ಅಮಿತಾಭ್ ಬಚ್ಚನ್ ಖಾಸಗಿ ಆಸ್ಪತ್ರೆಗೆ ದಾಖಲು – ಆಂಜಿಯೋಪ್ಲಾಸ್ಟಿ ಮಾಡಿದ ವೈದ್ಯರು
ಬಾಲಿವುಡ್ ನ ಖ್ಯಾತ ನಟ, ಬಿಗ್ ಬಿ ಅಮಿತಾಭ್ ಬಚ್ಚನ್ ಅವರ ಆರೋಗ್ಯದಲ್ಲಿ ಏರುಪೇರಾಗಿದ್ದು, ಆಸ್ಪತ್ರೆಗೆ ದಾಖಲಾಗಿದ್ದಾರೆ. ಬಚ್ಚನ್ ಅವರನ್ನು ಮುಂಬೈನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಇದನ್ನೂ ಓದಿ: ಲೋಕಸಭೆ ಚುನಾವಣೆ ದಿನಾಂಕ ಮಾರ್ಚ್ 16 ಕ್ಕೆ ಘೋಷಣೆ
ಶುಕ್ರವಾರ ಬಚ್ಚನ್‌ಗೆ ಎದೆನೋವು ಕಾಣಿಸಿಕೊಂಡಿದೆ. ಹೀಗಾಗಿ ಅವರನ್ನು ಮುಂಬೈನ ಕೋಕಿಲಾಬೆನಗ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರಿಗೆ ಆಂಜಿಯೋಪ್ಲ್ಯಾಸ್ಟಿ (Angioplasty) ಚಿಕಿತ್ಸೆ ನೀಡಲಾಗಿದೆ. ಬಚ್ಚನ್ ಹಲವು ವರ್ಷಗಳಿಂದ ಅವರು ಅನೇಕ ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಹಾಗಾಗಿ ಅಮಿತಾಭ್ ಬಚ್ಚನ್ ಅವರು ಆಸ್ಪತ್ರೆಗೆ ದಾಖಲಾದ ವಿಷಯ ತಿಳಿದು ಅವರ ಅಭಿಮಾನಿಗಳಿಗೆ ಆತಂಕ ಆಗಿದೆ. ಆದರೆ ಬಿಗ್ ಬಿ ಅವರಿಗೆ ಯಾವುದೇ ಗಂಭೀರ ಸಮಸ್ಯೆ ಎದುರಾಗಿಲ್ಲ ಎಂದು ಹೇಳಲಾಗುತ್ತಿದೆ.
ಅಮಿತಾಭ್ ಬಚ್ಚನ್ ಅವರು ಆಸ್ಪತ್ರೆಗೆ ದಾಖಲಾದ ವಿಷಯ ಹೊರಬೀಳುವುದಕ್ಕೂ ಒಂದು ಗಂಟೆ ಮೊದಲು ಅವರು ಮಾಡಿದ ಎಕ್ಸ್ ಪೋಸ್ಟ್ ಗಮನ ಸೆಳೆದಿತ್ತು. ‘ಎಂದೆಂದಿಗೂ ಚಿರಋಣಿ’ ಎಂದು ಅಮಿತಾಭ್ ಬಚ್ಚನ್ ಬರೆದುಕೊಂಡಿದ್ದಾರೆ. ಸರ್ಜರಿ ಆದ ಬಳಿಕ ಅವರು ಈ ರೀತಿ ಪೋಸ್ಟ್ ಮಾಡಿರಬಹುದು ಎನ್ನಲಾಗಿದೆ. ಬೇಗ ಗುಣಮುಖರಾಗಿ ಎಂದು ಅಭಿಮಾನಿಗಳು ಕಮೆಂಟ್ ಮಾಡುತ್ತಿದ್ದಾರೆ.