ಕೊನೆಗೂ ಬದುಕಿ ಬರಲಿಲ್ಲ ಅಕ್ಷಯ್ – ಕೊಂಬೆ ಬಿದ್ದು 5 ದಿನಗಳ ಸಾವು ಬದುಕಿನ ಹೋರಾಟ ಫಲಿಸಲಿಲ್ಲ

ತಲೆ ಮೇಲೆ ಮರದ ಕೊಂಬೆ ಬಿದ್ದು ಸಾವು ಬದುಕಿನ ನಡುವೆ ಹೋರಾಡುತ್ತಿದ್ದ ಯುವಕ ಅಕ್ಷಯ್ ಕೊನೆಗೂ ಬದುಕಿ ಬರಲೇ ಇಲ್ಲ. ಗುರುವಾರ ಮಧ್ಯಾಹ್ನದ ವೇಳೆ ಅಕ್ಷಯ್, ಚಿಕಿತ್ಸೆ ಫಲಕಾರಿಯಾಗದೇ ಇಹಲೋಕ ತ್ಯಜಿಸಿದ್ದಾನೆ.
ಇದನ್ನೂ ಓದಿ: ಗೋಲ್ಡ್ ಸುರೇಶ್ ಮೇಲೆ ಕೇಸ್ – ಲಕ್ಷ ಲಕ್ಷ ಹಣ ವಂಚನೆ ಮಾಡಿದ್ರಾ ಬಿಗ್ ಬಾಸ್ ಮಾಜಿ ಸ್ಪರ್ಧಿ?
ಬೆಂಗಳೂರಿನ ಬನಶಂಕರಿ 2ನೇ ಹಂತದ ಶ್ರೀನಿವಾಸ ನಗರದಲ್ಲಿ ರಸ್ತೆಯಲ್ಲಿ ಮರದ ಮೇಲಿಂದ ಕೊಂಬೆಯೊಂದು ಅಕ್ಷಯ್ ತಲೆ ಮೇಲೆ ಬಿದ್ದಿತ್ತು. ಜೂನ್ 15ರಂದು ಈ ಅವಘಡ ಸಂಭವಿಸಿತ್ತು. ಮರದ ಕೊಂಬೆ ಬಿದ್ದ ಪರಿಣಾಮ 29 ವರ್ಷದ ಅಕ್ಷಯ್ ಗಂಭೀರವಾಗಿ ಗಾಯಗೊಂಡಿದ್ದ. ಕೂಡಲೇ ಜಯನಗರದ ಅಪೋಲೋ ಆಸ್ಪತ್ರೆಗೆ ದಾಖಲಿಸಲಾಗಿತ್ತು. ತಲೆಗೆ ತೀವ್ರ ಗಾಯವಾಗಿದ್ದು, ನಿನ್ನೆಯಷ್ಟೇ ವೈದ್ಯರು, ಅಕ್ಷಯ್ ಬ್ರೈನ್ ಡೆಡ್ ಆಗಿದೆ ಎಂದು ತಿಳಿಸಿದ್ದರು. ಯಾವುದೇ ಚಿಕಿತ್ಸೆಗೆ ಅಕ್ಷಯ್ ಸ್ಪಂದಿಸುತ್ತಿಲ್ಲ ಎಂದು ವೈದ್ಯರು ತಿಳಿಸಿದ್ದರು. ನಾಲ್ಕು ದಿನಗಳ ಕಾಲ ಅಕ್ಷಯ್ ಗೆ ಐಸಿಯೂನಲ್ಲಿ ಚಿಕಿತ್ಸೆ ನೀಡಲಾಗ್ತಿತ್ತು. ಗುರುವಾರ ಮಧ್ಯಾಹ್ನ ಚಿಕಿತ್ಸೆ ಫಲಕಾರಿಯಾಗದೇ ಅಕ್ಷಯ್ ಸಾವನ್ನಪ್ಪಿದ್ದಾರೆ ಎಂದು ವೈದ್ಯರು ತಿಳಿಸಿದರು.
ರಾಜಾಜಿನಗರದಲ್ಲಿ ಮಾನವ ಸಂಪನ್ಮೂಲ ವೃತ್ತಿಪರರಾಗಿ ಕಾರ್ಯನಿರ್ವಹಿಸುತ್ತಿದ್ದ ಅಕ್ಷಯ್, ಕುಟುಂಬಕ್ಕೆ ಆಧಾರವಾಗಿದ್ದರು. ಅವರ ತಂದೆ ಡಯಾಲಿಸಿಸ್ ಚಿಕಿತ್ಸೆಯಲ್ಲಿದ್ದು, ಕುಟುಂಬದ ಜವಾಬ್ದಾರಿಯನ್ನು ಅಕ್ಷಯ್ ಹೊತ್ತಿದ್ದರು. ಆಸ್ಪತ್ರೆಯ ಬಿಲ್ 4 ಲಕ್ಷ ರೂಪಾಯಿಗಳನ್ನು ದಾಟಿದ್ದು, BBMP ಈ ವೆಚ್ಚವನ್ನು ಭರಿಸಿದೆ. ಇದೀಗ ಬಿಬಿಎಂಪಿ ಅಕ್ಷಯ್ ಕುಟುಂಬಕ್ಕೆ 5 ಲಕ್ಷ ಪರಿಹಾರ ಷೋಷಣೆ ಮಾಡಿದೆ.
ಜೂನ್ 15ರ ಮಧ್ಯಾಹ್ನ 12:30ರ ಸುಮಾರಿಗೆ, ಅಕ್ಷಯ್ ಬೈಕ್‌ನಲ್ಲಿ ಸಂಚರಿಸುತ್ತಿದ್ದಾಗ, ಗಾಳಿ-ಮಳೆಯಿಂದಾಗಿ ಮರದ ಕೊಂಬೆ ಮುರಿದು ಅವರ ಮೇಲೆ ಬಿದ್ದಿತ್ತು. ಈ ಘಟನೆಯಿಂದ ಅಕ್ಷಯ್ ತಲೆಗೆ ತೀವ್ರ ಗಾಯವಾಗಿ, ಮೂಗು, ಬಾಯಿ ಮತ್ತು ಕಿವಿಗಳಿಂದ ರಕ್ತಸ್ರಾವವಾಗಿತ್ತು. ಅಕ್ಷಯ್ ಹೆಲ್ಮೆಟ್ ಧರಿಸಿರದ ಕಾರಣ ಗಾಯದ ತೀವ್ರತೆ ಹೆಚ್ಚಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ. ಕೊಂಬೆ ತಲೆಮೇಲೆ ಬಿದ್ದಿದ್ದರಿಂದ ಅಕ್ಷಯ್ ಕೆಳಗೆ ಬಿದ್ದಿದ್ದರು. ಸ್ಥಳೀಯರು ತಕ್ಷಣ ಅಕ್ಷಯ್ ನನ್ನು ಜಯನಗರದ ಸಮೀಪದ ಖಾಸಗಿ ಆಸ್ಪತ್ರೆಗೆ ಕರೆದೊಯ್ದಿದ್ದರು. ಆದರೆ, ಗಾಯದ ಗಂಭೀರತೆಯಿಂದಾಗಿ ಅಕ್ಷಯ್‌ನನ್ನು ಅಪೋಲೋ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು. ಅಪೋಲೋ ಆಸ್ಪತ್ರೆಯಲ್ಲಿ ತೀವ್ರ ನಿಗಾ ಘಟಕದಲ್ಲಿ (ICU) ಚಿಕಿತ್ಸೆಗೆ ಒಳಗಾಗಿದ್ದ ಅಕ್ಷಯ್‌ಗೆ ತಕ್ಷಣ ಶಸ್ತ್ರಚಿಕಿತ್ಸೆ ನಡೆಸಲಾಯಿತು. ಆದರೆ, 60 ಗಂಟೆಗಳ ನಂತರವೂ ಅವರ ಮೆದುಳು ಯಾವುದೇ ಸ್ಪಂದನೆ ತೋರದ ಕಾರಣ ವೈದ್ಯರು ಅವರನ್ನು ಬ್ರೈನ್ ಡೆಡ್ ಎಂದು ಘೋಷಿಸಿದರು.

ನೋಡಿರಿ

