ಸಿವಿಲ್ ಇಂಜಿನಿಯರ್ ಕ್ರಿಕೆಟರ್ ಆಗಿದ್ದೇ ರೋಚಕ – ಐಪಿಎಲ್‌ನಲ್ಲಿ ‘ಆಕಾಶ್ ಮಧ್ವಾಲ್’ ಕಮಾಲ್

ಸಿವಿಲ್ ಇಂಜಿನಿಯರ್ ಕ್ರಿಕೆಟರ್ ಆಗಿದ್ದೇ ರೋಚಕ – ಐಪಿಎಲ್‌ನಲ್ಲಿ ‘ಆಕಾಶ್ ಮಧ್ವಾಲ್’ ಕಮಾಲ್

ಇಂಡಿಯನ್ ಪ್ರೀಮಿಯರ್ ಲೀಗ್​ನ್ನ ಇಂಡಿಯನ್ ಟ್ಯಾಲೆಂಟ್ ಹಂಟ್ ಲೀಗ್ ಅಂದರೂ ತಪ್ಪಾಗಲ್ಲ. ಪ್ರತಿ ಐಪಿಎಲ್​​ ಟೂರ್ನಿಯಲ್ಲೂ ಒಂದಷ್ಟು ಮಂದಿ ಯುವ ಆಟಗಾರರು ಸೂಪರ್​ ಸ್ಟಾರ್​ಗಳಾಗುತ್ತಾರೆ. ಅಷ್ಟೇ ಅಲ್ಲ, ಟೀಂ ಇಂಡಿಯಾದ ಕದ ತಟ್ಟೋಕೆ ಶುರು ಮಾಡುತ್ತಾರೆ. ಅದರಲ್ಲೂ ಮುಂಬೈ ಇಂಡಿಯನ್ಸ್​​ ತಂಡವಂತೂ ಯುವ ಕ್ರಿಕೆಟಿಗರ ಪಾಲಿಗೆ ಯುನಿವರ್ಸಿಟಿಯಂತಾಗಿದೆ. ಕ್ಯಾಪ್ಟನ್ ರೋಹಿತ್​​ ಗರಡಿಯಲ್ಲಿ ಪಳಗಿದ ಆಟಗಾರರು ಟೀಂ ಇಂಡಿಯಾದ ಕದ ತಟ್ಟೋಕೆ ಶುರು ಮಾಡಿದ್ದಾರೆ. ಈ ಬಾರಿಯ ಐಪಿಎಲ್​​ನಲ್ಲಿ ಮುಂಬೈ ಇಂಡಿಯನ್ಸ್​​ನಲ್ಲಿ ಭವಿಷ್ಯದ ಆಟಗಾರನೊಬ್ಬನ ಉದಯವಾಗಿದೆ. ಆತನೇ ಆಕಾಶ್ ಮಧ್ವಾಲ್.

ಇದನ್ನೂ ಓದಿ: ದಾಖಲೆಗಳ ಜೊತೆ ದಿಲ್ ಗೆದ್ದ ಗಿಲ್ – ಶತಕವೀರನಿಗೆ ಬಿಸಿಸಿಐ ಬಿಗ್‌ಬಾಸ್ ಶಹಬ್ಬಾಸ್ ಗಿರಿ

ಮುಂಬೈ ಇಂಡಿಯನ್ಸ್​ ತಂಡಕ್ಕೆ ಈ ಬಾರಿಯ ಟೂರ್ನಿ ಆರಂಭದಲ್ಲೇ ಆಘಾತವಾಗಿತ್ತು. ಟೀಂನ ಪ್ರಮುಖ ಬೌಲರ್​​ಗಳಾದ ಜಸ್ಪ್ರಿತ್ ಬುಮ್ರಾ ಮತ್ತು ಜೋಫ್ರಾ ಆರ್ಚರ್ ಇಬ್ಬರೂ ಗಾಯಗೊಂಡು ಹೊರಗುಳಿದಿದ್ದರು.  ಹೀಗಾಗಿ ಮುಂಬೈ ಇಂಡಿಯನ್ಸ್​​ ಓಪನಿಂಗ್ ಬೌಲಿಂಗ್ ಬಗ್ಗೆ ಸಾಕಷ್ಟು ಪ್ರಶ್ನೆಗಳು ಎದ್ದಿದ್ವು. ಆದರೆ, ಇಬ್ಬರೂ ದೈತ್ಯ ಬೌಲರ್​ಗಳ ಸ್ಥಾನವನ್ನು ಆಕಾಶ್ ಮಧ್ವಾಲ್ ತುಂಬಿಸಿದ್ದಾರೆ. ಕ್ವಾಲಿಫೈರ್​​ನ ಪಂದ್ಯದಲ್ಲಿ ಲಕ್ನೋ ಸೂಪರ್​ ಜೈಂಟ್ಸ್​​ ವಿರುದ್ಧ ಮುಂಬೈ ಗೆಲುವು ದಾಖಲಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದೇ ಆಕಾಶ್ ಮಧ್ವಾಲ್ 3.3 ಓವರ್​ಗಳಲ್ಲಿ ಕೇವಲ 5 ರನ್​​ ನೀಡಿ ಬರೋಬ್ಬರಿ 5 ವಿಕೆಟ್ ತೆಗೆದಿದ್ದರು.

ಕೇವಲ ಲಕ್ನೋ ಪಂದ್ಯದಲ್ಲಿ ಮಾತ್ರವಲ್ಲ ಅದಕ್ಕೂ ಮುನ್ನ ಪಂಜಾಬ್ ಮತ್ತು ಆರ್​ಸಿಬಿ ವಿರುದ್ಧದ ಮ್ಯಾಚ್​ಗಳಲ್ಲೂ ಅತ್ಯುತ್ತಮವಾಗಿ ಬೌಲಿಂಗ್ ಮಾಡುವಲ್ಲಿ ಆಕಾಶ್ ಯಶಸ್ವಿಯಾಗಿದ್ದರು. ಡೆತ್​​ ಓವರ್​​​ಗಳಲ್ಲಿ ಸ್ಮಾರ್ಟ್​​ ಬೌಲಿಂಗ್​​ ಮಾಡಿ ಎದುರಾಳಿ ಬ್ಯಾಟ್ಸ್​​ಮನ್​ಗಳು ಹೆಚ್ಚು ಸ್ಕೋರ್​ ಮಾಡದಂತೆ ಕಟ್ಟಿ ಹಾಕಿದ್ದರು. ಈ ಮೂಲಕ ಆಕಾಶ್ ಮಧ್ವಾಲ್ ಒಬ್ಬ ಡೆತ್​ ಓವರ್​​ ಸ್ಪೆಷಲಿಸ್ಟ್ ಅನ್ನೋದನ್ನ ಸಾಬೀತುಪಡಿಸಿದ್ದಾರೆ. ಕಳೆದ ಮೂರು ಪಂದ್ಯಗಳಲ್ಲೇ ಮಧ್ವಾಲ್ ಒಟ್ಟು ಏಳು ವಿಕೆಟ್​ ಪಡೆದು ಮುಂಬೈ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ.

ಆಕಾಶ್ ಮಧ್ವಾಲ್ ಸಿವಿಲ್ ಇಂಜಿನಿಯರ್ ಆಗಿದ್ದರು. ಉತ್ತರಾಖಂಡ್ ಮೂಲದ 29 ವರ್ಷದ ಮಧ್ವಾಲ್​​ಗೆ ಕ್ರಿಕೆಟ್ ಆನ್ನೋದು ಕೇವಲ ಹವ್ಯಾಸವಷ್ಟೇ ಆಗಿತ್ತು. ಆದ್ರೆ ಹವ್ಯಾಸವನ್ನೇ ಪ್ರೊಫೆಶನ್​​ ಆಗಿಸೋಕೆ ಮಧ್ವಾಲ್ ಇಂಜಿನಿಯರ್​ ವೃತ್ತಿಯನ್ನ ತ್ಯಜಿಸಿ, ಸಂಪೂರ್ಣವಾಗಿ ಕ್ರಿಕೆಟ್​​ನಲ್ಲಿ ತೊಡಗಿಸಿಕೊಂಡರು. ನಾಲ್ಕು ವರ್ಷಗಳ ಹಿಂದೆ ಅಕಾಶ್ ಮಧ್ವಾಲ್ ಹಾರ್ಡ್​ಬಾಲ್ ಕೂಡ ಟಚ್ ಮಾಡಿರಲಿಲ್ಲ. ಕೇವಲ ಟೆನ್ನಿಸ್ ಬಾಲ್​​​ನಲ್ಲೇ ಬೌಲಿಂಗ್​ ಮಾಡುತ್ತಿದ್ದರು. ಉತ್ತರಾಖಂಡ್​​ನಲ್ಲಿರುವ ಟೆನ್ನಿಸ್ ಬಾಲ್​ ಸರ್ಕ್ಯೂಟ್​​ನಲ್ಲಿ ಬೌಲಿಂಗ್ ಪ್ರಾಕ್ಟೀಸ್ ಮಾಡುತ್ತಿದ್ದರು. ಯಾರ್ಕರ್​​ ಎಸೆತಗಳಲ್ಲಿ ಮಧ್ವಾಲ್ ಅವಾಗ್ಲೇ ಪಳಗಿದ್ದರು. ಮಧ್ವಾಲ್​ ಪಾಲಿಗೆ ಯಾರ್ಕರ್​ಗಳೇ ಪ್ರಮುಖ ಅಸ್ತ್ರ.  ಈ ವೇಳೆ ಮಧ್ವಾಲ್ ಪ್ರತಿಭೆಯನ್ನ ಗುರುತಿಸಿದ್ದು, ಉತ್ತರಾಖಂಡ್ ಕ್ರಿಕೆಟ್ ತಂಡದ ಮಾಜಿ ಕೋಚ್ ವಾಸಿಂ ಜಾಫರ್ ಮತ್ತು ಈಗಿನ ಕೋಚ್ ಮನೀಶ್ ಝಾ. 2018ರಲ್ಲಿ ಆಕಾಶ್ ಮಧ್ವಾಲ್ ಮೊದಲ ಬಾರಿಗೆ ಉತ್ತರಾಖಂಡ್ ಸ್ಥಳೀಯ ತಂಡವನ್ನ ಸೇರಿಕೊಳ್ಳುತ್ತಾರೆ. ಉತ್ತರಾಖಂಡ್ ಪರವಾಗಿ 10 ಪ್ರಥಮ ದರ್ಜೆ ಪಂದ್ಯಗಳನ್ನಾಡಿರುವ ಮಧ್ವಾಲ್, ಒಟ್ಟು 12 ವಿಕೆಟ್​​ಗಳನ್ನ ಪಡೆದಿದ್ದಾರೆ. 2019ರಲ್ಲಿ ಆಕಾಶ್ ಮಧ್ವಾಲ್ ಆರ್​​ಸಿಬಿ ತಂಡಕ್ಕೆ ನೆಟ್ ಬೌಲರ್ ಆಗಿ ಸೇರ್ಪಡೆಯಾಗುತ್ತಾರೆ. ಇನ್ನು ನೆಟ್​​ನಲ್ಲಿ ಬೌಲಿಂಗ್ ಮಾಡುತ್ತಿದ್ದ ಸಂದರ್ಭದಲ್ಲಿ ಆರ್​​ಸಿಬಿ ಮ್ಯಾನೇಜ್ಮೆಂಟ್​ ತಂಡಕ್ಕೆ ಸೇರ್ಪಡೆಗೊಳಿಸುವ ಬಗ್ಗೆಯೂ ಭರವಸೆ ನೀಡಿತ್ತಂತೆ. ಆದರೆ, ಕೊರೊನಾದಿಂದಾಗಿ ಐಪಿಎಲ್​ ಟೂರ್ನಿ ಕೂಡ ನಡೆಯದೆ ಮಧ್ವಾಲ್​​ ತಮ್ಮ ಕ್ರಿಕೆಟ್ ಭವಷ್ಯವೇ ಕಮರಿತು ಅಂದುಕೊಂಡಿದ್ದರು. ಮತ್ತೆ ಇಂಜಿನಿಯರಿಂಗ್ ವೃತ್ತಿಗೆ ವಾಪಸ್ ಆಗೋ ಬಗ್ಗೆ, ಡೆಹ್ರಾಡೂನ್​ನ ಕನ್​ಸ್ಟ್ರಕ್ಷನ್ ಕಂಪನಿಯೊಂದಕ್ಕೆ ಸೇರ್ಪಡೆಯಾಗಲು ಮುಂದಾಗಿದ್ದರಂತೆ. ಐಪಿಎಲ್​​​ನಲ್ಲಿ ಆಡೋಕೆ ಅವಕಾಶ ಸಿಗದಿದ್ರೂ ನೆಟ್ಸ್​​ನಲ್ಲಿ ಎಬಿಡಿ ವಿಲಿಯರ್ಸ್​ ಮತ್ತು ವಿರಾಟ್ ಕೊಹ್ಲಿಗೆ ಬೌಲಿಂಗ್​​ ಮಾಡಿದ್ದೀನಲ್ಲಾ ಅನ್ನೋದಕ್ಕೆ ತೃಪ್ತಿ ಪಟ್ಟುಕೊಂಡಿದ್ದರು. ಆದರೆ, ಪಟ್ಟ ಶ್ರಮಕ್ಕೆ ಪ್ರತಿಫಲ ಸಿಗಲೇಬೇಕಲ್ವಾ? 2021ರಲ್ಲಿ ಆಕಾಶ್ ಮಧ್ವಾಲ್​ರನ್ನ ಮುಂಬೈ ಇಂಡಿಯನ್ಸ್​ ತಂಡ ನೆಟ್​​ ಬೌಲರ್​​ ಆಗಿ ಕರೆಸಿಕೊಳ್ಳುತ್ತೆ. ಐಪಿಎಲ್​ ತಂಡಗಳಲ್ಲಿ ನೆಟ್​ ಬೌಲರ್ ಆಗಿ ಗುರುತಿಸಿಕೊಂಡ ಮಧ್ವಾಲ್ ಬಳಿಕ ಉತ್ತರಾಖಂಡ್ ಕ್ರಿಕೆಟ್ ತಂಡದ ಕ್ಯಾಪ್ಟನ್ ಆಗಿಯೂ ಆಯ್ಕೆಯಾಗ್ತಾರೆ.

ಆದ್ರೆ ಈ ವರ್ಷದ ಐಪಿಎಲ್​ ಟೂರ್ನಿಯಲ್ಲಿ ಅಕಾಶ್ ಮಧ್ವಾಲ್​ಗೆ ಅದೃಷ್ಟ ಖುಲಾಯಿಸಿಬಿಡ್ತು. ನೆಟ್​​ ಬೌಲರ್ ಆಗಿದ್ದ ಮಧ್ವಾಲ್​​, ಬಿಡ್ಡಿಂಗ್​ನಲ್ಲಿ ಸುಮಾರು 20 ಲಕ್ಷ ರೂಪಾಯಿಗೆ ಮುಂಬೈ ತಂಡಕ್ಕೆ ಸೇರ್ಪಡೆಗೊಂಡರು. ಪಂಜಾಬ್​ ವಿರುದ್ಧದ ಪಂದ್ಯದಲ್ಲಿ, ಬುಮ್ರಾ, ಜೋಫ್ರಾ ಅನುಪಸ್ಥಿತಿಯಲ್ಲಿ ಆಕಾಶ್ ಮಧ್ವಾಲ್ ಓಪನಿಂಗ್ ಬೌಲಿಂಗ್ ಮಾಡಿದ್ರು. ಬಳಿಕ ಗುಜರಾತ್ ಟೈಟಾನ್ಸ್ ವಿರುದ್ಧದ ಪಂದ್ಯದಲ್ಲಿ ಮೂರು ವಿಕೆಟ್ ಕಿತ್ತಿದ್ರು. ಬಳಿಕ ಲಕ್ನೋ ವಿರುದ್ಧ ಕೇವಲ ಐದು ರನ್​ಗಳನ್ನ ಕೊಟ್ಟು ಐದು ವಿಕೆಟ್ ಪಡೆದು ಮಿಂಚಿದ್ದಾರೆ.

ಆಕಾಶ್ ಮಧ್ವಾಲ್ ಒಬ್ಬ ಬೌಲರ್ ಅದ್ರೂ ಅವರಿಗೆ ರೋಲ್ ಮಾಡೆಲ್ ಆಗಿರೋದು ಮಾತ್ರ ರಿಷಬ್ ಪಂತ್. ಉತ್ತರಾಖಂಡ್​​ನಲ್ಲಿ ರಿಷಬ್ ಪಂತ್ ಮನೆ ಬಳಿಯೇ ಮಧ್ವಾಲ್ ನಿವಾಸವಿದೆ. ಇಬ್ಬರೂ ನೆರೆಹೊರೆಯವರಾಗಿದ್ದು, ಪಂತ್ ಟ್ರೇನಿಂಗ್ ಪಡೆಯುತ್ತಿದ್ದುದನ್ನ ನೋಡಿಯೇ ಮಧ್ವಾಲ್ ಪ್ರೇರೇಪಿತರಾಗಿದ್ದರು. ತಾನೂ ಒಬ್ಬ ಕ್ರಿಕೆಟರ್ ಆಗಬೇಕು ಎಂದುಕೊಂಡಿದ್ದರು. ಇನ್ನು ಮುಂಬೈ ಇಂಡಿಯನ್ಸ್ ತಂಡ ಮಧ್ವಾಲ್ ಟ್ಯಾಲೆಂಟನ್ನ ಗುರುತಿಸಿ ಹೆಚ್ಚಿನ ಟ್ರೈನಪ್ ಕೂಡ ಮಾಡಿದೆ.

suddiyaana