ಫೈನಲ್‌ ನಲ್ಲಿ ಕೈಕೊಟ್ಟ ಬಾಟ್ಸ್‌ಮನ್‌ಗಳು – ಕಾವ್ಯಾಗೆ ಕಿವಿ ಮಾತು ಹೇಳಿದ ಬಚ್ಚನ್!

ಫೈನಲ್‌ ನಲ್ಲಿ ಕೈಕೊಟ್ಟ ಬಾಟ್ಸ್‌ಮನ್‌ಗಳು – ಕಾವ್ಯಾಗೆ ಕಿವಿ ಮಾತು ಹೇಳಿದ ಬಚ್ಚನ್!

ಐಪಿಎಲ್​ನ 17 ಸೀಸನ್​ಗಳ ಇತಿಹಾಸದಲ್ಲೇ ಈ ವರ್ಷದ ಫಿನಾಲೆ ಅತ್ಯಂತ ನೀರಸ ಪಂದ್ಯ ಎನಿಸಿಕೊಂಡಿದೆ.   ಪಂದ್ಯದ ಮೊದಲ ಹಾಫ್‌ ಮುಗಿಯುವ ವೇಳೆಗಾಗಲೇ ಈ ಪಂದ್ಯದಲ್ಲಿ ಯಾರು ಗೆಲ್ತಾರೆ ಅನ್ನೋದು ನಿಶ್ಚಿತವಾಗಿತ್ತು. ಸೋಶಿಯಲ್‌ ಮೀಡಿಯಾದಲ್ಲಿ ಕ್ರಿಕೆಟ್‌ ಅಭಿಮಾನಿಗಳು ಕೂಡ ಈವರೆಗಿನ ಅತ್ಯಂತ ಕೆಟ್ಟ ಐಪಿಎಲ್‌ ಫೈನಲ್‌ ಎಂದು ಟೀಕೆ ಮಾಡಿದ್ದಾರೆ.

ಅತ್ಯಂತ ಏಕಪಕ್ಷೀಯ ಫೈನಲ್‌ ಪಂದ್ಯ ಇದಾಗಿತ್ತು. ಕಡಿಮೆ ರನ್‌ ಬಾರಿಸಿದ್ದ ಸನ್‌ರೈಸರ್ಸ್‌ ತಂಡ ಕನಿಷ್ಠ ಹೋರಾಟ ನೀಡುವ ಲಕ್ಷಣವನ್ನೂ ತೋರಿಸಲಿಲ್ಲ. ಇದಕ್ಕಿಂತ ಪ್ಲೇ ಆಫ್‌ ರೇಸ್‌ಗಾಗಿ ಚೆನ್ನೈ ಸೂಪರ್‌ ಕಿಂಗ್ಸ್‌ ಹಾಗೂ ಆರ್‌ಸಿಬಿ ಆಡಿದ್ದ ತಮ್ಮ ಕೊನೆಯ ಲೀಗ್‌ ಪಂದ್ಯವೇ ಫೈನಲ್‌ ರೀತಿ ಇತ್ತು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: IPL ಟ್ರೋಫಿಗೆ ಮುತ್ತಿಕ್ಕಿದ KKR  – RCB & ಕೊಹ್ಲಿಗೆ ಸಿಕ್ಕ ಹಣವೆಷ್ಟು?

ಇನ್ನು ಈ ಬಾರಿಯ ಐಪಿಎಲ್​ನಲ್ಲಿ  ಹೈದ್ರಾಬಾದ್ ತಂಡ ಟ್ರಾವಿಸ್ ಹೆಡ್ ಮತ್ತು ಅಭಿಷೇಕ್ ಶರ್ಮಾ ಸುನಾಮಿ ಬ್ಯಾಟಿಂಗ್ ವಿಶ್ವಮಟ್ಟದಲ್ಲಿ ಸದ್ದು ಮಾಡಿತ್ತು. ಎಸ್​ಆರ್​ಹೆಚ್​ನ ಈ ಓಪನರ್ಸ್ ಆಟವನ್ನು ಕಣ್ತುಂಬಿಕೊಂಡ ಬಹುತೇಕರು, ಟಿ20 ಕ್ರಿಕೆಟ್ ಹೇಗೆ ಆಡಬೇಕೆಂದು ಇವರನ್ನು ನೋಡಿ ಕಲಿಯಬೇಕು ಎಂದಿದ್ದರು. ಆದ್ರೀಗ ಅದೇ ಜೋಡಿ ತೀವ್ರ ಟೀಕೆಗೆ ಗುರಿಯಾಗಿದೆ. ಲೀಗ್​ ಹಂತದಲ್ಲಿ ಬಿರುಸಿನ ಬ್ಯಾಟಿಂಗ್​ ಮಾಡಿದ ಇಬ್ಬರು ಪ್ಲೇಆಫ್​ ಮತ್ತು ಫೈನಲ್​ ಪಂದ್ಯಗಳಲ್ಲಿ ​ ತಂಡವನ್ನು ನಡುನೀರಿನಲ್ಲಿ ಕೈಬಿಟ್ಟು ಹೋಗಿದ್ದಾರೆ. ಗ್ರೂಪ್​ ಸ್ಟೇಜ್ ಬಳಿಕ ಆಡಿದ ಕ್ವಾಲಿಫೈಯರ್​​-1, ಕ್ವಾಲಿಫೈಯರ್​​-2 ಮತ್ತು ಫೈನಲ್​ನಲ್ಲಿ ಈ ಜೋಡಿಯ ಬ್ಯಾಟ್​ ಸದ್ದು ಮಾಡಲೇ ಇಲ್ಲ. ಮತ್ತೊಂದೆಡೆ ಅವರ ಮೇಲೆಯೇ ಹೆಚ್ಚು ಅವಲಂಬಿತವಾಗಿದ್ದ ಹೈದರಾಬಾದ್ ಕೂಡ ಇಕ್ಕಟ್ಟಿಗೆ ಸಿಲುಕಿತು. ಓಪನರ್ಸ್ ಬಹುಬೇಗನೇ ಕೈಕೊಟ್ಟ ಕಾರಣ ಮಧ್ಯಮ ಕ್ರಮಾಂಕದ ಬ್ಯಾಟರ್​​ಗಳು ಸಹ ಕೈಹಿಡಿಯಲಿಲ್ಲ.

ಕಾವ್ಯಾಗೆ ಕಿವಿ ಮಾತು ಹೇಳಿದ ಅಮಿತಾಬ್ ಬಚ್ಚನ್

ಕೆಕೆಆರ್ ವಿರುದ್ಧ ತನ್ನ ಮಾಲೀಕತ್ವದ ಹೈದ್ರಾಬಾದ್ ತಂಡ ಹೀನಾಯವಾಗಿ ಸೋತ ಬಳಿಕ ಕಾವ್ಯಾ ಮಾರನ್ ಕ್ರೀಡಾಂಗಣದಲ್ಲಿ ಕಣ್ಣೀರು ಹಾಕಿದ್ರು. ಬೇಸರದ ನಡುವೆಯೂ ಗೆದ್ದ ಕೋಲ್ಕತ್ತಾ ತಂಡಕ್ಕೆ ಚಪ್ಪಾಳೆ ತಟ್ಟುತ್ತಲೇ ಇದ್ದರು. ಅವರು ಅಳುತ್ತಿರುವ ಈ ದೃಶ್ಯ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಇದೀಗ ಬಾಲಿವುಡ್‌ನ ಬಿಗ್ ಬಿ ಎಂದೇ ಕರೆಯಲ್ಪಡುವ ಅಮಿತಾಬ್ ಬಚ್ಚನ್ ಕಾವ್ಯಾಗೆ ಕಿವಿ ಮಾತು ಹೇಳಿದ್ದಾರೆ. ತಮ್ಮ ಬ್ಲಾಗ್‌ನಲ್ಲಿ ಶಾರುಖ್ ತಂಡ ಕೋಲ್ಕತ್ತಾ ನೈಟ್ ರೈಡರ್ಸ್ ಗೆಲುವಿಗಾಗಿ ಅಭಿನಂದಿಸಿದ್ದು,  ಹೈದ್ರಾಬಾದ್ ಸೋತಿದ್ದಕ್ಕೆ ನಿರಾಶೆಯಾಗಿದೆ. ಕಾವ್ಯಾ ತನ್ನ ನೋವನ್ನ ಕ್ಯಾಮೆರಾಗಳಿಗೆ  ತೋರಿಸಲು ಬಯಸಲಿಲ್ಲ. ಅವಳ ಬಗ್ಗೆ ಬೇಸರವಾಯಿತು. ಆದರೆ ಪರವಾಗಿಲ್ಲ, ನಾಳೆ ನಿನ್ನದಮ್ಮಾ ಎಂದು ಅಮಿತಾಭ್ ಬರೆದುಕೊಂಡಿದ್ದಾರೆ.

Shwetha M