ನನಗೂ ಟ್ಯೊಮ್ಯಾಟೊ ದರ ಏರಿಕೆ ಬಿಸಿ ತಟ್ಟಿದೆ ಎಂದ ನಟ ಸುನೀಲ್ ಶೆಟ್ಟಿ – STF ಅನ್ನು ʼಸ್ಪೆಷಲ್ ಟೊಮ್ಯಾಟೊ ಫೋರ್ಸ್ʼ ಎಂದ ಅಖಿಲೇಶ್ ಯಾದವ್
ದೇಶದಾದ್ಯಂತ ಟೊಮ್ಯಾಟೊ ದರ ಗಗನಕ್ಕೇರಿದೆ. ಅಡುಗೆ ಮನೆಯ ಕೆಂಪು ಸುಂದರಿಗೆ ಈಗ ಎಲ್ಲಿಲ್ಲದ ಬೇಡಿಕೆ. ದಿನ ಬೆಳಗಾದರೆ ಟೊಮ್ಯಾಟೊ ಬೆಲೆ ಎಷ್ಟು ಅಂತಾ ಕೇಳುವಂತಾಗಿದೆ. ಇದು ಮಧ್ಯಮ ಮತ್ತು ಕೆಳಮಧ್ಯಮ ವರ್ಗಕ್ಕೆ ಮಾತ್ರ ತಲೆಬಿಸಿ ತಂದಿಲ್ಲ, ಶ್ರೀಮಂತರು ಕೂಡ ಟೊಮ್ಯಾಟೊ ಬಗ್ಗೆ ಮಾತನಾಡುವಂತಾಗಿದೆ. ಇದೀಗ ಬಾಲಿವುಡ್ ನಟ ಸುನೀಲ್ ಶೆಟ್ಟಿ ಟೊಮ್ಯಾಟೊ ಬೆಲೆ ಬಗ್ಗೆ ಮಾತನಾಡಿದ್ದಾರೆ.
ಇದನ್ನೂ ಓದಿ: ಅಡುಗೆಗೆ ಟೊಮ್ಯಾಟೊ ಬಳಸಿದ ಗಂಡ – ಸಿಟ್ಟಿಗೆದ್ದು ತವರಿಗೆ ಹೋದಳು ಹೆಂಡತಿ!
ಖಾಸಗಿ ಸುದ್ದಿವಾಹಿನಿಯಲ್ಲಿ ನಡೆದ ಸಂದರ್ಶನದ ವೇಳೆ ಸುನೀಲ್ ಶೆಟ್ಟಿ ಟೊಮ್ಯಾಟೊ ಬೆಲೆ ಏರಿಕೆಯ ಬಗ್ಗೆ ಮಾತನಾಡಿದ್ದಾರೆ. ನನ್ನ ಮನೆಯಲ್ಲಿ ಯಾವಾಗಲೂ ನಾವು ತಾಜಾ ತರಕಾರಿಯನ್ನೇ ತಂದು ಬಳಸುತ್ತೇವೆ. ದಿನಕ್ಕೆ ಎರಡ್ಮೂರು ರೀತಿಯ ತರಕಾರಿಗಳನ್ನು ನನ್ನ ಪತ್ನಿ ಖರೀದಿಸುತ್ತಾರೆ. ಅದರಲ್ಲೂ ಇತ್ತೀಚೆಗೆ ಟೊಮ್ಯಾಟೊ ದರ ಗಗನಕ್ಕೇರಿದೆ. ಹಾಗಾಗಿ ನಾನು ಟೊಮ್ಯಾಟೊ ತಿನ್ನುವುದನ್ನು ಕಡಿಮೆ ಮಾಡಿದ್ದೇನೆ ಎಂದು ಅವರು ಹೇಳಿಕೊಂಡಿದ್ದಾರೆ.
ದೇಶಾದ್ಯಂತ ಟೊಮ್ಯಾಟೊ ಬೆಲೆ ಗಗನಕ್ಕೇರಿದ್ದು, ಇದೀಗ ಗನ್ ಮ್ಯಾನ್‍ಗಳನ್ನಿಟ್ಟುಕೊಂಡು ಮಾರಾಟ ಮಡುವ ಪರಿಸ್ಥಿತಿ ಬಂದಿದೆ. ಈ ಹಿನ್ನೆಲೆಯಲ್ಲಿ ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಅವರು ಎಸ್‍ಟಿಎಫ್ ಗೆ ಹೊಸ ನಾಮಕರಣವೊಂದನ್ನು ಮಾಡುವಂತೆ ಸಲಹೆ ನೀಡಿದ್ದಾರೆ. ಸ್ಪೆಷಲ್ ಟಾಸ್ಕ್ ಫೋರ್ಸ್ (STF) ಅನ್ನು ಸ್ಪೆಷನ್ ಟೊಮ್ಯಾಟೊ ಫೋರ್ಸ್ ಎಂದು ಕರೆಯುವಂತೆ ಸಲಹೆ ನೀಡಿದ್ದಾರೆ. ಈ ಮೂಲಕ ರಾಜ್ಯ ಪೊಲೀಸರನ್ನು ಅಖಿಲೇಶ್ ಕಿಚಾಯಿಸಿದ್ದಾರೆ.
ಇನ್ನು ಟೊಮ್ಯಾಟೊ ದರ ಏರಿಕೆಯಾಗುತ್ತಿದ್ದಂತೆಯೇ ಹಲವರು ಹಲವು ರೀತಿಯ ಪ್ರಯೋಗಗಳನ್ನು ಅಡುಗೆಯಲ್ಲಿ ಮಾಡುತ್ತಿದ್ದಾರೆ. ಅಲ್ಲದೇ, ತಮ್ಮ ಮನೆಯಲ್ಲೇ ಟೊಮ್ಯಾಟೊ ಬೆಳೆಯುವುದು ಹೇಗೆ ಎನ್ನುವುದನ್ನು ನಟಿ ರಾಖಿ ಸಾವಂತ್ ಹೇಳಿದ್ದರು. ಹದಿನೈದು ದಿನದ ಒಳಗೆ ಟೊಮ್ಯಾಟೊ ಬೆಳೆಯುವುದು ಹೇಗೆ ಎನ್ನುವುದನ್ನು ತೋರಿಸಿಕೊಟ್ಟಿದ್ದರು. ಆ ವಿಡಿಯೋವನ್ನು ಅವರು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು.