ಗುಜರಾತ್‌ನಲ್ಲಿ ಭೀಕರ ವಿಮಾನ ಅಪಘಾತ !- 130ಕ್ಕೂ ಹೆಚ್ಚು ಜನ ಬಲಿ?

242ಕ್ಕೂ ಹೆಚ್ಚು ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ವಿಮಾನವೊಂದು ಗುಜರಾತ್‌ನ ಅಹಮದಾಬಾದ್‌ನಲ್ಲಿ ಪತನಗೊಂಡಿದೆ. ವಿಮಾನದಲ್ಲಿದ್ದ ಎಲ್ಲರೂ ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ.
230 ಪ್ರಯಾಣಿಕರು ಮತ್ತು 12 ಸಿಬ್ಬಂದಿಯೊಂದಿಗೆ ಲಂಡನ್‌ಗೆ ಹೊರಟಿದ್ದ ಏರ್ ಇಂಡಿಯಾ ವಿಮಾನ AI-171 ಗುರುವಾರ ಅಹಮದಾಬಾದ್ ವಿಮಾನ ನಿಲ್ದಾಣದ ಬಳಿ ಟೇಕ್ ಆಫ್ ಆದ ಸ್ವಲ್ಪ ಸಮಯದ ನಂತರ ಅಪಘಾತಕ್ಕೀಡಾಗಿದೆ. ಪ್ರಾಥಮಿಕ ಮಾಹಿತಿಯ ಪ್ರಕಾರ, ವಿಮಾನವು ಮೇಘನಿನಗರ ಬಳಿ ಪತನಗೊಂಡಿದೆ.
ಅಹಮದಾಬಾದ್ ವಿಮಾನ ನಿಲ್ದಾಣದ ಬಳಿಯೇ ಪ್ರಯಾಣಿಕ ವಿಮಾನ ಪತನಗೊಂಡಿದ್ದು, ವಿಮಾನ ಪತನಗೊಂಡ ಪ್ರದೇಶದ ಸುತ್ತಮುತ್ತ ದಟ್ಟವಾದ ಕಪ್ಪು ಹೊಗೆ ಆಕಾಶಕ್ಕೆ ಚಿಮ್ಮುತ್ತಿರುವ ಭಯಾನಕ ದೃಶ್ಯಗಳು ವಿಡಿಯೋದಲ್ಲಿ ಸೆರೆಯಾಗಿದೆ. ಆದ್ರೆ ಎಷ್ಟು ಜನ ಮೃತಪಟ್ಟಿದ್ದಾರೆ ಅನ್ನೋ ಮಾಹಿತಿ ಖಚಿತ ಮಾಹಿತಿ ಸಿಕ್ಕಿಲ್ಲ.
ವಿಮಾನ ಅಪಘಾತದ ನಂತರ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಗುಜರಾತ್ ಮುಖ್ಯಮಂತ್ರಿ ಮತ್ತು ಅಹಮದಾಬಾದ್ ಪೊಲೀಸ್ ಆಯುಕ್ತರೊಂದಿಗೆ ಮಾತನಾಡಿದ್ದಾರೆ. ರಾಜ್ಯಕ್ಕೆ ಅಗತ್ಯವಿರುವ ಎಲ್ಲಾ ಸಹಾಯವನ್ನು ಕೇಂದ್ರವು ಭರವಸೆ ನೀಡಿದೆ. ಏತನ್ಮಧ್ಯೆ, ನಾಗರಿಕ ವಿಮಾನಯಾನ ಸಚಿವ ರಾಮ್ ಮೋಹನ್ ನಾಯ್ಡು ಕೂಡ ಪರಿಸ್ಥಿತಿಯನ್ನು ಅವಲೋಕಿಸಲು ಅಹಮದಾಬಾದ್‌ಗೆ ತೆರಳಿದ್ದಾರೆ.