ಶೂಟಿಂಗ್ ವೇಳೆ ಬಿದ್ದು ಅಮಿತಾಬ್ ಬಚ್ಚನ್ ಗೆ ಗಂಭೀರ ಗಾಯ – ಸ್ಕ್ಯಾನಿಂಗ್ ನಲ್ಲಿ ಆತಂಕಕಾರಿ ಮಾಹಿತಿ!
ಬಾಲಿವುಡ್ ನ ಖ್ಯಾತ ನಟ ಅಮಿತಾಬ್ ಬಚ್ಚನ್ ಗಂಭೀರವಾಗಿ ಗಾಯಗೊಂಡಿದ್ದಾರೆ. ಹೈದರಾಬಾದ್ ನಲ್ಲಿ ನಡೆಯುತ್ತಿದ್ದ ಶೂಟಿಂಗ್ ವೇಳೆ ಅವಘಡ ಸಂಭವಿಸಿದ್ದು ಬಾಲಿವುಡ್ ವಲಯದಲ್ಲಿ ಆತಂಕ ಮೂಡಿದೆ.
ಹೈದರಾಬಾದ್ ನಲ್ಲಿ ನಡೆಯುತ್ತಿದ್ದ ಶೂಟಿಂಗ್ ವೇಳೆ ಬಿದ್ದು 80 ವರ್ಷದ ಅಮಿತಾಬ್ ಬಚ್ಚನ್ ಪಕ್ಕೆಲುಬಿಗೆ ಗಂಭೀರ ಗಾಯವಾಗಿದೆ. ‘ಪ್ರಾಜೆಕ್ಟ್ ಕೆ’ ಚಿತ್ರದ ಌಕ್ಷನ್ ಸೀನ್ ಶೂಟಿಂಗ್ ವೇಳೆ ದುರಂತ ಸಂಭವಿಸಿದೆ. ಅಮಿತಾಭ್ ಬಚ್ಚನ್ ಅವರಿಗೆ ಹೈದರಾಬಾದ್‌ನ ಎಐಜಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದ್ದು, ವೈದ್ಯರ ಸಲಹೆಯಂತೆ ಸಿಟಿ ಸ್ಕ್ಯಾನ್ ಮಾಡಲಾಗಿದೆ ಎಂದು ತಿಳಿದುಬಂದಿದೆ. ಸದ್ಯ ಮುಂಬೈನ ನಿವಾಸದಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಇದನ್ನೂ ಓದಿ : ಚಂದನವನಕ್ಕೆ ಕಾಲಿಡ್ತಿದ್ದಾರೆ ದಿ ಗ್ರೇಟ್ ಖಲಿ – ‘ಕೆಂಡದ ಸೆರಗು’ ಚಿತ್ರದಲ್ಲಿ ‘ರಿಯಲ್ ಫೈಟರ್’ ಹವಾ..!
80 ವರ್ಷದ ಬಚ್ಚನ್ ತಮ್ಮ ಬ್ಲಾಗ್ ನಲ್ಲಿ ಈ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. ಸದ್ಯ ಹೈದರಾಬಾದ್‌ನಲ್ಲಿ ಚಿಕಿತ್ಸೆ ಪಡೆದಿದ್ದು ಮುಂಬೈನ ಜಲ್ಸಾದಲ್ಲಿರುವ ತಮ್ಮ ಮನೆಯಲ್ಲಿ ಚೇತರಿಸಿಕೊಳ್ತಿದ್ದಾರೆ. ‘ಹೈದರಾಬಾದ್‌ನಲ್ಲಿ ಪ್ರಾಜೆಕ್ಟ್ ಕೆ ಚಿತ್ರೀಕರಣದ ಌಕ್ಷನ್ ಸೀನ್ ಶೂಟ್ ವೇಳೆ ನಾನು ಗಾಯಗೊಂಡಿದ್ದೇನೆ. ಬಲ ಪಕ್ಕೆಲುಬಿನ ಕಾರ್ಟಿಲೆಜ್ ಮುರಿದಿದ್ದು ಶೂಟಿಂಗ್ ರದ್ದುಗೊಳಿಸಲಾಗಿದೆ. ಸದ್ಯಕ್ಕೆ ಮೇಲೇಳಲು ಹಾಗೂ ಉಸಿರಾಟದ ವೇಳೆ ಸ್ವಲ್ಪ ನೋವಾಗುತ್ತಿದೆ. ವೈದ್ಯರು ವಿಶ್ರಾಂತಿ ಪಡೆಯುವಂತೆ ತಿಳಿಸಿದ್ದು ಎಲ್ಲಾ ಶೂಟಿಂಗ್ ಗಳನ್ನ ಸ್ಥಗಿತಗೊಳಿಸಲಾಗಿದೆ’ ಎಂದು ಬರೆದುಕೊಂಡಿದ್ದಾರೆ. ಹಾಗೇ ಹಿತೈಷಿಗಳನ್ನ ಮತ್ತು ಅಭಿಮಾನಗಳನ್ನ ಭೇಟಿಯಾಗಲು ಸಾಧ್ಯವಾಗುತ್ತಿಲ್ಲ ಎಂದಿದ್ದಾರೆ.
ಕೊರೊನಾ ವೇಳೆಯೂ ಬಾಲಿವುಡ್ ಹಿರಿಯ ನಟ ಅಮಿತಾಬ್ ಬಚ್ಚನ್ ಎರಡು ಬಾರಿ ಪಾಸಿಟಿವ್ ಬಂದಿತ್ತು. ದೇಹದ ಕೆಲವೊಂದು ಅಂಗಾಂಗಗಳು ವೈಫಲ್ಯವಾಗಿದ್ದವು ಎಂದು ಅಮಿತಾಬ್ ಹೇಳಿಕೊಂಡಿದ್ದರು. ಆಗ ಕೆಲವು ಅಂಗಾಂಗಳು ಕೆಲಸ ಮಾಡುತ್ತಿರಲಿಲ್ಲ. ಇದರ ಬಗ್ಗೆ ನಾನು ಹೆಚ್ಚಿಗೆ ಹೇಳಿದರೆ, ಅನುಕಂಪ ಗಿಟ್ಟಿಸಿಕೊಳ್ಳುತ್ತಿದ್ದಾನೆ ಎಂದು ನೀವು ತಪ್ಪು ತಿಳಿಯಬಹುದು ಎಂದು ಟ್ವೀಟ್ ಮಾಡಿದ್ದರು. ನಾನು ಇನ್ನು ಜೀವನವೇ ಮುಗಿಯಿತು ಎಂದುಕೊಂಡಿದ್ದೆ. ಆದರೆ ವೈದ್ಯರ ಸತತ ಪ್ರಯತ್ನ, ಅಭಿಮಾನಿಗಳ ಪ್ರೀತಿ, ಆಶೀರ್ವಾದ ನನ್ನನ್ನು ಕಾಪಾಡಿತು. ಅಂಗಾಂಗಳು ಮೊದಲಿನಂತೆ ಕೆಲಸ ಮಾಡದಿದ್ದರೂ, ಸದ್ಯಕ್ಕೆ ಪರವಾಗಿಲ್ಲ ಎಂದು ಅಮಿತಾಬ್ ಬರೆದುಕೊಂಡಿದ್ದರು.