ಕೇಶಕ್ಕೆ ಬಣ್ಣ ಬಳಿಬೇಡಿ, ತಲೆ ಬೋಳಿಸ್ಕೊಳಿ – ಏರ್ ಇಂಡಿಯಾ ಹೊಸ ರೂಲ್ಸ್

ಕೇಶಕ್ಕೆ ಬಣ್ಣ ಬಳಿಬೇಡಿ, ತಲೆ ಬೋಳಿಸ್ಕೊಳಿ – ಏರ್ ಇಂಡಿಯಾ ಹೊಸ ರೂಲ್ಸ್

ನವದೆಹಲಿ: ಟಾಟಾ ಸನ್ಸ್ ನಿರ್ವಹಣೆಯ ಏರ್ ಇಂಡಿಯಾ ವಿಮಾನಯಾನ ಸಂಸ್ಥೆ ತನ್ನ ಕ್ಯಾಬಿನ್ ಸಿಬ್ಬಂದಿಯು ಅಂದವಾಗಿ ಕಾಣಲು  ಹೊಸ ನಿಯಮಗಳನ್ನು ಜಾರಿಗೊಳಿಸಿದೆ. ಈ ನಿಯಮ ಸಿಬ್ಬಂದಿಗೆ ತಲೆತಿರುಗುವಂತೆ ಮಾಡಿದೆ.

ಈ ಮಾರ್ಗಸೂಚಿಯ ಪ್ರಕಾರ, ವಿಮಾನ ಸಿಬ್ಬಂದಿ ಕೂದಲಿಗೆ ಬೂದು ಬಣ್ಣ ಹಾಕಬಾರದು. ಹೆನ್ನಾ ಹಾಗೂ ಇತರ ಫ್ಯಾಷನ್ ಕಲರ್ ಗಳಿಗೆ ಅವಕಾಶ ಇಲ್ಲ. ಪ್ರಾಕೃತಿಕ ಬಣ್ಣ ಮಾತ್ರ ಬಳಿಯಬೇಕು ಎಂದು ಹೊಸ ನಿಯಮ ವಿಧಿಸಿದೆ.

ಪರಿಷ್ಕರಿಸಿದ ಮಾರ್ಗಸೂಚಿ ಪ್ರಕಾರ ತಲೆ ಕೂದಲು ಕಡಿಮೆಯಾಗಿದ್ದರೆ ಅಥವಾ ಬಾಲ್ಡ್ ಪ್ಯಾಚ್ ಗಳಿದ್ದರೆ ಅಂಥ ಸಿಬ್ಬಂದಿಯು ಪೂರ್ತಿ ತಲೆ ಬೋಳಿಸಬೇಕು. ಆಕರ್ಷಕವಾಗಿ ಕಾಣಲು ಕೂದಲು ಕಡಿಮೆಯುಳ್ಳವರು ತಲೆಯನ್ನು ಪ್ರತಿದಿನ ಬೋಳಿಸಬೇಕು ಎಂದು ಸೂಚಿಸಿದೆ.

ಇದನ್ನೂ ಓದಿ: ಗುಜರಾತ್ ಚುನಾವಣೆ, ಮುಂದಿನ 25 ವರ್ಷದ ಭವಿಷ್ಯ ನಿರ್ಧರಿಸಲಿದೆ: ಪ್ರಧಾನಿ ಮೋದಿ

ಮತ್ತೊಂದೆಡೆ ಸಂಸ್ಥೆಯ ಮಹಿಳಾ ಸಿಬ್ಬಂದಿಗೆ ಪರಿಷ್ಕರಿಸಿದ ನಿಯಮದಲ್ಲಿ, ಮುತ್ತಿನ ಕಿವಿಯೋಲೆ ಧರಿಸುವಂತಿಲ್ಲ. 0.5 ಸೆಂಟಿ ಮೀಟರ್ ಗಾತ್ರದ ಬಿಂದಿ, ಸಾಮಾನ್ಯ ವಿನ್ಯಾಸ ಮತ್ತು ಕಲ್ಲುಗಳಿರುವ ಒಂದು ಬಳೆ ಧರಿಸಲು ಮಾತ್ರ ಅವಕಾಶ ನೀಡಲಾಗಿದೆ. ಮಹಿಳಾ ಸಿಬ್ಬಂದಿ ಅಲಂಕಾರಿಕ ಅಲ್ಲದ ಚಿನ್ನ ಅಥವಾ ವಜ್ರದ ವೃತ್ತಾಕಾರದ ಕಿವಿಯೋಲೆ , 1 ಸೆಂಟಿ ಮೀಟರ್ ಗಿಂತ ಹೆಚ್ಚು ಅಗಲವಿಲ್ಲದ ಉಂಗುರ  ಧರಿಸಬಹುದು. ಐಶ್ಯಾಡೊ, ಲಿಪ್ಸ್ಟಿಕ್, ನೇಲ್ ಪೇಂಟ್ ಮತ್ತು ಹೇರ್ ಶೇಡ್ ಕಾರ್ಡ್ ಗಳನ್ನು ಕಟ್ಟುನಿಟ್ಟಾಗಿ ಅನುಸರಿಸಬೇಕು ಎಂದು ಏರ್ ಇಂಡಿಯಾ ತನ್ನ ಮಹಿಳಾ ಸಿಬ್ಬಂದಿಗೆ ಸ್ಪಷ್ಟ ಸೂಚನೆ ನೀಡಿದೆ. ಮಹಿಳೆಯರು ಸೀರೆ ಮತ್ತು ಇಂಡೋ – ವೆಸ್ಟರ್ನ್ ಉಡುಗೆಯ ಜತೆಗೆ ಚರ್ಮದ ಬಣ್ಣಕ್ಕೆ ಹೊಂದಿಕೆಯಾಗುವ ಉದ್ದದ ಸಾಕ್ಸ್ ಧರಿಸುವುದು ಕೂಡ ವಿಮಾನಯಾನ ಸಂಸ್ಥೆಯ ಮಾರ್ಗಸೂಚಿ ಪ್ರಕಾರ ಕಡ್ಡಾಯವಾಗಿದೆ. ಪರಿಷ್ಕೃತ ನಿಯಮದಿಂದಾಗಿ ಸಂಸ್ಥೆಯ ಸಿಬ್ಬಂದಿ ಅಸಮಧಾನಕ್ಕೆ ಕಾರಣವಾಗಿದೆ.

ಕಳೆದ ವರ್ಷದ ಅಂತ್ಯದಲ್ಲಿ ಏರ್ ಇಂಡಿಯಾವನ್ನು ಬಿಡ್ ಮೂಲಕ ಗೆದ್ದುಕೊಂಡಿದ್ದ ಟಾಟಾ ಗ್ರೂಪ್, ಈ ವರ್ಷದ ಆರಂಭದಲ್ಲಿ ಸಂಸ್ಥೆಯ ಆಡಳಿತವನ್ನು ತನ್ನ ಕೈಗೆ ತೆಗೆದುಕೊಂಡಿತ್ತು. ಸಂಸ್ಥೆಯನ್ನು ಮುನ್ನಡೆಸುತ್ತಿರುವ ಟಾಟಾ ಸಮೂಹವು ಏರ್ ಇಂಡಿಯಾದೆಡೆಗಿನ ಜನರ ದೃಷ್ಟಿಕೋನವನ್ನು ಬದಲಿಸಲು ಮಹತ್ವದ ಬದಲಾವಣೆಗಳನ್ನು ಜಾರಿಗೆ ತರುತ್ತಿದೆ.

suddiyaana