ಅಫ್ಘಾನಿಸ್ತಾನ ವಲಸಿಗರ ಬಂಧನ, ಹಲ್ಲೆ.. ದೇಶದಿಂದಲೇ ಗಡೀಪಾರು -ನಿರಾಶ್ರಿತರನ್ನು ಹೊರ ದಬ್ಬಿದ್ದೇಕೆ ಪಾಕ್, ಇರಾನ್? 

ಅಫ್ಘಾನಿಸ್ತಾನ ವಲಸಿಗರ ಬಂಧನ, ಹಲ್ಲೆ.. ದೇಶದಿಂದಲೇ ಗಡೀಪಾರು -ನಿರಾಶ್ರಿತರನ್ನು ಹೊರ ದಬ್ಬಿದ್ದೇಕೆ ಪಾಕ್, ಇರಾನ್? 

ತಾಲಿಬಾನ್ ಉಗ್ರ ಸಂಘಟನೆ ಮುಷ್ಠಿಯಲ್ಲಿ ಸಿಲುಕಿರುವ ಅಫ್ಘಾನಿಸ್ತಾನದಲ್ಲಿ ಚಿತ್ರ ವಿಚಿತ್ರ ಕಾನೂನುಗಳನ್ನು ಹೇರಲಾಗುತ್ತಿದೆ. ಮಹಿಳೆಯರನ್ನಂತೂ ನಾಲ್ಕು ಗೋಡೆಗಳ ನಡುವೆ ಸೀಮಿತ ಮಾಡಲಾಗುತ್ತಿದೆ. ತಾಲಿಬಾನಿಗಳ ಕರಾಳ ಇತಿಹಾಸದ ಬಗ್ಗೆ ತಿಳಿದಿರುವ ಆಫ್ಘನ್ನರಿಗೆ ಆತಂಕ ಹೆಚ್ಚಾಗುತ್ತಿದೆ. ಇದೇ ಕಾರಣಕ್ಕೆ ಅಲ್ಲಿನ ಲಕ್ಷಾಂತರ ನಿವಾಸಿಗಳು ಪಲಾಯನ ಮಾಡುತ್ತಿದ್ದಾರೆ. ಆಫ್ಘನ್ ತೊರೆದವರ, ತೊರೆಯುತ್ತಿರುವವರ ಹಾಗೂ ತೊರೆಯಲು ಹಾತೊರೆಯುತ್ತಿರುವವರ ಸಂಖ್ಯೆ ಗಣನೀಯವಾಗಿ ಏರಿಕೆಯಾಗುತ್ತಿದೆ. ಆದ್ರೆ ದೇಶ ಬಿಟ್ಟು ಹೋಗುವ ನಿರಾಶ್ರಿತರಿಗೆ ಈಗ ಬೇರೆ ರಾಷ್ಟ್ರಗಳಲ್ಲೂ ನೆಲೆ ಇಲ್ಲದಂತಾಗಿದೆ. ಅಫ್ಘಾನಿಸ್ತಾನದ ಪ್ರಜೆಗಳನ್ನ ಪಾಕಿಸ್ತಾನ ದೇಶದಿಂದ ಹೊರದಬ್ಬುತ್ತಿದೆ. ಇರಾನ್ ಕೂಡ ಕ್ರೂರವಾಗಿ ನಡೆದುಕೊಳ್ತಿದೆ. ಇರಾನ್‌ನಲ್ಲಿರುವ ಅಫ್ಘಾನ್ ನಿರಾಶ್ರಿತರನ್ನು ಬಂಧಿಸಿ ಪೊಲೀಸರು ಕಿರುಕುಳ ನೀಡುತ್ತಿದ್ದಾರೆ ಎನ್ನುವ ಆಘಾತಕಾರಿ ಅಂಶ ಹೊರಬಿದ್ದಿದೆ.

ಸದಾ ಉಗ್ರಕೃತ್ಯಗಳಿಂದಲೇ ವಿಶ್ವಮಟ್ಟದಲ್ಲಿ ಛೀಮಾರಿ ಹಾಕಿಸಿಕೊಳ್ಳುವ ಪಾಕಿಸ್ತಾನದ ಸ್ಥಿತಿ ಈಗಾಗಲೇ ಅದೋಃಗತಿಗೆ ತಲುಪಿದೆ. ಆರ್ಥಿಕ ಬಿಕ್ಕಟ್ಟು, ತಾನೇ ಸಾಕಿದ ಭಯೋತ್ಪಾದಕರ ಹಿಂಸಾತ್ಮಕ ಕೃತ್ಯಗಳು ದೇಶದಲ್ಲಿ ನರಕ ಸೃಷ್ಟಿಸಿದೆ. ತನ್ನ ದೇಶದ ಜನರನ್ನೇ ಸಾಕಲು ಆಗದ ಪಾಕಿಸ್ತಾನ ಬೇರೆ ರಾಷ್ಟ್ರಗಳ ನಿರಾಶ್ರಿತರಿಗೆ ನೆರವು ನೀಡುತ್ತೆ ಅನ್ನೋದನ್ನ ನಿರೀಕ್ಷೆ ಮಾಡಲು ಆಗಲ್ಲ ಬಿಡಿ. ಇದೇ ಕಾರಣಕ್ಕೆ ಅಫ್ಘಾನಿಸ್ತಾನದ ವಲಸಿಗರನ್ನ ದೇಶದಿಂದ ಗಡೀಪಾರು ಮಾಡ್ತಿದೆ. ಅನುಮತಿ ಇಲ್ಲದೇ ಪಾಕಿಸ್ತಾನಕ್ಕೆ ಎಂಟ್ರಿಕೊಟ್ಟಿರುವ ಅಫ್ಘಾನ್‌ ಪ್ರಜೆಗಳು ಕೂಡಲೇ ದೇಶ ತೊರೆಯಬೇಕು. ಇಲ್ಲದಿದ್ದರೇ ಹುಡುಕಿ ಹುಡುಕಿ ಹೊಡೆದೋಡಿಸುತ್ತೇವೆ ಎಂದು ಎಚ್ಚರಿಕೆ ನೀಡಿದೆ. ಒಂದುವೇಳೆ ಗುರುತಿನ ಚೀಟಿ ತೋರಿಸದಿದ್ರೆ, ಅವ್ರ ರಾಷ್ಟ್ರೀಯತೆಯನ್ನ ಗುರುತಿಸಲು DNA ಟೆಸ್ಟ್ ಕೂಡ ಮಾಡಿಸ್ತೇವೆ. ಸೇನೆಯನ್ನು ಬಳಸಿಕೊಂಡು ದೇಶದಿಂದಲೇ ಹೊರಹಾಕುತ್ತೇವೆ ಎಂದು ವಾರ್ನಿಂಗ್ ಕೊಟ್ಟಿದೆ. ಅಫ್ಘಾನಿಸ್ತಾನ  ಪ್ರಜೆಗಳು ನವೆಂಬರ್ 1ರೊಳಗೆ ದೇಶ ತೊರೆಯುವಂತೆ ಡೆಡ್​​ಲೈನ್ ಕೂಡ ನೀಡಿತ್ತು. ಪಾಕ್ ಆದೇಶದ ಮೇರೆಗೆ ಅಫ್ಘಾನಿಸ್ತಾನದ ನಾಗರಿಕರು ತೊರ್ಕಾಮ್ ಮತ್ತು ಚಮನ್ ಪ್ರದೇಶಗಳಲ್ಲಿರುವ ಗಡಿ ದಾಟಿ ಪಾಕಿಸ್ತಾನವನ್ನು ತೊರೆಯುತ್ತಿದ್ದಾರೆ. ಆದ್ರೆ ಪಾಕ್ ತೊರೆಯುತ್ತಿರುವ ಅಫ್ಘನ್ನರ ಸ್ಥಿತಿ ನಿಜಕ್ಕೂ ಕರುಣಾಜನಕವಾಗಿದೆ.

ಇದನ್ನೂ ಓದಿ : ಹಮಾಸ್ ಮೇಲೆ ಯುದ್ಧ.. ಇಸ್ರೇಲ್ ಆರ್ಥಿಕತೆ 11% ಕುಸಿತ – ಗಾಜಾ ಗೆದ್ದರೂ ಇಸ್ರೇಲ್ ಬೆಲೆ ತೆರಬೇಕಾ?

ಪಾಕಿಸ್ತಾನದಲ್ಲಿ ನೆಲೆಸಿರುವ ಅಕ್ರಮ ವಲಸಿಗರ ವಿರುದ್ಧ ಕಠಿಣ ಕ್ರಮ ಕೈಗೊಳ್ಳೋದಾಗಿ ಅಲ್ಲಿನ ಸರ್ಕಾರ ಎಚ್ಚರಿಕೆ ನೀಡಿದೆ. ಪರಿಣಾಮ ಆಫ್ಘಾನ್​ನಿಂದ ಪಾಕ್​ಗೆ ವಲಸೆ ಬಂದಿದ್ದ ಲಕ್ಷಾಂತರ ಆಫ್ಘನ್ ಪ್ರಜೆಗಳು ಹಿಂತಿರುಗುತ್ತಿದ್ದಾರೆ. ಬಂಧನ ಮತ್ತು ಗಡಿಪಾರು ತಪ್ಪಿಸಲು ಸ್ವದೇಶಕ್ಕೆ ಮರಳುತ್ತಿದ್ದಾರೆ. ಆದ್ರೆ ಹೀಗೆ ಹೋಗುವ ಆಫ್ಘನ್ ನಾಗರಿಕರ ಪರಿಸ್ಥಿತಿ ತೀರಾ ಹದಗೆಟ್ಟಿದ್ದು ಸಮಸ್ಯೆಗಳ ಸರಮಾಲೆಯೇ ಸೃಷ್ಟಿಯಾಗಿದೆ. ಪಾಕಿಸ್ತಾನದ ಗಡಿ ದಾಟಿದ ತಕ್ಷಣ ಅವರಿಗೆ ಸಂಕಷ್ಟಗಳ ಬೆಟ್ಟವೇ ಎದುರಾಗುತ್ತಿದೆ. ಆಹಾರ ಮತ್ತು ಕುಡಿಯುವ ನೀರಿನಂಥ ಅಗತ್ಯ ಸೌಕರ್ಯಗಳು ಸಿಗದೆ ಒದ್ದಾಡುತ್ತಿದ್ದಾರೆ. ಅಫ್ಘಾನಿಸ್ತಾನದ ನಾಗರಿಕರಿಗೆ ವಾಸಿಸಲು ಮನೆಗಳಿಲ್ಲ, ಶೌಚಾಲಯ, ಆಹಾರ ಸೇರಿದಂತೆ ಮೂಲಸೌಕರ್ಯಗಳ ಸೌಲಭ್ಯಗಳಿಲ್ಲ. ಬಯಲಿನಲ್ಲೇ ಮಲಗಿ ಕಾಲಕಳೆಯಬೇಕಾಗಿದ್ದು ಇದರಿಂದ ಪುಟ್ಟ ಪುಟ್ಟ ಮಕ್ಕಳಿಗೂ ಸಮಸ್ಯೆಯಾಗುತ್ತಿದೆ. ಇನ್ನು ತಾಲಿಬಾನಿಗಳು ಆಫ್ಘನ್ ನಾಗರಿಕರಿಗೆ ವಾಸಿಸಲು ಶಿಬಿರಗಳನ್ನ ಸ್ಥಾಪನೆ ಮಾಡಿದ್ರೂ ಕೂಡ ಅವುಗಳಲ್ಲಿ ಶೌಚಾಲಯಗಳಿಲ್ಲ. ಇದ್ರಿಂದಾಗಿ ಬಯಲು ಶೌಚದಿಂದ ಸುತ್ತಮುತ್ತ ಕೊಳಚೆಯೇ ತುಂಬಿದ್ದು ಅನಾರೋಗ್ಯಕ್ಕೀಡಾಗುತ್ತಿದ್ದಾರೆ. ಅಲ್ಲದೆ  ಆಹಾರ, ವಿದ್ಯುತ್‌ ಸೌಲಭ್ಯವೂ ಇಲ್ಲ. ಹೀಗಾಗಿ ಶಿಬಿರದಲ್ಲಿ ವಾಸಿಸುವ ಈ ಜನರು ತವರಿಗೆ ಮರಳಲು ಕಾಯುತ್ತಿದ್ದಾರೆ.

ಗಡಿಪಾರು ಬಿಕ್ಕಟ್ಟಿನಿಂದಾಗಿ ಅಫ್ಘಾನಿಸ್ತಾನದಿಂದ ಪಾಕಿಸ್ತಾನದವರೆಗಿನ ಗಡಿಯುದ್ದಕ್ಕೂ ಟ್ರಕ್‌ಗಳು ಸರತಿ ಸಾಲಿನಲ್ಲಿ ನಿಂತಿವೆ. ಜನರು ಹತಾಶೆಯಿಂದ ಗಡಿ ದಾಟುತ್ತಿದ್ದಾರೆ. ಪಾಕಿಸ್ತಾನದಲ್ಲಿ ಹೊರದಬ್ಬಲ್ಪಡುತ್ತಿರುವ ನಿರಾಶ್ರಿತರಿಗೆ ತಾಲಿಬಾನಿಗಳು ಶಿಬಿರಗಳನ್ನು ಸ್ಥಾಪಿಸಿದ್ದಾರೆ. ಆದರೆ ಇಲ್ಲಿ ಅವರು ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಕುಡಿಯಲು ನೀರು, ಉಣ್ಣಲು ಆಹಾರಕ್ಕೆ ತತ್ವಾರ ಉಂಟಾಗಿದ್ದು, ಬಯಲಿನಲ್ಲೇ ಮಲಗುವಂತಾಗಿದೆ. ವಿಶ್ವಸಂಸ್ಥೆಯ ಅಂಗ ಸಂಸ್ಥೆಗಳು ಮತ್ತು ಇತರ ಸಾಮಾಜಿಕ ಸಂಸ್ಥೆಗಳು ಸಹ ಶಿಬಿರಗಳನ್ನು ಸ್ಥಾಪಿಸುತ್ತಿವೆ. ಅಸಲಿಗೆ 2021ರ ಆಗಸ್ಟ್ ನಲ್ಲಿ ತಾಲಿಬಾನ್ ಸರ್ಕಾರ ಅಫ್ಘಾನಿಸ್ತಾನವನ್ನ ವಶಪಡಿಸಿಕೊಂತ್ತು. ಈ ವೇಳೆ 6 ಲಕ್ಷಕ್ಕೂ ಹೆಚ್ಚು ಆಫ್ಘನ್ ಪ್ರಜೆಗಳು ಪಾಕಿಸ್ತಾನಕ್ಕೆ ಪಲಾಯನ ಮಾಡಿದ್ದರು. ಅಲ್ಲದೆ ನಂತರದ ದಿನಗಳಲ್ಲಿ ತಾಲಿಬಾನಿ ಆಡಳಿತಕ್ಕೆ ಬೇಸತ್ತು ಲಕ್ಷಾಂತರ ಜನ ಪಾಕ್​ಗೆ ವಲಸೆ ಹೋಗಿದ್ದರು. ಹೀಗೆ ಇದುವರೆಗೂ 17 ಲಕ್ಷಕ್ಕೂ ಹೆಚ್ಚು ಆಫ್ಘನ್ ಜನ ಪಾಕ್ ನಲ್ಲಿ ನೆಲೆ ಕಂಡುಕೊಂಡಿದ್ದಾರೆ. ಆದ್ರೆ ಲಕ್ಷ ಲಕ್ಷ ಜನರನ್ನ ದೇಶದಿಂದ  ಹೊರ ಹಾಕುತ್ತಿರೋ ಪಾಕಿಸ್ತಾನ ಮಾತ್ರ ತನ್ನ ನಡೆಯನ್ನ ಸಮರ್ಥನೆ ಮಾಡಿಕೊಳ್ತಿದೆ. ಹಲವು ಕಾರಣಗಳನ್ನು ನೀಡುತ್ತಿದೆ.

ಅಷ್ಟಕ್ಕೂ ವಲಸಿಗರನ್ನು ಪಾಕಿಸ್ತಾನ ಹೊರ ಹಾಕಲು ಹಲವು ಕಾರಣಗಳನ್ನು ನೀಡುತ್ತಿದೆ. ಆರ್ಥಿಕವಾಗಿ ದಿವಾಳಿಯಾಗಿ, ಸ್ಥಿರ ಸರ್ಕಾರವಿಲ್ಲದೆಯೇ ಕಂಗೆಟ್ಟಿರುವ ಪಾಕಿಸ್ತಾನದಲ್ಲಿ ಸದ್ಯ ಇರುವ ಮಧ್ಯಂತರ ಸರ್ಕಾರವು ಪಾಕ್‌ ಮಿಲಿಟರಿಯ ಹಿಡಿತದಲ್ಲಿದ್ದು ಚುನಾವಣೆಯನ್ನ ಎದುರು ನೋಡುತ್ತಿದೆ. ಇದರ ನಡುವೆ ಪಾಕಿಸ್ತಾನದಲ್ಲಿ ಆತ್ಮಾಹುತಿ ಬಾಂಬ್ ದಾಳಿಗಳ ಪ್ರಕರಣಗಳು ಹೆಚ್ಚುತ್ತಿದ್ದು, 2023ರಲ್ಲೇ ಈವರೆಗೂ 24 ಆತ್ಮಹತ್ಯಾ ಬಾಂಬ್ ದಾಳಿಗಳು ನಡೆದಿವೆ. ಈ ಪೈಕಿ 14 ದಾಳಿಗಳು ಪಾಕ್ ಸರ್ಕಾರ ಮತ್ತು ಸೇನೆಯ ವಿರುದ್ಧವೇ ನಡೆದಿದೆ. ಈ ದಾಳಿಗಳಲ್ಲಿ ಆಫ್ಘನ್ ಪ್ರಜೆಗಳು ಭಾಗಿಯಾಗಿರುವುದು ಕಂಡುಬಂದಿದೆ ಎಂದು ಆರೋಪಿಸಲಾಗುತ್ತಿದೆ. ಪುರಾವೆಗಳನ್ನು ಒದಗಿಸದೆ ಆಫ್ಘನ್ನರು ಭಾಗಿಯಾಗಿದ್ದಾರೆ. ಕಳ್ಳಸಾಗಣೆ, ಉಗ್ರಗಾಮಿ ದಾಳಿಗಳು, ಅಪರಾಧ ನಡೆಸುತ್ತಿದ್ದಾರೆ ಎಂದು ಪಾಕ್ ಸರ್ಕಾರ ದೂಷಿಸುತ್ತಿದೆ. ಅಲ್ಲದೆ ಪಾಕಿಸ್ತಾನದಲ್ಲಿ ದಾಖಲೆರಹಿತ ಇರುವ ವಿದೇಶಿಯರಲ್ಲಿ ಹೆಚ್ಚಿನವರು ಆಫ್ಘನ್ನರೇ ಇದ್ದಾರೆ. 40 ಲಕ್ಷಕ್ಕೂ ಹೆಚ್ಚು ವಲಸಿಗರು ಮತ್ತು ನಿರಾಶ್ರಿತಯರು ನೆಲೆ ಕಂಡುಕೊಂಡಿದ್ದು, ಈ ಪೈಕಿ ಸುಮಾರು 1.7 ಮಿಲಿಯನ್ ಅಂದ್ರೆ 17 ಲಕ್ಷ ಜನ ಅಫ್ಘಾನಿಸ್ತಾನದವರೇ ಇದ್ದಾರೆ. ಅನೇಕರು ತಮ್ಮ ಇಡೀ ಜೀವನ ಪಾಕಿಸ್ತಾನದಲ್ಲೇ ವಾಸಿಸುತ್ತಿದ್ದಾರೆ ಎಂದು ಪಾಕ್ ಹೇಳಿಕೊಂಡಿದೆ. ಇದೇ ಕಾರಣಕ್ಕೆ ಅನ್ವರ್-ಉಲ್-ಹಕ್ ಕಾಕರ್ ಸರ್ಕಾರದಿಂದ ನವೆಂಬರ್ 1 ರೊಳಗೆ ದೇಶವನ್ನು ತೊರೆಯುವಂತೆ ವಲಸಿಗರಿಗೆ ಡೆಡ್ ಲೈನ್ ನೀಡಿತ್ತು. ದೇಶ ತೊರೆಯದಿದ್ದರೆ ಅಂತಹವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳೋದಾಗಿ ಎಚ್ಚರಿಕೆ ನೀಡಿತ್ತು. ಪಾಕ್ ಸರ್ಕಾರದ ಆದೇಶದ ಬಳಿಕ 1,70,000 ಕ್ಕೂ ಹೆಚ್ಚು ಆಫ್ಘನ್ ಪ್ರಜೆಗಳು ಪಾಕಿಸ್ತಾನವನ್ನು ತೊರೆದಿದ್ದಾರೆ.

ಸದ್ಯ ಆಫ್ಘನ್ನರ ಗಡಿಪಾರನ್ನ ಸಮರ್ಥನೆ ಮಾಡಿಕೊಳ್ಳುತ್ತಿರುವ ಪಾಕಿಸ್ತಾನ ಕ್ರಿಮಿನಲ್ ದಾಖಲೆಗಳನ್ನು ಹೊಂದಿರುವರನ್ನು ಮೊದಲು ಗಡಿಪಾರು ಮಾಡುತ್ತೇವೆ ಎಂದಿದೆ. ತನ್ನದೇ ಆದ ಆರ್ಥಿಕ ವ್ಯವಹಾರಗಳು ಮತ್ತು ಭದ್ರತೆಯ ಸಮಸ್ಯೆಯನ್ನು ಹೊಂದಿರುವುದಾಗಿ ಸಮರ್ಥಿಸಿಕೊಳ್ಳುತ್ತಿದೆ. ಪಾಕಿಸ್ತಾನದ ಆರ್ಥಿಕತೆಯು ತೊಂದರೆಯಲ್ಲಿದೆ ಮತ್ತು ತೆರಿಗೆಯನ್ನು ಪಾವತಿಸದ, ದಾಖಲೆಗಳಿಲ್ಲದ ವಲಸಿಗರು ಅಳಿದುಳಿದ ಸಂಪನ್ಮೂಲಗಳನ್ನು ಬರಿದು ಮಾಡುತ್ತಿದ್ದಾರೆ ಎನ್ನುತ್ತಿದೆ. ಅಲ್ಲದೆ ಅಫ್ಘನ್ ಪ್ರಜೆಗಳನ್ನ ದೇಶದಿಂದ ಹೊರ ಹಾಕೋಕೆ ಪಾಕಿಸ್ತಾನದ ಅಧಿಕಾರಿಗಳು ಪಣ ತೊಟ್ಟಂತಿದೆ. ಕಾನೂನು ಬಾಹಿರವಾಗಿ ನೆಲೆಸಿರುವ ವಲಸಿಗರು ಮತ್ತು ಅವರಿಗೆ ಆಶ್ರಯ ನೀಡಿರುವ ಪಾಕಿಸ್ತಾನದ ನಿವಾಸಿಗಳಿಗೆ ಎಚ್ಚರಿಕೆ ನೀಡಲಾಗುತ್ತಿದೆ. ತಮಗೆ ಅನುಮಾನ ಬಂದ ಮನೆಗಳಿಗೆ ನುಗ್ಗಿ ಅಕ್ರಮವಾಗಿ ನೆಲೆಸಿರುವ ವಿದೇಶಿ ಪ್ರಜೆಗಳನ್ನು ಹೊರ ಹಾಕುತ್ತಿದ್ದಾರೆ. ಅಫ್ಘಾನಿಸ್ತಾನದ ಪ್ರಜೆಗಳ ಮೇಲಿನ ಪಾಕ್ ಆರೋಪವನ್ನ ತಾಲಿಬಾನ್ ಆಡಳಿತ ತಳ್ಳಿ ಹಾಕಿದೆ. ಬಲವಂತವಾಗಿ ಗಡಿಪಾರು ಮಾಡದೆ ಸ್ವಲ್ಪ ಸಮಯ ನೀಡಬೇಕು ಎಂದಿದೆ. ಮತ್ತೊಂದೆಡೆ ಇರಾನ್ ಕೂಡ ಗಡಿಪಾರು ಅಸ್ತ್ರ ಪ್ರಯೋಗಿಸ್ತಿದೆ.

ಪಾಕಿಸ್ತಾನದ ಬಳಿಕ ಇರಾನ್‌ ನಲ್ಲೂ ಕೂಡ ಬಲವಂತವಾಗಿ ಆಫ್ಘನ್ ನಿರಾಶ್ರಿತರನ್ನ ಗಡಿಪಾರು ಮಾಡಲಾಗುತ್ತಿದೆ. ಅಫ್ಘಾನಿಸ್ತಾನ ನಿರಾಶ್ರಿತರ ಪ್ರತಿನಿಧಿಗಳು ಇರಾನ್ ನಡೆಗೆ ತೀವ್ರ ಟೀಕೆ ವ್ಯಕ್ತಪಡಿಸಿದ್ದಾರೆ. ಅಫ್ಘಾನ್ ನಿರಾಶ್ರಿತರು ಎದುರಿಸುತ್ತಿರುವ ಸವಾಲುಗಳನ್ನು ಪರಿಹರಿಸಬೇಕು. ಆದರೆ ಇರಾನ್ ಜನರು ಮತ್ತು ಸರ್ಕಾರ ಅಫ್ಘಾನ್ ನಿರಾಶ್ರಿತರ ಮೇಲೆ ಬಹಳ ದಬ್ಬಾಳಿಕೆ  ನಡೆಸುತ್ತಿದೆ. ಚಳಿಗಾಲದ ವೇಳೆಯೇ ನಿರಾಶ್ರಿತರನ್ನು ಇರಾನ್ ಹೊರಗೆ ದಬ್ಬುತ್ತಿದೆ. ಇರಾನ್‌ ನಲ್ಲಿರುವ ಅಫ್ಘಾನ್ ನಿರಾಶ್ರಿತರಿಗೆ ವಸತಿಯೇ ಇಲ್ಲ. ಗುರುತಿನ ದಾಖಲೆಗಳ ಕೊರತೆಯಿಂದ ಉದ್ಯೋಗಗಳೂ ಸಿಗುತ್ತಿಲ್ಲ ಎಂದು ಆರೋಪಿಸಿದ್ದಾರೆ.

ಅಫ್ಘಾನ್‌ನ ನೆಲದಲ್ಲಿ ತಾಲಿಬಾನ್ ಉಗ್ರರು ಮತ್ತೆ ಸರ್ಕಾರ ರಚಿಸಿ 3 ವರ್ಷಗಳೇ ಕಳೆದಿದೆ. ಸುಮಾರು 20 ವರ್ಷ ಸುದೀರ್ಘ ಹೋರಾಟದ ಬಳಿಕ, 2021ರ ಆಗಸ್ಟ್‌ನಲ್ಲಿ ಅಮೆರಿಕ ಸೇನೆ ಸಂಪೂರ್ಣ ಅಫ್ಘಾನಿಸ್ತಾನ ತೊರೆದು ಹೊರಬಂದಿತ್ತು. ಜೋ ಬೈಡನ್ ಆಗಿನ ಸಮಯಕ್ಕೆ 2021ರ ಆಗಸ್ಟ್ 31ನ್ನು ಡೆಡ್‌ಲೈನ್ ಆಗಿ ನೀಡಿ ಅಮೆರಿಕದ ಸಂಪೂರ್ಣ ಸೇನೆ ಕರೆಸಿಕೊಂಡರು. ಅಲ್ಲಿಗೆ ಅಫ್ಘಾನಿಸ್ತಾನ ಜನರ ನೆಮ್ಮದಿ ಹಾರಿಹೋಗಿತ್ತು. ಅಲ್ಲಿನ ಜನಕ್ಕೆ ನೆಮ್ಮದಿಯಾಗಿ ಬದುಕು ನಡೆಸುವ ಹಕ್ಕು ಕೂಡ ಇಲ್ಲದಂತಾಗಿದೆ. ಇದೀಗ ವಿದೇಶಗಳಿಂದಲೂ ಗೇಟ್ ಪಾಸ್ ನೀಡಲಾಗುತ್ತಿದೆ. ಅಫ್ಘಾನಿಸ್ತಾನದಲ್ಲಿ ತಾಲಿಬಾನಿಗಳ ಟಾರ್ಚರ್ ಸಹಿಸಿಕೊಳ್ಳಲಾಗದೇ ನೆರೆ ರಾಷ್ಟ್ರಗಳಲ್ಲಿ ಬದುಕಲಾಗದೆ ಲಕ್ಷಾಂತರ ಅಫ್ಘನ್ನರು ವಿಲ ವಿಲ ಒದ್ದಾಡುತ್ತಿರೋದಂತೂ ಸುಳ್ಳಲ್ಲ.

Shantha Kumari