KBC ಶೋನಲ್ಲಿ ಬಾಲಕನಿಂದ ಅಮಿತಾಭ್‌ಗೆ ಅವಮಾನ – ಮಕ್ಕಳನ್ನ ಬೆಳೆಸುವವರಿಗೆ ಇದು ಪಾಠ

ಸೋನಿ ಟಿವಿಯಲ್ಲಿ ಪ್ರಸಾರವಾಗುವ ಕೌನ್ ಬನೇಗಾ ಕರೋಡ್‌ಪತಿ ಹಳ್ಳಿಯಿಂದ ಡೆಲ್ಲಿ ತನಕ ಫೇಮಸ್. ಅವರಿಗೆ ಎಷ್ಟೇ ಜ್ಞಾನವಿದ್ರೂ ಪ್ರತಿಯೊಬ್ಬರನ್ನು ಅಮಿತಾಭ್ ಬಚ್ಚನ್ ಅವರು ಮಾತನಾಡಿಸೋ ರೀತಿ ಸೂಪರ್.. ಇವರಿಗೆ ಕೋಟಿ ಕೋಟಿ ಫ್ಯಾನ್ಸ್ ಇದ್ದಾರೆ. ಸಾಕಷ್ಟು ಕ್ಷೇತ್ರದಲ್ಲಿ ಸಾಧನೆ ಮಾಡಿದವರು ಕೂಡ ಅಮಿತಾಭ್ ಮುಂದೆ ಶಿಸ್ತಿನಿಂದ ಕುತ್ತು ಕಾರ್ಯಕ್ರಮದಲ್ಲಿ ಭಾಗಿಯಾಗ್ತಾರೆ. ಆದ್ರೆ ಒಬ್ಬ ಬಾಲಕ ಅಮಿತಾಭ್ ಬಚ್ಚನ್ ಅವರೊಂದಿಗೆ ಉದ್ಧಟತನದಿಂದ ವರ್ತಿಸಿ ಅವಮಾನಿಸಿದ್ದಾನೆ. ಈ ಕಾರ್ಯಕ್ರಮದ ತುಣುಕ ಈಗ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಆಗುತ್ತಿದೆ. ಬಾಲಕನ ಸಹನೆ ಇಲ್ಲದ ದೊಡ್ಡವರೆಂಬ ಗೌರವ ಇಲ್ಲದ ವರ್ತನೆಗೆ ನೆಟ್ಟಿಗರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಹಾಗೂ ಈ ಪರಿಸ್ಥಿತಿಯನ್ನು ಶಾಂತವಾಗಿ ನಿಭಾಯಿಸಿದ್ದಕ್ಕೆ ಅಮಿತಾಭ್ ಬಚ್ಚನ್ ಅವರಿಗೆ ಅನೇಕರು ಶ್ಲಾಘನೆ ವ್ಯಕ್ತಪಡಿಸಿದ್ದಾರೆ.
ವೀಡಿಯೋದಲ್ಲಿ ಕಾಣುವಂತೆ ಬಾಲಕ ಈ ಕೆಬಿಸಿ ಶೋದ ಚೇರ್‌ನಲ್ಲಿ ಕುಳಿತ ಕೂಡಲೇ ನನಗೆ ಈ ಶೋನ ನಿಯಮಗಳನ್ನೆಲ್ಲಾ ಹೇಳುವುದಕ್ಕೆ ಹೋಗಬೇಡಿ ನನಗೆ ಎಲ್ಲವೂ ಗೊತ್ತಿದೆ ಎಂದು ಆರಭದಲ್ಲೇ ಉದ್ಧಟತನದಿಂದ ಆದೇಶ ಮಾಡುವಂತೆ ಮಾತನಾಡುತ್ತಾನೆ. ಈ ಶೋದಲ್ಲಿ ಅಮಿತಾಭ್ ಅವರು ಭಾಗವಹಿಸುವ ಪ್ರತಿಯೊಬ್ಬ ವ್ಯಕ್ತಿಗೂ ಅವರಿಗೆ ಶೋ ನಿಯಮಗಳು ಮೊದಲೇ ಗೊತ್ತಿದ್ದರೂ ತಾವು ಒಂದು ಸಲ ಆ ನಿಯಮವನ್ನು ಸ್ಪರ್ಧಿಗಳಿಗೆ ಹೇಳುತ್ತಾರೆ. ಆದರೆ ಈ ಬಾಲಕ ಆರಂಭದಲ್ಲೇ ಅಮಿತಾಭ್ ಮಾತಿಗೆ ಬ್ರೇಕ್ ಹಾಕಿದ್ದಾನೆ. ಬಾಲಕನ ಈ ಮಾತಿಗೆ ಅಮಿತಾಭ್ ಅವರು ತಾಳ್ಮೆ ಕಳೆದುಕೊಳ್ಳದೇ ಸರಿ ಎಂದು ಹೇಳಿದ್ದಾರೆ. ನಂತರ
ಮೊದಲನೇ ಪ್ರಶ್ನೆ ಕೇಳಿದ್ದಾರೆ.
ಇವುಗಳಲ್ಲಿ ಯಾವುದನ್ನು ಬೆಳಗ್ಗೆ ತಿನ್ನಲಾಗುತ್ತದೆ ಎಂದು ಕೇಳುತ್ತಾರೆ. ಅದಕ್ಕೆ ಬಾಲಕ ಕೈ ಮುಂದೆ ಮಾಡಿ ಯಾವುದೇ ಆಯ್ಕೆಗಳನ್ನು ಹೇಳುವುದು ಬೇಡ, ಬ್ರೇಕ್‌ಫಾಸ್ಟ್ ಎಂದು ಹೇಳುತ್ತಾನೆ. ನಂತರ 4 ಆಪ್ಷನ್‌ಗಳನ್ನು ಅಲ್ಲಿ ನೀಡಲಾಗಿದ್ದು, ಬಾಲಕ ಬಿ ಬ್ರೇಕ್‌ಫಾಸ್ಟ್ ಲಾಕ್ ಮಾಡಿ ಎಂದು ಲಾಕ್ ಮಾಡಿಸುತ್ತಾನೆ. ಹಾಗೆಯೇ ಚೆಸ್‌ನಲ್ಲಿ ಎಷ್ಟು ರಾಜ ಇರುತ್ತಾರೆ ಎಂದು ಕೇಳಿದ ಪ್ರಶ್ನೆಗೆ ಬಾಲಕ ಇದೊಂದು ಕೇಳುವಂತಹ ಪ್ರಶ್ನೆಯೇ ಕೇವಲ 2 ರಾಜರು ಇರುತ್ತಾರೆ ಎಂದು ಉತ್ತರಿಸುತ್ತಾನೆ. ಜೊತೆಗೆ ಅಮಿತಾಬ್ ಅವರಿಗೆ ಆಯ್ಕೆಯನ್ನು ಹೇಳುವುದಕ್ಕೂ ಆತ ಬಿಡುವುದಿಲ್ಲ, ಈ ವೇಳೆ ಅಮಿತಾಭ್ ಅವರು ವೀಕ್ಷಕರಿಗಾಗಿ ಆಯ್ಕೆ ಹೇಳಬೇಕು ಎಂದು ಹೇಳುತ್ತಾರೆ. ಈ ವೇಳೆ ಅಮಿತಾಭ್ ಅವರು ಈ ಹುಡುಗ ಪ್ರಶ್ನೆ ಕೇಳುವುದಕ್ಕೂ ಮೊದಲು ಉತ್ತರಿಸುತ್ತಾನೆ ಎಂದು ಹೇಳಿದರೆ ಆತ ಅವರ ಮಾತನ್ನು ಅರ್ಧದಲ್ಲಿ ತಡೆದು ಸಾರ್ ಮುಂದಿನ ಪ್ರಶ್ನೆ ಕೇಳಿ ಎಂದು ಕಿರಿಕ್ ಮಾಡ್ತಾನೆ.
5ನೇ ರೌಂಡ್‌ನಲ್ಲೇ ಔಟ್
ನಂತರ 5ನೇ ಪ್ರಶ್ನೆಯನ್ನು ಅಮಿತಾಭ್ ಅವರು ಕೇಳಿದ್ದು, ಈ ವೇಳೆ ಉತ್ತರಿಸಲಾಗದೇ ಹುಡುಗ ಲಾಕ್ ಆಗಿದ್ದಾನೆ. ಅಂದಹಾಗೆ ಅಮಿತಾಭ್ ಅವರು ಅಂತಹ ಕಠಿಣ ಪ್ರಶ್ನೆಯನ್ನೇನೂ ಕೇಳಿರಲಿಲ್ಲ, ಆದರೆ ಬಾಲಕನಿಗೆ ರಾಮಾಯಾಣ ಮಹಾಭಾರತಗಳ ಬಗ್ಗೆ ಯಾವುದೇ ಜ್ಞಾನವಿಲ್ಲ ಅಷ್ಟೇ. ವಾಲ್ಮೀಕಿ ರಾಮಾಯಣದಲ್ಲಿನ ಮೊದಲ ಕಾಂಡ ಯಾವುದು ಎಂದು ಕೇಳುತ್ತಾರೆ. ಆದರೆ ಈ ವೇಳೆ ಆತನಿಗೆ ಆಯ್ಕೆ ನೀಡರಲಿಲ್ಲ, ಆತನೇ ಆಯ್ಕೆ ನೀಡುವಂತೆ ಕೇಳಿದಾಗ ಬಾಲಕ ಇಷ್ಟು ಸಮಯ ಮಾಡಿದ ಕಿರಿಕಿರಿ ನೋಡಿದ ಅಲ್ಲಿದ್ದ ವೀಕ್ಷಕರು ಜೋರಾಗಿ ಚಪ್ಪಾಳೆ ತಟ್ಟಲು ಶುರು ಮಾಡಿದ್ದಾರೆ. ನಂತರ ಅಮಿತಾಬ್ ಅವರು ಆಯ್ಕೆಗಳನ್ನು ನೀಡಲು ಬಾಲಕನನ್ನು ಸ್ವಲ್ಪ ಹೊತ್ತು ಕಾಯಿಸಿದಾಗ ಆ ಬಾಲಕ ತಾಳ್ಮೆ ಕಳೆದುಕೊಂಡು ಮೊದಲು ಆಪ್ಷನ್ ನೀಡಿ ಎಂದು ಬೊಬ್ಬೆ ಹೊಡೆಯುತ್ತಾನೆ. ನಂತರ ಅಮಿತಾಭ್ ಆಯ್ಕೆಗಳನ್ನು ನೀಡಿದ್ದು, ಆಯ್ಕೆಗಳು ಹೀಗಿದ್ದವು. ಬಾಲ ಕಾಂಡ, ಅಯೋಧ್ಯಾ ಕಾಂಡ, ಅರಣ್ಯ ಕಾಂಡ, ಹಾಗೂ ಕಿಷ್ಕಿಂಧ ಕಾಂಡ. ಆಪ್ಷನ್ ಬರುತ್ತಿದ್ದಂತೆ ಈ ಬಾಲಕ ಆಯೋಧ್ಯಾ ಕಾಂಡ ಎಂದು ಹೇಳಿ ಅದನ್ನು ಲಾಕ್ ಮಾಡುವಂತೆ ಹೇಳಿದ್ದಾನೆ. ಮಧ್ಯೆ ಮಾತನಾಡಲು ಯತ್ನಿಸಿದ ಅಮಿತಾಭ್ ಅವರಿಗೆ ಆತ ಒಳ್ಳೆಯ ರೀತಿಯಲ್ಲಿ ಮೊದಲು ಅದನ್ನು ಲಾಕ್ ಮಾಡಿ ಎಂದು ಹೇಳುವ ಮೂಲಕ ದುರ್ವರ್ತನೆ ತೋರಿದ್ದಾನೆ. ಆದರೆ ಆತನ ಉತ್ತರ ತಪ್ಪಾಗಿದ್ದು, ನಂತರ ಅಮಿತಾಬ್ ಅವರು ಉತ್ತರ ತಪ್ಪು ಎಂದು ಹೇಳುತ್ತಾರೆ.
ಈ ವೀಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿದ್ದು, ಅನೇಕರು ವಿನಯವಂತಿಕೆ ಇಲ್ಲದೇ ಮಗುವನ್ನು ಬೆಳೆಸಿದ ರೀತಿಗೆ ಪೋಷಕರ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ವೀಡಿಯೋವನ್ನು ಅನೇಕರರು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಪೋಷಕರ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕೆಲವರು ಇದೇ ಮೊದಲ ಬಾರಿ ಒಂದು ಮಗು ಸೋತಾಗ ನಾನು ಚಪ್ಪಾಳೆ ತಟ್ಟಿದೆ ಎಂದು ಬರೆದುಕೊಂಡಿದ್ದಾರೆ.

ನೋಡಿರಿ

