ಜ್ಞಾನವಾಪಿ ಮಸೀದಿಯ ವೈಜ್ಞಾನಿಕ ಸಮೀಕ್ಷೆಗೆ ಅಲಹಾಬಾದ್ ಹೈಕೋರ್ಟ್ ಅನುಮತಿ

ನವದೆಹಲಿ: ವಾರಾಣಸಿಯ ಜ್ಞಾನವಾಪಿ ಮಸೀದಿ ಆವರಣದಲ್ಲಿ ಸಮೀಕ್ಷೆ ನಡೆಸಲು ಅನುಮತಿ ನೀಡಿರುವುದನ್ನು ಪ್ರಶ್ನಿಸಿ ಅರ್ಜಿ ಸಲ್ಲಿಸಿದ್ದ ಅಂಜುಮನ್ ಇಂತೇಜಮಿಯಾ ಮಸೀದಿ ಸಮಿತಿಗೆ ಭಾರಿ ಹಿನ್ನಡೆಯಾಗಿದೆ. ಸಮಿತಿಯ ಅರ್ಜಿಯನ್ನು ಅಲಹಾಬಾದ್ ಹೈಕೋರ್ಟ್ ಗುರುವಾರ ವಜಾಗೊಳಿಸಿದೆ. ಇದರಿಂದ ಜ್ಞಾನವಾಪಿ ಮಸೀದಿ ಆವರಣದಲ್ಲಿ ಸಮೀಕ್ಷೆ ನಡೆಸಲು ಇದ್ದ ತಡೆ ದೂರವಾಗಿದೆ.
ಇದನ್ನೂ ಓದಿ: ಪಶ್ಚಿಮಘಟ್ಟಗಳ ಸೌಂದರ್ಯ ಇನ್ನು ಬೆಂಗಳೂರಿನಲ್ಲೂ ಲಭ್ಯ! – ಸಸ್ಯಕಾಶಿಯಲ್ಲಿ ನಿರ್ಮಾಣಗೊಳ್ಳಲಿದೆ ಮಿನಿ ಪಶ್ಚಿಮ ಘಟ್ಟ?
ಹಿಂದೂ ದೇವಾಲಯವನ್ನು ನೆಲಸಮಗೊಳಿಸಿ ಮಸೀದಿ ನಿರ್ಮಿಸಲಾಗಿದೆ. ಇದನ್ನು ನಿರ್ಧರಿಸುವ ಏಕೈಕ ಮಾರ್ಗ ಮಸೀದಿಯನ್ನು ಸರ್ವೆಗೆ ಒಳಪಡಿಸುವುದು ಎಂದು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಕೆಯಾಗಿತ್ತು. ಅರ್ಜಿ ವಿಚಾರಣೆ ನಡೆಸಿದ್ದ ವಾರಣಾಸಿ ನ್ಯಾಯಾಲಯವು ಮಸೀದಿ ಸಮೀಕ್ಷೆ ನಡೆಸಲು ಅನುಮತಿಸಿ ಜು.21 ರಂದು ಆದೇಶ ಹೊರಡಿಸಿತ್ತು. ಕೋರ್ಟ್‌ನ ತೀರ್ಪು ಬಳಿಕ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯು ಜುಲೈ 24 ರಂದು ಸಮೀಕ್ಷೆ ನಡೆಸಲು ಪ್ರಾರಂಭಿಸಿತ್ತು. ಆದರೆ ಅದನ್ನು ವಿರೋಧಿಸಿ ಮಸೀದಿ ಸಮಿತಿಯು ಸುಪ್ರೀಂ ಕೋರ್ಟ್ ಮೆಟ್ಟಿಲೇರಿತು. ಸರ್ವೆ ಆರಂಭವಾದ ಕೆಲವೇ ಗಂಟೆಗಳಲ್ಲಿ ಸುಪ್ರೀಂ ಕೋರ್ಟ್ ತಡೆ ನೀಡಿತ್ತು.
ಮಸೀದಿಯ ಸರ್ವೇಗೆ ತಡೆ ನೀಡುವಂತೆ ಕೋರಿ ಮಸೀದಿ ಸಮಿತಿ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದೆ. ಜ್ಞಾನವಾಪಿ ಮಸೀದಿ ಸಂಕೀರ್ಣದ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯು ಸಮೀಕ್ಷೆಯನ್ನು ಪ್ರಾರಂಭಿಸಬಹುದು ಎಂದು ಅಲಹಾಬಾದ್ ಹೈಕೋರ್ಟ್ ಹೇಳಿದ್ದು, ಸೆಷನ್ಸ್ ನ್ಯಾಯಾಲಯದ ಆದೇಶವನ್ನು ಹೈಕೋರ್ಟ್ ಎತ್ತಿಹಿಡಿದಿದೆ.
ನ್ಯಾಯದಾನದ ಹಿತಾಸಕ್ತಿ ದೃಷ್ಟಿಯಿಂದ ಎಎಸ್‌ಐ ಸಮೀಕ್ಷೆ ಅಗತ್ಯವಾಗಿದೆ. ಇದನ್ನು ಕೆಲವು ಷರತ್ತುಗಳ ಅಡಿಯಲ್ಲಿ ನಡೆಸುವ ಅಗತ್ಯವಿದೆ ಎಂದು ಹೈಕೋರ್ಟ್ ತಿಳಿಸಿದೆ.