ಒಂದು ಕಲ್ಲು.. ಎರಡು ಹಕ್ಕಿ! – ಮಂಡ್ಯ, ಹಾಸನ, ಕೋಲಾರ ಕ್ಷೇತ್ರ ನೀಡಲು ಒಪ್ಪಿಗೆ, ಇನ್ನೆರಡು ಕ್ಷೇತ್ರಕ್ಕೆ ಬೇಡಿಕೆ

ಒಂದು ಕಲ್ಲು.. ಎರಡು ಹಕ್ಕಿ! – ಮಂಡ್ಯ, ಹಾಸನ, ಕೋಲಾರ ಕ್ಷೇತ್ರ ನೀಡಲು ಒಪ್ಪಿಗೆ, ಇನ್ನೆರಡು ಕ್ಷೇತ್ರಕ್ಕೆ ಬೇಡಿಕೆ

ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿಯಲ್ಲಿ ಕ್ಷೇತ್ರಗಳ ಹಂಚಿಕೆ ಫೈನಲ್ ಆಗಿದೆ. ಯಾವ ಕ್ಷೇತ್ರಗಳಲ್ಲಿ ಕಮಲಪಡೆಗೆ ನೆಲೆ ಇಲ್ಲವೋ ಅಂತಹ ಕ್ಷೇತ್ರಗಳನ್ನೇ ಜೆಡಿಎಸ್ ಗೆ ಬಿಟ್ಟುಕೊಡೋದು ಪಕ್ಕಾ ಆಗಿದೆ. ಮಂಡ್ಯ, ಹಾಸನ ಹಾಗೂ ಕೋಲಾರ ಕ್ಷೇತ್ರಗಳು ದಳಪತಿಗಳ ಪಾಲಾಗಲಿವೆ. ಆದ್ರೆ ಮೂರು ಜಿಲ್ಲೆಗಳ ಪೈಕಿ ಜೆಡಿಎಸ್​ಗೆ ಮಂಡ್ಯ ಕ್ಷೇತ್ರವೇ ಅತ್ಯಂತ ಪ್ರತಿಷ್ಠೆ ಮತ್ತು ಸವಾಲಿನ ಕ್ಷೇತ್ರ ಆಗಿದೆ. ಅದ್ರಲ್ಲೂ ಈ ಸಲ ಡು ಆರ್ ಡೈ ಸಮರ ನಡೆಯಲಿದೆ. ಕ್ಷೇತ್ರವನ್ನ ಮರಳಿ ತಮ್ಮ ಕಂಟ್ರೋಲ್​ಗೆ ಪಡೆಯಲು ಹೆಚ್​ಡಿಕೆ ಭರ್ಜರಿ ಪ್ಲ್ಯಾನ್ ರೂಪಿಸಿದ್ದಾರೆ. ಒಂದೇ ಕಲ್ಲಲ್ಲಿ ಎರಡು ಹಕ್ಕಿ ಹೊಡೆಯೋಕೆ ಸರ್ವ ತಯಾರಿಯೂ ನಡೆದಿದೆ. ಅಷ್ಟಕ್ಕೂ ಹೆಚ್​ಡಿಕೆ ಪ್ಲ್ಯಾನ್ ಏನು..? ಮಂಡ್ಯ ಕ್ಷೇತ್ರದಲ್ಲಿ ಇರೋ ಸವಾಲೇನು..? ಜೆಡಿಎಸ್ ನಿಂದ ಯಾರು ಸ್ಪರ್ಧೆ ಮಾಡ್ತಾರೆ..? ಈ ಬಗ್ಗೆ ವಿಸ್ತೃತ ಮಾಹಿತಿ ಇಲ್ಲಿದೆ.

ಇದನ್ನೂ ಓದಿ: ರಾಷ್ಟ್ರ ಮಟ್ಟದಲ್ಲೂ ಮಂಡ್ಯ ಲೋಕಸಭಾ ಕ್ಷೇತ್ರದ ಸದ್ದು – ಅಭ್ಯರ್ಥಿ ರೇಸ್ ನಲ್ಲಿ ಘಟಾನುಘಟಿಗಳ ತಂತ್ರಗಾರಿಕೆ

ಮಂಡ್ಯ ಜಿಲ್ಲೆ ಜೆಡಿಎಸ್​ಗೆ ಭದ್ರಕೋಟೆ ಮತ್ತು ಹೆಚ್ಚು ಪ್ರಾಬಲ್ಯ ಹೊಂದಿರುವ ಕ್ಷೇತ್ರ. ಆದ್ರೆ ವಿಧಾನಸಭೆ ಮತ್ತು ಲೋಕಸಭಾ ಚುನಾವಣೆಗಳಲ್ಲಿ ಇತ್ತೀಚೆಗೆ ದಳಪಡೆ ಅಂದುಕೊಂಡಷ್ಟು ಸಕ್ಸಸ್ ಸಿಗ್ತಿಲ್ಲ. ಅದ್ರಲ್ಲೂ ಕಳೆದ ಬಾರಿ ನಿಖಿಲ್ ಕುಮಾರಸ್ವಾಮಿಯೇ ಮಂಡ್ಯದಿಂದ ಸ್ಪರ್ಧಿಸಿ ಹೀನಾಯವಾಗಿ ಸೋಲು ಕಂಡಿದ್ರು. ಹೀಗಾಗಿ ಹೇಗಾದ್ರೂ ಮಾಡಿ ಮಂಡ್ಯದಲ್ಲಿ ಮತ್ತೆ ಚಕ್ರಾಧಿಪತ್ಯ ಸ್ಥಾಪನೆ ಮಾಡ್ಬೇಕು ಅನ್ನೋದು ಕುಮಾರಣ್ಣನ ಬಹುದೊಡ್ಡ ಕನಸು. ಇದಕ್ಕಾಗೇ ಬಿಜೆಪಿ ಜೊತೆ ಸೇರಿ ಒಂದೇ ಕಲ್ಲಲ್ಲಿ ಎರಡು ಹಕ್ಕಿ ಹೊಡೆಯೋ ತಂತ್ರಗಾರಿಕೆ ಮಾಡಿದ್ದಾರೆ.

 ಕರ್ನಾಟಕದ 28 ಲೋಕಸಭಾ ಕ್ಷೇತ್ರಗಳ ಪೈಕಿ 3 ಲೋಕಸಭಾ ಕ್ಷೇತ್ರ JDSಗೆ

ಕರ್ನಾಟಕದ 28 ಲೋಕಸಭಾ ಕ್ಷೇತ್ರಗಳ ಪೈಕಿ 3 ಲೋಕಸಭಾ ಕ್ಷೇತ್ರ JDSಗೆ ಸಿಗೋದು ಫೈನಲ್​ ಆಗಿದೆ. ಮಂಡ್ಯ, ಹಾಸನ, ಕೋಲಾರ ಕ್ಷೇತ್ರ ನೀಡಲು ಒಪ್ಪಿಗೆ ಸಿಕ್ಕಿದೆ. ಆದರೆ ತುಮಕೂರು, ಮೈಸೂರು ಕ್ಷೇತ್ರವನ್ನೂ ಕುಮಾರಸ್ವಾಮಿ ಕೇಳಿದ್ದು ಸದ್ಯಕ್ಕೆ ಯಾವುದೇ ನಿರ್ಧಾರಕ್ಕೆ ಬಂದಿಲ್ಲ. ಹೀಗಿದ್ರೂ ಕುಮಾರಣ್ಣನ ಕಂಪ್ಲೀಟ್ ಚಿತ್ತ ಮಂಡ್ಯ ಕ್ಷೇತ್ರದ ಮೇಲೆಯೇ ನೆಟ್ಟಿದೆ. ಬೇರೆಲ್ಲಾ ಕ್ಷೇತ್ರಗಳಿಗಿಂತ ಮಂಡ್ಯ ಕ್ಷೇತ್ರದಲ್ಲಿ ಗೆಲ್ಲೋದೇ ಮುಖ್ಯ ಆಗಿದೆ. ಹೀಗಾಗಿ ಬಿಜೆಪಿ ವರಿಷ್ಠರ ಮುಂದೆ ಬಹುದೊಡ್ಡ ಬೇಡಿಕೆ ಇಟ್ಟಿದ್ದಾರೆ. ಮಂಡ್ಯ ಕ್ಷೇತ್ರವನ್ನ ಜೆಡಿಎಸ್​ಗೆ ಬಿಟ್ಟುಕೊಟ್ಟು ಸಂಸದೆ ಸುಮಲತಾ ಅಂಬರೀಶ್ ಗೆ ಬೆಂಗಳೂರು ಉತ್ತರ ಕ್ಷೇತ್ರದ ಟಿಕೆಟ್ ಕೊಡಿ ಎಂದಿದ್ದಾರಂತೆ. ಅಂದ್ರೆ ಸುಮಲತಾಗೆ ಬೇರೆ ಕ್ಷೇತ್ರದ ಟಿಕೆಟ್ ಕೊಟ್ರೆ ಮಂಡ್ಯದಿಂದ ಹೊರ ಹೋಗ್ತಾರೆ. ಆಗ ಜೆಡಿಎಸ್ ಗೆ ಗೆಲುವು ಸುಲಭವಾಗುತ್ತೆ. ತಾನೇ ಸ್ಪರ್ಧೆ ಮಾಡಲಿ ಅಥವಾ ನಿಖಿಲ್ ಕುಮಾರಸ್ವಾಮಿ ಸ್ಪರ್ಧಿಸಿದ್ರೂ ಪೈಪೋಟಿ ಜಾಸ್ತಿ ಇರಲ್ಲ ಅನ್ನೋದು ಕುಮಾರಣ್ಣನ ಲೆಕ್ಕಾಚಾರ. ಅಲ್ಲದೆ ಸುಮಲತಾಗೆ ಕಾಂಗ್ರೆಸ್ ಗಾಳ ಹಾಕ್ತಿದೆ. ಕಾಂಗ್ರೆಸ್‌ನಿಂದ ಸುಮಲತಾ ಕಣಕ್ಕಿಳಿದರೆ ಮೈತ್ರಿಗೆ ಹಿನ್ನಡೆಯಾಗುವ ಆತಂಕವನ್ನೂ ಹೊರ ಹಾಕಿದ್ದಾರೆ.

ಹೀಗಾಗಿ ಸುಮಲತಾ ನಿರ್ಧಾರವೇ ಕುಮಾರಣ್ಣನ ಆತಂಕಕ್ಕೆ ಕಾರಣವಾಗಿದೆ. ಮಂಡ್ಯದಿಂದಲೇ ನನ್ನ ಸ್ಪರ್ಧೆ ಎಂದು ಹೇಳುತ್ತಲೇ ಬರುತ್ತಿರುವ ಸುಮಲತಾ, ಅಂತಿಮ ಘಳಿಗೆಯಲ್ಲಿ ಏನು ಮಾಡ್ತಾರೆ. ಬಿಜೆಪಿ ವರಿಷ್ಠರ ಮಾತಿಗೆ ಮಣಿದು ತಮ್ಮ ನಿರ್ಧಾರ ಬದಲಿಸುವರೋ ಅಥವಾ ಪಕ್ಷೇತರ ಅಭ್ಯರ್ಥಿಯಾಗಿ ಅಖಾಡ ಪ್ರವೇಶಿಸುವರೋ ಎನ್ನುವುದು ಕುತೂಹಲ ಮೂಡಿಸಿದೆ. ಹಾಗಂತ ಜೆಡಿಎಸ್ ನಲ್ಲೂ ಕೂಡ ಅಭ್ಯರ್ಥಿ ಆಯ್ಕೆಯೂ ಫೈನಲ್ ಆಗಿಲ್ಲ.

ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ-ಜೆಡಿಎಸ್ ಒಗ್ಗೂಡಿ ಕಾಂಗ್ರೆಸ್ ಗೆ ಟಕ್ಕರ್

ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ-ಜೆಡಿಎಸ್ ಒಗ್ಗೂಡಿ ಕಾಂಗ್ರೆಸ್ ಮಣಿಸಲು ಸಜ್ಜಾಗಿವೆ. ಉಭಯ ಪಕ್ಷಗಳ ಮೈತ್ರಿಕೂಟದ ಅಭ್ಯರ್ಥಿಯಾಗಿ ಜೆಡಿಎಸ್ ಪಕ್ಷದ ಮಾಜಿ ಸಂಸದ ಸಿ.ಎಸ್. ಪುಟ್ಟರಾಜು ಹೆಸರು ಮುಂಚೂಣಿಗೆ ಬಂದಿದೆ. 2019ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್- ಜೆಡಿಎಸ್ ಮೈತ್ರಿಪಕ್ಷದ ಅಭ್ಯರ್ಥಿಯಾಗಿದ್ದ ನಿಖಿಲ್‌ ಕುಮಾರಸ್ವಾಮಿ ಸ್ಪರ್ಧಿಸಿ ಸೋಲನುಭವಿಸಿದ್ದರು. 2023ರ ವಿಧಾನಸಭಾ ಚುನಾವಣೆಯಲ್ಲಿ ರಾಮನಗರ ಕ್ಷೇತ್ರದಿಂದ ಸ್ಪರ್ಧಿಸಿ ನಿಖಿಲ್ ಪರಾಭವಗೊಂಡಿದ್ದರು. ಪುತ್ರನ ಈ ಎರಡೂ ಸೋಲಿನಿಂದ ಹೆಚ್​ಡಿಕೆ ನಿರಾಶರಾಗಿದ್ದಾರೆ. ಹೀಗಾಗಿ ಒಂದು ವೇಳೆ ಲೋಕಸಭೆ ಚುನಾವಣೆಯಿಂದ ಪುತ್ರನನ್ನು ದೂರವಿಡಬಹುದು. ಅಥವಾ ಹೆಚ್.ಡಿ ಕುಮಾರಸ್ವಾಮಿಯವ್ರೇ ಸ್ಪರ್ಧೆ ಮಾಡಬಹುದು. ಇನ್ನು ಜೆಡಿಎಸ್‌ನಿಂದ ನಾಗಮಂಗಲ ಕ್ಷೇತ್ರದ ಮಾಜಿ ಶಾಸಕ ಕೆ.ಸುರೇಶ್‌ಗೌಡ ಟಿಕೆಟ್ ಆಕಾಂಕ್ಷಿಯಾಗಿದ್ದರೂ ಅವರು ಸಮರ್ಥರಲ್ಲ ಎಂಬ ಭಾವನೆ ಜೆಡಿಎಸ್‌ನವರಲ್ಲೇ ಇದೆ.

ಲೋಕಸಭೆ ಮತ್ತು ವಿಧಾನಸಭಾ ಚುನಾವಣೆಗಳಲ್ಲಿ ಇತ್ತೀಚೆಗೆ ಜೆಡಿಎಸ್ ಪ್ರಾಬಲ್ಯ ಕಳೆದುಕೊಳ್ತಿದೆ. ಹೀಗಾಗಿ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಕಂ ಬ್ಯಾಕ್ ಮಾಡೋಕೆ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಬಿಜೆಪಿ ಜೊತೆ ಕೈ ಜೋಡಿಸಿದ್ದಾರೆ. ಅದ್ರಲ್ಲೂ ಜೆಡಿಎಸ್ ಹಿಡಿತ ಹೊಂದಿರುವ ಹಳೇ ಮೈಸೂರು ಭಾಗದ 5 ಲೋಕಸಭೆ ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡೋಕೆ ತುದಿಗಾಲಲ್ಲಿ ನಿಂತಿದ್ರು. ಇಡೀ ಫ್ಯಾಮಿಲಿ ಸಮೇತ ದೆಹಲಿಗೆ ಹಾರಿ ಬಿಜೆಪಿ ವರಿಷ್ಠದ ಜೊತೆ ಸಾಲು ಸಾಲು ಮೀಟಿಂಗ್ ಮಾಡಿದ್ರು. ಇದೀಗ ಮೂರು ಕ್ಷೇತ್ರಗಳು ಫೈನಲ್ ಆಗಿದ್ರೂ ಮಂಡ್ಯದ ಬಗ್ಗೆ ಹೆಚ್​ಡಿಕೆಗೆ ಆತಂಕ ಇದ್ದೇ ಇದೆ. ಅದ್ರಲ್ಲೂ ಸಂಸದೆ ಸುಮಲತಾ ಅಂಬರೀಶ್ ದುಸ್ವಪ್ನವಾಗಿ ಕಾಡ್ತಿದ್ದಾರೆ. ಇದೇ ಕಾರಣಕ್ಕೆ ಹೆಚ್​ಡಿಕೆ ಸುಮಲತಾರನ್ನೇ ಕ್ಷೇತ್ರದಿಂದ ಹೊರಹಾಕೋ ತಯಾರಿಯಲ್ಲಿದ್ದಾರೆ. ಆದ್ರೆ ಇದಕ್ಕೆ ಬಿಜೆಪಿ ಒಪ್ಪುತ್ತಾ..? ಸುಮಲತಾ ಅಷ್ಟು ಈಸಿಯಾಗಿ ಕ್ಷೇತ್ರ ಬಿಟ್ಟು ಬೇರೆ ಕಡೆ ಹೋಗ್ತಾರಾ ಅನ್ನೋದೇ ಈಗಿರುವ ಪ್ರಶ್ನೆ.

Sulekha