ಟೀಂ ಇಂಡಿಯಾ ಆಯ್ಕೆ ಸಮಿತಿ ಅಧ್ಯಕ್ಷರಾಗಿ ಅಜಿತ್ ಅಗರ್ಕರ್ – ಜುಲೈ 5ರಿಂದಲೇ ಅಧಿಕಾರ
ಭಾರತದ ಮಾಜಿ ಕ್ರಿಕೆಟಿಗ, ಆಲ್ರೌಂಡರ್ ಆಗಿದ್ದ ಅಜಿತ್ ಅಗರ್ಕರ್ ಅವರಿಗೆ ದೊಡ್ಡ ಜವಾಬ್ದಾರಿ ಹೆಗಲೇರಿದೆ. ಟೀಂ ಇಂಡಿಯಾ ಆಯ್ಕೆ ಸಮಿತಿ ಅಧ್ಯಕ್ಷರಾಗಿ ಅಜಿತ್ ಅಗರ್ಕರ್ ಅಧಿಕಾರವಹಿಸಿಕೊಳ್ಳಲಿದ್ದಾರೆ. ಜುಲೈ 5 ರಿಂದ ಅವರ ಅಧಿಕಾರಾವಧಿ ಆರಂಭವಾಗಲಿದೆ.
ಇದನ್ನೂ ಓದಿ: ಫುಟ್ಬಾಲ್ ತಾರೆ ನೇಮರ್ಗೆ ಕಾನೂನು ಸಂಕಷ್ಟ – ಬರೋಬ್ಬರಿ 27 ಕೋಟಿ ರೂ. ದಂಡ
ಭಾರತದ ಮಾಜಿ ಕ್ರಿಕೆಟಿಗ ಅಜಿತ್ ಅಗರ್ಕರ್ ಟೀಂ ಇಂಡಿಯಾ ಆಯ್ಕೆ ಮಂಡಳಿಯ ಮುಖ್ಯ ಆಯ್ಕೆಗಾರರಾಗಿ ಅಧಿಕಾರವಹಿಸಿಕೊಳ್ಳಲಿದ್ದಾರೆ ಎಂದು ಬಿಸಿಸಿಐ ತನ್ನ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಅಧಿಕೃತ ಹೇಳಿಕೆ ನೀಡಿದೆ. ಇದೀಗ ಅಜಿತ್ ಅಗರ್ಕರ್ ಏಷ್ಯಾಕಪ್ ಮತ್ತು ವಿಶ್ವಕಪ್ಗೆ ಭಾರತ ತಂಡವನ್ನು ಆಯ್ಕೆ ಮಾಡಲಿದ್ದಾರೆ. ಸುಲಕ್ಷಣಾ ನಾಯಕ್, ಅಶೋಕ್ ಮಲ್ಹೋತ್ರಾ ಮತ್ತು ಜತಿನ್ ಪರಣಿಪೆ ಅವರನ್ನೊಳಗೊಂಡ 3 ಸದಸ್ಯರ ಸಿಎಸಿ ಸಮಿತಿಯು ಸಂದರ್ಶನವನ್ನು ನಡೆಸಿದ ನಂತರ ಅಜಿತ್ ಅಗರ್ಕರ್ ಅವರ ಹೆಸರನ್ನು ಈ ಹುದ್ದೆಗೆ ಶಿಫಾರಸು ಮಾಡಿತ್ತು. ಕಳೆದ ಹಲವು ದಿನಗಳಿಂದ ಕೂಡ ಅಜಿತ್ ಅಗರ್ಕರ್ ಅವರ ಹೆಸರೇ ಈ ಹುದ್ದೆಗೆ ಅಂತಿಮವೆಂಬ ಮಾತು ಕೇಳಿಬರುತ್ತಿತ್ತು. ವಾಸ್ತವವಾಗಿ, ಕಳೆದ ಫೆಬ್ರವರಿಯಲ್ಲಿ ಖಾಸಗಿ ವಾಹಿನಿಯೊಂದು ನಡೆಸಿದ ಕುಟುಕು ಕಾರ್ಯಾಚರಣೆಯಲ್ಲಿ ಚೇತನ್ ಶರ್ಮಾ ಬಿಸಿಸಿಐ ವಿರುದ್ಧ ಕೆಲವು ವಿವಾದಾತ್ಮಕ ಹೇಳಿಕೆ ನೀಡಿದ್ದರು. ಹೀಗಾಗಿ ಅವರನ್ನು ಆ ಸ್ಥಾನದಿಂದ ಕೆಳಗಿಳಿಸಲಾಗಿತ್ತು. ಇದೀಗ ಅವರ ಬದಲಿಗೆ ಅಗರ್ಕರ್ ಈ ಜವಾಬ್ದಾರಿ ವಹಿಸಿಕೊಳ್ಳಲಿದ್ದಾರೆ.
ಇನ್ನು ಅಜಿತ್ ಅಗರ್ಕರ್ ವೃತ್ತಿ ಜೀವನದ ಬಗ್ಗೆ ಹೇಳಬೇಕೆಂದರೆ, ಭಾರತದ ಈ ಮಾಜಿ ಆಲ್ರೌಂಡರ್ ಟೀಂ ಇಂಡಿಯಾ ಪರ 26 ಟೆಸ್ಟ್, 191 ಏಕದಿನ ಮತ್ತು 4 ಟಿ20 ಪಂದ್ಯಗಳನ್ನು ಆಡಿದ್ದಾರೆ. ಅಲ್ಲದೆ ಅಗರ್ಕರ್ 2007ರಲ್ಲಿ ಟಿ20 ವಿಶ್ವಕಪ್ ಗೆದ್ದ ಭಾರತ ತಂಡದ ಸದಸ್ಯರೂ ಆಗಿದ್ದರು. ಹಾಗೆಯೇ ವೃತ್ತಿ ಬದುಕಿನಲ್ಲಿ ಹಲವಾರು ದಾಖಲೆ ಬರೆದಿದ್ದಾರೆ.