1ನೇ ಕ್ಲಾಸ್ ವಯೋಮಿತಿ ಗೊಂದಲ – ಪರಿಹಾರ ಕೇಳಲು ಬಂದ ಪೋಷಕರ ಮೇಲೆ ರೇಗಾಡಿದ ಶಿಕ್ಷಣ ಸಚಿವ!

ಕರ್ನಾಟಕದಲ್ಲಿ ಮಕ್ಕಳನ್ನು ಒಂದನೇ ತರಗತಿಗೆ ಸೇರಿಸುವ ವಯೋಮಿತಿಯನ್ನು 5.5 ವರ್ಷಗಳಿಗೆ ನಿಗದಿಗೊಳಿಸಿ ಇತ್ತೀಚಿಗೆ ರಾಜ್ಯ ಸರ್ಕಾರ ಆದೇಶ ಹೊರಡಿಸಿತ್ತು. ಆದರೀಗ, ಕೇಂದ್ರ ಶಿಕ್ಷಣ ಇಲಾಖೆ ಹೊಸದಾಗಿ ಸುತ್ತೋಲೆಯೊಂದನ್ನು ಹೊರಡಿಸಿದ್ದು ಅದರ ಪ್ರಕಾರ, ದೇಶದ ಯಾವುದೇ ರಾಜ್ಯದಲ್ಲಿ ಮಕ್ಕಳನ್ನು ಒಂದನೇ ತರಗತಿಗೆ ದಾಖಲು ಮಾಡಿಸಲು ಆ ಮಗುವಿಗೆ ಕನಿಷ್ಟ 6 ವರ್ಷ ವಯಸ್ಸಾಗಿರಬೇಕು ಎಂದು ಹೇಳಿದೆ. ಇದು ಶಾಲಾ ಸಿಬ್ಬಂದಿಗೆ ಹಾಗೂ ಪೋಷಕರಲ್ಲಿ ಗೊಂದಲ ಉಂಟು ಮಾಡಿದೆ. ಇದೀಗ ವಯೋಮಿತಿ ಗೊಂದಲ ವಿಚಾರವಾಗಿ ಭೇಟಿ ಮಾಡಲು ಬಂದಿದ್ದ ಪೋಷಕರ ಮೇಲೆ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅತಿರೇಖದ ವರ್ತನೆ ತೋರಿದ್ದಾರೆ. ಶಿಕ್ಷಣ ಸಚಿವರ ಈ ನಡೆ ಈಗ ಪೋಷಕರ ಆಕ್ರೋಶಕ್ಕೆ ಕಾರಣವಾಗಿದೆ.
ಇದನ್ನೂ ಓದಿ: ಮುಂಬೈ ಇಂಡಿಯನ್ಸ್ ಹಾಗೂ ಗುಜರಾತ್ ಟೈಟಾನ್ಸ್ ಮುಖಾಮುಖಿ – ಮೊದಲ ಗೆಲುವಿಗಾಗಿ ಪಾಂಡ್ಯ, ಗಿಲ್ ಕಾದಾಟ
2025-26ನೇ ಸಾಲಿನ ಶೈಕ್ಷಣಿಕ ವರ್ಷದಲ್ಲಿ 1ನೇ ತರಗತಿ ದಾಖಲಾತಿಯಲ್ಲಿ ವಯೋಮಿತಿ ಗೊಂದಲ ವಿಚಾರವಾಗಿ ಶಿಕ್ಷಣ ಸಚಿವರನ್ನು ಭೇಟಿ ಮಾಡಲು ನೂರಾರು ಪೋಷಕರು ಬಂದಿದ್ದರು. ಈ ವೇಳೆ ಮಾಧ್ಯಮದವರನ್ನು ಕಂಡ ಶಿಕ್ಷಣ ಸಚಿವ, ಮೀಡಿಯಾದವರನ್ನ ಕರೆದುಕೊಂಡು ಬಂದಿದ್ದೀರಾ ಅವರ ಹತ್ತಿರವೇ ಮಾತಾಡಿ ಎಂದು ಕಿಡಿಕಾರಿದ್ದಾರೆ. ಪೋಷಕರ ಜೊತೆ ಮಾಧ್ಯಮದವರ ಬಂದ್ರೆ ರಬ್ಬೀಶ್ ಎಂದು ಹೇಳಿದ್ದಾರೆ.
ದಾಖಲಾತಿಯಲ್ಲಿ ವಯೋಮಿತಿ ಗೊಂದಲ ಬಗೆಹರಿಸುವಂತೆ ಪೋಷಕರು ಮನವಿ ಸಲ್ಲಿಸಲು ಬಂದಿದ್ದರು. ರಾಜ್ಯದಲ್ಲಿ ಸುಮಾರು 1 ಲಕ್ಷಕ್ಕೂ ಹೆಚ್ಚು ಮಕ್ಕಳು 5.6 ವರ್ಷ 6 ತಿಂಗಳು ಮಕ್ಕಳಿದ್ದಾರೆ. ಅವರಿಗೆ 1ನೇ ತರಗತಿ ದಾಖಲಾತಿಗೆ ಅನುಕೂಲ ಮಾಡಿಕೊಡಬೇಕು. ಹೀಗಾಗಿ ಒಂದನೇ ತರಗತಿಗೆ 6 ವರ್ಷ ವಯೋಮಿತಿ ಸಡಿಲಿಕೆ ಮಾಡುವಂತೆ ಪೋಷಕರ ಒತ್ತಾಯಿಸಿದ್ದಾರೆ.
ಈ ಕುರಿತು ಮಾಧ್ಯಮಗಳಲ್ಲಿ ಸುದ್ದಿ ಪ್ರಸಾರವಾಗುತ್ತಿದ್ದಂತೆ ಎಚ್ಚೆತ್ತುಕೊಂಡ ಶಿಕ್ಷಣ ಸಚಿವ ಮಧು ಬಂಗಾರಪ್ಪ ಮಾತನಾಡಿ, ನಾನು ಹೇಳಿದ್ದು ಪೋಷಕರಿಗೆ, ಮಾಧ್ಯಮಗಳಿಗೆ ಅಲ್ಲ. ವಯೋಮಿತಿ ಗೊಂದಲದ ಬಗ್ಗೆ ಪೋಷಕರು ನನ್ನ ಬಳಿ ಸಾಕಷ್ಟು ಬಾರಿ ಬಂದಿದ್ದಾರೆ. ಕಳೆದ ಮೂರು ವರ್ಷಗಳ ಹಿಂದೆ ಆಗಿದೆ. ಈಗ ಕಾನೂನಿನಲ್ಲಿ ಏನು ಮಾಡಲು ಸಾಧ್ಯವಿದೆ ಎಂದು ನೋಡಿಕೊಂಡು ಮಾಡಬೇಕು. ನಾನು ಅಧಿಕಾರಿಗಳಿಗೂ ಈ ಸಮಸ್ಯೆ ಬಗ್ಗೆ ಹೇಳಿದ್ದೇನೆ. ಆದರೆ ಪೋಷಕರು ಪದೇ ಪದೇ ಈ ರೀತಿ ಬಂದು ನನ್ನ ಮೇಲೆ ಒತ್ತಡ ಹಾಕುತ್ತಾರೆ. ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ನಾನು ತೀರ್ಮಾನ ತೆಗೆದುಕೊಳ್ಳಬೇಕು. ಸುಮ್ಮನೇ ಹೇಗೋ ಮಾಡಲು ಸಾಧ್ಯವಿಲ್ಲ ಎಂದರು.
ಇನ್ನೂ ವಯೋಮಿತಿ ಸಡಿಲಿಕೆಗೆ ಖಾಸಗಿ ಶಾಲೆಗಳು ಹಾಗೂ ಕ್ಯಾಮ್ಸ್ ಸಂಘಟನೆ ವಿರೋಧ ವ್ಯಕ್ತಪಡಿಸಿದೆ. ಕರ್ನಾಟಕದಲ್ಲಿ 3 ವರ್ಷಗಳ ಹಿಂದೆಯೇ ವಯೋಮಿತಿ ಬಗ್ಗೆ ಆದೇಶ ಮಾಡಲಾಗಿತ್ತು. ಸರ್ಕಾರದ ಆದೇಶದಂತೆ ಬಹುತೇಕ ಶಾಲೆಗಳು ವಯೋಮಿತಿ ಅನುಗುಣವಾಗಿ ಮಕ್ಕಳ ದಾಖಲಾತಿ ಮಾಡಿಕೊಂಡಿವೆ. ಈಗ ವಯೋಮಿತಿ ಸಡಿಲ ಮಾಡಿ ಎನ್ನುವುದು ತಪ್ಪು. ವಯೋಮಿತಿ ಸಡಿಲಿಕೆಯಿಂದ ಆರ್‌ಟಿಇ ಕಾನೂನು ಉಲ್ಲಂಘನೆ ಆಗುತ್ತದೆ. ಈ ಹಿಂದೆ ದಾಖಲಾದ ಮಕ್ಕಳಿಗೆ ಅನ್ಯಾಯ ಆಗುತ್ತದೆ. ಕೆಲ ಶಾಲೆಗಳು ನಿಯಮ ಪಾಲನೆ ಮಾಡದೇ ದಾಖಲಾತಿ ಮಾಡಿಕೊಂಡಿರುವುದಕ್ಕೆ ಈ ಸಮಸ್ಯೆಯಾಗುತ್ತಿದೆ. ಕೇಂದ್ರದ ಶಾಲೆಗಳಲ್ಲಿ 6 ವರ್ಷ ವಯೋಮಿತಿ ಚಾಲ್ತಿಯಲ್ಲಿದೆ. ಯಾವುದೇ ಕಾರಣಕ್ಕೂ ವಯೋಮಿತಿ ಸಡಿಲ ಮಾಡದಂತೆ ಸರ್ಕಾರಕ್ಕೆ ಸಂಘಟನೆ ಒತ್ತಾಯಿಸಿದೆ.