ಗಾಜಾ ಪಟ್ಟಿ ಮರು ಆಕ್ರಮಿಸುವ ಇಸ್ರೇಲ್ ನಡೆಗೆ ತೀವ್ರ ವಿರೋಧ ವ್ಯಕ್ತಪಡಿಸಿದ ವಿಶ್ವದ ದೊಡ್ಡಣ್ಣ! – ಇಸ್ರೇಲ್ ಪರ ನಿಂತಿದ್ದ ಅಮೆರಿಕ ಹೀಗೆ ಅಂದಿದ್ಯಾಕೆ?
ಹಮಾಸ್ ಹಾಗೂ ಇಸ್ರೇಲ್ ನಡುವಿನ ಕದನ ತೀವ್ರ ಸ್ವರೂಪ ಪಡೆದುಕೊಂಡಿದೆ. ಹಮಾಸ್ ಉಗ್ರರರನ್ನು ನಿರ್ನಾಮ ಮಾಡಬೇಕು, ಗಾಜಾ ಪಟ್ಟಿಯನ್ನು ಸಂಪೂರ್ಣವಾಗಿ ವಶಪಡಿಸಿಕೊಳ್ಳಬೇಕು ಅಂತಾ ಇಸ್ರೇಲ್ ಪಣತೊಟ್ಟಿದೆ. ಹೀಗಾಗಿ ಗಾಜಾ ಮೇಲೆ ಇಸ್ರೇಲ್ ನಿರಂತರವಾಗಿ ದಾಳಿ ಮಾಡುತ್ತಲೇ ಇದೆ. ಇದೀಗ ಇಸ್ರೇಲ್ ನಡೆಗೆ ವಿಶ್ವದ ದೊಡ್ಡಣ್ಣ ಅಮೆರಿಕ ವಿರೋಧ ವ್ಯಕ್ತಪಡಿಸಿದೆ. ಗಾಜಾ ಮೇಲೆ ದಾಳಿ ಮಾಡುತ್ತಿರುವುದು ಇಸ್ರೇಲ್ ಜನರಿಗೆ ಒಳ್ಳೆಯದಲ್ಲ ಎಂದು ಅಮೆರಿಕ ಎಚ್ಚರಿಕೆ ನೀಡಿದೆ.
ಇತ್ತೀಚೆಗೆ ಇಸ್ರೇಲ್ ಯೋಧರು ಗಾಜಾ ನಗರದ ಹೃದಯ ಭಾಗದಲ್ಲಿ ಇದ್ದಾರೆ. ಗಾಜಾ ನಗರವನ್ನು ಎರಡು ವಿಭಜನೆ ಮಾಡಲಾಗಿದೆ ಎಂದು ಇಸ್ರೇಲ್ ಘೋಷಣೆ ಮಾಡಿತ್ತು. ಈ ಬೆನ್ನಲ್ಲೇ ವಿಶ್ವದ ದೊಡ್ಡಣ್ಣ ಅಮೆರಿಕ ಎಚ್ಚರಿಕೆ ಸಂದೇಶ ರವಾನಿಸಿದೆ. ಶ್ವೇತಭವನದ ರಾಷ್ಟ್ರೀಯ ಭದ್ರತಾ ಮಂಡಳಿಯ ವಕ್ತಾರ ಜಾನ್ ಕಿರ್ಬಿ, ಇಸ್ರೇಲಿ ಪಡೆಗಳಿಂದ ಗಾಜಾವನ್ನು ಮರು ಆಕ್ರಮಣ ಮಾಡುವುದು ಒಳ್ಳೆಯದಲ್ಲ ಎಂದು ಅಧ್ಯಕ್ಷರು (ಜೋ ಬೈಡೆನ್) ಭಾವಿಸಿದ್ದಾರೆ. ಇದು ಇಸ್ರೇಲ್ ಹಾಗೂ ದೇಶದ ಜನತೆಗೆ ಒಳ್ಳೆಯದಲ್ಲ ಎಂದು ಸ್ಪಷ್ಟಪಡಿಸಿದ್ದಾರೆ ಎನ್ನಲಾಗಿದೆ.
ಇದನ್ನೂ ಓದಿ: ಮಣಿಪುರದಲ್ಲಿ ಮತ್ತೆ ಭುಗಿಲೆದ್ದ ಹಿಂಸಾಚಾರ -ಗುಂಡಿನ ದಾಳಿಯಲ್ಲಿ 10 ಮಂದಿಗೆ ಗಾಯ
ಭವಿಷ್ಯದ ದಾಳಿಗಳನ್ನು ತಡೆಗಟ್ಟಲು ಹೋರಾಟ ಮುಗಿದ ನಂತರ ಇಸ್ರೇಲ್, ಗಾಜಾ ಪಟ್ಟಿಯ ಭದ್ರತೆಯನ್ನು ಮೇಲ್ವಿಚಾರಣೆ ಮಾಡಬೇಕಾಗುತ್ತದೆ ಎಂದು ನೆತನ್ಯಾಹು ಹೇಳಿಕೆ ನೀಡಿದ್ದಾರೆ. ಇದಕ್ಕೆ ಅಮೆರಿಕ ಆಕ್ಷೇಪ ವ್ಯಕ್ತಪಡಿಸಿದ್ದು, ಎಚ್ಚರಿಕೆಯ ಮಾತನ್ನಾಡಿದೆ. ಗಾಜಾವನ್ನು ಇಸ್ರೇಲ್ ಆಕ್ರಮಿಸಿಕೊಳ್ಳುವುದು ದೊಡ್ಡ ತಪ್ಪು ಎಂದು ಕೆಲ ದಿನಗಳ ಹಿಂದೆ ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಅಭಿಪ್ರಾಯಪಟ್ಟಿದ್ದರು. ಇದೇ ಸಂದರ್ಭದಲ್ಲಿ ಯುನೈಟೆಡ್ ಸ್ಟೇಟ್ಸ್‌ನಲ್ಲಿನ ಇಸ್ರೇಲಿ ರಾಯಭಾರಿ ಮೈಕೆಲ್ ಹೆರ್ಜೋಗ್, ಇಸ್ರೇಲ್ ಸಂಘರ್ಷ ಕೊನೆಗೊಂಡ ನಂತರ ಗಾಜಾವನ್ನು ವಶಪಡಿಸಿಕೊಳ್ಳಲು ಉದ್ದೇಶಿಸುವುದಿಲ್ಲ ಎಂದು ಹೇಳಿದ್ದರು.
US ವಿದೇಶಾಂಗ ಕಾರ್ಯದರ್ಶಿ ಆಂಟೋನಿ ಬ್ಲಿಂಕೆನ್ ಕಳೆದ ವಾರ, ಪ್ಯಾಲೆಸ್ತೀನಿಯರು ಗಾಜಾವನ್ನು ಮತ್ತೆ ಪ್ರವೇಶಿಸಲು ಅನುವು ಮಾಡಿಕೊಡಬೇಕು. ಅವರಿಗೆ ಮಾನವೀಯ ನೆರವು ನೀಡಬೇಕು ಎಂದು ಒತ್ತಾಯಿಸಿದ್ದರು. ಆದರೆ ಈ ಹೇಳಿಕೆಯನ್ನು ನೆತನ್ಯಾಹು ಖಂಡಿಸಿದ್ದಾರೆ. ಯುದ್ಧವು ಮುಂದುವರಿದಂತೆ ಯುಎಸ್ ಮತ್ತು ಇಸ್ರೇಲ್ ನಡುವೆ ಭಿನ್ನಾಭಿಪ್ರಾಯ ವ್ಯಕ್ತವಾಗುತ್ತಿದೆ.