ಮತದಾನೋತ್ಸವಕ್ಕೆ ಸಜ್ಜಾಯ್ತು ಕರ್ನಾಟಕ – ಮತಗಟ್ಟೆಗಳ ಸುತ್ತ ಬಿಗಿ ಬಂದೋಬಸ್ತ್!

ಮತದಾನೋತ್ಸವಕ್ಕೆ ಸಜ್ಜಾಯ್ತು ಕರ್ನಾಟಕ – ಮತಗಟ್ಟೆಗಳ ಸುತ್ತ ಬಿಗಿ ಬಂದೋಬಸ್ತ್!

ಕರ್ನಾಟಕ ವಿಧಾನಸಭಾ ಚುನಾವಣೆಗೆ ಕ್ಷಣಗಣನೆ ಶುರುವಾಗಿದೆ. ರಾತ್ರಿ ಕಳೆದು ಬೆಳಗಾಗುತ್ತಿದ್ದಂತೆ ಮತದಾನೋತ್ಸವ ನಡೆಯಲಿದೆ. ಮುಂದಿನ 5 ವರ್ಷ ರಾಜ್ಯವನ್ನ ಆಳುವ ಪಕ್ಷ ಯಾವುದು ಅನ್ನೋದು ಮತಗಟ್ಟೆಗಳಲ್ಲಿ ಭದ್ರವಾಗಲಿದೆ. ಹೀಗಾಗಿ ರಾಜ್ಯಾದ್ಯಂತ ಭಾರೀ ಭದ್ರತೆ ಕೈಗೊಳ್ಳಲಾಗಿದೆ. ಮತದಾನದ ಪ್ರಮಾಣ ಹೆಚ್ಚಿಸಲು ವಿಶೇಷ ಬೂತ್ ಗಳ ವ್ಯವಸ್ಥೆ ಕೂಡ ಮಾಡಲಾಗಿದೆ.

ಸೋಮವಾರವೇ ಬಹಿರಂಗ ಪ್ರಚಾರಕ್ಕೆ ತೆರೆ ಬಿದ್ದಿದ್ದು ಮಂಗಳವಾರ ಮನೆ ಮನೆ ಪ್ರಚಾರ ನಡೆಯಲಿದೆ. ಬುಧವಾರ ಅಂದ್ರೆ ಮೇ 10ರಂದು ಬೆಳಗ್ಗೆ 7 ಗಂಟೆಯಿಂದ ಸಂಜೆ 6ರವರೆಗೆ ಮತದಾನ ಪ್ರಕ್ರಿಯೆ ನಡೆಯಲಿದೆ.  ಚುಣಾವಣಾ ಅಧಿಕಾರಿಗಳು ಸಹ ವೋಟಿಂಗ್​​ಗೆ ಸಕಲ ಸಿದ್ಧತೆ ಮಾಡಿಕೊಂಡಿದ್ದಾರೆ. ಮತದಾನ ಸಂದರ್ಭದಲ್ಲಿ ಯಾವುದೇ ಅಹಿತಕ ಘಟನೆಗಳು ನಡೆಯದಂತೆ ಪೊಲೀಸ್ ಇಲಾಖೆ ಕಟ್ಟೆಚ್ಚರ ವಹಿಸಿದ್ದು, ರಾಜ್ಯಾದ್ಯಂತ ಮತದಾನಕ್ಕೆ ಒಟ್ಟು 1.56 ಲಕ್ಷ ಪೊಲೀಸರು ಬಿಗಿ ಭದ್ರತೆಗೆ ನಿಯೋಜಿತರಾಗಿದ್ದಾರೆ.

ಇದನ್ನೂ ಓದಿ : ಇವತ್ತು ಮನೆ ಮನೆ ಮತಶಿಕಾರಿ – ಅಭ್ಯರ್ಥಿಗಳ ಕೊನೇ ಕ್ಷಣದ ಕಸರತ್ತು!

ರಾಜ್ಯದ 224 ವಿಧಾನ ಸಭಾ ಕ್ಷೇತ್ರದ ಒಟ್ಟು 58,282 ಮತಗಟ್ಟೆಗಳು ಇದ್ದು, ಈ ಪೈಕಿ 11,617 ಸೂಕ್ಷ್ಮ ಮತಗಟ್ಟೆಗಳನ್ನು ಗುರುತಿಸಲಾಗಿದೆ. ಭದ್ರತೆಗಾಗಿ ಒಟ್ಟು 1.56 ಲಕ್ಷ ಪೊಲೀಸರ ನಿಯೋಜನೆ ಮಾಡಲಾಗಿದೆ. 304 ಡಿವೈಎಸ್​ಪಿಗಳು, 991 ಪಿಐಗಳು, 2,610 ಪಿಎಸ್‌ಐಗಳು, 5803 ಎಎಸ್‌ಐಗಳು, 46,421 ಪೊಲೀಸರು, 27,990 ಗೃಹ ರಕ್ಷಕರು ಸೇರಿದಂತೆ 84,119 ಅಧಿಕಾರಿ ಮತ್ತು ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಅಲ್ಲದೆ ಹೊರ ರಾಜ್ಯಗಳಿಂದ 8,500 ಅಧಿಕಾರಿ ಮತ್ತು ಸಿಬ್ಬಂದಿ ಹಾಗೂ ಗೃಹ ರಕ್ಷಕರನ್ನು ಚುನಾವಣಾ ಕರ್ತವ್ಯಕ್ಕೆ ಪಡೆಯಲಾಗಿದೆ. ಕೇಂದ್ರ ಹಾಗೂ ರಾಜ್ಯ ಭದ್ರತಾ ಪಡೆ ಸೇರಿದಂತೆ 8,500 ಸಿಬ್ಬಂದಿಯನ್ನು ಬಳಸಿಕೊಳ್ಳಲಾಗುತ್ತಿದ್ದು, ಒಟ್ಟಾರೆ 1.56 ಲಕ್ಷ ಪೊಲೀಸರು ಮತದಾನದ ದಿನ ಬಂದೋಬಸ್ತ್‌ನಲ್ಲಿ ಪಾಲ್ಗೊಳ್ಳಲಿದ್ದಾರೆ.

ಅವುಗಳಲ್ಲಿ ಬಿಎಎಸ್ ಎಫ್ 108, ಸಿಐಎಸ್ಎಫ್ 75, ಐಟಿಬಿಪಿ 70, ಆರ್ ಪಿಎಫ್-35, ಎಸ್ಎಸ್ ಬಿ 75 ಹಾಗೂ ರಾಜ್ಯದ 224 ಕೆಎಸ್ಆರ್ ಪಿ ತುಕಡಿಗಳು ಬಂದೋಬಸ್ತ್ ಗೆ ನಿಯೋಜನೆ ಮಾಡಲಾಗಿದೆ. ಭದ್ರತೆಗಾಗಿ ನಿಯೋಜನೆಗೊಂಡ ಸಿಬ್ಬಂದಿ, 58, 282 ಮತಗಟ್ಟೆಗಳ ಬಳಿ ನಿಯೋಜಿಸಲಾಗಿದೆ. ಇನ್ನು 11,617 ಸೂಕ್ಷ್ಮ ಮತಗಟ್ಟೆಗಳ ಬಳಿ ಸಿಆರ್ ಪಿಎಫ್ ಹಾಗೂ ಪೊಲೀಸರಿಂದ ಭದ್ರತೆ ಒದಗಿಸಲಾಗಿದೆ. ವಿಶೇಷವಾಗಿ 2930 ಪೊಲೀಸ್ ಮೊಬೈಲ್ ಸೆಕ್ಟರ್ ಗಳ ಕಾರ್ಯಾಚರಣೆ ನಡೆಸಲಿದ್ದಾರೆ. ಒಂದು ಮೊಬೈಲ್ ಸೆಕ್ಟರ್ 20 ಮತಗಟ್ಟೆಗಳನ್ನು ಕವರ್ ಮಾಡಲಿದೆ. ಮೊಬೈಲ್ ಸೆಕ್ಟರ್ ಗಳ ಮೇಲ್ವಿಚಾರಣೆಗೆ 749 ಸೂಪರ್‌ ವೈಸರ್ ಗಳನ್ನ ನಿಯೋಜನೆ ಮಾಡಲಾಗಿದೆ. 700 ಫೈಯಿಂಗ್ ಸ್ಕ್ವಾಡ್, 700 ಚೆಕ್ ಪೋಸ್ಟ್ ಗಳನ್ನು ನಿರ್ಮಿಸಲಾಗಿದೆ.

suddiyaana