ಸಿನಿಮಾ ಶೂಟಿಂಗ್‌ ವೇಳೆ ನಟ ಅಜಿತ್ ಕುಮಾರ್ ಕಾರು ಅಪಘಾತ – ಭಯಾನಕ ದೃಶ್ಯ ವೈರಲ್‌

ಸಿನಿಮಾ ಶೂಟಿಂಗ್‌ ವೇಳೆ ನಟ ಅಜಿತ್ ಕುಮಾರ್ ಕಾರು ಅಪಘಾತ – ಭಯಾನಕ ದೃಶ್ಯ ವೈರಲ್‌

ತಮಿಳು ಸೂಪರ್‌ಸ್ಟಾರ್ ಅಜಿತ್ ಕುಮಾರ್ ಯಾವಾಗಲೂ ಸಾಹಸಮಯ ದೃಶ್ಯಗಳಿಂದಾಗಿಯೇ ಖ್ಯಾತಿ ಪಡೆದಿದ್ದಾರೆ. ಅಜಿತ್ ಕುಮಾರ್ ಅವರು ಡ್ಯೂಪ್​ ಬಳಸದೆ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ಚೇಸಿಂಗ್​ ಮತ್ತು ಸಾಹಸ ದೃಶ್ಯಗಳಲ್ಲಿ ತಮ್ಮದೇ ಆದ ಸಾಹಸಗಳನ್ನು ಪ್ರದರ್ಶಿಸುವಲ್ಲಿ ಅವರು ಪ್ರಸಿದ್ಧರಾಗಿದ್ದಾರೆ. ಅವರು ಮುಂದಿನ ಆಕ್ಷನ್-ಥ್ರಿಲ್ಲರ್ ಚಿತ್ರ ‘ವಿದಾಮುಯಾರ್ಚಿ’ ಚಿತ್ರದಿಂದಾಗಿ ಅಜಿತ್‌ ಕುಮಾರ್‌ ಭಾರಿ ಸುದ್ದಿಯಲ್ಲಿದ್ದಾರೆ. ಸಿನಿಮಾ ಶೂಟಿಂಗ್‌ ವೇಳೆ ಕಾರು ಅಪಘಾತವಾಗಿತ್ತು. ಇದೀಗ ಆ ಅಪಘಾತದ ವಿಡಿಯೋ ವೈರಲ್‌ ಆಗಿದೆ.

ನಟ ಅಜಿತ್‌ ಕುಮಾರ್‌ ಅವರು ಸದಾ ಸಾಹಸ ದೃಶ್ಯಗಳಲ್ಲಿ ನಟಿಸುತ್ತಾರೆ. ನಟನೆ ವೇಳೆ ಸಾಕಷ್ಟು ಬಾರಿ ಗಾಯಗೊಂಡಿದ್ದಾರೆ. ಹಾಗಂತ ಅದರಿಂದ ಅವರ ಉತ್ಸಾಹ ಕಡಿಮೆ ಆಗಿಲ್ಲ. ಕಳೆದ ವರ್ಷ ಅವರು ‘ವಿದಾಮುಯಾರ್ಚಿ’ ಸಿನಿಮಾದ ಚಿತ್ರೀಕರಣದ ವೇಳೆ ಕಾರು ಅಪಘಾತ ಮಾಡಿಕೊಂಡಿದ್ದು ಸುದ್ದಿ ಆಗಿತ್ತು. ಈಗ ಆ ಅಪಘಾತದ ವಿಡಿಯೋ ಲಭ್ಯವಾಗಿದೆ.

ಇದನ್ನೂ ಓದಿ: ಡಿಸಿ ಕ್ಯಾಪ್ಟನ್ ರಿಷಭ್ ಪಂತ್‌ಗೆ ನಿಷೇಧದ ಭೀತಿ- ಪದೇ ಪದೇ ಇದೇ ತಪ್ಪು ಮಾಡೋದ್ಯಾಕೆ ಪಂತ್?

ಅಜಿತ್‌ ಕುಮಾರ್‌ ಅವರ ಮ್ಯಾನೇಜರ್‌ ಈ ವಿಡಿಯೋವನ್ನು ಬಹಿರಂಗಪಡಿಸಿದ್ದಾರೆ. ಚಿತ್ರೀಕರಣದ ಸಂದರ್ಭದಲ್ಲಿ ಹೇಗೆ ಅಪಘಾತಕ್ಕೀಡಾದರು ಎಂಬುದನ್ನು ವಿವರಿಸುವಂತಹ ವಿಡಿಯೋ ಇದಾಗಿದೆ. ಈ ವಿಡಿಯೋ ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗುತ್ತಿದ್ದಂತೆ ಅಭಿಮಾನಿಗಳು ಈ ವಿಡಿಯೋ ನೋಡಿ ಶಾಕ್‌ ಆಗಿದ್ದಾರೆ. ಅಲ್ಲದೇ ಅಜಿತ್​ ಕುಮಾರ್​ ಅವರ ಉತ್ಸಾಹ ಮತ್ತು ಸಾಹಸ ಗುಣವನ್ನು ಕಂಡು ಫ್ಯಾನ್ಸ್​ ವಾವ್​ ಎನ್ನುತ್ತಿದ್ದಾರೆ.

ನಟರಾದ ಅಜಿತ್ ಕುಮಾರ್ ಮತ್ತು ಆರವ್ ಅವರು ಕಾರ್ ಚೇಸ್ ಸೀಕ್ವೆನ್ಸ್‌ಗಾಗಿ ಚಿತ್ರೀಕರಣ ಮಾಡುತ್ತಿದ್ದರು. ಆ ಸಂದರ್ಭದ ವಿಡಿಯೋ ಇಲ್ಲಿದೆ. ಅಜಿತ್​ ಕುಮಾರ್​ ಅವರು ಓಡಿಸುತ್ತಿದ್ದ ಕಾರು ಸ್ಕಿಡ್​ ಆಯಿತು. ಭಾರಿ ದುರಂತ ಆಗುವುದನ್ನು ಅಜಿತ್​ ಅವರು ಸಾಧ್ಯವಾದಷ್ಟು ತಪ್ಪಿಸಿದರು. ಈ ಅಪಘಾತದಿಂದ ಇಬ್ಬರು ನಟರು ಸ್ವಲ್ಪದರಲ್ಲೇ ಪಾರಾಗಿದ್ದಾರೆ. ಸೋಶಿಯಲ್​ ಮೀಡಿಯಾದಲ್ಲಿ ಈ ವಿಡಿಯೋ ಸಿಕ್ಕಾಪಟ್ಟೆ ವೈರಲ್​ ಆಗುತ್ತಿದೆ.

ವಿದಾಮುಯಾರ್ಚಿ’ ಸಿನಿಮಾದ ತಾರಾಗಣದಲ್ಲಿ ಅಜಿತ್​ ಕುಮಾರ್​ ಜೊತೆ ತ್ರಿಷಾ, ಅರ್ಜುನ್, ಆರವ್, ರೆಜಿನಾ ಕಸ್ಸಂದ್ರ ಮತ್ತು ಅನೇಕರು ನಟಿಸುತ್ತಿದ್ದಾರೆ. ಅನಿರುದ್ಧ್ ರವಿಚಂದರ್​ ಅವರು ಸಂಗೀತ ನಿರ್ದೇಶನ ಮಾಡುತ್ತಿದ್ದಾರೆ. ಇದು ಆ್ಯಕ್ಷನ್-ಥ್ರಿಲ್ಲರ್ ಸಿನಿಮಾ ಆಗಿದ್ದು, ಅಭಿಮಾನಿಗಳಲ್ಲಿ ನಿರೀಕ್ಷೆ ಮೂಡಿಸಿದೆ. ಈ ಚಿತ್ರದ ಚಿತ್ರೀಕರಣವನ್ನು 2023ರ ಅಕ್ಟೋಬರ್​ನಿಂದ ಅಜೆರ್ಬೈಜಾನ್‌ನಲ್ಲಿ ನಡೆಸುತ್ತಿದ್ದಾರೆ. ಈ ಪ್ರಾಜೆಕ್ಟ್​ನ ಅಪ್​ಡೇಟ್​ ತಿಳಿಯಲು ಫ್ಯಾನ್ಸ್​ ಕಾದಿದ್ದರು. ಈ ಸಮಯಕ್ಕೆ ಸರಿಯಾಗಿ ಅಜಿತ್​ ಕುಮಾರ್​ ಅವರ ಕಾರು ಅಪಘಾತದ ವಿಡಿಯೋ ವೈರಲ್​ ಆಗಿದೆ.

Shwetha M