ಕಾಂಗ್ರೆಸ್ ಭದ್ರಕೋಟೆ ಸಂಡೂರುನಲ್ಲಿ ಬಿಜೆಪಿ ರಣಕಹಳೆ – ಅಮಿತ್ ಶಾ ಎಂಟ್ರಿ.. ಹೇಗಿದೆ ‘ಕೇಸರಿ’ ನಗಾರಿ..?

ಕಾಂಗ್ರೆಸ್ ಭದ್ರಕೋಟೆ ಸಂಡೂರುನಲ್ಲಿ ಬಿಜೆಪಿ ರಣಕಹಳೆ – ಅಮಿತ್ ಶಾ ಎಂಟ್ರಿ.. ಹೇಗಿದೆ ‘ಕೇಸರಿ’ ನಗಾರಿ..?

ವಿಧಾನಸಭಾ ಚುನಾವಣೆಯಲ್ಲಿ ಶತಾಯ ಗತಾಯ ‘ಕಮಲ’ ಅರಳಿಸಲೇಬೇಕು ಅಂತಾ ಪಣ ತೊಟ್ಟಿರೋ ಬಿಜೆಪಿ ಸದ್ಯ ಕಲ್ಯಾಣ ಕರ್ನಾಟಕದ ಮೇಲೆ ಕಣ್ಣಿಟ್ಟಿದೆ. ಕಾಂಗ್ರೆಸ್ ಭದ್ರಕೋಟೆಯಾಗಿರುವ ಬಳ್ಳಾರಿ ಜಿಲ್ಲೆಯ ಸಂಡೂರು ವಿಧಾನಸಭಾ ಕ್ಷೇತ್ರದಲ್ಲಿ ಇವತ್ತು ಕೇಸರಿ ನಗಾರಿ ಮೊಳಗಿತ್ತು. ಚುನಾವಣಾ ಚಾಣಕ್ಯ ಅಮಿತ್ ಶಾ ಖುದ್ದು ಫೀಲ್ಡಿಗಿಳಿದಿದ್ದು ಇವತ್ತು ಸಂಡೂರಿನಲ್ಲಿ ರಣಕಹಳೆ ಮೊಳಗಿಸಿದ್ದಾರೆ.

ರಾಜ್ಯ ಬಿಜೆಪಿ ಘಟಕವು ಬಳ್ಳಾರಿ ಜಿಲ್ಲೆಯ ಸಂಡೂರಲ್ಲಿ ವಿಜಯ ಸಂಕಲ್ಪ ಯಾತ್ರೆಯನ್ನು ಇವತ್ತು ಆರಂಭಿಸಲಿದೆ. ಕಾಂಗ್ರೆಸ್ ಭದ್ರಕೋಟೆ ಸಂಡೂರುನಿಂದ ಬಿಜೆಪಿಯ ವಿಜಯಸಂಕಲ್ಪ ಯಾತ್ರೆ ಶುರುವಾಗಿದ್ದು, ಕೇಂದ್ರ ಗೃಹಸಚಿವ ಅಮಿತ್ ಶಾ ಚಾಲನೆ ನೀಡಿದ್ದಾರೆ. ಕೇಂದ್ರ ಗೃಹ ಸಚಿವರ ಕಾರ್ಯಕ್ರಮಕ್ಕಾಗಿ ಎಸ್‍ಆರ್‍ಎಸ್ ಗ್ರೌಂಡ್‍ನಲ್ಲಿ ಅದ್ಧೂರಿ ವೇದಿಕೆ ಸಜ್ಜಾಗಿದೆ.  ಒಂದು ಲಕ್ಷ ಜನರಿಗೆ ಆಸನಗಳ ಜೊತೆಗೆ ಊಟದ ವ್ಯವಸ್ಥೆಯನ್ನು ಸಹ ಮಾಡಲಾಗಿದೆ.

ಇದನ್ನೂ ಓದಿ : ಇಂದು ಬೆಂಗಳೂರಿಗೆ ಅಮಿತ್ ಶಾ.. ಟ್ರಾಫಿಕ್ ಜಾಮ್ ಪಕ್ಕಾ – ವಾಹನ ಸವಾರರೇ ಇಲ್ಲಿದೆ ಪರ್ಯಾಯ ಮಾರ್ಗ!

ಬಳ್ಳಾರಿ ಜಿಲ್ಲೆಯಿಂದ ಸ್ಪರ್ಧೆ ಮಾಡುವ ಇಂಗಿತ ಹೊಂದಿರುವ ಶ್ರೀರಾಮುಲು ಅವರ ಹೆಸರನ್ನು ಅಮಿತ್ ಶಾ ಇಂದು ಘೋಷಣೆ ಮಾಡುವ ಸಾಧ್ಯತೆಯಿದೆ. ಈ ಕಾರ್ಯಕ್ರಮದಲ್ಲಿ ಅಖಂಡ ಬಳ್ಳಾರಿ ಜಿಲ್ಲೆಯನ್ನು ಒಳಗೊಂಡಂತೆ ಕಲ್ಯಾಣ ಕರ್ನಾಟಕದ ಲಕ್ಷಾಂತರ ಜನ ಭಾಗವಹಿಸುವ ಸಾಧ್ಯತೆಯಿದೆ. ಹುಬ್ಬಳ್ಳಿಯಿಂದ ಹೆಲಿಕಾಪ್ಟರ್‌ ಮೂಲಕ ಮಧ್ಯಾಹ್ನ 1:30ರ ವೇಳೆಗೆ ಸಂಡೂರಿಗೆ ಬರುವ ಅಮಿತ್ ಶಾ ಮೊದಲು ವೇದಿಕೆ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ವೇದಿಕೆ ಕಾರ್ಯಕ್ರಮ ಮುಗಿಸಿ ಬಳ್ಳಾರಿ ರಾಯಚೂರು, ಕೊಪ್ಪಳ, ವಿಜಯನಗರ ಮತ್ತು ಬಳ್ಳಾರಿ ಜಿಲ್ಲೆಗಳ ಕೋರ್ ಕಮಿಟಿಯ ನಾಯಕರ ಜೊತೆ ಮಧ್ಯಾಹ್ನ 2:30ಕ್ಕೆ ಶಿವಪುರ ಪ್ಯಾಲೇಸ್‍ನಲ್ಲಿ ಸಭೆ ನಡೆಸಲಿದ್ದಾರೆ.

ಬಳ್ಳಾರಿ ಜಿಲ್ಲೆಯ ಕಾರ್ಯಕರ್ತರ ಸಭೆಯ ನಂತರ ಅಮಿತ್ ಶಾ ಸಂಜೆ 4 ಗಂಟೆಗೆ ಬೆಂಗಳೂರಿಗೆ ತೆರಳಲಿದ್ದು, ವಿಧಾನಸಭಾ ಚುನಾವಣೆಯ ಸಿದ್ಧತೆಯ ಬಗ್ಗೆ ರಾಜ್ಯದ ಬಿಜೆಪಿ ಮುಖಂಡರ ಜೊತೆ ಚರ್ಚೆ ನಡೆಸಲಿದ್ದಾರೆ. ಅಲ್ಲದೇ ಪಕ್ಷ ಸಂಘಟನೆ ಹಾಗೂ ಚುನಾವಣಾ ಗೆಲುವಿಗೆ ಬೇಕಾದ ತಂತ್ರಗಳ ಬಗ್ಗೆ ಬಿಜೆಪಿ ನಾಯಕರಿಗೆ ಸಲಹೆ ನೀಡಲಿದ್ದಾರೆ. ಗಣಿನಾಡು ಬಳ್ಳಾರಿ ಹಾಗೂ ನಾಲ್ಕು ಜಿಲ್ಲೆಯ ಬಿಜೆಪಿ ನಾಯಕರಿಗೆ ಕಲ್ಯಾಣ ಕರ್ಣಾಟಕದಲ್ಲಿ ಹೆಚ್ಚು ಸ್ಥಾನ ಗೆಲ್ಲುವುದು ಹೇಗೆ ಎಂಬ ಬಗ್ಗೆ ತಂತ್ರ ರೂಪಿಸಲಿದ್ದಾರೆ.

ಕಲ್ಯಾಣ ಕರ್ನಾಟಕ ಭಾಗದ ಏಳು ಜಿಲ್ಲೆಗಳಲ್ಲಿ 41 ಕ್ಷೇತ್ರಗಳಿದ್ದು, ಅದರಲ್ಲಿ ಬಿಜೆಪಿ 19, ಕಾಂಗ್ರೆಸ್ 18, ಜೆಡಿಎಸ್ 4 ಕ್ಷೇತ್ರವನ್ನು ಪಡೆದುಕೊಂಡಿದೆ. ಈ ಬಾರಿ ಚುನಾವಣೆಯಲ್ಲಿ ಮತ್ತಷ್ಟು ಕ್ಷೇತ್ರವನ್ನು ತನ್ನ ತೆಕ್ಕೆಗೆ ಪಡೆದುಕೊಳ್ಳಲು ಬಿಜೆಪಿ ಹೈಕಮಾಂಡ್ ಗಮನ ಹರಿಸಿದೆ. ಬಳ್ಳಾರಿ, ವಿಜಯನಗರ, ರಾಯಚೂರು, ಕೊಪ್ಪಳ ಭಾಗದ ನಾಲ್ಕು ಜಿಲ್ಲೆಗಳಲ್ಲಿ ಒಟ್ಟು 22 ಕ್ಷೇತ್ರಗಳ ಪೈಕಿ 10 ಕ್ಷೇತ್ರದಲ್ಲಿ ಬಿಜೆಪಿ, 10 ಕ್ಷೇತ್ರದಲ್ಲಿ ಕಾಂಗ್ರೆಸ್ ಹಾಗೂ ಎರಡು ಕ್ಷೇತ್ರದಲ್ಲಿ ಜೆಡಿಎಸ್ ಅಧಿಕಾರದಲ್ಲಿದೆ. 2008ರಲ್ಲಿ ಬಿಜೆಪಿ ಸರ್ಕಾರ ರಚನೆಗೆ ಹೆಚ್ಚಿನ ಪಾತ್ರವಹಿಸಿದ್ದ ಬಳ್ಳಾರಿ ಹಾಗೂ ವಿಜಯನಗರ ಭಾಗದ ಕ್ಷೇತ್ರಗಳಲ್ಲಿ ಚುನಾವಣೆ ರಣತಂತ್ರ ಹೆಣೆಯಲಾಗುತ್ತಿದೆ. ಪರಿಶಿಷ್ಟ ಪಂಗಡದ ಪ್ರಮುಖ ನಾಯಕ, ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವ ಶ್ರೀರಾಮುಲು ಕಳೆದ ಬಾರಿ ಚುನಾವಣೆಯಲ್ಲಿ ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ಕ್ಷೇತ್ರದಿಂದ ಸ್ಪರ್ಧಿಸಿ ಗೆಲುವು ಸಾಧಿಸಿದ್ದರು. ಈ ಬಾರಿ ತವರು ಜಿಲ್ಲೆಯ ಸಂಡೂರು ಇಲ್ಲವೇ ಬಳ್ಳಾರಿ ಗ್ರಾಮೀಣ ಕ್ಷೇತ್ರದಿಂದ ಸ್ಪರ್ಧಿಸುವುದಾಗಿ ಈಗಾಗಲೇ ಇಂಗಿತ ವ್ಯಕ್ತಪಡಿಸಿದ್ದಾರೆ.

1957ರ ಸಾರ್ವತ್ರಿಕ ಚುನಾವಣೆಯಿಂದ 2018ರ ಚುನಾವಣೆವರೆಗೆ ಸಂಡೂರು ವಿಧಾನಸಭಾ ಕ್ಷೇತ್ರ ಸಂಪೂರ್ಣ ಕಾಂಗ್ರೆಸ್‍ನ ಭದ್ರಕೋಟೆ ಆಗಿದೆ. 1957ರಲ್ಲಿ ಹೆಚ್.ರಾಯನಗೌಡ ಕ್ಷೇತ್ರದಿಂದ ಮೊದಲ ಶಾಸಕರಾಗಿ ಕಾಂಗ್ರೆಸ್‍ನಿಂದ ಆಯ್ಕೆ ಗೊಂಡಿದ್ದರೆ, ನಂತರದಲ್ಲಿ 1962, 1967, 1972, 1989, 1994, 1999ರಲ್ಲಿ ಕಾಂಗ್ರೆಸ್‍ನಿಂದ ಎಂ.ವೈ.ಘೋರ್ಪಡೆ ಗೆದ್ದಿದ್ದರು. 1985ರಲ್ಲಿ ಯು. ಭೂಪತಿ ಅವರು ಜನತಾ ಪಕ್ಷದಿಂದ ಹಾಗೂ 2004ರಲ್ಲಿ ಸಂತೋಷ್ ಲಾಡ್ ಜೆಡಿಎಸ್‍ನಿಂದ ಆಯ್ಕೆಗೊಂಡಿದ್ದು ಬಿಟ್ಟರೆ ಎಲ್ಲ ಚುನಾವಣೆಯಲ್ಲಿ ಕಾಂಗ್ರೆಸ್ ಮೇಲುಗೈ ಸಾಧಿಸಿದೆ. 2008, 2013 ಹಾಗೂ 2018ರಲ್ಲಿ ಸತತ ಮೂರು ಬಾರಿ ಶಾಸಕರಾಗಿ ಆಯ್ಕೆಗೊಂಡಿರುವ ಈ.ತುಕಾರಾಮ್ ಈ ಬಾರಿಯೂ ಗೆಲುವಿನ ವಿಶ್ವಾಸದಲ್ಲಿದ್ದಾರೆ. ಸತತ ಮೂರು ಬಾರಿ ಆಯ್ಕೆಗೊಂಡಿರುವ ಹಿನ್ನೆಲೆ ಕ್ಷೇತ್ರದಲ್ಲಿ ವಿರೋಧಿ ಅಲೆ ಇದ್ದು, ಶ್ರೀರಾಮುಲು ಈ ಕ್ಷೇತ್ರದಿಂದ ಸ್ಪರ್ಧಿಸಿದ್ದಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ನಡುವೆ ರೋಚಕ ಹಣಾಹಣಿ ಬೀಳಲಿದೆ.

suddiyaana