ಯಕ್ಷಗಾನ ಕಲಾವಿದ, ಹಿರಿಯ ಸಾಹಿತಿ ಅಂಬಾತನಯ ಮುದ್ರಾಡಿ ವಿಧಿವಶ – ಸಿಎಂ ಬೊಮ್ಮಾಯಿ ಸಂತಾಪ
ಯಕ್ಷಗಾನ ಕಲಾವಿದ, ಹಿರಿಯ ಸಾಹಿತಿ ಅಂಬಾತನಯ ಮುದ್ರಾಡಿ (88) ಫೆಬ್ರವರಿ 21ರಂದು ಇಹಲೋಕ ತ್ಯಜಿಸಿದ್ದಾರೆ. ಕಳೆದ ವಾರ ಉಡುಪಿಯಲ್ಲಿ ನಡೆದ ಪ್ರಥಮ ಯಕ್ಷಗಾನ ಸಮ್ಮೇಳನದಲ್ಲಿ ಸಮ್ಮೇಳನಾಧ್ಯಕ್ಷರೊಂದಿಗೆ ಸಂವಾದದಲ್ಲಿ ಪಾಲ್ಗೊಂಡಿದ್ದು, ಅಂಬಾತನಯ ಮುದ್ರಾಡಿ ಅವರ ಕೊನೆಯ ಕಾರ್ಯಕ್ರಮವಾಗಿತ್ತು. ಈ ಸಂದರ್ಭದಲ್ಲಿ ಯಕ್ಷಗಾನ ಮತ್ತು ಹರಿಕಥೆ ಒಂದು ತೌಲನಿಕ ಅಧ್ಯಯನ ಪುಸ್ತಕವನ್ನು ಪ್ರಕಟಿಸಲಾಗಿತ್ತು. ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿಯೂ ಸೇವೆ ಮಾಡಿದ್ದಾರೆ. ಪತ್ನಿ, ಮೂವರು ಪುತ್ರರು, ಐವರು ಪುತ್ರಿಯರನ್ನು ಹಾಗೂ ಅಪಾರ ಶಿಷ್ಯ ವೃಂದವನ್ನು ಅಂಬಾತನಯರು ಅಗಲಿದ್ದಾರೆ. ಇವರ ಅಗಲಿಕೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸಂತಾಪ ಸೂಚಿಸಿದ್ದಾರೆ.
ಇದನ್ನೂ ಓದಿ: ಕನ್ನಡದ ಬಾಂಡ್ ಸಿನಿಮಾಗಳ ಸರದಾರ ಇನ್ನಿಲ್ಲ – ಹಿರಿಯ ನಿರ್ದೇಶಕ ಎಸ್.ಕೆ ಭಗವಾನ್ ವಿಧಿವಶ..!
“ಹಿರಿಯ ಸಾಹಿತಿ, ಯಕ್ಷಗಾನ ಕಲಾವಿದ, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಅಂಬಾತನಯ ಮುದ್ರಾಡಿ ಅವರ ನಿಧನದಿಂದ ಅತೀವ ಬೇಸರವಾಗಿದೆ. ಅವರ ಅಗಲಿಕೆ ಕರ್ನಾಟಕದ ಕಲೆ ಹಾಗೂ ಸಾಂಸ್ಕೃತಿಕ ರಂಗಕ್ಕೆ ದೊಡ್ಡ ನಷ್ಟ. ಅವರ ಆತ್ಮಕ್ಕೆ ಶಾಂತಿ ಸಿಗಲಿ, ಅವರ ಕುಟುಂಬ ಹಾಗೂ ಅಭಿಮಾನಿಗಳಿಗೆ ಅವರ ಅಗಲಿಕೆಯ ನೋವನ್ನು ಭರಿಸುವ ಶಕ್ತಿಯನ್ನು ಭಗವಂತ ಕರುಣಿಸಲಿ” ಎಂದು ಸಿಎಂ ಬೊಮ್ಮಾಯಿ ಸಂತಾಪ ಸೂಚಿಸಿದರು.
1935ರ ಜೂನ್ 4ರಂದು ಉಡುಪಿ ಜಿಲ್ಲೆ ಹೆಬ್ರಿ ತಾಲೂಕಿನ ಮುದ್ರಾಡಿಯಲ್ಲಿ ಅಂಬಾತನಯ ಮುದ್ರಾಡಿ ಅವರು ಜನಿಸಿದರು. ಇವರ ಮೂಲ ಹೆಸರು ಕೇಶವ ಶೆಟ್ಟಿಗಾರ್. ಎಂಟನೆಯ ತರಗತಿಯವರೆಗೆ ವಿದ್ಯಾಭ್ಯಾಸ ಪಡೆದಿದ್ದ ಇವರು ಯಕ್ಷಗಾನ ಹಾಗೂ ಸಾಹಿತ್ಯ ಕ್ಷೇತ್ರದಲ್ಲಿ ಅತೀವ ಒಲವನ್ನು ಹೊಂದಿದ್ದರು. ಅದರಂತೆ ಶಿಕ್ಷಕರಾಗಿದ್ದುಕೊಂಡೇ ಹಲವು ಯಕ್ಷಗಾನ ಪ್ರಸಂಗಗಳಲ್ಲಿ ಪಾತ್ರವಹಿಸಿ ಜನಮನದಲ್ಲಿ ನೆಲೆಸಿದ್ದರು. ಇವರು ಮಾಡಿದ ಅಪಾರ ಸಾಧನೆಗಳು ರಾಜ್ಯೋತ್ಸವ ಪ್ರಶಸ್ತಿ, ಪಾರ್ತಿಸುಬ್ಬ ಪ್ರಶಸ್ತಿ ಸೇರಿ ಮುಂತಾದ ಶ್ರೇಷ್ಠ ಗೌರವಗಳು ಅವರ ಮುಡಿಗೇರಿದ್ದವು.