ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಒಂದು ವಾರ ಯುರೋಪ್ ಪ್ರವಾಸ – ಭಾರತೀಯ ವಲಸಿಗರೊಂದಿಗೆ ಸಭೆ
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಯುರೋಪ್ ಪ್ರವಾಸಕ್ಕೆ ಮಂಗಳವಾರ ತೆರಳಿದ್ದಾರೆ. ಸುಮಾರು ಒಂದು ವಾರಗಳ ಕಾಲ ಅವರು ಯುರೋಪ್ ಪ್ರವಾಸ ಮಾಡಲಿದ್ದು, ಈ ಸಂದರ್ಭದಲ್ಲಿ ರಾಹುಲ್ ಗಾಂಧಿ ಯುರೋಪಿಯನ್ ಯೂನಿಯನ್ (ಇಯು) ವಕೀಲರು, ವಿದ್ಯಾರ್ಥಿಗಳು ಮತ್ತು ಭಾರತೀಯ ವಲಸಿಗರೊಂದಿಗೆ ಸಭೆ ನಡೆಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಇದನ್ನೂ ಓದಿ: ಮಣಿಪುರದಲ್ಲಿ ಹಿಂಸಾಚಾರ ತಡೆಗಟ್ಟಲು ಮತ್ತೆ ಐದು ಜಿಲ್ಲೆಗಳಲ್ಲಿ ಕರ್ಫ್ಯೂ ಜಾರಿ!
ರಾಹುಲ್ ಗಾಂಧಿ ಅವರು ಸೆಪ್ಟೆಂಬರ್ 7 ರಂದು ಬ್ರಸೆಲ್ಸ್ನಲ್ಲಿ ಇಯು (EU) ವಕೀಲರ ಗುಂಪನ್ನು ಭೇಟಿಯಾಗಲಿದ್ದಾರೆ ಮತ್ತು ಹೇಗ್ನಲ್ಲಿ ಇದೇ ರೀತಿಯ ಸಭೆಯನ್ನು ನಡೆಸಲಿದ್ದಾರೆ. ಸೆಪ್ಟೆಂಬರ್ 8 ರಂದು ಪ್ಯಾರಿಸ್ನ ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಸೆಪ್ಟೆಂಬರ್ 9 ರಂದು ಪ್ಯಾರಿಸ್ನಲ್ಲಿ ಫ್ರಾನ್ಸ್ನ ಲೇಬರ್ ಯೂನಿಯನ್ನ ಸಭೆಯಲ್ಲಿ ಭಾಗವಹಿಸಲಿದ್ದಾರೆ. ಅದರ ನಂತರ ಅವರು ನಾರ್ವೆಗೆ ಭೇಟಿ ನೀಡಲಿದ್ದಾರೆ. ಅಲ್ಲಿ ಅವರು ಸೆಪ್ಟೆಂಬರ್ 10 ರಂದು ಓಸ್ಲೋದಲ್ಲಿ ಡಯಾಸ್ಪೊರಾ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
G20 ಶೃಂಗಸಭೆ ಮುಗಿದ ಒಂದು ದಿನದ ನಂತರ ಗಾಂಧಿಯವರು ಸೆಪ್ಟೆಂಬರ್ 11 ರೊಳಗೆ ಭಾರತಕ್ಕೆ ಹಿಂದಿರುಗುವ ಸಾಧ್ಯತೆಯಿದೆ. ಜಿ20 ನಾಯಕರ ಶೃಂಗಸಭೆ ಸೆಪ್ಟೆಂಬರ್ 9-10ರವರೆಗೆ ದೆಹಲಿಯಲ್ಲಿ ನಡೆಯಲಿದೆ. ಭಾರತ ಜಿ 20 ಶೃಂಗಸಭೆಯಲ್ಲಿ 30 ಕ್ಕೂ ಹೆಚ್ಚು ರಾಷ್ಟ್ರಗಳ ಮುಖ್ಯಸ್ಥರು, ಯುರೋಪಿಯನ್ ಯೂನಿಯನ್ ಮತ್ತು ಆಹ್ವಾನಿತ ಅತಿಥಿ ರಾಷ್ಟ್ರಗಳ ಉನ್ನತ ಅಧಿಕಾರಿಗಳು ಮತ್ತು 14 ಅಂತರರಾಷ್ಟ್ರೀಯ ಸಂಸ್ಥೆಗಳ ಮುಖ್ಯಸ್ಥರು ಭಾಗವಹಿಸುವ ಸಾಧ್ಯತೆಯಿದೆ.