ಕುಬೇರ ತಹಶೀಲ್ದಾರ್ ಅಜಿತ್ ರೈಗೆ ಮತ್ತೆ ಸಂಕಷ್ಟ – 7 ದಿನ ಲೋಕಾಯುಕ್ತ ಕಸ್ಟಡಿಗೆ..!
ಲೋಕಾಯುಕ್ತ ದಾಳಿ ವೇಳೆ ಅಕ್ರಮ ಆಸ್ತಿ, ಸಂಪತ್ತು ಪತ್ತೆಯಾದ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ತಹಶೀಲ್ದಾರ್ ಅಜಿತ್ ರೈ ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಕೋರ್ಟ್ ಅವರನ್ನು ಹೆಚ್ಚಿನ ತನಿಖೆಗಾಗಿ ಏಳು ದಿನಗಳ ಕಾಲ ಲೋಕಾಯುಕ್ತ ಕಸ್ಟಡಿಗೆ ಒಪ್ಪಿಸಿ ಆದೇಶ ನೀಡಿದೆ. ಲೋಕಾಯುಕ್ತ ವಿಶೇಷ ನ್ಯಾಯಾಲಯದ ನ್ಯಾ. ವಿ.ಶ್ರೀಕಾಂತ್ ಅವರು ಈ ಆದೇಶ ಹೊರಡಿಸಿದ್ದಾರೆ. ಜುಲೈ 6 ಕ್ಕೆ ನ್ಯಾಯಾಲಯದ ಮುಂದೆ ಹಾಜರುಪಡಿಸಲು ಸೂಚನೆ ನೀಡಿದ್ದಾರೆ.
ಇದನ್ನೂ ಓದಿ: ಹಣ, ಚಿನ್ನ, 9 ಕಾರು.. 130 ಎಕರೆ ಆಸ್ತಿ – ಕೆ.ಆರ್ ಪುರಂ ತಹಶೀಲ್ದಾರ್ ಅಜಿತ್ ರೈ ಬಂಧಿಸಿದ ಲೋಕಾಯುಕ್ತ ಪೊಲೀಸರು
24 ಗಂಟೆಗಳಿಗೂ ಹೆಚ್ಚು ಕಾಲ ನಡೆದ ದಾಳಿ ಹಾಗೂ ಶೋಧ ಕಾರ್ಯದ ವೇಳೆ ಸಿಕ್ಕಿದ್ದು ಕೋಟಿ ಕೋಟಿ ರೂಪಾಯಿಯ ಬೇನಾಮಿ ಆಸ್ತಿ. ತಹಶೀಲ್ದಾರ್ ಅವರ ನಿವಾಸ ಮತ್ತು ಇತರ ಕಡೆಗಳಲ್ಲಿ ಕೋಟ್ಯಂತರ ಮೌಲ್ಯದ ಅಕ್ರಮ ಆಸ್ತಿ ಪತ್ತೆಯಾದ ಹಿನ್ನೆಲೆಯಲ್ಲಿ ಲೋಕಾಯುಕ್ತರು ಗುರುವಾರ ಅವರನ್ನು ಬಂಧಿಸಿದ್ದರು. ಲೋಕಾಯುಕ್ತ ಪೊಲೀಸರು 10 ದಿನಗಳ ಕಸ್ಟಡಿಗೆ ಕೇಳಿದ್ದರು. ಆದರೆ ನ್ಯಾಯಾಲಯ 7 ದಿನ ಪೊಲೀಸ್ ಕಸ್ಟಡಿಗೆ ಅವಕಾಶ ನೀಡಿದೆ. ಅಜಿತ್ ರೈ ಪುತ್ತೂರಿನಲ್ಲೂ ಆಸ್ತಿ ಮಾಡಿದ್ದು, ಸ್ವತಃ ಊರಿಗೆ ಕರೆದುಕೊಂಡು ಹೋಗಿ ತನಿಖೆ ನಡೆಸಲು ಪೊಲೀಸರಿಗೆ ನ್ಯಾಯಾಲಯ ಅವಕಾಶ ನೀಡಿದೆ.
ಭ್ರಷ್ಟಾಚಾರ ಆರೋಪದಡಿ ಖಚಿತ ಮಾಹಿತಿ ಮೇರೆಗೆ ತಹಶೀಲ್ದಾರ್ ಅಜಿತ್ ರೈ ಮನೆ ಮೇಲೆ ಬುಧವಾರ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದ್ದರು. ಸಹಕಾರನಗರದ ನಿವಾಸ ಸೇರಿ 12 ಕಡೆ ದಾಳಿ ಮಾಡಿ ಪರಿಶೀಲನೆ ಮಾಡಿದ್ದರು. ಪರಿಶೀಲನೆ ವೇಳೆ 40 ಲಕ್ಷ ರೂ. ನಗದು, ಕೋಟ್ಯಂತರ ಮೌಲ್ಯದ ಭೂ ದಾಖಲಾತಿ ಪತ್ರಗಳು, ದುಬಾರಿ ಬೆಲೆಯ ಕಾರು ಖರೀದಿಸಿದ ರಶೀದಿಗಳು, ದೇಶ-ವಿದೇಶಿ ಬ್ರ್ಯಾಂಡ್‌ನ ಮದ್ಯ ಪತ್ತೆಯಾಗಿತ್ತು. ಸತತ 30 ಗಂಟೆಗಳ ಪರಿಶೀಲನೆ ವೇಳೆ ಅಕ್ರಮ ಆಸ್ತಿ ಗಳಿಕೆ ಮಾಡಿರುವುದು ಕಂಡುಬಂದಿತ್ತು.