ಗೃಹಲಕ್ಷ್ಮೀ ಯೋಜನೆಗೆ ಒಂದು ವಾರದಲ್ಲಿ ಬರೋಬ್ಬರಿ 70 ಲಕ್ಷ ಮಂದಿ ನೋಂದಣಿ!

ಗೃಹಲಕ್ಷ್ಮೀ ಯೋಜನೆಗೆ ಒಂದು ವಾರದಲ್ಲಿ ಬರೋಬ್ಬರಿ 70 ಲಕ್ಷ ಮಂದಿ ನೋಂದಣಿ!

ಬೆಂಗಳೂರು: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳಲ್ಲೊಂದಾದ ಗೃಹಲಕ್ಷ್ಮೀ ಯೋಜನೆಗೆ ಭರ್ಜರಿ ರೆಸ್ಪಾನ್ಸ್‌ ಸಿಕ್ಕಿದೆ. ಯೋಜನೆಗೆ ಅಧಿಕೃತವಾಗಿ ಚಾಲನೆ ಸಿಕ್ಕ ಒಂದು ವಾರದಲ್ಲೇ ಬರೋಬ್ಬರಿ 70 ಲಕ್ಷ ಮಹಿಳೆಯರು ಯೋಜನೆಗೆ ಹೆಸರು ನೋಂದಣಿ ಮಾಡಿಸಿಕೊಂಡಿದ್ದಾರೆ.

ಗೃಹಲಕ್ಷ್ಮೀ ಯೋಜನೆ ಅರ್ಜಿ ಸಲ್ಲಿಕೆ ವೇಳೆ ತಾಂತ್ರಕ ದೋಷಗಳು ಕಂಡುಬಂದಿದೆ. ಈ ಲೋಪದೋಷಗಳ ನಡುವೆಯೂ ಮಹಿಳೆಯರು ಗಂಟೆಗಟ್ಟಲೆ ಕ್ಯೂನಲ್ಲಿ ನಿಂತು ಗೃಹಲಕ್ಷ್ಮೀ ಯೋಜನೆಗೆ ನೋಂದಣಿ ಮಾಡಿಸಿಕೊಂಡಿದ್ದಾರೆ. ಒಂದು ವಾರದಲ್ಲಿ ಈ ಯೋಜನೆಗೆ ಬರೋಬ್ಬರಿ 70 ಲಕ್ಷ ಮಹಿಳೆಯರು ಅರ್ಜಿ ಸಲ್ಲಿಕೆ ಮಾಡಿದ್ದಾರೆ.

ಇದನ್ನೂ ಓದಿ: ದೆಹಲಿಯಲ್ಲಿ ‘ಡ್ರೈಡೇ’ ಆಚರಣೆ – ನಾಲ್ಕು ದಿನಗಳ ಕಾಲ ಮದ್ಯ ಇರೋದಿಲ್ಲ!

ಇದುವರೆಗೂ ಮೆಸೇಜ್ ಬಂದರಷ್ಟೇ ಬೆಂಗಳೂರು ಒನ್, ಗ್ರಾಮ ಒನ್‌ಗಳಲ್ಲಿ ಅರ್ಜಿ ಸಲ್ಲಿಸಬೇಕಿತ್ತು. ಈಗ ನೋಂದಣಿ ಪ್ರಕ್ರಿಯೆಯನ್ನು ಮತ್ತಷ್ಟು ಸುಲಭಗೊಳಿಸಲಾಗಿದೆ. ಮೊಬೈಲ್‌ಗೆ ಮೆಸೇಜ್‌ ಬರದೇ ಇದ್ದರೂ ಅರ್ಹ ಫಲಾನುಭವಿಗಳು ಇನ್ಮುಂದೆ ಅಗತ್ಯ ದಾಖಲೆಗಳೊಂದಿಗೆ ಹತ್ತಿರದ ನೋಂದಣಿ ಕೇಂದ್ರದಲ್ಲಿ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ.

ಇನ್ನೊಂದೆಡೆ ಗೃಹಲಕ್ಷ್ಮಿ ಯೋಜನೆಗೆ ನೋಂದಣಿ ಮಾಡಿಕೊಳ್ಳಲು ಕೆಲವು ಕೇಂದ್ರಗಳಲ್ಲಿ ಹಣ ಪಡೆಯುತ್ತಿದ್ದ ಬಗ್ಗೆ ದೂರು ಬಂದಿತ್ತು. ಗೃಹಲಕ್ಷ್ಮಿ ನೋಂದಣಿಗೆ ಹಣ ಪಡೆದರೆ ಅಂತಹವರ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸುವ ಎಚ್ಚರಿಕೆಯನ್ನು ಸರ್ಕಾರ ನೀಡಿದೆ. ನೋಂದಣಿಗೆ ಹಣ ಪಡೆದಲ್ಲಿ ಸಮೀಪದ ಪೊಲೀಸ್ ಠಾಣೆ ಅಥವಾ 112 ಸಂಖ್ಯೆಗೆ ಕರೆ ಮಾಡಿ ದೂರು ನೀಡುವಂತೆ ಇಲಾಖೆಯಿಂದ ಜನರಲ್ಲಿ ಮನವಿ ಮಾಡಿದೆ.

suddiyaana