ಅಮೇಜಾನ್ ಕಾಡಿನಲ್ಲಿ ಶತಮಾನದ ಬರ.. ಜಗತ್ತಿಗೇ ಮಾರಕವಾಗುತ್ತಾ – ಭೂಮಿಯ ಶ್ವಾಸಕೋಶದಲ್ಲಿ ಆಗಿದ್ದೇನು..?

ಅಮೇಜಾನ್ ಕಾಡಿನಲ್ಲಿ ಶತಮಾನದ ಬರ.. ಜಗತ್ತಿಗೇ ಮಾರಕವಾಗುತ್ತಾ – ಭೂಮಿಯ ಶ್ವಾಸಕೋಶದಲ್ಲಿ ಆಗಿದ್ದೇನು..?

ಜಗತ್ತಿನ ಅತಿ ದೊಡ್ಡ ಹಾಗೂ ಪ್ರಕೃತಿ ವೈವಿಧ್ಯತೆಗಳನ್ನ ಹೊಂದಿರುವ ವಿಸ್ಮಯಕಾರಿ ಮಳೆಕಾಡು ಅಂದ್ರೆ ಅದು ಅಮೇಜಾನ್ ಕಾಡು. ಜಗತ್ತಿನ ಶೇಕಡಾ 20ರಷ್ಟು ಆಮ್ಲಜನಕ ಇದೇ ಕಾಡಿನಲ್ಲಿ ಉತ್ಪಾದನೆಯಾಗುತ್ತೆ. ಶೇಕಡಾ 10ರಷ್ಟು ಜೀವವೈವಿಧ್ಯ ಇದೇ ಕಾಡಿನಲ್ಲಿದೆ. ಭೂಗ್ರಹದ ಶ್ವಾಸಕೋಶ ಎಂದೇ ಕರೆಸಿಕೊಳ್ಳುವ ಅಮೇಜಾನ್, ಹವಾಮಾನದ ವೈಪರೀತ್ಯಗಳನ್ನು ನಿಯಂತ್ರಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ. 550 ಮಿಲಿಯನ್ ಹೆಕ್ಟೇರ್ ವಿಸ್ತೀರ್ಣದಲ್ಲಿರುವ ಅಮೇಜಾನ್ ಕಾಡು ಬ್ರಿಜಿಲ್, ಪೆರು, ಕೊಲಂಬಿಯಾ, ಫ್ರಾನ್ಸ್, ವೆನೆಜುವೆಲಾ, ಈಕ್ವೆಡಾರ್, ಗಯಾನಾ, ಬೊಲಿವಿಯಾ ಮತ್ತು ಸುರಿನೇಮ್ ದೇಶಗಳಲ್ಲಿ ಬೃಹದಾಕಾರವಾಗಿ ಹರಡಿಕೊಂಡಿದೆ. ಆದ್ರೀಗ ಇದೇ ಕಾಡಿನಲ್ಲಿ ಭೀಕರ ಬರ ಆವರಿಸಿಕೊಂಡಿದೆ. ನದಿಗಳೆಲ್ಲಾ ಬತ್ತಿಹೋಗಿವೆ. ಜೀವಸಂಕುಲ ವಿಲವಿಲ ಒದ್ದಾಡುತ್ತಿವೆ. ಶತಮಾನದ ಭೀಕರ ಬರ ಇಡೀ ಜಗತ್ತಿಗೇ ಮಾರಕವಾಗುತ್ತಿದೆ.

ಅಮೇಜಾನ್ ಕಾಡು ಅಚ್ಚರಿಗಳ ತಾಣ. ಭೂಮಿ ಮೇಲಿರುವ ಸಿಹಿನೀರಿನ ಒಟ್ಟು ಪ್ರಮಾಣದ ಶೇಕಡಾ 20ರಷ್ಟು ನೀರು ಅಮೆಜಾನ್ ನದಿಗಳಲ್ಲಿದೆ. ಸಾವಿರಕ್ಕೂ ಹೆಚ್ಚು ಉಪನದಿಗಳನ್ನ ಹೊಂದಿರುವ ಈ ಅಮೇಜಾನ್ ನದಿ ಜಗತ್ತಿನ 2ನೇ ಅತಿದೊಡ್ಡ ನದಿಯಾಗಿದೆ. ಇದೀಗ ಅಮೇಜಾನ್ ನದಿಯ ಎರಡು ಪ್ರಮುಖ ಉಪನದಿಗಳಾದ ರಿಯೊ ನೆಗೊ ಹಾಗೂ ಮಡೈರಾ ನದಿಗಳು ಬತ್ತಿ ಹೋಗಿವೆ. ಸೊಲಿಮೊಸ್, ಜುರುವಾ, ಪುರಸ್ ನದಿಗಳ ನೀರಿನ ಪ್ರಮಾಣ ಹಿಂದೆಂದೂ ಕಾಣದ ಮಟ್ಟಿಗೆ ಕುಸಿದಿದೆ. ಅಮೆಜಾನ್ ಮಳೆಕಾಡು ಪ್ರದೇಶದ ವ್ಯಾಪ್ತಿ ಕೂಡ ಹಂತ ಹಂತವಾಗಿ ಕುಗ್ಗುತ್ತಾ ಬಂದಿದ್ದು, ಅಕ್ಷರಶಃ ಬರ ಬಡಿದಿದೆ. ಇತಿಹಾಸವನ್ನ ಕೆದಕಿದ್ರೆ ಅಮೇಜಾನ್ ಮಳೆಕಾಡಿನ ಪ್ರದೇಶದಲ್ಲಿ ತೀವ್ರ ಪ್ರವಾಹ ಹಾಗೂ ತೀವ್ರ ಬರ ಹೊಸತೇನಲ್ಲ. ಆದರೆ, ಈ ಬಾರಿಯ ಬರದ ತೀವ್ರತೆ ಹಿಂದೆಂದೂ ಕಾಣದ ಮಟ್ಟಿಗೆ ಹೆಚ್ಚಾಗಿದೆ. ಇದು ಭವಿಷ್ಯದಲ್ಲೂ ಮುಂದುವರಿಯಲಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಇದನ್ನೂ ಓದಿ : ಶ್ರೀಮಂತ ದೇಶಗಳ ಪೌರತ್ವ ಪಡೆಯುವಲ್ಲಿ ಭಾರತೀಯರೇ ನಂ.1 – ಕೆಲಸ, ಸಂಬಳ, ವಿಲಾಸಿ ಜೀವನ ಕಾರಣನಾ?

ಬ್ರೆಜಿಲಿಯನ್ ಸರ್ಕಾರದ ನೈಸರ್ಗಿಕ ವಿಪತ್ತು ಮಾನಿಟರಿಂಗ್ ಮತ್ತು ಎಚ್ಚರಿಕೆ ಕೇಂದ್ರದ CEMADEN ನ ಮುನ್ಸೂಚನೆ ಪ್ರಕಾರ ಇದು ದಾಖಲೆಯ ಬರ ಎಂದೇ ಪರಿಗಣಿಸಲಾಗಿದೆ. ಜನವರಿವರೆಗೆ ಇದು ಹೀಗೇ ವಿಸ್ತರಣೆ   ಆಗಬಹುದು. 102 ವರ್ಷಗಳಲ್ಲೇ ಐತಿಹಾಸಿಕ ಸರಾಸರಿಗಿಂತ ಅಮೆಜಾನ್ ಕಾಡಲ್ಲಿನ ನದಿಗಳಲ್ಲಿ ಕಡಿಮೆ ಪ್ರಮಾಣದ ನೀರಿದೆ. ಬ್ರೆಜಿಲ್ ನ ಭೂವೈಜ್ಞಾನಿಕ ಸಮೀಕ್ಷೆ ಪ್ರಕಾರ ನೀರಿನ ಮಟ್ಟ ಪ್ರತಿದಿನ ಸುಮಾರು 13 ರಿಂದ 14 ಸೆಂಟಿ ಮೀಟರ್ ಗಳಷ್ಟು ಕುಸಿಯುತ್ತಿರೋದಾಗಿ ಮಾಹಿತಿ ನೀಡಿದ್ದಾರೆ. ನದಿಗಳು ಮತ್ತು ತೊರೆಗಳು ಬತ್ತಿ ಹೋಗಿರೋದ್ರಿಂದ ನದಿಗಳ ಪ್ರದೇಶ ಭೂಮಿಯಂತೆಯೇ ಕಾಣುತ್ತಿದೆ. ಅಟ್ಲಾಂಟಿಕ್‌ ನ ತಾಪಮಾನ  ಹೀಗೇ ಮುಂದುವರಿದ್ರೆ 2024ರ ಮಧ್ಯದವರೆಗೆ ಬರ ಮುಂದುವರಿಯಬಹುದು ಎಂದು ಮುನ್ಸೂಚನೆ ನೀಡಿದೆ. ಅಲ್ಲದೆ ಅಮೇಜಾನ್ ಕಾಡುಗಳಲ್ಲಿ ನದಿಗಳಲ್ಲಿ ಮಾತ್ರವೇ ಅಪರೂಪದ ಜಾತಿಯ ಡಾಲ್ವಿನ್‌ ಗಳಿವೆ. ಆದರೆ ಬಿಸಿಲಿನ ತಾಪದಿಂದಾಗಿ ಟೆಫೆ ನಗರದಲ್ಲಿರುವ ಟೆಫೆ ನದಿಯ ನೀರು ಕೂಡ ಬಿಸಿಯಾಗಿದೆ. ಇದ್ರಿಂದ  150ಕ್ಕೂ ಹೆಚ್ಚು ಡಾಲ್ಸಿನ್‌ ಗಳು ಸಾವನ್ನಪ್ಪಿದ್ದು, ಈ ಡಾಲ್ಫಿನ್ ಗಳು ಅಳಿವಿನಂಚಿನಲ್ಲಿವೆ ಎಂದು ವಿಶ್ವಸಂಸ್ಥೆ ತಿಳಿಸಿದೆ. ನದಿ ನೀರಿನ ಸಾಮಾನ್ಯ ತಾಪಮಾನ 30 ಡಿಗ್ರಿ ಸೆಲ್ಸಿಯಸ್ ಇರ್ತಿತ್ತಯ. ಆದ್ರೆ ಈಗ ಬರದಿಂದಾಗಿ 39 ಡಿಗ್ರಿ ಸೆಲ್ಸಿಯಸ್ ಗೆ ಏರಿಕೆ ಕಂಡಿದೆ. ಬಿಸಿ ತಾಳಲಾರದೆ ಡಾಲ್ವಿನ್‌ ಗಳು ಸಾವನ್ನಪ್ಪುತ್ತಿದ್ದು, ನದಿಯ ತೀರಕ್ಕೆ ಬಂದು ಕಳೇಬರಗಳು ಬೀಳುತ್ತಿವೆ. ಕೆಲವು ನದಿಗಳು ಬತ್ತಿ ಹೋಗಿರುವ ಕಾರಣ ಲಕ್ಷಾಂತರ ಮೀನುಗಳೂ ಸಹ ಸಾವನ್ನಪ್ಪುತ್ತಿವೆ. ಮೀನುಗಳು, ಡಾಲ್ಫಿನ್ ಗಳು ಕೊಳೆಯುತ್ತಿದ್ದು ನದಿತೀರದಲ್ಲಿ ಗಬ್ಬು ನಾಥ ಬೀರುತ್ತಿದೆ. ಈ ದುರ್ವಾಸನೆ ಒಂದು ಕಡೆಯಾದ್ರೆ ಅಳಿದುಳಿದ ನೀರನ್ನೂ ಸಹ ಬಳಸಲಾಗಾದ ಸ್ಥಿತಿಯಲ್ಲಿ ನದಿ ತೀರದ ಬುಡಕಟ್ಟು ನಿವಾಸಿಗಳಿದ್ದಾರೆ. ಅಲ್ಲದೆ ಅಮೇಜಾನ್ ನದಿ ತೀರದಲ್ಲಿ ನೂರಾರು ಬುಡಕಟ್ಟು ಗ್ರಾಮಗಳಿವೆ. ಈ ಗ್ರಾಮಗಳಲ್ಲಿ ಲಕ್ಷಾಂತರ ಜನ ವಾಸ ಮಾಡುತ್ತಿದ್ದಾರೆ. ಇವರ ಪರಿಸ್ಥಿತಿ ಕೂಡ ಭಯಾನಕ ಸ್ಥಿತಿಗೆ ತಲುಪಿದೆ. ಕಾಡನ್ನೇ ನಂಬಿಕೊಂಡಿರೋ ಇವರಿಗೆ ಸಾಲು ಸಾಲು ಸವಾಲುಗಳು ಎದುರಾಗುತ್ತಿದೆ. ಸುರಕ್ಷಿತ ತಾಣಕ್ಕೆ ಸ್ಥಳಾಂತರ ಮಾಡಲು ಸರ್ಕಾರ ಮುಂದಾಗಿದ್ರೂ ಕೂಡ ಇವರ್ಯಾರು ಒಪ್ಪುತ್ತಿಲ್ಲ.

ಅಮೇಜಾನ್ ಕಾಡಿನ ನದಿತೀರದ ಗ್ರಾಮಗಳ ಜನರ ಸ್ಥಿತಿ ಸಂಪೂರ್ಣ ಸ್ಥಗಿತವಾಗಿದೆ. ನೆಗೊ ಹಾಗೂ ಮಡೈರಾ ನದಿಗಳಿಗೆ ಹೊಂದಿಕೊಂಡಂತೆ ಇರುವ ತೇಲುವ ಗ್ರಾಮಗಳ ಒಟ್ಟು 62 ಪುರಸಭೆಗಳ ಪೈಕಿ 60 ರಲ್ಲಿ ಬರ ಘೋಷಿಸಿಲಾಗಿದೆ. ಇದ್ರಿಂದ 5 ಲಕ್ಷಕ್ಕೂ ಹೆಚ್ಚು ಜನರ ಬದುಕಿಗೆ ಹೊಡೆತ ಬಿದ್ದಿದೆ. ಗ್ರಾಮಗಳ ಸುತ್ತ ನೀರು ಇದ್ದು, ಒಂದು ಕಡೆಯಿಂದ ಇನ್ನೊಂದು ಕಡೆಗೆ ಹೋಗಲು ಇವರೆಲ್ಲಾ ನೀರಲ್ಲೇ ಸಂಚಾರ ಮಾಡಬೇಕು. ಸದಾ ನೀರಿನಲ್ಲಿ ಸಂಚರಿಸೋದ್ರಿಂದ ಇಲ್ಲಿನ ಜನರ ಬಳಿ ಬೋಟ್ ಬಿಟ್ಟರೆ ಬೇರೆ ವಾಹನಗಳಿಲ್ಲ, ರಸ್ತೆಗಳೂ ಇಲ್ಲ.  ಇದ್ರಿಂದಾಗಿ ತಿನ್ನಲು ಆಹಾರವಿಲ್ಲದೆ ಕುಡಿಯಲು ನೀರಿಲ್ಲದೆ ಪರಿತಪಿಸುತ್ತಿದ್ದಾರೆ. ಆದ್ರೆ ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರಗೊಳ್ಳಲು ನಿರಾಕರಿಸುತ್ತಿದ್ದು, ಇಲ್ಲಿ ವಾಸಿಸುವ ವಿವಿಧ ಬುಡಕಟ್ಟು ಸಮುದಾಯಗಳ ಜನರಿಗೆ ದಿಕ್ಕೇ ತೋಚದಂತಾಗಿದೆ. ಮೀನುಗಾರಿಕೆ ಇಲ್ಲ, ಕಾಡಿನ ಹಣ್ಣುಗಳನ್ನ ಮಾರಾಟ ಮಾಡಲಾಗುತ್ತಿಲ್ಲ, ನೀರಿಲ್ಲದೆ ಪ್ರವಾಸಿಗರು ಬರುತ್ತಿಲ್ಲ. ಬೋಟಿಂಗ್ ಉದ್ಯಮವನ್ನೂ ಸ್ಥಗಿತಗೊಳಿಸಲಾಗಿದೆ. ಹೀಗಾಗಿ ಕುಡಿಯುವ ನೀರು, ಪಾತ್ರೆಗಳ ಅಂಗಡಿ. ಮನೆಯ ನಿತ್ಯ ಬಳಕೆಯ ವಸ್ತುಗಳ ಅಂಗಡಿಯಂತಹ ಸಣ್ಣ ಉದ್ಯಮ ಕೂಡ ಬಂದ್ ಆಗಿದೆ.

ಅಮೇಜಾನ್ ಕಾಡಿನಲ್ಲಿನ ಬರದಿಂದಾಗಿ ಪರಿಣಾಮ ನದಿತೀರದ ಲಕ್ಷಾಂತರ ಜನರ ಬದುಕೇ ಬಂದ್ ಆಗಿದೆ. ಹೀಗಾಗಿ ಬ್ರೆಜಿಲ್ ಅಧ್ಯಕ್ಷ ಲೂಯಿ ಇನ್ಯಾಸಿಯೊ ಲುಲ ಡಿಸಿಲ್ವ ನೇತೃತ್ವದ ಸರ್ಕಾರ ಅಲರ್ಟ್ ಆಗಿದೆ. ಆಹಾರ, ಕುಡಿಯುವ ನೀರು ಸೇರಿದಂತೆ ಬರ ಪೀಡಿತ ಪ್ರದೇಶಗಳ ಜನರ ಅಗತ್ಯವನ್ನು ಪೂರೈಸಲು ಮುಂದಾಗಿದೆ. ಇದಕ್ಕಾಗಿ ವಿಶೇಷ ತಂಡವನ್ನೂ ರಚಿಸಿದೆ. ಅಸಲಿಗೆ ಅಮೇಜಾನ್ ಕಾಡುಗಳು ಜಾಗತಿಕ ತಾಪಮಾನ ನಿಯಂತ್ರಣದಲ್ಲಿ ಬಹುದೊಡ್ಡ ಪಾತ್ರ ವಹಿಸುತ್ತವೆ. ಈ ಪ್ರದೇಶದಲ್ಲಿ ಇಲ್ಲಿಯವರೆಗೆ ಸುಮಾರು 16 ಸಾವಿರ ಮರಗಳ ತಳಿಗಳು ಪತ್ತೆಯಾಗಿವೆ. ಇನ್ನೂ ನೂರಾರು ಮರಗಳ ತಳಿ ಇರುವ ಬಗ್ಗೆ ಸಂಶೋಧನೆಗಳು ನಡೆಯುತ್ತಿವೆ. ಆದರೆ ಈ ಪ್ರದೇಶದಲ್ಲಿ ದೊಡ್ಡ ಮಟ್ಟದ ಅರಣ್ಯಸಂಪತ್ತನ್ನ ನಾಶ ಮಾಡಲಾಗಿದೆ. ಇದೂ ಇಂದಿನ ಬರ ಪರಿಸ್ಥಿತಿಗೆ ಕಾರಣ ಎನ್ನಲಾಗುತ್ತಿದೆ. ಅಷ್ಟಕ್ಕೂ ಎಷ್ಟು ಅರಣ್ಯ ನಾಶವಾಗಿದೆ. ಕಾರಣ ಏನು ಅನ್ನೋದನ್ನೂ ನಾವಿಲ್ಲಿ ತಿಳಿದುಕೊಳ್ಳಬೇಕಾಗುತ್ತೆ.

2021ರ ಅಕ್ಟೋಬರ್ 1ರಿಂದ 2022ರ ಜುಲೈ 31ರ ನಡುವೆ ಅತಿದೊಡ್ಡ ಪ್ರಮಾಣದ ಕಾಡು ನಾಶಮಾಡಲಾಗಿದೆ. ಸರಿಸುಮಾರು ಕತಾರ್ ದೇಶದ ವ್ಯಾಪ್ತಿಯಷ್ಟು ಅರಣ್ಯವನ್ನು ನಾಶ ಮಾಡಲಾಗಿದೆ ಅಂತಾ ಬ್ರೆಜಿಲ್‌ ನ ನ್ಯಾಷನಲ್ ಸ್ಪೇಸ್ ರಿಸರ್ಚ್ ಇನ್‌ ಸ್ಟಿಟ್ಯೂಟ್ ಆಘಾತಕಾರಿ ಮಾಹಿತಿ ನೀಡಿದೆ. ಜಾಗತಿಕ ಹವಾಮಾನ ವೈಪರೀತ್ಯವೂ ಕೂಡ ಒಂದು. ಜಾಗತಿಕ ತಾಪಮಾನವು ಏರುತ್ತಲೇ ಇದ್ದು ಕಳೆದ ಸೆಪ್ಟೆಂಬರ್ ತಿಂಗಳಲ್ಲಿ ಜಗತ್ತಿನಲ್ಲೇ  ತೀವ್ರ ಏರಿಕೆ ಕಂಡಿತ್ತು. ಇದ್ರಿಂದಾಗಿ ಬ್ರೆಜಿಲ್‌ ನಲ್ಲಿ ಬಿಸಿಗಾಳಿ ಉಂಟಾಗಿ ಕಳೆದ ಸೆಪ್ಟೆಂಬರ್ ನಲ್ಲಿ ಒಂದೇ ತಿಂಗಳಲ್ಲಿ ಅಮೆಜಾನ್‌ ನಲ್ಲಿ 7 ಬಾರಿ ಕಾಡ್ಗಿಚ್ಚು ಕಾಣಿಸಿಕೊಂಡಿತ್ತು. ಇನ್ನು 2023ರ ಹೊತ್ತಿಗೆ ಕಳೆದ ನಾಲ್ಕು ವರ್ಷಕ್ಕೆ ಹೋಲಿಸಿಕೊಂಡರೆ ಕೊಂಚ ಸುಧಾರಣೆ ಕಂಡಿದೆ. ಅರಣ್ಯ ನಾಶ ಪ್ರಮಾಣ ಶೇಕಡಾ 34ಕ್ಕೆ ಇಳಿದಿದೆ ಎಂದು ಬ್ರೆಜಿಲ್ ಸರ್ಕಾರ ಹೇಳಿಕೊಂಡಿದೆ. ಇನ್ನು ಬ್ರೆಜಿಲ್ ದೇಶ ದನದ ಮಾಂಸ ಮಾರಾಟದಲ್ಲಿ ವಿಶ್ವದಲ್ಲೇ ಅಗ್ರಸ್ಥಾನದಲ್ಲಿದೆ. ಆದ್ರೆ ದನಗಳಿಗೆ ಮೇಯಲು ಜಾಗ ಮಾಡಿಕೊಡಲು ಕಾಡನ್ನ ಕಡಿಯಲಾಗುತ್ತಿದೆ ಅನ್ನೋದು ವಿಪರ್ಯಾಸ. ಜೊತೆಗೆ ಅಮೆಜಾನ್ ಕಾಡು ಪ್ರದೇಶದಲ್ಲಿ ನಡೆಯುತ್ತಿರುವ ತೈಲ ಉತ್ಪಾದನೆಯಿಂದಲೂ ಕಾಡು ನಾಶವಾಗುತ್ತಿದೆ. ವಾಹನಗಳಿಗೆ ಎಥೆನಾಲ್ ಬಳಸುವುದರಿಂದ ಕಾಡು ಕಡಿದು ಸೋಯಾಬೀನ್ಸ್ ಕೃಷಿ ಮಾಡಲಾಗುತ್ತಿದೆ. ಅಲ್ಲದೆ ವಿವಿಧ ಜಾತಿಗಳ ಮರಗಳ್ಳನ್ನ ಕಳ್ಳತನ ಮಾಡುತ್ತಿರೋದು ಕೂಡ ಅರಣ್ಯ ನಾಶಕ್ಕೆ ಕಾರಣ ಎನ್ನಲಾಗಿದೆ.

ಸತತ ಕಾಡಿನ ನಾಶದಿಂದ ಎಚ್ಚೆತ್ತುಕೊಂಡಿರುವ ಬ್ರೆಜಿಲ್ ಸರ್ಕಾರ ಅರಣ್ಯನಾಶ ತಡೆಗೆ ಸಾಕಷ್ಟು ಕಾರ್ಯಕ್ರಮಗಳನ್ನೂ ಹಮ್ಮಿಕೊಂಡಿದೆ. ಬುಡಕಟ್ಟು ಸಮುದಾಯಗಳು ವಾಸಿಸುವ ಪ್ರದೇಶಗಳನ್ನು ಮೀಸಲು ಅರಣ್ಯ ಎಂದು ಘೋಷಿಸಿದೆ. ಅಲ್ಲದೆ 2030ರ ಹೊತ್ತಿಗೆ ಅರಣ್ಯ ನಾಶದ ಪ್ರಮಾಣವನ್ನು ಸೊನ್ನೆಗೆ ಇಳಿಸುವ ಗುರಿಯನ್ನು ಹೊಂದಿದೆ. ಇದೇ ಗುರಿ ಸಾಧನೆಗಾಗಿ ಕಳೆದ ಆಗಸ್ಟ್‌ ನಲ್ಲಿ ಅಮೆಜಾನ್ ಶೃಂಗಸಭೆಯನ್ನ ಬ್ರೆಜಿಲ್ ಆಯೋಜಿಸಿತ್ತು. ಅಮೆಜಾನ್ ಮಳೆಕಾಡು ಹಬ್ಬಿಕೊಂಡಿರುವ ಬೊಲಿಯಾ ಪೆರು ಕೊಲಂಬಿಯಾ ಸೇರಿದಂತೆ 8 ದೇಶಗಳ ನಾಯಕರು ಇದರಲ್ಲಿ ಭಾಗವಹಿಸಿದ್ದರು. ಅಷ್ಟಕ್ಕೂ ಜಗತ್ತು ಯಾಕೆ ಅಮೇಜಾನ್ ಕಾಡಿಗೆ ಇಷ್ಟೊಂದು ಮಹತ್ವ ನೀಡುತ್ತಿದೆ ಅನ್ನೋದಕ್ಕೆ ಕಾರಣವೂ ಇದೆ. ಇಡೀ ವಿಶ್ವಕ್ಕೆ ಪ್ರಕೃತಿ ನೀಡಿರುವ ಒಂದು ಅತಿದೊಡ್ಡ ಅದ್ಭುತ ಕೊಡುಗೆ ಅಮೇಜಾನ್ ಕಾಡು.

ಅಮೇಜಾನ್ ಕಾಡು ಅದೆಷ್ಟು ಮಹತ್ವದ್ದಾಗಿದೆ ಅಂದ್ರೆ ವಿಶ್ವದ ಆಮ್ಲಜನಕದ ಶೇಕಡಾ 20ಕ್ಕಿಂತ ಹೆಚ್ಚಿನ ಆಮ್ಲಜನಕ ಇದೇ ಕಾಡುಗಳಲ್ಲಿ ಉತ್ಪಾದನೆಯಾಗುತ್ತೆ. ಇಂಗಾಲದ ಡೈಆಕ್ಸೈಡ್ ಅನ್ನು ಕೂಡ ಆಮ್ಲಜನಕವಾಗಿ ಸ್ವಯಂಪ್ರೇರಿತವಾಗಿ ಪರಿವರ್ತನೆ ಮಾಡುವ ಶಕ್ತಿ ಈ ಕಾಡುಗಳಿಗಿದ್ದು ಇದೇ ಕಾರಣಕ್ಕೆ ಈ ಮಳೆ ಕಾಡುಗಳನ್ನ ಭೂಮಿ ಮೇಲಿನ ಶ್ವಾಸಕೋಶ ಎನ್ನಲಾಗುತ್ತೆ. ಅಮೆಜಾನ್ ಮಳೆಕಾಡಿನ ಮೂಲಕ ಹರಿಯುವ ಅಮೆಜಾನ್ ನದಿಯನ್ನ ವಿಶ್ವದ ಎರಡನೇ ಅತಿದೊಡ್ಡ ನದಿ ಎನ್ನಲಾಗಿದೆ. ನೈಲ್ ಅತಿದೊಡ್ಡ ನದಿಯಾಗಿದೆ.  ಅಮೆಜಾನ್ ನದಿಯು 1,100 ಕ್ಕೂ ಹೆಚ್ಚು ಉಪನದಿಗಳನ್ನು ಹೊಂದಿದೆ. ಇನ್ನು ಅಮೆಜಾನ್ ಮಳೆಕಾಡಿನ ಬಹುಪಾಲು ಪ್ರದೇಶ ಬ್ರೆಜಿಲ್‌ನಲ್ಲಿದೆ ಅಂದ್ರೆ ಸುಮಾರು 60% ಪರ್ಸೆಂಟ್ ಬ್ರೆಜಿಲ್ ನಲ್ಲೇ ಇದೆ. ಪೆರುವಿನಲ್ಲಿ 13%, ಕೊಲಂಬಿಯಾದಲ್ಲಿ 10% ಹರಡಿಕೊಂಡಿದೆ. ಉಳಿದಂತೆ ಬೊಲಿವಿಯಾ, ವೆನೆಜುವೆಲಾ, ಈಕ್ವೆಡಾರ್, ಗಯಾನಾ, ಸುರಿನಾಮ್ ಮತ್ತು ಫ್ರೆಂಚ್ ಗಯಾನಾದಲ್ಲೂ ಹಬ್ಬಿದೆ. ಈ ಕಾಡು ಅದೆಷ್ಟು ದಟ್ಟವಾಗಿದೆ ಅಂದ್ರೆ  ಮಳೆಹನಿ ಬಿದ್ದಾಗ ಆ ನೀರು ಅರಣ್ಯದ ನೆಲಕ್ಕೆ ತಲುಪಲು ಸುಮಾರು 10 ನಿಮಿಷ ಸಮಯ ತೆಗೆದುಕೊಳ್ಳುತ್ತೆ. ಅಲ್ಲದೇ ಮರ, ಗಿಡ, ರೆಂಬೆ ಕೊಂಬೆಗಳೆಲ್ಲಾ ಒತ್ತೊತ್ತಾಗಿ ಇರೋದ್ರಿಂದ ಇಲ್ಲಿನ ನೆಲ ಶಾಶ್ವತವಾಗಿ ಬೆಳಕನ್ನೇ ಕಾಣುವುದಿಲ್ಲ. ಕೇವಲ 1 ಪರ್ಸೆಂಟ್ ಮಾತ್ರ ಸೂರ್ಯನ ಬೆಳಕು ಈ ಕಾಡಿನ ನೆಲವನ್ನ ತಲುಪುತ್ತೆ. ಅಮೇಜಾನ್ ಕಾಡಿನಲ್ಲಿ 16 ಸಾವಿರಕ್ಕೂ ಹೆಚ್ಚು ಜಾತಿಯ 390 ಶತಕೋಟಿ ಪ್ರತ್ಯೇಕ ಮರಗಳಿವೆ ಅಂತಾ ಪರಿಸರ ತಜ್ಞರು ಅಂದಾಜಿಸಿದ್ದಾರೆ.

ಇಷ್ಟೊಂದು ವಿಸ್ಮಯಗಳನ್ನ ಒಳಗೊಂಡಿರುವ ಈ ಕಾಡು ಇಂಗಾಲದ ಡೈಆಕ್ಸೈಡ್ ಅನ್ನು ಸಹ ಸಂಗ್ರಹಿಸುತ್ತದೆ. ಇದರ ಪರಿಣಾಮವಾಗಿ ಪ್ರಪಂಚದಲ್ಲಿ ಇಂಗಾಲದ ಮಟ್ಟವನ್ನು ಕಾಯ್ದುಕೊಳ್ಳಲಾಗುತ್ತದೆ. 55 ಮಿಲಿಯನ್ ವರ್ಷಗಳಷ್ಟು ಹಳೆಯದಾದ ಈ ಕಾಡು ಅರಣ್ಯನಾಶದಿಂದಾಗಿ ಕಳೆದ 50 ವರ್ಷಗಳಲ್ಲೇ ಸುಮಾರು 17% ಮಳೆಕಾಡು ನಾಶವಾಗಿದೆ. ಇದು ಹೀಗೇ ಮುಂದುವರಿದ್ರೆ ಮುಂದಿನ 100 ವರ್ಷಗಳಲ್ಲಿ ಅರಣ್ಯ ಸಂಪೂರ್ಣವಾಗಿ ಕಣ್ಮರೆಯಾಗಲಿದೆ ಎಂದು ನಾಸಾ ಅಂದಾಜಿಸಿದೆ. ಅರಣ್ಯ ನಾಶ, ಮಳೆ ಕೊರತೆಯಿಂದ ನದಿಗಳು ಬತ್ತುತ್ತಿದ್ದು ಇಡೀ ಅಮೇಜಾನ್ ಕಾಡಿನಲ್ಲಿ ಬರ ಆವರಿಸಿದೆ. ಕಳೆದ ಸೆಪ್ಟೆಂಬರ್ ನಲ್ಲಿ ಕಾಡ್ಗಿಚ್ಚಿನಿಂದ ಸಾವಿರಾರು ಹೆಕ್ಟೇರ್ ಕಾಡು ನಾಶವಾಗಿತ್ತು. ಇದೀಗ ಬರ ಆವರಿಸಿರೋದು ಜಗತ್ತಿನ ಮೇಲೆ ದೊಡ್ಡ ಪರಿಣಾಮವನ್ನೇ ಬೀರುವ ಆತಂಕ ಎದುರಾಗಿದೆ. ಹೀಗಾಗಿ ಕಾಡು ಉಳಿಸಲು ಇಡೀ ಜಗತ್ತು ಒಂದಾಗಬೇಕಿದೆ.

Shantha Kumari