ಜುಲೈ 1 ರಿಂದ ಅಮರನಾಥ ಯಾತ್ರೆ ಆರಂಭ – ಹಲ್ವಾ, ದೋಸೆ, ಪೂರಿಗಿಲ್ಲ ಅವಕಾಶ!
ಶ್ರೀನಗರ: ಹಿಮಾಲಯದ ಮಡಿಲಿನಲ್ಲಿರುವ ಹಿಂದೂಗಳ ಪ್ರಮುಖ ತೀರ್ಥಕ್ಷೇತ್ರ ಅಮರನಾಥಗೆ ಯಾತ್ರೆ ಈ ಬಾರಿ ಜುಲೈ 1 ರಿಂದ ಆರಂಭವಾಗಲಿದ್ದು ಆಗಸ್ಟ್ 31 ರಂದು ಮುಕ್ತಾಯಗೊಳ್ಳಲಿದೆ. ಹೀಗಾಗಿ ಹಿಮಾಚ್ಛಾದಿತ ಪರ್ವತದಲ್ಲಿರುವ ದೇಗುಲದ ಆಡಳಿತ ಮಂಡಳಿ ಕೆಲವೊಂದು ಆಹಾರ ವಸ್ತುಗಳನ್ನು ತೆಗೆದುಕೊಂಡು ಬಾರದಂತೆ ನಿಷೇಧ ಹೇರಿದೆ.
ಅಮರನಾಥ ಯಾತ್ರೆ ವೇಳೆ ದೋಸೆ, ಹಲ್ವಾ, ಪೂರಿ, ತಂಪು ಪಾನೀಯಗಳು, ಚೋಲಾ ಬಟುರೆ, ಜಿಲೇಬಿಗಳನ್ನು ನಿಷೇಧಿಸಿದೆ. ಹರ್ಬಲ್ ಟೀ, ಕಾಫಿ, ಕಡಿಮೆ ಪ್ರಮಾಣದಲ್ಲಿ ಫ್ಯಾಟ್ ಅಂಶ ಇರುವ ಹಾಲು, ಹಣ್ಣಿನ ಜ್ಯೂಸ್, ನಿಂಬೆ ಸ್ಕ್ವಾಶ್, ತರಕಾರಿ ಸೂಪ್‌ಗಳ ಬಳಕೆಗೆ ಅವಕಾಶ ನೀಡದೇ ಇರಲು ನಿರ್ಧರಿಸಲಾಗಿದೆ. ಇನ್ನು ಗುಲಾಬ್ ಜಾಮೂನು, ಲಡ್ಡು, ಬರ್ಫಿ, ರಸಗುಲ್ಲ, ಕುರುಕುಲು ತಿಂಡಿಗಳು, ನಮ್‌ಕಿನ್, ಪಕೋಡ, ಸಮೋಸಗಳನ್ನೂ ನಿಷೇಧ ಪಟ್ಟಿಗೆ ಸೇರಿಸಲಾಗಿದೆ. ಇದಲ್ಲದೆ, ಮದ್ಯ, ಮಾಂಸಾಹಾರ, ಗುಟ್ಕಾ, ಪಾನ್‌ಮಸಾಲಾ, ತಂಬಾಕು ಉತ್ಪನ್ನಗಳು, ಧೂಮಪಾನ ಹಾಗೂ ಮತ್ತೇರಿಸುವ ವಸ್ತುಗಳಿಗೆ ಅವಕಾಶ ಇಲ್ಲ ಎಂದು ಹೇಳಿದೆ.
ಇದನ್ನೂ ಓದಿ: ಅಸ್ತಮಾ ನಿವಾರಣೆಗೆ ವಿಶೇಷ ಪ್ರಸಾದ! – ಜೀವಂತ ಮೀನು ನುಂಗಲು ವಿದೇಶಗಳಿಂದಲೂ ಬರುತ್ತಾರೆ ಜನ
ಈ ನಿಯಮ ಕೇವಲ ಯಾತ್ರಾರ್ಥಿಗಳಿಗೆ ಮಾತ್ರವಲ್ಲ, 14 .ಕಿಮೀ ದೂರ ನಡೆಯುವ ಸ್ಥಳದಲ್ಲಿ ಸ್ಥಾಪನೆಗೊಳ್ಳಲಿರುವ ತಾತ್ಕಾಲಿಕ ಮಳಿಗೆಗಳ ಮಾಲೀಕರು ಕೂಡ ಇಂತಹ ಆಹಾರ ಪಾದಾರ್ಥಗಳನ್ನು ಮಾರಾಟ ಮಾಡಬಾರದು ಎಂದು ದೇಗುಲದ ಆಡಳಿತ ಮಂಡಳಿ ಹೇಳಿದೆ.
ಯಾತ್ರೆ ವೇಳೆ ಅನ್ನದ ಸೇವನೆಗೆ ಅವಕಾಶ ಕಲ್ಪಿಸಲಾಗಿದೆ. ಪೋಹಾ, ಹುರಿದ ಕಡಲೆ, ಊತಪ್ಪ, ಇಡ್ಲಿ, ರೋಟಿ ಮತ್ತು ದಾಲ್, ಚಾಕೋಲೇಟ್, ಖೀರ್, ಓಟ್ಸ್, ಡ್ರೈಫ್ರೂಟ್ಸ್, ಜೇನು, ಬಿಸಿಯಾಗಿರುವ ಸಿಹಿ ತಿನಸುಗಳನ್ನು ಸೇವಿಸಲು ಅವಕಾಶ ಕಲ್ಪಿಸಲಾಗಿದೆ.
ಇನ್ನು ಯಾತ್ರೆಗೆ ಸಂಬಂಧಿಸಿದಂತೆ ದೆಹಲಿಯಲ್ಲಿ ಕೇಂದ್ರ ಗೃಹ ಮತ್ತು ಸಹಕಾರ ಸಚಿವ ಅಮಿತ್ ಶಾ ನೇತೃತ್ವದಲ್ಲಿ ಸಭೆ ನಡೆಸಲಾಗಿದೆ. ಭದ್ರತಾ ವ್ಯವಸ್ಥೆ, ಯಾತ್ರಾರ್ಥಿಗಳಿಗೆ ಒದಗಿಸಬೇಕಾದ ಸೌಕರ್ಯಗಳ ಬಗ್ಗೆ ಪರಿಶೀಲನೆ ನಡೆಸಲಾಗಿದೆ. ಬಾಲ್ತಾಲ್ ಮತ್ತು ಪೆಹಲ್ಗಾಂವ್ ಮೂಲಕ ಪವಿತ್ರ ಕ್ಷೇತ್ರಕ್ಕೆ ತೆರಳುವ ದಾರಿಯಲ್ಲಿ ಸದ್ಯ ಭಾರೀ ಪ್ರಮಾಣದಲ್ಲಿ ಹಿಮಪಾತ ಉಂಟಾಗುತ್ತಿದೆ. ಈ ಹಿನ್ನೆಲೆಯಲ್ಲಿ ಬಾರ್ಡರ್ ರೋಡ್ ಆರ್ಗನೈಸೇಷನ್ (ಬಿಆರ್‌ಒ)ಗೆ ಜೂ.15ರ ಒಳಗಾಗಿ ರಸ್ತೆಗಳನ್ನು ದುರಸ್ತಿಗೊಳಿಸಿ, ಸಿದ್ಧಗೊಳಿಸುವ ಕಾರ್ಯದ ಹೊಣೆಯನ್ನು ವಹಿಸಲಾಗಿದೆ.
ಕಳೆದ ವರ್ಷ 3.45 ಲಕ್ಷ ಮಂದಿ ಭಕ್ತರು ಯಾತ್ರೆ ಕೈಗೊಂಡಿದ್ದರು. ಪ್ರಸಕ್ತ ವರ್ಷ 5 ಲಕ್ಷ ಮಂದಿ ಆಗುವ ಸಾಧ್ಯತೆಗಳು ಇವೆ. ರಾಷ್ಟ್ರೀಯ ವಿಪತ್ತು ನಿರ್ವಹಣಾ ದಳ (ಎನ್‌ಡಿಆರ್‌ಎಫ್) ಯಾವ ಸ್ಥಳದಲ್ಲಿ ತಾತ್ಕಾಲಿಕ ಟೆಂಟ್‌ಗಳನ್ನು ಹಾಕಬೇಕು ಎಂಬುದರ ಬಗ್ಗೆ ಸ್ಥಳ ಪರಿಶೀಲನೆಯನ್ನು ನಡೆಸುತ್ತಿದೆ. ಹಠಾತ್ ಪ್ರವಾಹ ಪರಿಸ್ಥಿತಿ ಉಂಟಾದರೆ, ಯಾತ್ರಾರ್ಥಿಗಳನ್ನು ರಕ್ಷಿಸಲು ಭಾರತೀಯ ವಾಯುಪಡೆ (ಐಎಎಫ್)ಯ ವಿಮಾನಗಳನ್ನೂ ನಿಯೋಜಿಸಲು ತೀರ್ಮಾನಿಸಲಾಗಿದೆ.