ಲಗೇಜ್ ಟಿಕೆಟ್ ಪಡೆಯಲು ಮಹಿಳೆಯರ ತಕರಾರು – ಬಸ್‌ನಿಂದ ಕೆಳಗಿಳಿಸಿ ಹೊರಟ ಕಂಡಕ್ಟರ್
ಬಾಗಲಕೋಟೆ: ರಾಜ್ಯದಲ್ಲಿ ಶಕ್ತಿ ಯೋಜನೆಯಡಿ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಜೂನ್ 11 ರಂದು ಆರಂಭವಾಗಿದೆ. ಮಹಿಳೆಯರು ಅಗತ್ಯ ದಾಖಲೆಗಳನ್ನು ತೋರಿಸಿ ಉಚಿತ ಬಸ್ ಪ್ರಯಾಣ ಮಾಡುತ್ತಿದ್ದಾರೆ. ಬಾಗಲಕೋಟೆ ಜಿಲ್ಲೆಯ ಇಳಕಲ್ ಪಟ್ಟಣದಲ್ಲಿ ನಿರ್ವಾಹಕ ಹಾಗೂ ಮಹಿಳೆಯ ನಡುವೆ ಉಚಿತ ಪ್ರಯಾಣಕ್ಕಾಗಿ ಜಟಾಪಟಿ ಉಂಟಾಗಿದೆ.
ಇದನ್ನೂ ಓದಿ: ಅವಧಿ ಮುಗಿದ ಕುರ್ಕುರೆ ತಿಂದು 40ಕ್ಕೂ ಹೆಚ್ಚು ಕುರಿಗಳು ಸಾವು
ಇಳಕಲ್ ಪಟ್ಟಣದಿಂದ ಮುದಗಲ್ಗೆ ಹೊರಟಿದ್ದ ಬಸ್ನಲ್ಲಿ ಸಣ್ಣ ಪಾತ್ರೆ ಮಾರಾಟ ಮಾಡುವ ಮಹಿಳೆಯರು ಹತ್ತಿದ್ದಾರೆ. ಪಾತ್ರೆಗಳಿಂದ ತುಂಬಿದ ಲಗೇಜ್ನ್ನು ಸೀಟ್ ಮೇಲಿರಿಸಿದ್ದರು. ಇದನ್ನು ಗಮನಿಸಿ ನಿರ್ವಾಹಕ ನಿಮಗೆ ಮಾತ್ರ ಟಿಕೆಟ್ ಇಲ್ಲ. ಲಗೇಜ್ಗೆ ಟಿಕೆಟ್ ಮಾಡಿಸಬೇಕು ಎಂದು ಹೇಳಿದ್ದಾರೆ. ಹೀಗೆ ಲಗೇಜ್ ಬಸ್ನೊಳಗೆ ಹಾಕುವಂತಿಲ್ಲ. ಡಿಕ್ಕಿ ಅಥವಾ ಮೇಲೆ ಹಾಕಿಸಿ ಎಂದು ನಿರ್ವಾಹಕ ಮಹಿಳೆಯರಿಗೆ ಹೇಳಿದ್ದಾರೆ. ಇದನ್ನು ಕೇಳದ ಮಹಿಳೆಯರು ಟಿಕೆಟ್ ತೆಗೆದುಕೊಳ್ಳಲು ಒಪ್ಪದೇ ನಿರ್ವಾಹಕರ ಜೊತೆ ಜಗಳ ತೆಗೆದಿದ್ದಾರೆ.
ಇದರಿಂದ ಬೇಸತ್ತ ಕಂಡಕ್ಟರ್ ಕೊನೆಗೆ ಸೀಟ್ ಮೇಲೆ ಲಗೇಜ್ ಇಡಬೇಡಿ. ಮಧ್ಯದಲ್ಲಿರಿಸಿ ಎಂದು ಹೇಳಿದ್ದಾರೆ. ಆದರೆ ಮಹಿಳೆಯರು ಅದಕ್ಕೂ ಕೂಡ ಒಪ್ಪಿಲ್ಲ. ಕೊನೆಗೆ ಬೇಸತ್ತ ನಿರ್ವಾಹಕರ ಮಹಿಳೆಯರನ್ನು ಬಸ್‌ನಿಂದ ಕೆಳಗಿಳಿಸಿದ್ದಾರೆ. ಕಂಟ್ರೋಲರ್ ಮಧ್ಯಪ್ರವೇಶ ಮಾಡಿ ಮಹಿಳೆಯರಿಗೆ ತಿಳಿ ಹೇಳುವ ಪ್ರಯತ್ನ ಮಾಡಿದ್ದಾರೆ.
ಸೀಟ್ ಮೇಲೆ ಲಗೇಜ್ ಹಾಕಿದ್ರೆ ಮೇಲ್ವಿಚಾರಕರು ನಮಗೆ ಮೆಮೋ ಕೊಡುತ್ತಾರೆ. ಸೀಟ್ ಮಧ್ಯದಲ್ಲಿಯೂ ಲಗೇಜ್ ಹಾಕಲು ಮಹಿಳೆಯರು ಒಪ್ಪುತ್ತಿಲ್ಲ ಎಂದು ನಿರ್ವಾಹಕ ಹೇಳುತ್ತಾರೆ.
ನಾವು ಹಳ್ಳಿ ಹಳ್ಳಿಗಳಿಗೆ ತೆರಳಿ ಪಾತ್ರೆ ಮಾರಾಟ ಮಾಡುವ ಮಹಿಳೆಯರು. ಇಷ್ಟು ದಿನ ಇವರೇ ನಮ್ಮನ್ನು ಕರೆದುಕೊಂಡು ಹೋಗುತ್ತಿದ್ರು. ಇವಾಗ ಫ್ರೀ ಅಂತ ಹೀಗೆ ಮಾಡ್ತಿದ್ದಾರೆ. ರಸ್ತೆಯಲ್ಲಿ ಲಗೇಜ್ ಬಿಸಾಕ್ತೀವಿ ಎಂದು ಹೆದರಿಸುತ್ತಾರೆ. ಹೀಗೆ ಮಾಡಿದ್ರೆ ದುಡಿದುಕೊಂಡು ತಿನ್ನೋರು ನಾವು ಏನು ಮಾಡಬೇಕು ಎಂದು ಮಹಿಳೆಯರು ಪ್ರಶ್ನಿಸಿದ್ದಾರೆ.