ರಾಹುಲ್ ಗಾಂಧಿ ಪ್ರಚಾರ ವೇದಿಕೆಯ ಫ್ಲೆಕ್ಸ್‌ನಲ್ಲಿ ಬಿಜೆಪಿ ಅಭ್ಯರ್ಥಿಯ ಫೋಟೋ!
ಲೋಕಸಭಾ ಚುನಾವಣೆಯ ಅಖಾಡ ಗಂಗೇರಿದೆ. ಅಭ್ಯರ್ಥಿಗಳು ಪ್ರಚಾರದಲ್ಲಿ ಬ್ಯೂಸಿಯಾಗಿದ್ದಾರೆ. ಕಾಂಗ್ರೆಸ್ ಕೂಡ ತಮ್ಮ ಅಭ್ಯರ್ಥಿಗಳ ಪರ ಬಿರುಸಿನಿಂದ ಪ್ರಚಾರ ಮಾಡ್ತಾ ಇದೆ. ಈ ಹೊತ್ತಲ್ಲೇ ಒಂದು ಎಡವಟ್ಟು ನಡುದು ಹೋಗಿದೆ. ಮಧ್ಯಪ್ರದೇಶದ ಮಂಡ್ಲಾದಲ್ಲಿ ರಾಹುಲ್ ಗಾಂಧಿ, ಯಾರ ವಿರುದ್ಧ ಪ್ರಚಾರ ಮಾಡಬೇಕಿತ್ತೋ. ಆ ಬಿಜೆಪಿ ಅಭ್ಯರ್ಥಿಯ ಫೋಟೋವನ್ನು ಫ್ಲೆಕ್ಸ್‌ನಲ್ಲಿ ಹಾಕಲಾಗಿದೆ.
ಇದನ್ನೂ ಓದಿ: ಅಂಕಪಟ್ಟಿಯಲ್ಲಿ ರಾಜಸ್ತಾನ್ ರಾಯಲ್ಸ್‌ಗೆ ಅಗ್ರಸ್ಥಾನ – 8ಕ್ಕೇರಿದ ಮುಂಬೈ ಇಂಡಿಯನ್ಸ್, ಆರ್‌ಸಿಬಿಗೆ 9ನೇ ಸ್ಥಾನ
ಮಂಡ್ಲಾ ಲೋಕಸಭಾ ಕ್ಷೇತ್ರದಲ್ಲಿ ಕೇಂದ್ರ ಸಚಿವ ಹಾಗೂ ಆರು ಬಾರಿಯ ಬಿಜೆಪಿ ಸಂಸದ ಫಗ್ಗಾನ್ ಸಿಂಗ್ ಕುಲಸ್ತೆ ಸ್ಪರ್ಧಿಸುತ್ತಿದ್ದಾರೆ. ಅವರ ಎದುರು ಕಾಂಗ್ರೆಸ್‌ನಿಂದ ನಾಲ್ಕು ಬಾರಿ ಶಾಸಕ ಹಾಗೂ ಮಾಜಿ ಸಚಿವ ಒಂಕಾರ್ ಸಿಂಗ್ ಮರ್ಕಾಮ್ ಕಣದಲ್ಲಿದ್ದು, ಅವರ ಪರ ರಾಹುಲ್ ಗಾಂಧಿ ಸೋಮವಾರ ಪ್ರಚಾರ ನಡೆಸುತ್ತಿದ್ದಾರೆ. ಈ ವೇಳೆ ಈ ಎಡವಟ್ಟು ನಡೆದಿದೆ.
ರಾಹುಲ್ ಗಾಂಧಿ ಪ್ರಚಾರದ ಮುಖ್ಯ ವೇದಿಕೆಯಲ್ಲಿ ಹಾಕಿರುವ ಪ್ರಮುಖ ಫ್ಲೆಕ್ಸ್‌ನಲ್ಲಿ ಕಾಂಗ್ರೆಸ್ ಶಾಸಕ ರಜನೀಶ್ ಹರವಂಶ್ ಸಿಂಗ್ ಫೋಟೋ ಜಾಗದಲ್ಲಿ ಬಿಜೆಪಿ ಅಭ್ಯರ್ಥಿ ಹಾಗೂ ಕೇಂದ್ರ ಸಚಿವರಾಗಿರುವ ಫಗ್ಗಾನ್ ಸಿಂಗ್ ಕುಲಸ್ತೆ ಅವರ ಫೋಟೋವನ್ನು ಹಾಕಲಾಗಿದೆ. ಇದು ಕಾಂಗ್ರೆಸ್‌ಗೆ ಭಾರೀ ಮುಜುಗರ ಉಂಟುಮಾಡಿದೆ. ಪ್ಲೇಕ್ಸ್‌ನಲ್ಲಿರುವ ತಪ್ಪು ಬೆಳಕಿಗೆ ಬರುತ್ತಿದ್ದಂತೆ ಫ್ಲೆಕ್ಸ್ ಅನ್ನು ಬದಲಾಯಿಸಲಾಗಿದೆ ಎಂದು ತಿಳಿದುಬಂದಿದೆ.
ಮಧ್ಯಪ್ರದೇಶದ ಜಬಲ್‌ಪುರದಲ್ಲಿ ಪ್ರಧಾನಿ ನರೇಂದ್ರ ಮೋದಿ ಪ್ರಚಾರ ನಡೆಸಿದ ಬೆನ್ನಲ್ಲೇ ರಾಹುಲ್ ಗಾಂಧಿ ಮಂಡ್ಲಾ ಲೋಕಸಭಾ ಕ್ಷೇತ್ರದ ಧಾನೋರಾ ಗ್ರಾಮದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಓಂಕಾರ್ ಸಿಂಗ್ ಪರವಾಗಿ ಸಾರ್ವಜನಿಕ ಸಭೆಯನ್ನು ನಡೆಸಲಿದ್ದಾರೆ. ಆದರೆ, ಮುಖ್ಯ ವೇದಿಕೆಯ ಫ್ಲೆಕ್ಸ್‌ನಲ್ಲಿ ಬಿಜೆಪಿ ಅಭ್ಯರ್ಥಿಯ ಫೋಟೋವನ್ನು ಹಾಕಿರುವುದು ಮುಜುಗರಕ್ಕೆ ಕಾರಣವಾಗಿದೆ.