ಭಾರತದ ಗೆಲುವಿನ ಹೀರೋ ಆಕಾಶ್ ದೀಪ್ – ತನ್ನ ಗೆಲುವನ್ನ ಕ್ಯಾನ್ಸರ್ ಪೀಡಿತ ತಂಗಿಗೆ ಅರ್ಪಿಸಿದ ಅಣ್ಣ

ಭಾರತದ ಗೆಲುವಿನ ಹೀರೋ ಆಕಾಶ್ ದೀಪ್ – ತನ್ನ ಗೆಲುವನ್ನ ಕ್ಯಾನ್ಸರ್ ಪೀಡಿತ ತಂಗಿಗೆ ಅರ್ಪಿಸಿದ ಅಣ್ಣ

ಇಂಗ್ಲೆಂಡ್ ವಿರುದ್ಧ ಟೀಮ್ ಇಂಡಿಯಾ ಭರ್ಜರಿ  ಗೆಲುವು ಕಂಡಿದೆ. ಬರೋಬ್ಬರಿ 58 ವರ್ಷಗಳ ಬಳಿಕ ಭಾರತ ತಂಡವು ಎಡ್ಜ್​ಬಾಸ್ಟನ್ ಸ್ಟೇಡಿಯಂನಲ್ಲಿ ಇಂಗ್ಲೆಂಡ್ ತಂಡಕ್ಕೆ ಸೋಲುಣಿಸಿದೆ. ಟೀಮ್ ಇಂಡಿಯಾದ ಈ ಗೆಲುವಿನ ರೂವಾರಿಗಳಲ್ಲಿ ಒಬ್ಬರು ಆಕಾಶ್ ದೀಪ್ . ಎರಡು ಇನ್ನಿಂಗ್ಸ್‌ಗಳಲ್ಲಿ ಒಟ್ಟು 10 ವಿಕೆಟ್ ಕಬಳಿಸಿದ ಆಕಾಶ್ ದೀಪ್ ತನ್ನ ಯಶಸ್ವಿ ಪ್ರದರ್ಶನವನ್ನು ಕ್ಯಾನ್ಸರ್ ಪೀಡಿತ ತಂಗಿಗೆ ಅರ್ಪಿಸಿದ್ದಾರೆ.

ಇದನ್ನೂ ಓದಿ:ಇಂಗ್ಲೆಂಡ್ ವಿರುದ್ಧ ಭಾರತಕ್ಕೆ ರೋಚಕ ಗೆಲುವು – 58 ವರ್ಷಗಳ ಇತಿಹಾಸ ಅಳಿಸಿ ಹಾಕಿದ ಗಿಲ್ ಪಡೆ

ಮೊದಲ ಇನಿಂಗ್ಸ್​ನಲ್ಲಿ 4 ವಿಕೆಟ್ ಕಬಳಿಸಿ ಮಿಂಚಿದ್ದ ಆಕಾಶ್ ದೀಪ್ ದ್ವಿತೀಯ ಇನಿಂಗ್ಸ್​ನಲ್ಲಿ 6 ವಿಕೆಟ್ ಉರುಳಿಸಿದರು. ಈ ಮೂಲಕ ಒಟ್ಟು 10 ವಿಕೆಟ್ ಪಡೆದು ಭಾರತ ತಂಡಕ್ಕೆ 336 ರನ್​ಗಳ ಐತಿಹಾಸಿಕ ಗೆಲುವು ತಂದುಕೊಡುವಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ. ವಿಶೇಷ ಎಂದರೆ ಇದು ಅಕಾಶ್ ದೀಪ್ ಅವರ ವೃತ್ತಿಜೀವನದ ಅತ್ಯುತ್ತಮ ಪ್ರದರ್ಶನವಾಗಿದೆ. ಈ ಭರ್ಜರಿ ಪ್ರದರ್ಶನವನ್ನು ಆಕಾಶ್ ದೀಪ್  ಕಳೆದ ಎರಡು ತಿಂಗಳಿನಿಂದ ಕ್ಯಾನ್ಸರ್ ವಿರುದ್ಧ ಹೋರಾಡುತ್ತಿರುವ ತನ್ನ ಸಹೋದರಿಗೆ ಅರ್ಪಿಸಿದ್ದಾರೆ.

ಪಂದ್ಯದ ಬಳಿಕ ಚೇತೇಶ್ವರ ಪೂಜಾರ ಅವರೊಂದಿಗೆ ಮಾತನಾಡಿದ ಆಕಾಶ್ ದೀಪ್, ‘ನಾನು ಇದರ ಬಗ್ಗೆ ಯಾರೊಂದಿಗೂ ಮಾತನಾಡಿಲ್ಲ, ಆದರೆ ಎರಡು ತಿಂಗಳ ಹಿಂದೆ ನನ್ನ ಸಹೋದರಿಗೆ ಕ್ಯಾನ್ಸರ್ ಇರುವುದು ಪತ್ತೆಯಾಯಿತು. ಅವರು ನನ್ನ ಪ್ರದರ್ಶನದಿಂದ ತುಂಬಾ ಸಂತೋಷಪಡುತ್ತಾರೆ. ಇದು ಅವರ ಮುಖದಲ್ಲಿ ಮತ್ತೆ ನಗು ತರಿಸುತ್ತದೆ’ ಎಂದು ಹೇಳಿದರು. ನಾನು ಚೆಂಡನ್ನು ಕೈಗೆತ್ತಿಕೊಂಡಾಗಲೆಲ್ಲಾ ಅವಳ ಆಲೋಚನೆಗಳು ಮತ್ತು ಚಿತ್ರಗಳು ನನ್ನ ಮನಸ್ಸಿನಲ್ಲಿ ಹಾದು ಹೋಗುತ್ತಿದ್ದವು. ಈ ಪ್ರದರ್ಶನ ಅವಳಿಗೆ ಸಮರ್ಪಿತವಾಗಿದೆ. ಸಹೋದರಿ, ನಾವೆಲ್ಲರೂ ನಿಮ್ಮೊಂದಿಗಿದ್ದೇವೆ ಎಂದು ನಾನು ಅವಳಿಗೆ ಹೇಳಲು ಬಯಸುತ್ತೇನೆ, ಎಂದು ಆಕಾಶ್ ದೀಪ್ ಇದೇ ವೇಳೆ ತಿಳಿಸಿದರು. ನನ್ನ ಪ್ರದರ್ಶನದ ಬಗ್ಗೆ ತುಂಬಾ ಖುಷಿಯಿದೆ. ಇದೇ ಪ್ರದರ್ಶನವನ್ನು ಲಾರ್ಡ್ಸ್ ಮೈದಾನದಲ್ಲೂ ಮುಂದುವರೆಸುವ ವಿಶ್ವಾಸವಿದೆ. ಏಕೆಂದರೆ ಆ ಪಿಚ್​ ಇಲ್ಲಿಗಿಂತ  ಹೆಚ್ಚು ಭಿನ್ನವಾಗಿರುವುದಿಲ್ಲ ಎಂಬುದು ನನ್ನ ಭಾವನೆ. ಹೀಗಾಗಿ ಮೂರನೇ ಟೆಸ್ಟ್ ಪಂದ್ಯದಲ್ಲೂ ಉತ್ತಮ ಪ್ರದರ್ಶನ ನೀಡುವ ವಿಶ್ವಾಸವಿದೆ ಎಂದು ಇದೇ ವೇಳೆ ಆಕಾಶ್ ದೀಪ್ ಹೇಳಿದ್ದಾರೆ.

Sulekha