ಮಣಿಪುರ ಬೆನ್ನಲ್ಲೇ ಪಶ್ಚಿಮ ಬಂಗಾಳದಲ್ಲಿ ಮತ್ತೊಂದು ಪೈಶಾಚಿಕ ಕೃತ್ಯ – ಮಹಿಳೆಯರ ಅರೆಬೆತ್ತಲೆ ಮೆರವಣಿಗೆ

ಮಣಿಪುರ ಬೆನ್ನಲ್ಲೇ ಪಶ್ಚಿಮ ಬಂಗಾಳದಲ್ಲಿ ಮತ್ತೊಂದು ಪೈಶಾಚಿಕ ಕೃತ್ಯ – ಮಹಿಳೆಯರ ಅರೆಬೆತ್ತಲೆ ಮೆರವಣಿಗೆ

ಮಾಲ್ಡಾ: ಇಡೀ ದೇಶವೇ ತಲೆ ತಗ್ಗಿಸುವಂತಹ ದುಷ್ಕೃತ್ಯ ಮಣಿಪುರದಲ್ಲಿ ನಡೆದಿದೆ. ಇಬ್ಬರು ಮಹಿಳೆಯರನ್ನು ವಿವಸ್ತ್ರಗೊಳಿಸಿ ಸಾರ್ವಜನಿಕ ಮೆರವಣಿಗೆ ಮಾಡಿದ ಘಟನೆ ಬೆಳಕಿಗೆ ಬಂದು ದೇಶವನ್ನೇ ತಲ್ಲಣಗೊಳಿಸಿದೆ. ಇದೀಗ ಇದರ ಬೆನ್ನಲ್ಲೇ ಮತ್ತೊಂದು ಇಂತಹುದೇ ಪೈಶಾಚಿಕ ಕೃತ್ಯ ನಡೆದಿದೆ. ಪಶ್ಚಿಮ ಬಂಗಾಳದ ಮಾಲ್ಡಾದಲ್ಲಿ ಇಬ್ಬರು ಮಹಿಳೆಯರನ್ನು ಥಳಿಸಿ ಅರೆಬೆತ್ತಲೆಯಾಗಿ ಮೆರವಣಿಗೆ ಮಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ಇದನ್ನೂ ಓದಿ: ರಾಷ್ಟ್ರ ರಕ್ಷಣೆ ಮಾಡಿದ ನನಗೆ ನನ್ನ ಪತ್ನಿಯನ್ನು ರಕ್ಷಣೆ ಮಾಡಲು ಆಗಲಿಲ್ಲ –  ಮಣಿಪುರದಲ್ಲಿ ನಿವೃತ್ತ ಯೋಧನ ಕಣ್ಣೀರು

ಪ್ರಾಥಮಿಕ ವರದಿಯ ಪ್ರಕಾರ ಈ ಘಟನೆ ನಡೆದು  ಮೂರ್ನಾಲ್ಕು ದಿನಗಳಾಗಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಪಶ್ಚಿಮ ಬಂಗಾಳದ ಮಾಲ್ಡಾದ ಪಕುವಾಹತ್‌ನಲ್ಲಿ ಸ್ಥಳೀಯರು ಕಳ್ಳತನದ ಶಂಕೆಯ ಮೇಲೆ ಇಬ್ಬರು ಮಹಿಳೆಯರನ್ನು ಹಿಡಿದು ಥಳಿಸಿದ್ದಾರೆ. ಆರೋಪಿತ ಇಬ್ಬರು ಮಹಿಳೆಯರ ಮೇಲೆ ಹಲವಾರು ಮಹಿಳೆಯರು ಹಲ್ಲೆ ನಡೆಸುತ್ತಿರುವುದು ಈ ವಿಡಿಯೊದಲ್ಲಿ ಸೆರೆಯಾಗಿದೆ. ಇಬ್ಬರು ಮಹಿಳೆಯರನ್ನು ಅರೆಬೆತ್ತಲೆಗೊಳಿಸಿ ಕೂದಲು ಹಿಡಿದು ಎಳೆದಾಡಿ, ಚಪ್ಪಲಿಯಲ್ಲಿ ಹೊಡೆಯುತ್ತಿರುವುದನ್ನು ವೀಡಿಯೋದಲ್ಲಿ ಕಾಣಬಹುದಾಗಿದೆ. ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗುತ್ತಿದೆ. ಆದರೆ, ಘಟನೆ ಕುರಿತು ಪಶ್ಚಿಮ ಬಂಗಾಳ ಪೊಲೀಸರಿಗೆ ಯಾವುದೇ ದೂರು ದಾಖಲಾಗಿಲ್ಲ.

ಈ ಘಟನೆಯ ಬಗ್ಗೆ ಪಶ್ಚಿಮ ಬಂಗಾಳದ ಪೊಲೀಸರು ಪ್ರತಿಕ್ರಿಯಿಸಿದ್ದಾರೆ. ಈ ವಿಡಿಯೋ ತಮ್ಮ ಗಮನಕ್ಕೆ ಬಂದ ನಂತರವೇ ಘಟನೆಯ ಬಗ್ಗೆ ಗೊತ್ತಾಯಿತು. ಪ್ರಾಥಮಿಕ ತನಿಖೆ ನಡೆಸಿದಾಗ ಇಬ್ಬರು ಮಹಿಳೆಯರು ಕಳ್ಳತನ ಮಾಡುತ್ತಿದ್ದಾಗ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದು, ನಂತರ ಸ್ಥಳೀಯ ಮಹಿಳಾ ಅಂಗಡಿಯವರು ಥಳಿಸಿದ್ದಾರೆ ಎಂದು ತಿಳಿದುಬಂದಿದೆ.

ಘಟನೆಯ ನಂತರ ಇವರನ್ನು ಹಿಡಿದ ಮಹಿಳೆಯರೂ ಪರಾರಿಯಾಗಿದ್ದು, ಥಳಿಸಿದವರು ಭಯದಿಂದ ದೂರು ದಾಖಲಿಸಲು ಹಿಂದೇಟು ಹಾಕಿದ್ದಾರೆ. ಇದೀಗ ಪೊಲೀಸರು ಈ ಬಗ್ಗೆ ತನಿಖೆ ಆರಂಭಿಸಿದ್ದು, ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದಿದ್ದಾರೆ.

suddiyaana