ಈಶ್ವರಪ್ಪರನ್ನ ಭೇಟಿಯಾಗದೆಯೇ 1 ಕಲ್ಲಲ್ಲಿ 2 ಹಕ್ಕಿ ಹೊಡೆದ್ರಾ ಶಾ?
ಕೆ.ಎಸ್ ಈಶ್ವರಪ್ಪ. ರಾಜ್ಯ ಬಿಜೆಪಿ ಪ್ರಭಾವಿ ಹಾಗೂ ರೆಬೆಲ್ ಲೀಡರ್ ಆಗಿರುವ ಅದೇ ಈಶ್ವರಪ್ಪ ಈಗ ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ ಕುಟುಂಬಕ್ಕೆ ಮಗ್ಗುಲ ಮುಳ್ಳಾಗಿದ್ದಾರೆ. ಮಗ ಕಾಂತೇಶ್ಗೆ ಹಾವೇರಿ ಲೋಕಸಭಾ ಕ್ಷೇತ್ರದ ಟಿಕೆಟ್ ಮಿಸ್ ಆಗಿದ್ದಕ್ಕೆ ಕೊತಕೊತ ಕುದಿಯುತ್ತಿದ್ದಾರೆ. ಅಮಿತ್ ಶಾ, ಮೋದಿ ಅಲ್ಲ ಆ ದೇವ್ರೇ ಬಂದು ಹೇಳಿದ್ರೂ ಸ್ಪರ್ಧೆಯಿಂದ ಹಿಂದೆ ಸರಿಯಲ್ಲ ಎಂದಿದ್ದ ಈಶ್ವರಪ್ಪ ಇದೀಗ ಹೊಸ ದಾಳ ಉರುಳಿಸಿದ್ದಾರೆ. ತಮಗೆ ಹೈಕಮಾಂಡೇ ಯಡಿಯೂರಪ್ಪ ವಿರುದ್ಧ ನಿಲ್ಲಲು ಹೇಳಿದೆ ಎನ್ನುವ ಮೂಲಕ ಟ್ವಿಸ್ಟ್ ಕೊಟ್ಟಿದ್ದಾರೆ. ವಿವಾದಗಳ ನಡುವೆಯೇ ದೆಹಲಿಗೆ ಹಾರಿದ್ದ ಈಶ್ವರಪ್ಪ ಬರಿಗೈಲಿ ವಾಪಸ್ ಆಗಿದ್ದಾರೆ. ಚುನಾವಣಾ ಚಾಣಕ್ಯ ಅಮಿತ್ ಶಾ ಅವ್ರು ಈಶ್ವರಪ್ಪ ಭೇಟಿಗೆ ನಿರಾಕರಿಸಿದ್ದು ರಾಜ್ಯ ರಾಜಕೀಯದಲ್ಲಿ ಹೊಸ ಸಂಚಲನ ಸೃಷ್ಟಿಯಾಗಿದೆ.
ಇದನ್ನೂ ಓದಿ: 20 ಅಡಿ.. 20 ಗಂಟೆಗಳ ಮಹಾತಪಸ್ಸು! – ಸಾತ್ವಿಕ್ ತಲೆಕೆಳಗಾಗಿ ಬಿದ್ದರೂ ಬದುಕಿದ್ದು ಹೇಗೆ?
ಈಶ್ವರಪ್ಪ ಭೇಟಿಗೆ ಶಾ ನಕಾರ!
ಪಕ್ಷದ ವರಿಷ್ಠ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾರನ್ನು ಭೇಟಿಯಾಗಲು ಬುಧವಾರ ಉತ್ಸಾಹದಲ್ಲಿ ದೆಹಲಿಗೆ ತೆರಳಿದ್ದ ಹಿರಿಯ ಬಿಜೆಪಿ ನಾಯಕ ಕೆ.ಎಸ್ ಈಶ್ವರಪ್ಪ ಅಷ್ಟೇ ನಿರುತ್ಸಾಹದಿಂದ ವಾಪಸ್ಸಾಗಿದ್ದಾರೆ. ತಾನು ಭೇಟಿಯಾಗುವುದಕ್ಕೆ ಅಮಿತ್ ಶಾ ಅವಕಾಶ ಕಲ್ಪಿಸಲಿಲ್ಲ, ಭೇಟಿಯಾಗುವುದು ಬೇಡ ಅಂತ ವಾಪಸ್ಸು ಕಳಿಸಿದರೆಂದು ಈಶ್ವರಪ್ಪ ಹೇಳಿದ್ದಾರೆ. ಅಮಿತ್ ಶಾ ಭೇಟಿ ನಿರಾಕರಣೆಗೆ ಕಾರಣಗಳನ್ನೂ ಈಶ್ವರಪ್ಪ ನೀಡಿದ್ದಾರೆ. ತಾನು ಶಿವಮೊಗ್ಗ ಕ್ಷೇತ್ರದಿಂದ ಯಾಕೆ ಸ್ಪರ್ಧಿಸುತ್ತಿದ್ದೇನೆ ಅಂತ ಅವರು ಫೋನ್ ಕರೆ ಮಾಡಿದಾಗಲೇ ವಿವರಿಸಿದ್ದೆ. ತನ್ನೊಂದಿಗೆ ಅವರು ಮಾತಾಡುವಾಗ ಅದೇ ಪ್ರಶ್ನೆಗಳನ್ನು ಕೇಳಲಿದ್ದೇನೆ ಅನ್ನೋದು ಅವರಿಗೆ ಗೊತ್ತಿತ್ತು, ದೆಹಲಿಯಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಸೋನಿಯಾ ಗಾಂಧಿಯವರ ಕುಟುಂಬ ರಾಜಕಾರಣದ ವಿರುದ್ಧ ಹೋರಾಟ ನಡೆಸಿರುವಂತೆ ತಾನು ಕರ್ನಾಟಕದಲ್ಲಿ ಬಿಎಸ್ ಯಡಿಯೂರಪ್ಪ ನಡೆಸುತ್ತಿರುವ ಕುಟುಂಬ ರಾಜಕಾರಣದ ವಿರುದ್ಧ ಹೋರಾಡುತ್ತಿರುವುದಾಗಿ ಹೇಳಿದ್ದೆ. ನನ್ನ ಪ್ರಶ್ನೆಗಳು ಇರುಸು ಮುರುಸು ಸ್ಥಿತಿಯನ್ನು ಉಂಟು ಮಾಡುತ್ತವೆ ಅನ್ನೋದನ್ನು ಮನಗಂಡೇ ಅಮಿತ್ ಶಾ ತನ್ನನ್ನು ಭೇಟಿಯಾಗಲಿಲ್ಲ ಎಂದು ತಮ್ಮ ಬೆನ್ನನ್ನ ತಾವೇ ತಟ್ಟಿಕೊಂಡಿದ್ದಾರೆ.
ಈಶ್ವರಪ್ಪ ಏನೋ ಹೀಗೆ ನಂದೇ ರೈಟ್ ಅಂತಿದ್ದಾರೆ ನಿಜ. ಆದ್ರೆ ಅಸಲಿ ವಿಷಯ ಬೇರೆನೇ ಇದೆ. ಹಿಂದು, ಹಿಂದುತ್ವದ ವಿಚಾರವಾಗಿಯೇ ಸದ್ದು ಮಾಡುತ್ತಾ ಬಿಜೆಪಿಯಲ್ಲಿ ಪ್ರಭಾವಿ ನಾಯಕನಾಗಿ ಬೆಳೆದ ಈಶ್ವರಪ್ಪಗೆ ಅವ್ರ ನಾಲಗೆಯೇ ಅವ್ರಿಗೆ ಮುಳ್ಳಾಗಿದೆ. ಲಂಗು ಲಗಾಮಿಲ್ಲದೆ ಹೇಳಿಕೆ ಕೊಡೋದು, ತಮಗೆ ಇಷ್ಟ ಬಂದಂತೆ ವಿಚಾರಗಳನ್ನ ತಿರುಚೋದು ಮಾಡುತ್ತಲೇ ಬಂದಿದ್ದಾರೆ. ಎಷ್ಟೋ ಸಲ ಬಿಜೆಪಿಗೂ ಇರುಸು ಮುರುಸು ತಂದಿದೆ. ಈ ಸಲ ಆಗಿರೋದೂ ಕೂಡ ಅದೇ. ಈಶ್ವರಪ್ಪನವರ ಸ್ವಯಂಕೃತ ಅಪರಾಧದಿಂದಲೇ ಅಮಿತ್ ಶಾ ಅವರನ್ನು ಭೇಟಿಯಾಗಲು ಒಪ್ಪಿಲ್ಲ ಎಂದು ಹೇಳಲಾಗುತ್ತಿದೆ.
ಈಶ್ವರಪ್ಪಗೆ ಮಾತೇ ಮುಳ್ಳು!
ಅಮಿತ್ ಶಾ ಅವ್ರು ಬೆಂಗಳೂರಿನಲ್ಲಿ ಇರುವ ವೇಳೆ ತಮ್ಮ ಜೊತೆಗೆ ಮಾತನಾಡಿದ್ದನ್ನು ಈಶ್ವರಪ್ಪ ಮಾಧ್ಯಮದವರ ಮುಂದೆ ಹೇಳಿದ್ದರು. ಯಡಿಯೂರಪ್ಪನವರ ಕುಟುಂಬದ ಜೊತೆಗಿನ ಭಿನ್ನಾಭಿಪ್ರಾಯವನ್ನು ಶಾ ಅವರಿಗೆ ವಿವರಿಸಿದ್ದೆ, ಕಾಂತೇಶನ ಭವಿಷ್ಯದ ಬಗ್ಗೆ ಅಮಿತ್ ಶಾ ಕೇಳಿದರು ಎಂದಿದ್ದರು. ಇದಾದ ಮೇಲೆ ದೆಹಲಿಗೆ ಬರುವ ವಿಚಾರವನ್ನು ಗೌಪ್ಯವಾಗಿ ಇಡದೇ ಅದನ್ನೂ ಮಾಧ್ಯಮದವರ ಮುಂದೆ ಬಹಿರಂಗ ಪಡಿಸಿದ್ದು ಅಮಿತ್ ಶಾ ಸಿಟ್ಟಿಗೆ ಕಾರಣ ಎಂದು ಹೇಳಲಾಗುತ್ತಿದೆ. ಅಲ್ಲದೆ ಯಡಿಯೂರಪ್ಪ ಫ್ಯಾಮಿಲಿ ರಾಜಕಾರಣಕ್ಕೆ ಬ್ರೇಕ್ ಹಾಕಲು ಮೋದಿ, ಶಾ ಒಪ್ಪಿಗೆಯೂ ಇದೆ. ನಾನು ಬಂಡಾಯ ಸ್ಪರ್ಧಿಯಾಗಿ ಲೋಕಸಭಾ ಚುನಾವಣೆಗೆ ಸ್ಪರ್ಧಿಸುತ್ತೇನೆ ಎಂದು ಹೇಳಿದ್ದೇನೆ. ಪ್ರಚಾರ ಕೂಡ ನಡೆಸುತ್ತಿದ್ದೇನೆ. ಆದ್ರೂ ನನ್ನನ್ನೇಕೆ ಪಕ್ಷದಿಂದ ವಜಾ ಮಾಡಿಲ್ಲ ಎಂದು ಈಶ್ವರಪ್ಪ ಪ್ರಶ್ನಿಸಿದ್ದರು. ಆದ್ರೆ ಹಿರಿಯರಾದ ಈಶ್ವರಪ್ಪಗೆ ಯಾವ ವಿಚಾರವನ್ನು ಮಾಧ್ಯಮದ ಮುಂದೆ ಹೇಳಬೇಕು, ಹೇಳಬಾರದು ಎನ್ನುವುದು ಗೊತ್ತಾಗುವುದಿಲ್ಲವೇ ಎಂಬ ಸಿಟ್ಟಿನಲ್ಲಿ ಅಮಿತ್ ಶಾ ಅವ್ರು ಭೇಟಿಯಾಗದೇ ವಾಪಸ್ ಕಳುಹಿಸಿದ್ದಾರೆ ಎನ್ನಲಾಗಿದೆ.
ಒಟ್ನಲ್ಲಿ ಬಿಜೆಪಿಯವ್ರು ನೋಡಿದ್ರೆ ಈಶ್ವರಪ್ಪ ಮೇಲೆ ಸಿಟ್ಟಿದೆ. ಅದಕ್ಕೇ ಮೀಟ್ ಮಾಡಿಲ್ಲ ಅಂತಿದ್ದಾರೆ. ಆದ್ರೆ ಈಶ್ವಪ್ಪ ಮಾತ್ರ ನನ್ನ ಸ್ಪರ್ಧೆಗೆ ಅಮಿತ್ ಶಾ, ಮೋದಿಯವ್ರ ಬೆಂಬಲ ಇದೆ. ಚುನಾವಣೆಗೆ ಈಶ್ವರಪ್ಪ ಸ್ಪರ್ಧಿಸಲಿ, ರಾಘವೇಂದ್ರ ಸೋಲಲಿ ಎನ್ನುವ ಅಭಿಪ್ರಾಯದಲ್ಲಿ ಇದ್ದಾರೆ. ಈ ಕಾರಣಕ್ಕೆ ಅವರು ನನ್ನನ್ನು ಭೇಟಿಯಾಗಿಲ್ಲ, ನಾನು ಪ್ರಧಾನಿ ಮೋದಿ ಮತ್ತು ಅಮಿತ್ ಶಾ ಆಶಯದಂತೆ ಚುನಾವಣೆಗೆ ಸ್ಪರ್ಧೆ ಮಾಡುತ್ತೇನೆ ಅಂತಿದ್ದಾರೆ. ಆದ್ರೆ ಈಶ್ವರಪ್ಪ ತಮಗೆ ತಾವೇ ಏನೇನೋ ಅಂದುಕೊಂಡು ಎಡವಟ್ಟಿನ ಮೇಲೆ ಎಡವಟ್ಟು ಮಾಡಿಕೊಳ್ತಿರೋದಂತೂ ಸುಳ್ಳಲ್ಲ.