ಆರ್ ಸಿಬಿ ಬಗ್ಗೆ ಮತ್ತೆ ಲೇವಡಿ ಮಾಡಿದ ರಾಯಡು – ಈ ಸಲನೂ ಕಪ್ ಗೆಲ್ಲಲ್ಲವೆಂದು ವ್ಯಂಗ್ಯ

ಆರ್ ಸಿಬಿ ಬಗ್ಗೆ ಮತ್ತೆ ಲೇವಡಿ ಮಾಡಿದ ರಾಯಡು – ಈ ಸಲನೂ ಕಪ್ ಗೆಲ್ಲಲ್ಲವೆಂದು ವ್ಯಂಗ್ಯ

ಅಂಬಾಟಿ ರಾಯುಡು. ಟೀಂ ಇಂಡಿಯಾ ಹಾಗೇ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಮಾಜಿ ಆಟಗಾರ. ಸದ್ಯ ಕ್ರಿಕೆಟ್ ಕಾಮೆಂಟೇಟರ್ ಆಗಿ ಕಾಣಿಸಿಕೊಳ್ತಿರ್ತಾರೆ. ಬಟ್ ರಾಯುಡುಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಟೀಂ ಮತ್ತು ವಿರಾಟ್ ಕೊಹ್ಲಿಯವ್ರನ್ನ ಕಂಡ್ರೆ ಅದೇನಾಗುತ್ತೋ ಏನೋ. ಥಟ್ ಅಂತಾ ಪ್ರತ್ಯಕ್ಷ ಆಗಿಬಿಡ್ತಾರೆ. ಈಗ ಚೆನ್ನೈ ವಿರುದ್ಧ ಮ್ಯಾಚ್ ಆಡೋಕೆ ಬೆಂಗಳೂರು ಟೀಂ ರೆಡಿ ಆಗಿರೋ ಹೊತ್ತಲ್ಲೇ ಬೆಂಗಳೂರು ಟೀಂ  ಕಪ್ ಗೆಲ್ಲಬಾರದು ಅಂತಾ ಕಡ್ಡಿ ಅಲ್ಲಾಡಿಸಿದ್ದಾರೆ.

ಇದನ್ನೂ ಓದಿ : 2008ರ ಬಳಿಕ ಚೆಪಾಕ್ ನಲ್ಲಿ ಗೆದ್ದೇ ಇಲ್ಲ ಆರ್ ಸಿಬಿ – 2025ರಲ್ಲಿ ಇತಿಹಾಸ ನಿರ್ಮಿಸ್ತಾರಾ?

17 ಸೀಸನ್ ಮುಗ್ದು 18ನೇ ಸೀಸನ್ ಐಪಿಎಲ್ ಶುರುವಾಗಿ ಒಂದಷ್ಟು ಪಂದ್ಯಗಳೂ ಮುಗಿದಿವೆ. ಈಗಾಗ್ಲೇ ಒಂದೊಂದು ಪಂದ್ಯಗಳನ್ನ ಗೆದ್ದಿರೋ ಚೆನ್ನೈ ಮತ್ತು ಬೆಂಗಳೂರು ಟೀಂ ತಮ್ಮ ಎರಡನೇ ಮ್ಯಾಚ್​ನಲ್ಲಿ ಪರಸ್ಪರ ಮುಖಾಮುಖಿಯಾಗ್ತಿವೆ. ಇಂಥಾ ಟೈಮಲ್ಲಿ ಆರ್​ಸಿಬಿ ತಂಡದ ಬಗ್ಗೆ ಸಿಎಸ್ ಕೆ ಮಾಜಿ ಆಟಗಾರ ಅಂಬಾಟಿ ರಾಯಡು ಲೇವಡಿ ಮಾಡಿದ್ದಾರೆ. ರಾಯಲ್ ಚಾಲೆಂಜರ್ಸ್​ ಬೆಂಗಳೂರು ಟೀಮ್​ನ ಕಪ್​ ಗೆಲ್ಲದ ಇತಿಹಾಸವನ್ನು ಅಣಕಿಸಿಕೊಂಡು ಅಂಬಟಿ ರಾಯಡು ತಮ್ಮದೇ ದಾಟಿಯಲ್ಲಿ ನಾಲಗೆ ಹರಿಬಿಟ್ಟಿದ್ದಾರೆ.  ಯೂಟ್ಯೂಬ್​ನಲ್ಲಿ ನಡೆದ ಬದ್ರಿನಾಥ್ ಮತ್ತು ರಾಯಡು ನಡುವಿನ ಮಾತುಕತೆಯಲ್ಲಿ ಅಂಬಟಿ ರಾಯಡು ಈ ಬಾರಿಯೂ ಆರ್​ಸಿಬಿ ಕಪ್ ಗೆಲ್ಲಬಾರದು ಎಂದು ನಾನು ಬಯಸುತ್ತೇನೆ. ಇಂತಹದೊಂದು ತಂಡ ಐಪಿಎಲ್​​ನಲ್ಲಿ ಹೀಗೆಯೇ ಸ್ಥಿರವಾಗಿರಬೇಕು ಎಂದು ಲೇವಡಿ ಮಾಡಿದ್ದಾರೆ. ಮಾತು ಮುಂದುವರೆಸಿದಾ ಅಂಬಾಟಿ ರಾಯುಡು ಈ ವರ್ಷ ಆರ್‌ಸಿಬಿ ಗೆಲ್ಲುವುದು ನನಗೆ ಇಷ್ಟವಿಲ್ಲ ಎಂದು ಹೇಳಿದ್ದಾರೆ ಮತ್ತು ಐಪಿಎಲ್‌ಗೆ ಆರ್‌ಸಿಬಿಯಂತಹ ತಂಡ ಬೇಕು ಎಂದು ವ್ಯಂಗ್ಯವಾಗಿ ಹೇಳಿದ್ದಾರೆ. ಒಬ್ಬ ಅಭಿಮಾನಿಯಾಗಿ ಅವರು ಮಾಡಿದ ತಪ್ಪಿನಿಂದಾಗಿ ಸಾಕಷ್ಟು ಬಾರಿ ನಕ್ಕಿದ್ದೇನೆ. ಅವರು ಯಾವಾಗಲಾದರೂ ಕಪ್ ಗೆಲ್ಲಬೇಕು ಎಂದು ಬಯಸುತ್ತೇನೆ, ಆದರೆ ಈ ವರ್ಷ ಅಲ್ಲ. ಸಿಎಸ್‌ಕೆ ತಂಡ ಉತ್ತಮವಾಗಿ ಆಡಬೇಕು, ಈ ಬಾರಿ ಸಿಎಸ್‌ಕೆ ತಂಡ ಪ್ರಶಸ್ತಿ ಗೆಲ್ಲಬೇಕು ಎಂದು ಬಯಸುತ್ತೇವೆ, ಆದರೂ ನಮಗೆ ಐಪಿಎಲ್‌ನಲ್ಲಿ ಆರ್ ಸಿಬಿಯಂತಹ ತಂಡ ಬೇಕು” ಎಂದಿದ್ದಾರೆ.

ಅಂಬಾಟಿ ರಾಯುಡು ಅಂದ್ರೆ ಕನ್ನಡಿಗರಿಗೆ ಆತನೊಬ್ಬ ಮಾಜಿ ಕ್ರಿಕೆಟರ್ ಅಂತಾ ನೆನಪಾಗಿದ್ದಕ್ಕಿಂತ ದುರಂಕಾರದ ಮಾತುಗಳಿಂದ ಸಿಟ್ಟು ತರಿಸಿದ್ದೇ ಜಾಸ್ತಿ. ಐಪಿಎಲ್​ನಲ್ಲಿ ಆರ್​ಸಿಬಿ ಕಪ್​​ ಗೆಲ್ಲಲಿ. ಈ ಸಲ ಕಪ್ ನಮ್ದೆ ಎಂದು ಕೂಗಿ ಹೇಳೋ ಟೈಂ ಬರಲಿ ಅಂತಾ ಸುಮಾರು 18 ವರ್ಷಗಳಿಂದ ಕಾಯುತ್ತಿದ್ದಾರೆ. ಬೆಂಗಳೂರು ತಂಡ ಕಪ್​ ಗೆಲುವಿಗಾಗಿ ಜಾತ್ರೆಗಳಲ್ಲಿ, ದೇವಸ್ಥಾನಗಳಲ್ಲೂ ಪ್ರಾರ್ಥನೆ ಮಾಡಿಕೊಂಡಿದ್ದಾರೆ. ಆರ್​ಸಿಬಿಗೆ ಇದ್ದಷ್ಟು ಅಭಿಮಾನಿಗಳು ಹಾಗೂ ಬೆಂಬಲಿಗರು ಐಪಿಎಲ್​ನ ಯಾವ ತಂಡಕ್ಕೂ ಕೂಡ ಇಲ್ಲ. ಆದ್ರೆ ಪ್ರತಿ ಬಾರಿಯೂ ಐಪಿಎಲ್ ಮುಗಿದಾಗ ಫ್ಯಾನ್ಸ್ ನಿರಾಸೆಗೊಳ್ತಾನೇ ಇದ್ದಾರೆ. ಹಾಗಂತ ಅಭಿಮಾನ ಮಾತ್ರ ಕಿಂಚಿತ್ತೂ ಕಮ್ಮಿ ಆಗಿಲ್ಲ. ಪ್ರತೀ ವರ್ಷ ಸೀಸನ್ ಶುರುವಾದಾಗ್ಲೂ ಈ ಸಲ ಕಪ್​ ನಮ್ದೇ ಎಂಬ ಜೋಶ್​ನಲ್ಲೇ ಬರ್ತಾರೆ. ಆದ್ರೆ ಇಂಥಾ ಅಭಿಮಾನಿಗಳನ್ನ ಮತ್ತು ಆರ್​ಸಿಬಿಯ ಬ್ರ್ಯಾಂಡ್ ಕ್ರಿಕೆಟರ್ ವಿರಾಟ್ ಕೊಹ್ಲಿಯನ್ನ ರಾಯಡು ಟೀಕಿಸುತ್ತಲೇ ಬರುತ್ತಿದ್ದಾರೆ. ಆರ್​ಸಿಬಿ ಕಪ್ ಗೆಲ್ಲಬಬಾರದು ಅಂತಾ ಜಪ ಮಾಡ್ತಾನೇ ಇರ್ತಾರೆ. ಇದೀಗ ಮತ್ತೊಮ್ಮೆ ಅದನ್ನೇ ರಿಪೀಟ್ ಮಾಡಿದ್ದಾರೆ.

ಐಪಿಎಲ್​ನಲ್ಲಿ ಚೆನ್ನೈ ತಂಡ ಯಶಸ್ವೀ ಟೀಂ ಅನ್ನೋದ್ರಲ್ಲಿ ಡೌಟ್ ಇಲ್ಲ. ಇದುವರೆಗು ಐದಿ ಬಾರಿ ಚಾಂಪಿಯನ್ ಪಟ್ಟಕ್ಕೇರಿದೆ. ಮತ್ತೊಂದೆಡೆ ಬೆಂಗಳೂರು 3 ಬಾರಿ ಫೈನಲ್​ಗೇರಿದ್ರೂ ಟ್ರೋಫಿ ಗೆಲ್ಲೋಕೆ ಸಾಧ್ಯವಾಗಿಲ್ಲ. 2016ರಲ್ಲಿ ಕೊನೆಯ ಬಾರಿ ಐಪಿಎಲ್​ನಲ್ಲಿ ಆರ್​ಸಿಬಿ ಫೈನಲ್ ಪಂದ್ಯವನ್ನಾಡಿತ್ತು ಮತ್ತು ಸನ್​ರೈಸರ್ಸ್​ ಹೈದ್ರಾಬಾದ್​ ವಿರುದ್ಧ ಸೋತಿತ್ತು. ಇನ್ನು ಚೆನ್ನೈ ಸೂಪರ್​ ಕಿಂಗ್ಸ್​ ಐದು ಬಾರಿ ಐಪಿಎಲ್​ ಚಾಂಪಿಯನ್ ಆಗಿ ಹೊರಹೊಮ್ಮಿದೆ 2023ರಲ್ಲಿ ಗುಜರಾತ್​ ಟೈಟನ್ಸ್​ ಸೋಲಿಸುವ ಮೂಲಕ ಐದನೇ ಬಾರಿ ಚಾಂಪಿಯನ್ ಆಗಿತ್ತು. ಇದೀಗ 2025ರ ಐಪಿಎಲ್​ನ ಮೊದಲ ಪಂದ್ಯದಲ್ಲಿಯೇ ಅದ್ಬುತ ಪ್ರದರ್ಶನ ತೋರಿದ ಬೆಂಗಳೂರು ತಂಡ ಕೊಲ್ಕತ್ತಾ ತಂಡವನ್ನು ಮಣ್ಣು ಮುಕ್ಕಿಸಿದೆ. ಕೊಹ್ಲಿ ಮತ್ತು ಪಿಲ್ ಸಾಲ್ಟ್ ಅದ್ಭುತ ಪ್ರದರ್ಶನದಿಂದ ಬೃಹತ್​ ಮೊತ್ತವನ್ನು ಬೆನ್ನಟ್ಟಿ 7 ವಿಕೆಟ್ ವಿಜಯ ಪಡೆದು ಭರವಸೆ ಮೂಡಿಸಿದೆ. ಬಹುಶಃ ರಾಯುಡುಗೆ ಇದೇ ಈಗ ಹೊಟ್ಟೆಉರಿಯುವಂತೆ ಮಾಡಿರಬೇಕು.

Shantha Kumari

Leave a Reply

Your email address will not be published. Required fields are marked *