ ಬಂದು ವಾಪಸ್ ನೀಡಿದ ಖದೀಮರು!
ಡಲ್ಬೊ ಡಾಗ್ @Dalbodog ಎಂಬ ಅಮೆರಿಕಾ ಮೂಲದ ಟ್ವಿಟ್ಟರ್ ಖಾತೆಯೊಂದು ತನ್ನ ಖಾತೆಯಲ್ಲಿ ಈ ವಿಚಾರವನ್ನು ಪೋಸ್ಟ್ ಮಾಡಲಾಗಿದೆ. ಈ ಪೋಸ್ಟ್‌ನಲ್ಲಿ ಈ ಶ್ವಾನವನ್ನು ಕೆಲವು ವರ್ಷಗಳ ಹಿಂದೆ ದತ್ತು ಪಡೆದಿದ್ದೆವು. ಇದಕ್ಕೆ ಮುಟ್ಟು ಎಂದು ಹೆಸರಿಡಲಾಗಿತ್ತು. ಮುಟ್ಟು ನಮ್ಮನ್ನು ದರೋಡೆಕೋರನಿಂದ ರಕ್ಷಿಸಿದೆ. ಅದರ ಕಾಲಿಗೆ ಗಾಯವಾಗಿತ್ತು. ದರೋಡೆಕೋರನಿಂದ ನಮ್ಮನ್ನು ರಕ್ಷಿಸಿದ ಶ್ವಾನದ ರಕ್ಷಣೆ ಮಾಡುವ ಸಲುವಾಗಿ ಅದಕ್ಕೆ ರಕ್ತ ಸೋರುವ ಕಾಲಿಗೆ ಬಟ್ಟೆ ಸುತ್ತಿ ಬೆಳಗ್ಗಿನವರೆಗೂ ಕಾದೆವು. ಇದಾದ ಬಳಿಕ ನಾವು ಬೆಳಗ್ಗೆ ಮುಟ್ಟುವನ್ನು ಸಮೀಪದ ಪಶು ವೈದ್ಯರಲ್ಲಿಗೆ ಕರೆದೊಯ್ದೆವು. ಆತನಿಗೆ ಇಂದು ಶಸ್ತ್ರಚಿಕಿತ್ಸೆ ನಡೆಯಿತು ಎಂದು ಅವರು ಬರೆದುಕೊಂಡಿದ್ದಾರೆ.
ನಮ್ಮ ಜೀವ ಉಳಿಸಿದ ಈ ಧೈರ್ಯವಂತ ಶ್ವಾನಕ್ಕೆ ನಾವು ಕೃತಜ್ಞರಾಗಿರುತ್ತೇವೆ. ಅದು ನಮ್ಮನ್ನು ಭೀಕರ ವ್ಯಕ್ತಿಗಳಿಂದ ರಕ್ಷಣೆ ಮಾಡಿತು. ಆತ ಓರ್ವ ನಿರಾಶ್ರಿತ ತಾಣದಲ್ಲಿ ವಾಸ ಮಾಡುತ್ತಿದ್ದ ಅನಾಥ ಶ್ವಾನವಾಗಿದ್ದ. ಹೀಗಾಗಿ ಆತ ಯಾವ ರೀತಿಯ ಶ್ವಾನ ಎಂಬುದು ನಮಗೆ ಗೊತ್ತಿಲ್ಲ, ಆದರೆ ಈಗ ಆ ನಮ್ಮ ಒಳ್ಳೆಯ ಸ್ನೇಹಿತ ಹಾಗೂ ಉತ್ತಮ ರಕ್ಷಕನಾಗಿದ್ದಾನೆ. ಶ್ವಾನವನ್ನು ದತ್ತು ಪಡೆಯಿರಿ ಆತ ನಿಮ್ಮ ಜೀವ ಉಳಿಸುತ್ತಾನೆ ಎಂದು ಅವರು ಬರೆದುಕೊಂಡಿದ್ದಾರೆ.

ನೋಡಿರಿ

