ಯಾರಾಗ್ತಾರೆ ಮುಂದಿನ ಪ್ರಧಾನಿ – ಸಮೀಕ್ಷೆ ಏನ್ ಹೇಳುತ್ತೆ?

ಯಾರಾಗ್ತಾರೆ ಮುಂದಿನ ಪ್ರಧಾನಿ – ಸಮೀಕ್ಷೆ ಏನ್ ಹೇಳುತ್ತೆ?

ಮುಂದಿನ ಲೋಕಸಭಾ ಚುನಾವಣೆಗೂ ಮುನ್ನ ದೇಶದ ಒಂಬತ್ತು ರಾಜ್ಯಗಳಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದೆ. ಹಾಗಾಗಿ ರಾಷ್ಟ್ರೀಯ ಪಕ್ಷಗಳಾದ ಬಿಜೆಪಿ, ಕಾಂಗ್ರೆಸ್ ಗೆ ಈ ಬಾರಿಯ ವಿಧಾನಸಭಾ ಚುನಾವಣೆ ಅಗ್ನಿಪರೀಕ್ಷೆಯಂತಾಗಿದೆ. ಈ ಎರಡೂ ಪಕ್ಷಗಳು ಅಧಿಕಾರದ ಚುಕ್ಕಾಣಿ ಹಿಡಿಯಲು ಸಾಕಷ್ಟು ಸರ್ಕಸ್ ಮಾಡುತ್ತಿವೆ. ಈ ಚುನಾವಣಾ ವರ್ಷದಲ್ಲಿ ಯಾವ ಪಕ್ಷದ ಮೇಲೆ ಮತದಾರರು ಹೆಚ್ಚು ಒಲವು ತೋರಿಸುತ್ತಿದ್ದಾರೆ? ಯಾರು ಈ ಬಾರಿ ಪ್ರಧಾನಿ ಆಗೋ ಸಾಧ್ಯತೆ ಹೆಚ್ಚಿದೆ? ದೇಶದಲ್ಲೇ ಉತ್ತಮ ಪ್ರಧಾನಿ ಯಾರು ಅನ್ನೋ ಬಗ್ಗೆ ಇಂಡಿಯಾ ಟುಡೇ ಹಾಗೂ ಸಿ-ವೋಟರ್ ಸಮೀಕ್ಷೆ ನಡೆಸಿದ್ದು, ಇದರ ವರದಿ ಬಹಿರಂಗವಾಗಿದೆ.

ಇದನ್ನೂ ಓದಿ: ಹಾರಾಟ ನಡೆಸುವಾಗಲೇ ವಾಯುಪಡೆಯ ಯುದ್ಧವಿಮಾನಗಳು ಡಿಕ್ಕಿ – ಪೈಲಟ್​ಗಳು ಬಚಾವಾಗಿದ್ದೇ ರೋಚಕ!

ದೇಶದ ಉತ್ತಮ ಪ್ರಧಾನಿ ಯಾರು?

ಇಂಡಿಯಾ ಟುಡೇ ಮತ್ತು ಸಿ-ವೋಟರ್ ಸಮೀಕ್ಷೆಯಲ್ಲಿ ಇದುವರೆಗೆ ರಾಷ್ಟ್ರವನ್ನು ಮುನ್ನಡೆಸಿದ ಅತ್ತ್ಯುತ್ತಮ ಪ್ರಧಾನಿ ಯಾರು ಎಂಬ ಪ್ರಶ್ನೆ ಕೇಳಲಾಗಿದೆ. ಪ್ರಧಾನಿ ನರೇಂದ್ರ ಮೋದಿಗೆ ಶೇ. 47 ರಷ್ಟು ಮಂದಿ ವೋಟ್ ಹಾಕಿದ್ದರೆ, ವಾಜಪೇಯಿ ಅವರಿಗೆ ಶೇ. 16 ಹಾಗೂ ಇಂದಿರಾ ಗಾಂಧಿಗೆ ಶೇ. 12 ರಷ್ಟು ಮಂದಿ ಮತ ಹಾಕಿದ್ದಾರೆ.

ಯಾರಾಗ್ತಾರೆ ಮುಂದಿನ ಪ್ರಧಾನಿ?

ಇನ್ನೂ ಮುಂದಿನ ಪ್ರಧಾನಿಯಾಗಿ ಯಾರನ್ನು ಆಯ್ಕೆ ಮಾಡಲು ಬಯಸುತ್ತೀರಿ ಎಂದು ಸಮೀಕ್ಷೆಯಲ್ಲಿ ಜನರಿಗೆ ಪ್ರಶ್ನೆ ಕೇಳಲಾಗಿದೆ. ಇದರಲ್ಲಿ ಶೇ 52 ರಷ್ಟು ಮಂದಿ ಪ್ರಧಾನಿ ನರೇಂದ್ರ ಮೋದಿಯೇ ದೇಶವನ್ನು ಮುನ್ನಡೆಸಲಿ ಅಂತ ಅಭಿಪ್ರಾಯಪಟ್ಟರೆ, ಶೇ. 14 ರಷ್ಟು ಜನರು ರಾಹುಲ್ ಗಾಂಧಿ ಪರ ಒಲವು ತೋರಿದ್ದಾರೆ.

ಈ ಸಮೀಕ್ಷೆಯಲ್ಲಿ ಪ್ರಧಾನಿ ಮೋದಿಯವರ ಉತ್ತರಾಧಿಕಾರಿ ಯಾರು ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದವರಲ್ಲಿ ಶೇ. 26 ರಷ್ಟು ಮಂದಿ ಅಮಿತ್ ಶಾ ಅವರನ್ನು ಸೂಚಿಸಿದ್ದಾರೆ. ಶೇ. 25 ರಷ್ಟು ಜನರು ಯೋಗಿ ಆದಿತ್ಯನಾಥ್ ಅವರತ್ತ ಒಲವು ತೋರಿಸಿದರೆ, ನಿತಿನ್ ಗಡ್ಕರಿ ಪರ 16 ರಷ್ಟು ಮಂದಿ ಮತ ಹಾಕಿದ್ದಾರೆ.

ಸಮೀಕ್ಷೆಯ ಪ್ರಕಾರ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಎನ್ ಡಿಎ ಸರ್ಕಾರ ಅಧಿಕಾರಕ್ಕೆ ಬರುವ ಸಾಧ್ಯತೆ ಇದೆ. 543 ಲೋಕಸಭಾ ಸ್ಥಾನಗಳ ಪೈಕಿ ಎನ್‌ಡಿಎ 298 ಸ್ಥಾನಗಳನ್ನು ಗೆಲ್ಲುವ ನಿರೀಕ್ಷೆಯಿದೆ. ಹಾಗೆ ಕಾಂಗ್ರೆಸ್ 153 ಸ್ಥಾನಗಳನ್ನು ಗೆಲ್ಲಬಹುದು. ಪ್ರಾದೇಶಿಕ ಪಕ್ಷಗಳು 92 ಸ್ಥಾನಗಳನ್ನು ಗೆಲ್ಲುವ ಸಾಧ್ಯತೆ ಇದೆ ಎಂದು ಸಮೀಕ್ಷೆಯಿಂದ ಗೊತ್ತಾಗಿದೆ.

ಇನ್ನು ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೋ ಯಾತ್ರೆ ಕುರಿತು ಜನರ ಅಭಿಪ್ರಾಯ ಸಂಗ್ರಹಿಸಲಾಗಿದೆ. ಇದರಲ್ಲಿ ಶೇ. 37ರಷ್ಟು ಮಂದಿ ಯಾತ್ರೆಯು ದೇಶದಲ್ಲಿ ಸಂಚಲನ ಸೃಷ್ಟಿಸಿದೆ. ಆದರೆ ಇದರಿಂದ ಕಾಂಗ್ರೆಸ್ ಗೆಲ್ಲಲು ಸಾಧ್ಯವಿಲ್ಲ ಎಂದು ಭಾವಿಸಿದ್ದಾರೆ. ಶೇ. 29 ರಷ್ಟು ಜನ ಇದೊಂದು ದೊಡ್ಡ ಸಮೂಹ ಸಂಪರ್ಕ ಚಳವಳಿ ಎಂದಿದ್ದಾರೆ. ಸುಮಾರು 13 ಪ್ರತಿಶತ ಜನರು ಇದು ರಾಹುಲ್ ಗಾಂಧಿಯನ್ನು ಮರು ಬ್ರಾಂಡ್ ಮಾಡುವ ಪ್ರಯತ್ನ ಎಂದು ಅಭಿಪ್ರಾಯಪಟ್ಟಿದ್ದಾರೆ. 9 ಪ್ರತಿಶತ ಜನರು ಯಾವುದೇ ಬದಲಾವಣೆಯನ್ನು ಮಾಡುವುದಿಲ್ಲ ಎಂದಿದ್ದಾರೆ.

suddiyaana