ಮೈಸೂರು-ಬೆಂಗಳೂರು ಎಕ್ಸ್ ಪ್ರೆಸ್ ಕಾರಿಡಾರ್ –ಜನವರಿಗೆ ಬಹುತೇಕ ಸಂಚಾರ ಮುಕ್ತ
ಬೆಂಗಳೂರು ಮತ್ತು ಮೈಸೂರು ಪ್ರಯಾಣ ಈಗಾಗಲೇ ಸುಲಭವಾಗಿದೆ. ಇನ್ನು ಜನವರಿ ವೇಳೆಗೆ ಇನ್ನಷ್ಟೂ ಕಾಮಗಾರಿಗಳು ಮುಕ್ತಾಯಗೊಳ್ಳಲಿದ್ದು, ಪ್ರಯಾಣಿಕರಿಗೆ ಇನ್ನೂ ಅನುಕೂಲ ಜಾಸ್ತಿಯಾಗಲಿದೆ. ಈಗಾಗಲೇ ಮೈಸೂರು-ಬೆಂಗಳೂರು ಎಕ್ಸ್ ಪ್ರೆಸ್ ಕಾರಿಡಾರ್ ನಿರ್ಮಾಣ ಚುರುಕುಗೊಂಡಿದ್ದು, ಬೆಂಗಳೂರಿನ ಕುಂಬಳಗೋಡಿನಿಂದ ಮದ್ದೂರಿಗೆ 40 ನಿಮಿಷಗಳಲ್ಲಿ ತಲುಪಬಹುದು. ಮಾರ್ಚ್ ಒಳಗೆ ಮೈಸೂರಿನ ಮಣಿಪಾಲ್ ಆಸ್ಪತ್ರೆ ಬಳಿ ನಿರ್ಮಾಣ ಮಾಡಬೇಕಿರುವ ಫ್ಲೈಓವರ್ ಹೊರತುಪಡಿಸಿ ಬಹುತೇಕ ಕಾಮಗಾರಿ ಪೂರ್ಣಗೊಳ್ಳಲಿದೆ.
ಇದನ್ನೂ ಓದಿ : ‘ಕಾಂಗ್ರೆಸ್ ತನ್ನ ಪಕ್ಷದ ತುಂಬಾ ಗೂಂಡಾಗಳನ್ನೇ ತುಂಬಿಸಿಕೊಂಡಿದೆ’ – ಬಿಜೆಪಿ ಟ್ವೀಟ್ ತಿರುಗೇಟು
ಮೈಸೂರು-ಬೆಂಗಳೂರು ಎಕ್ಸ್ ಪ್ರೆಸ್ ಕಾರಿಡಾರ್ ಯೋಜನೆ ಒಂಬತ್ತು ಪ್ರಮುಖ ಸೇತುವೆಗಳು, 44 ಸಣ್ಣ ಸೇತುವೆಗಳು ಮತ್ತು ನಾಲ್ಕು ರೈಲು ಮೇಲ್ಸೇತುವೆಗಳನ್ನು ಹೊಂದಿದೆ. ಮಳೆಗಾಲದಲ್ಲಿ ಸ್ವಲ್ಪ ನಿಧಾನಗತಿಯಲ್ಲಿ ಸಾಗಿದ ಕಾಮಗಾರಿ ಈಗ ಮತ್ತೆ ಚುರುಕಾಗಿ ಸಾಗುತ್ತಿದ್ದು, ಮದ್ದೂರು ಫ್ಲೈಓವರ್ ಹಾಗೂ ಶ್ರೀರಂಗಪಟ್ಟಣ ಬೈಪಾಸ್ ಕಾಮಗಾರಿ ಸದ್ಯದಲ್ಲೇ ಮುಗಿಯಲಿದೆ. ಡಿಸೆಂಬರ್ ಅಂತ್ಯದೊಳಗೆ ಮಂಡ್ಯ ಬೈಪಾಸ್ ಸಂಚಾರಕ್ಕೆ ಮುಕ್ತವಾಗಲಿದೆ.
ಈಗಾಗಲೇ ಫುಡ್ ಕೋರ್ಟ್‌ಗಳು ಮತ್ತು ಅಲ್ಲಲ್ಲಿ ವಿಶ್ರಾಂತಿ ಕೊಠಡಿಗಳ ನಿರ್ಮಾಣಕ್ಕೆ ಯೋಜನೆ ರೂಪಿಸಲಾಗಿದೆ. ಎಕ್ಸ್‌ಪ್ರೆಸ್ ಕಾರಿಡಾರ್ ಯೋಜನೆ ಬಗ್ಗೆ ಮಾತನಾಡಿದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಯೋಜನಾ ನಿರ್ದೇಶಕ ಶ್ರೀಧರ್, “ಭೂ ಸ್ವಾಧೀನ ಪ್ರಕ್ರಿಯೆ ವಿಳಂಬದಿಂದ ಫ್ಲೈಓವರ್ ಕೆಲಸ ಸ್ವಲ್ಪ ತಡವಾಗಿದೆ. ಮಣಿಪಾಲ್ ಆಸ್ಪತ್ರೆ ಸಮೀಪದಿಂದ ಮೈಸೂರು ನಗರದೊಳಗೆ ಬರುವಂತೆ ಫ್ಲೈಓವರ್ ಕಾಮಗಾರಿಯನ್ನು ಡಿಸೈನ್ ಮಾಡಲಾಗಿದೆ. ಕೇಂದ್ರದಿಂದ ಅನುಮತಿ ಸಿಕ್ಕ ಕೂಡಲೇ ಈಗಿರುವ ಗುತ್ತಿಗೆದಾರರಿಗೆ ಕೆಲಸ ಒಪ್ಪಿಸಿದರೆ ಫ್ಲೈಓವರ್ ಕೆಲಸ ಮುಗಿಯಲು 6 ತಿಂಗಳು ಬೇಕು. ಟೆಂಡರ್ ಕರೆದು ಬೇರೆಯವರಿಗೆ ನೀಡಿದರೆ ಮತ್ತಷ್ಟು ತಡವಾಗಬಹುದು” ಎಂದು ಅಭಿಪ್ರಾಯಪಟ್ಟಿದ್ದಾರೆ.