ಮತ್ತೆ ಟೊಮ್ಯಾಟೋ ದರ ಭಾರಿ ಏರಿಕೆ – ಟೊಮ್ಯಾಟೋ ಬೆಲೆ ಕೆಜಿಗೆ 200 ರೂ.!

ಮತ್ತೆ ಟೊಮ್ಯಾಟೋ ದರ ಭಾರಿ ಏರಿಕೆ – ಟೊಮ್ಯಾಟೋ ಬೆಲೆ ಕೆಜಿಗೆ 200 ರೂ.!

ಬೆಂಗಳೂರು: ಟೊಮ್ಯಾಟೋ ದರ ದಿನೇ ದಿನೇ ಏರಿಕೆಯಾಗುತ್ತಲೇ ಇದೆ. ಕರ್ನಾಟಕ, ತಮಿಳುನಾಡು ಸೇರಿದಂತೆ ದೇಶದ ಹಲವು ರಾಜ್ಯಗಳಲ್ಲಿ ಟೊಮ್ಯಾಟೋ ಬೆಲೆ ಗಗನಕ್ಕೇರುತ್ತಿದ್ದು, ಚಿಕ್ಕಮಗಳೂರು ಜಿಲ್ಲೆಯಲ್ಲಿ ಒಂದು ಕೆಜಿ ಟೊಮ್ಯಾಟೋ 200 ರೂಪಾಯಿಗೆ ಏರಿಕೆ ಕಂಡಿದೆ.

ಕಳೆದ ಒಂದು ವಾರದ ಹಿಂದೆ ಕೆಜಿಗೆ 70-80 ರೂ.ಗೆ ಇದ್ದ ಟೊಮೆಟೋ ದರ ಪೂರೈಕೆ ಕಡಿಮೆ ಆಗಿರುವ ಹಿನ್ನಲೆ ಮತ್ತೆ ದಿಢೀರ್ ಏರಿಕೆ ಕಂಡಿದೆ. ಈ ಬಾರಿ ರಾಜ್ಯದಲ್ಲಿ ಟೊಮೆಟೋ ಇಳುವರಿ ಕಡಿಮೆಯಾಗಿದ್ದು ಇದಕ್ಕೆ ಕಾರಣವಾಗಿದೆ. ಅಲ್ಲದೇ ಜಡಿ ಮಳೆಯಿಂದಾಗಿ ಒಂದಷ್ಟು ಕಡೆ ಬೆಲೆ ಹಾನಿಯಾಗಿದ್ದು ಪೂರೈಕೆಯಲ್ಲಿ ವ್ಯತ್ಯಯಕ್ಕೆ ಕಾರಣವಾಗಿದೆ. ಇದರಿಂದ ಕೆಲವು ಮಾರುಕಟ್ಟೆಗಳಿಗೆ ಟೊಮೆಟೋ ಪೂರೈಕೆಯೇ ಆಗಿಲ್ಲ. ಬಹುತೇಕ ಎಲ್ಲಾ ತರಕಾರಿ ಅಂಗಡಿಗಳಲ್ಲೂ ಕಾಣುತ್ತಿದ್ದ ಟೊಮೆಟೋ ಕಾಣೆಯಾಗಿದೆ.

ಇದನ್ನೂ ಓದಿ: ತರಕಾರಿ ಅಂಗಡಿಯಲ್ಲಿ ಬಾಲ್ಯ.. ಟ್ರಕ್ ಡ್ರೈವರ್ ಆಗಿ ಕೆಲಸ – ಬಡತನದಲ್ಲಿ ಬೆಳೆದ ಹುಡುಗ ಇಂದು ₹8,200 ಕೋಟಿ ಒಡೆಯ

ಇನ್ನು ತಮಿಳುನಾಡನಲ್ಲೂ ಟೊಮ್ಯಾಟೋ ದರ ಏರಿಕೆ ಕಂಡಿದೆ. ರಾಜಧಾನಿ ಚೆನ್ನೈ ಸೇರಿದಂತೆ  ಹಲವು ಪಟ್ಟಣಗಳಲ್ಲಿ ಟೊಮೆಟೊ ದರ ಕಿಲೋಗೆ 200 ರೂ. ತಲುಪಿದೆ. ಚೆನ್ನೈನ ಕೊಯಂಬೆಡು ಸಗಟು ಮಾರುಕಟ್ಟೆಯಲ್ಲಿ ಉತ್ಪನ್ನದ ಕೊರತೆಯಿಂದ ಟೊಮ್ಯಾಟೋ ಬೆಲೆ ಏರಿಕೆಗೆ ಪ್ರಮುಖ ಕಾರಣವಾಗಿದೆ.

ಕರ್ನಾಟಕ ಮತ್ತು ಆಂಧ್ರಪ್ರದೇಶದಲ್ಲಿ ಮಧ್ಯಂತರ ಮಳೆಯಿಂದ ಬೆಳೆ ನಷ್ಟವಾಗಿದೆ. ಭಾರೀ ಮಳೆಯಿಂದಾಗಿ ಸಂಪೂರ್ಣ ಬೆಳೆ ನಷ್ಟವಾಗಿದ್ದು, ಟೊಮ್ಯಾಟೋ ಕೊರತೆ ಉಂಟಾಗಿದೆ. ಇದರಿಂದಾಗಿ ಮಾರುಕಟ್ಟೆಯಲ್ಲಿ ಟೊಮ್ಯಾಟೋ ಬೆಲೆ ಏರಿಕೆಯಾಗಿದೆ. ಇನ್ನು ಒಂದು ವಾರದಲ್ಲಿ ಕೆಜಿಗೆ 250 ರೂ.ಗೆ ಏರಿಕೆಯಾಗುವ ಸಾಧ್ಯತೆ ಇದೆ ಎಂದು ವ್ಯಾಪಾರಿಗಳು ತಿಳಿಸಿದ್ದಾರೆ.

suddiyaana