ನ. 25 ರಂದು ರಾಜಸ್ಥಾನ ವಿಧಾನಸಭೆ ಚುನಾವಣೆ – ಅಮಿತ್‌ ಶಾ ತೆರಳುತ್ತಿದ್ದ ರಥಕ್ಕೆ ಕರೆಂಟ್‌ ಶಾಕ್‌!

ನ. 25 ರಂದು ರಾಜಸ್ಥಾನ ವಿಧಾನಸಭೆ ಚುನಾವಣೆ – ಅಮಿತ್‌ ಶಾ ತೆರಳುತ್ತಿದ್ದ ರಥಕ್ಕೆ ಕರೆಂಟ್‌ ಶಾಕ್‌!

ರಾಜಸ್ಥಾನದಲ್ಲಿ ನವೆಂಬರ್‌ 25 ರಂದು ವಿಧಾನಸಭೆ ಚುನಾವಣೆ ನಡೆಯಲಿದೆ. ಅಧಿಕಾರದ ಚುಕ್ಕಾಣಿ ಹಿಡಿಯಲು ಎಲ್ಲಾ ರಾಜಕೀಯ ಪಕ್ಷಗಳು ನಾನಾ ಸರ್ಕಸ್‌ ಮಾಡುತ್ತಿವೆ. ಬಿಜೆಪಿ ಕೂಡ ಭರ್ಜರಿ ಪ್ರಚಾರ ಕೈಗೊಳ್ಳುತ್ತಿದೆ. ಕೇಂದ್ರ ಗೃಹ ಸಚಿವ ಅಮಿತ್‌ ಶಾ ಕೂಡ ರಾಜಸ್ಥಾನ ಚುನಾವಣಾ ಪ್ರಚಾರದಲ್ಲಿ ಭಾಗಿಯಾಗಿದ್ದರು. ಅಮಿಶ್‌ ಶಾ ತೆರಳುತ್ತಿದ್ದ ರಥ ವಿದ್ಯುತ್‌ ತಂತಿಗೆ ಸ್ಪರ್ಶಿಸಿದ್ದು, ಅಪಾಯದಿಂದ ಸ್ವಲ್ಪದರಲ್ಲಿ ಪಾರಾಗಿದ್ದಾರೆ ಎಂದು ವರದಿಯಾಗಿದೆ.

ರಾಜಸ್ಥಾನದ ನಾಗೌರ್‌ನಲ್ಲಿ ಮಂಗಳವಾರ ನಡೆದ ಜಾಥಾದಲ್ಲಿ ಅಮಿತ್ ಶಾ ಭಾಗಿಯಾಗಿದ್ದರು. ಈ ವೇಳೆ ವಿಶೇಷವಾಗಿ ವಿನ್ಯಾಸ ಮಾಡಲಾಗಿರುವ ರಥದಲ್ಲಿ ನಿಂತು ಪಕ್ಷದ ಪರ ಪ್ರಚಾರ ನಡೆಸುತ್ತಿದ್ದರು. ರಸ್ತೆಯಲ್ಲಿ ರಥ ಸಾಗುತ್ತಿದ್ದಂತೆ ರಥದ ಮೇಲಿನ ಭಾಗ ವಿದ್ಯುತ್ ತಂತಿಗೆ ಸ್ಪರ್ಶಿಸಿದೆ. ರಥ ತಾಗಿದ ಕೂಡಲೇ ಕಿಡಿ ಹೊತ್ತಿಕೊಂಡಿದೆ. ಕೂಡಲೇ ರಥದ ಹಿಂದೆ ಇದ್ದ ಇತರ ವಾಹನಗಳನ್ನು ತಕ್ಷಣವೇ ನಿಲ್ಲಿಸಿ ವಿದ್ಯುತ್ ಸಂಪರ್ಕ ಕಡಿತಗೊಳಿಸಲಾಗಿದೆ. ಅಮಿತ್‌ ಶಾ ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ವರದಿಯಾಗಿದೆ.

ಇದನ್ನೂ ಓದಿ: ಭ್ರಷ್ಟಾಚಾರ ಆರೋಪ – ಪೋರ್ಚುಗಲ್‌ ಪ್ರಧಾನಿ ಆಂಟೋನಿಯೊ ಕೋಸ್ಟಾ ರಾಜೀನಾಮೆ

ಪರ್ಬತ್‌ಸರ್‌ನಲ್ಲಿ ಎರಡೂ ಬದಿಗಳಲ್ಲಿ ಅಂಗಡಿಗಳು ಮತ್ತು ಮನೆಗಳಿರುವ ಸಾಲಿನಲ್ಲಿ ಸಂಚರಿಸುತ್ತಿದ್ದಾಗ ಈ ಘಟನೆ ನಡೆದಿದೆ. ಈ ಘಟನೆಯ ಬಳಿಕ ಶಾ ಅವರು ಮತ್ತೊಂದು ವಾಹನದ ಮೂಲಕ ಪರ್ಬತ್ಸರ್‌ಗೆ ತೆರಳಿ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡಿದರು. ಘಟನೆಯ ಕುರಿತು ತನಿಖೆ ನಡೆಸಲಾಗುವುದು ಎಂದು ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ತಿಳಿಸಿದ್ದಾರೆ. ನವೆಂಬರ್‌ 25 ರಂದು ರಾಜಸ್ಥಾನದಲ್ಲಿ ಚುನಾವಣೆ ನಡೆಯಲಿದ್ದು ಡಿಸೆಂಬರ್‌ 5 ರಂದು ಮತ ಎಣಿಕೆ ನಡೆಯಲಿದೆ.

Shwetha M