ದಕ್ಷಿಣ ರಾಜ್ಯಗಳ ಮೇಲೆ ಪ್ರಧಾನಿ ಕಣ್ಣು – ಚುನಾವಣೆ ಗೆಲ್ಲಲು AI ಮೊರೆ ಹೋದ ಮೋದಿ!

ದಕ್ಷಿಣ ರಾಜ್ಯಗಳ ಮೇಲೆ ಪ್ರಧಾನಿ ಕಣ್ಣು – ಚುನಾವಣೆ ಗೆಲ್ಲಲು AI ಮೊರೆ ಹೋದ ಮೋದಿ!

ಲೋಕಸಭೆ ಚುನಾವಣೆಗೆ ಕೆಲವೇ ವಾರಗಳು ಬಾಕಿ ಉಳಿದಿವೆ. ಅಧಿಕಾರದ ಚುಕ್ಕಾಣಿ ಹಿಡಿಯಲು ಬಿಜೆಪಿ ನಾನಾ ಸರ್ಕಸ್‌ ಮಾಡುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಮತ್ತೊಮ್ಮೆ ಸ್ಪಷ್ಟ ಬಹುಮತದೊಂದಿಗೆ ಅಧಿಕಾರಕ್ಕೇರಲು ಭಾರೀ ರಣ ತಂತ್ರಗಳನ್ನು ಹಣೆಯುತ್ತಿದೆ. ಇದೀಗ ಕಮಲ ಪಡೆಗಳು ಒಂದು ಹೆಜ್ಜೆ ಮುಂದೆ ಇಟ್ಟಿದ್ದು, ಲೋಕಸಭಾ ಚುನಾವಣೆಯನ್ನು ಗೆಲ್ಲಲು ಕೃತಕ ಬುದ್ಧಿಮತ್ತೆಯ ಮೊರೆ ಹೋಗಿದೆ ಎಂದು ವರದಿಯಾಗಿದೆ.

ಇದನ್ನೂ ಓದಿ: ದೇಶದಲ್ಲೇ ಅತ್ಯಂತ ಎತ್ತರದ ಕ್ರಿಕೆಟ್ ಸ್ಟೇಡಿಯಂನಲ್ಲಿ 5ನೇ ಟೆಸ್ಟ್ ಮ್ಯಾಚ್ – ಧರ್ಮಶಾಲಾದಲ್ಲಿ ಇಂಡಿಯಾ vs ಇಂಗ್ಲೆಂಡ್ ಸೆಣಸಾಟ

ಹೌದು, ಈ ಬಾರಿಯೂ ಲೋಕಸಭೆ ಚುನಾವಣೆಯಲ್ಲಿ ಸ್ಪಷ್ಟ ಬಹುಮತ ಗೆಲ್ಲಲು ಬಿಜೆಪಿ ಸಾಕಷ್ಟು ಪ್ಲಾನ್‌ ಮಾಡಿಕೊಂಡಿದೆ. ಅಬ್‌ ಕೀ ಬಾರ್ 400 ಪಾರ್‌ ಘೋಷಣೆ ಮೊಳಗಿಸುತ್ತಿರುವ ಬಿಜೆಪಿ  ಲೋಕಸಭಾ ಚುನಾವಣೆಯನ್ನು ಸಾಕಷ್ಟು ರಣ ತಂತ್ರಗಳನ್ನು ಹೆಣೆಯುತ್ತಿದೆ. ಅದರಲ್ಲೂ ವಿಶೇಷವಾಗಿ ದಕ್ಷಿಣ ರಾಜ್ಯಗಳಲ್ಲಿ ಈ ಬಾರಿ ಹೆಚ್ಚಿನ ಸ್ಥಾನದ ಮೇಲೆ ಕಣ್ಣಿಟ್ಟಿರುವ ಬಿಜೆಪಿ ಈಗ ಎಐ ತಂತ್ರಜ್ಞಾನ ಬಳಸಲು ಮುಂದಾಗಿದೆ. ಈ ಮೂಲಕ ಚುನಾವಣಾ ಭಾಷಣವನ್ನು ತರ್ಜುಮೆ ಮಾಡಲು ಎಐ ತಂತ್ರಜ್ಞಾನವನ್ನು ಬಳಸುತ್ತಿರುವುದು ವಿಶ್ವದಲ್ಲೇ ಮೊದಲು ಎಂದು ಬಿಜೆಪಿ ಹೇಳಿಕೊಂಡಿದೆ.

ಬಿಜೆಪಿ ಎಐ ತಂತ್ರಜ್ಞಾನ ಬಳಸುತ್ತಿರುವುದು ಯಾಕೆ?

ಲೋಕಸಭಾ ಚುನಾವಣೆಯಲ್ಲಿ ಹಿಂದಿ ಭಾಷಿಕರು ಇರುವ ಉತ್ತರ ಭಾರತದಲ್ಲಿ ಬಿಜೆಪಿ ಹೆಚ್ಚು ಸ್ಥಾನಗಳನ್ನು ಗೆಲ್ಲುತ್ತಾ ಬಂದಿದೆ. ಆದರೆ ದಕ್ಷಿಣದಲ್ಲಿ ಬಿಜೆಪಿಗೆ ನಿರೀಕ್ಷಿಸಿದಷ್ಟು ಸ್ಥಾನ ಬರುತ್ತಿಲ್ಲ. ಕಳೆದ ಲೋಕಸಭಾ ಚುನಾವಣೆಯಲ್ಲಿ ದಕ್ಷಿಣದ 129 ಕ್ಷೇತ್ರಗಳ ಪೈಕಿ ಬಿಜೆಪಿ ಜಯಗಳಿದ್ದು ಕೇವಲ 29. ಅದರಲ್ಲೂ ಬಹುಪಾಲು ಕರ್ನಾಟಕದಿಂದ (25+1) ಬಂದಿತ್ತು. ಹೀಗಾಗಿ ತಮಿಳುನಾಡು, ಕೇರಳ, ಕರ್ನಾಟಕ, ತೆಲಂಗಾಣ, ಆಂಧ್ರಪ್ರದೇಶದಲ್ಲಿ ಜನರನ್ನು ಸೆಳೆಯಲು ಬಿಜೆಪಿ ಎಐ ಸಹಾಯ ಪಡೆಯಲು ಮುಂದಾಗಿದೆ.

ಬಿಜೆಪಿಯ ತಾರಾ ಪ್ರಚಾರಕರ ಪಟ್ಟಿಯಲ್ಲಿ ಮೋದಿಗೆ ಮೊದಲ ಸ್ಥಾನ. ಒಂದು ದಿನದಲ್ಲಿ ಗರಿಷ್ಠ 3-4 ಸ್ಥಳಗಳಲ್ಲಿ ಮೋದಿ ಪ್ರಚಾರ ಮಾಡುತ್ತಾರೆ. ಹೀಗಾಗಿ ದಕ್ಷಿಣ ರಾಜ್ಯಗಳಿಗೆ ಮೋದಿ ಭೇಟಿ ನೀಡಿದ ವೇಳೆ ಮಾಡಿದ ಚುನಾವಣಾ ಪ್ರಚಾರ ಭಾಷಣಗಳನ್ನು ಆಯಾ ರಾಜ್ಯಗಳ ಭಾಷೆಗಳಿಗೆ ತತ್‌ಕ್ಷಣದಲ್ಲಿ ತರ್ಜುಮೆ ಮಾಡಿ ಬಿಜೆಪಿ ತನ್ನ ಸಾಮಾಜಿಕ ಜಾಲತಾಣದಲ್ಲಿ ಪ್ರಸಾರ ಮಾಡಲಿದೆ. ಈ ತಂತ್ರದಿಂದ ಕಡಿಮೆ ಅವಧಿಯಲ್ಲಿ ಹೆಚ್ಚು ಜನರನ್ನು ಸುಲಭವಾಗಿ ತಲುಪಬಹುದು ಎಂದು ಲೆಕ್ಕಾಚಾರವನ್ನು ಬಿಜೆಪಿ ಹಾಕಿಕೊಂಡಿದೆ. ದಕ್ಷಿಣದ ಈ ರಾಜ್ಯಗಳ ಜೊತೆ ಪಂಜಾಬ್, ಒಡಿಶಾ, ಮಹಾರಾಷ್ಟ್ರದಲ್ಲೂ ಇದೇ ತಂತ್ರ ಅಳವಡಿಸಿಕೊಳ್ಳಲು ಪಕ್ಷ ನಿರ್ಧರಿಸಿದೆ ಎಂದು ವರದಿಯಾಗಿದೆ.

Shwetha M