ಬೆಂಗಳೂರಲ್ಲಿ ಅಮಿತ್ ಶಾ.. ಸವಾರರಿಗೆ ಪರ್ಯಾಯ ಮಾರ್ಗ – ಟ್ರಾಫಿಕ್ ಜಾಮ್ ತಪ್ಪಿಸಲು ಪೊಲೀಸರ ಮನವಿ!
ಬೆಂಗಳೂರಲ್ಲಿ ಏನು ಬೇಕಾದ್ರೂ ಸಹಿಸಿಕೊಳ್ಳಬಹುದು. ಆದ್ರೆ ಟ್ರಾಫಿಕ್ ಜಾಮ್ ಕಿರಿಕಿರಿ ಮಾತ್ರ ತಡೆದುಕೊಳ್ಳೋಕೆ ಆಗಲ್ಲ. ಸಿಗ್ನಲ್, ವಾಹನ ದಟ್ಟಣೆ ಅಂತಾ ಸವಾರರು ತಮ್ಮ ಅರ್ಧ ದಿನವನ್ನ ನಗರದ ರಸ್ತೆಗಳಲ್ಲೇ ಕಳೆಯುತ್ತಿದ್ದಾರೆ. ಬೆಂಗಳೂರಿನ ಈ ಟ್ರಾಫಿಕ್ ಜಾಮ್ ಅಂತಾರಾಷ್ಟ್ರೀಯ ಮಟ್ಟದಲ್ಲೂ ಕುಖ್ಯಾತಿ ಪಡೆದಿದೆ. ಹೀಗೆ ಸಾಮಾನ್ಯ ದಿನಗಳಲ್ಲೇ ವಾಹನಗಳು ಆಮೆಗಳಂತೆ ಸಾಗುತ್ತವೆ. ಹೀಗಿರುವಾಗ ನಗರಕ್ಕೆ ಯಾರಾದ್ರೂ ಗಣ್ಯ ವ್ಯಕ್ತಿ ಭೇಟಿ ನೀಡಿದಾಗ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸುತ್ತೆ. ಸದ್ಯ ಅಮಿತ್ ಶಾ ಬೆಂಗಳೂರಿನಲ್ಲೇ ವಾಸ್ತವ್ಯ ಹೂಡಿದ್ದು, ಇವತ್ತು ನಗರದ ಕೆಲ ಭಾಗಗಳಲ್ಲಿ ಟ್ರಾಫಿಕ್ ಜಾಮ್ ಉಂಟಾಗಲಿದೆ.
ಇದನ್ನೂ ಓದಿ : ಭ್ರಷ್ಟಾಚಾರದ ಆರೋಪದ ಬೆನ್ನಲ್ಲೇ ಎನ್.ಶಶಿಕುಮಾರ್ ಎತ್ತಂಗಡಿ – 6 ಐಪಿಎಸ್ ಅಧಿಕಾರಿಗಳ ವರ್ಗಾವಣೆ!
ಬಿಜೆಪಿ ಚಾಣಕ್ಯ ಅಮಿತ್ ಶಾ ನಿನ್ನೆಯೇ ರಾಜ್ಯಕ್ಕೆ ಭೇಟಿ ನೀಡಿದ್ದಾರೆ. ನಿನ್ನೆ ಬಳ್ಳಾರಿ ಜಿಲ್ಲೆಯ ಸಂಡೂರಿನಲ್ಲಿ ನಡೆದ ಬಿಜೆಪಿಯ ವಿಜಯ ಸಂಕಲ್ಪ ಸಮಾವೇಶದಲ್ಲಿ ಭಾಗಿಯಾಗಿ ಬಳಿಕ ಬೆಂಗಳೂರಿನ ಜಕ್ಕೂರು ಹೆಲಿಪ್ಯಾಡ್‌ಗೆ ಬಂದಿಳಿದಿದ್ರು. ನಿನ್ನೆ ರಾತ್ರಿಯೇ ಬೆಂಗಳೂರಿನ ರೇಸ್ ಕೋರ್ಸ್ ರಸ್ತೆಯ ಖಾಸಗಿ ಹೋಟೆಲ್‌ನಲ್ಲಿ ವಾಸ್ತವ್ಯ ಹೂಡಿದ್ದರು. ಖಾಸಗಿ ಹೋಟೆಲ್‌ನಲ್ಲಿ ಬಿಜೆಪಿ ಶಾಸಕರು, MLCಗಳ ಜೊತೆ ಸಭೆ ನಡೆಸಿದ್ದು ಇವತ್ತು ಬೆಂಗಳೂರಿನಿಂದ ದೆಹಲಿಗೆ ವಾಪಸ್ ಆಗಲಿದ್ದಾರೆ.
ಅಮಿತ್ ಶಾ ಆಗಮನ ಹಿನ್ನೆಲೆ ಬೆಂಗಳೂರಿನಲ್ಲಿ ಕೆಲ ಕಡೆ ಮಾರ್ಗ ಬದಲಾವಣೆ ಮಾಡಲಾಗಿದೆ. ನಗರದ ಪ್ರಮುಖ ರಸ್ತೆಗಳಲ್ಲಿ ವಾಹನ ನಿಲುಗಡೆಯನ್ನು ಸಂಪೂರ್ಣ ನಿಷೇಧಿಸಲಾಗಿದೆ. ಪರ್ಯಾಯ ಮಾರ್ಗ ಬಳಸಲು ಮನವಿ ಮಾಡಲಾಗಿದೆ.. ವಾಹನ ಸವಾರರಿಗೆ ಸಾಧ್ಯವಾದಷ್ಟು ಪರ್ಯಾಯ ಮಾರ್ಗಗಳನ್ನು ಬಳಸುವಂತೆ ಟ್ರಾಫಿಕ್ ಪೊಲೀಸರು ಮನವಿ ಮಾಡಿಕೊಂಡಿದ್ದಾರೆ.