ಸ್ಥಗಿತಗೊಂಡಿದ್ದ ಅಮರನಾಥ ಯಾತ್ರೆ ಪುನಾರಂಭ – ಯಾತ್ರಾರ್ಥಿಗಳಿಗೆ ಹೆಲಿಕಾಪ್ಟರ್ ಸೌಲಭ್ಯ

ಸ್ಥಗಿತಗೊಂಡಿದ್ದ ಅಮರನಾಥ ಯಾತ್ರೆ ಪುನಾರಂಭ – ಯಾತ್ರಾರ್ಥಿಗಳಿಗೆ ಹೆಲಿಕಾಪ್ಟರ್ ಸೌಲಭ್ಯ

ಶ್ರೀನಗರ: ಜಮ್ಮು-ಕಾಶ್ಮೀರದಲ್ಲಿ ಪ್ರತಿಕೂಲ ಹವಾಮಾನದಿಂದಾಗಿ ಸ್ಥಗಿತಗೊಂಡಿದ್ದ ಅಮರನಾಥ ಯಾತ್ರೆ ಪುನರಾರಂಭಗೊಂಡಿದೆ. ಮಳೆ ಹಾಗೂ ಹಿಮಪಾತವಾಗುವಿಕೆ ಕಡಿಮೆಯಾಗಿದ್ದರಿಂದ ಯಾತ್ರೆಯನ್ನು ಮತ್ತೆ ಆರಂಭಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಕಾಶ್ಮೀರದಲ್ಲಿ ಮಳೆಯ ಪ್ರಮಾಣ ತಗ್ಗಿದ ಹಿನ್ನೆಲೆ ಬಾಲ್ಟಾಲ್ ಬೇಸ್‌ನಿಂದ ಮತ್ತೆ ಅಮರನಾಥ ಯಾತ್ರೆ ಪುನರಾರಂಭಗೊಳಿಸಲಾಗಿದೆ. ಅಮರನಾಥ ಯಾತ್ರೆಯು ಅನಂತನಾಗ್ ಜಿಲ್ಲೆಯ ಪಹಲ್ಗಾಮ್ ಟ್ರ್ಯಾಕ್ ಮತ್ತು ಗಂಡರ್ಬಾಲ್ ಜಿಲ್ಲೆಯ ಬಾಲ್ಟಾಲ್ ಎಂಬ ಎರಡು ಮಾರ್ಗಗಳ ಮೂಲಕ ಹಾದು ಹೋಗುತ್ತದೆ. ಭಾನುವಾರ ಪಹಲ್ಗಾಮ್ ಮಾರ್ಗದಲ್ಲಿ ಮಾತ್ರ ಪ್ರಯಾಣ ಆರಂಭಿಸಲಾಗಿದೆ. ಆದರೆ ಬಲ್ತಾಲ್ ಮಾರ್ಗದ ಪರಿಸ್ಥಿತಿಗಳು ಇನ್ನೂ ಸುಧಾರಿಸದ ಕಾರಣ ಆ ರಸ್ತೆಯಲ್ಲಿ ಯಾತ್ರಿಗಳಿಗೆ ಸಂಚರಿಸಲು ಅನುಮತಿ ನೀಡಿರಲಿಲ್ಲ. ಇದೀಗ ಈ ರಸ್ತೆಯಲ್ಲೂ ಯಾತ್ರೆಗೆ ಅನುಮತಿ ನೀಡಲಾಗಿದೆ. ಯಾತ್ರಾರ್ಥಿಗಳ ಅನುಕೂಲಕ್ಕಾಗಿ ಹೆಲಿಕಾಪ್ಟರ್ ಸೇವೆಯನ್ನು ಆರಂಭಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇದನ್ನೂ ಓದಿ: ಉತ್ತರಭಾರತದಲ್ಲಿ ಮಳೆಯ ರೌದ್ರ ನರ್ತನ – ಮಹಾಮಳೆಗೆ 16 ಮಂದಿ ಸಾವು

ಭಾನುವಾರ ಮಧ್ಯಾಹ್ನದಿಂದ ಪಹಲ್ಗಾಮ್ ಬೇಸ್‌ನಿಂದ ಯಾತ್ರೆಯನ್ನು ಪುನರಾರಂಭ ಮಾಡಲಾಗಿತ್ತು. ಹವಾಮಾನ ಪರಿಸ್ಥಿತಿ ಸೂಕ್ತವಾಗಿದ್ದ ಹಿನ್ನೆಲೆ 6491 ಮಂದಿ ಯಾತ್ರಾರ್ಥಿಗಳು ಪವಿತ್ರ ಗುಹೆಯ ದರ್ಶನ ಪಡೆದ್ದಾರೆ. 116 ಸಾಧುಗಳು, 6 ಸಾಧ್ವಿಗಳು ಸೇರಿ ಈವರೆಗೂ 93,929 ಯಾತ್ರಾರ್ಥಿಗಳು ಪವಿತ್ರ ಗುಹೆಯ ದರ್ಶನ ಪಡೆದಿದ್ದಾರೆ. ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಹಿರಿಯ ಅಧಿಕಾರಿಗಳು ಮತ್ತು ಅಮರನಾಥ ಯಾತ್ರಾ ಆಡಳಿತ ಮಂಡಳಿಯ ಜೊತೆಗೆ ಸಭೆ ನಡೆಸಿದ್ದು, ರಾಷ್ಟ್ರೀಯ ಹೆದ್ದಾರಿ ವಿಸ್ತರಣೆ ಮತ್ತು ಅಗತ್ಯ ಮೂಲ ಸೌಕರ್ಯಗಳನ್ನು ಒದಗಿಸುವ ಬಗ್ಗೆ ಚರ್ಚಿಸಿದ್ದಾರೆ.

ಅಮರನಾಥ ಯಾತ್ರೆ ರದ್ದು ಹಿನ್ನೆಲೆ ಗೃಹ ಸಚಿವ ಅಮಿತ್ ಶಾ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಜೊತೆಗೆ ಮಾತುಕತೆ ನಡೆಸಿದ್ದರು. ಈ ವೇಳೆ ಯಾತ್ರಾರ್ಥಿಗಳು ಸುರಕ್ಷತೆ, ಮೂಲ ಸೌಕರ್ಯಗಳ ಪೂರೈಕೆ ಮತ್ತು ಊಟ ವಸತಿ ನೀಡಿರುವ ಬಗ್ಗೆ ಸಿನ್ಹಾ ಮಾಹಿತಿ ನೀಡಿದರು. ಜುಲೈ 1 ರಿಂದ ಆರಂಭವಾಗಿರುವ ಅಮರನಾಥ ಯಾತ್ರೆ ಅಗಸ್ಟ್ 31 ರವರೆಗೂ ನಡೆಯಲಿದೆ.

suddiyaana