ಮಲ್ಪೆ ಬೀಚ್‌ನಲ್ಲಿ ವಿಸ್ಮಯ ದೃಶ್ಯ – ಕಡಲ ಕಿನಾರೆಯಲ್ಲಿ ರಾಶಿ ರಾಶಿ ಗಂಗಾದೇವಿ ಕೂದಲು?
ಉಡುಪಿಯ ಮಲ್ಪೆ ಸಮುದ್ರ ತೀರದಲ್ಲಿ ಅಪರೂಪದ ಪ್ರಾಕೃತಿಕ ವಿದ್ಯಮಾನವೊಂದು ಸಂಭವಿಸಿದೆ. ಕಡಲ ತೀರದ ಉದ್ದಕ್ಕೂ ರಾಶಿ ರಾಶಿ ಅಪರೂಪದ ಬಿಳಿ ಬಣ್ಣದ ತ್ಯಾಜ್ಯ ಬಂದು ಬಿದ್ದಿವೆ. ರಾತ್ರಿ ಬೆಳಗಾಗುವುದರೊಳಗಾಗಿ ಕಡಲು ಈ ಕಸದ ರಾಶಿಯನ್ನು ತಂದು ಗುಡ್ಡೆ ಹಾಕಿದೆ. ಕಡಲ ತೀರದ ಮರಳಿನ ರಾಶಿ ಕಾಣದಷ್ಟು ದಟ್ಟವಾಗಿ ಹಬ್ಬಿಕೊಂಡಿದೆ.
ಇದನ್ನೂ ಓದಿ: ಬಿಪರ್ ಜಾಯ್ ಚಂಡಮಾರುತದ ಎಫೆಕ್ಟ್ ನಿಂದಾಗಿ ರಾಜ್ಯದಲ್ಲಿ ಶೇ. 71 ರಷ್ಟು ಮಳೆ ಕೊರತೆ!
ಬಿಪರ್‌ಜಾಯ್ ಚಂಡಮಾರುತದಿಂದ ಕಡಲು ಪ್ರಕ್ಷುಬ್ಧಗೊಂಡಿದೆ. ಭಾರೀ ಗಾತ್ರದ ಅಲೆಗಳು ಏಳುತ್ತಿದ್ದು ಪರಿಣಾಮ ಅಗಾಧ ಪ್ರಮಾಣದಲ್ಲಿ ಅಪರೂಪದ ಬಿಳಿ ಬಣ್ಣದ ತ್ಯಾಜ್ಯ ಮಲ್ಪೆ ಬೀಚ್ ತೀರಕ್ಕೆ ತೇಲಿ ಬರುತ್ತಿದೆ. ಇದನ್ನು ಕಸ ಅಥವಾ ಕಲ್ಮಶ ಎನ್ನಲು ಸಾಧ್ಯವಿಲ್ಲ. ಶ್ಯಾವಿಗೆ ರೀತಿಯಲ್ಲಿರುವ ಎಳೆ ಎಳೆಯಾದ ಬಿಳಿ ಬಣ್ಣದ ಈ ಕಸದ ರಾಶಿಯನ್ನು ಸ್ಥಳೀಯರು ಗಂಗಾದೇವಿಯ ಕೂದಲು ಎಂದು ಕರೆಯುತ್ತಾರೆ. ಸಮುದ್ರ ತೀರದ ಉದ್ದಕ್ಕೂ ಕಿಲೋ ಮೀಟರ್ ಗಟ್ಟಲೆ ಗಂಗೆಯ ಕೂದಲು ರಾಶಿ ಬಿದ್ದಿದೆ.
ಇದೊಂದು ನೈಸರ್ಗಿಕ ಪ್ರಕ್ರಿಯೆಯಾಗಿದ್ದು, ಮಳೆಗಾಲದಲ್ಲಿ ಮಾತ್ರ ಸಂಭವಿಸುತ್ತವೆ. ಹುಣ್ಣಿಮೆ ಮತ್ತು ಅಮಾವಾಸ್ಯೆ ಸಂದರ್ಭದಲ್ಲಿರುವ ಉಬ್ಬರದ ನೀರು ಕಸದ ರಾಶಿಯನ್ನೇ ಸಮುದ್ರತೀರಕ್ಕೆ ತಂದು ಹಾಕುತ್ತದೆ. ರವಿವಾರ ಅಮಾವಾಸ್ಯೆಯಾದ್ದರಿಂದ ಸಮುದ್ರದ ಒತ್ತಡ ದಿಂದಾಗಿ ಗಂಗಾದೇವಿಯ ಕೂದಲು ಹಾಗೂ ಕಸದ ರಾಶಿ ಬಿದ್ದಿದೆ ಎನ್ನಲಾಗಿದೆ.
ಗಂಗಾದೇವಿಯ ಕೂದಲು ಸಮುದ್ರದಲ್ಲಿ ಕೊಳೆತು ಮೀನುಗಳಿಗೆ ಆಹಾರವಾಗುತ್ತದೆ. ಸುಮಾರು 10 ವರ್ಷದ ಹಿಂದೆ ಕಡಲ ತೀರದಲ್ಲಿ ಕಂಡುಬಂದಿತ್ತು. ಈ ಬಾರಿ ಯಥೇಚ್ಚವಾಗಿ ಬಿದ್ದಿದೆ. 10 ವರ್ಷಗಳ ಹಿಂದೆ ಕಡಲತೀರದಲ್ಲಿ ಕಂಡ ಬಂದ ಗಂಗಾದೇವಿಯ ಕೂದಲು ಎನ್ನಲಾದ ಈ ರಾಶಿಯಲ್ಲಿ ಒಂದೇ ಒಂದು ಪ್ಲಾಸ್ಟಿಕ್ ಬಾಟಲಿ ಕಾಣ ಸಿಕ್ಕಿರಲಿಲ್ಲ. ಆದರೆ ಇದೀಗ ಇದರಲ್ಲಿ ಲಾರಿಗಟ್ಟಲೆ ಕಸ, ಕಡ್ಡಿ ,ಪ್ಲಾಸ್ಟಿಕ್ ಬಂದಿರುವುದು ವಿಪರ್ಯಾಸ ಎಂದು ಸ್ಥಳೀಯರು ತಿಳಿಸಿದ್ದಾರೆ.