ಸೋತ ಬಳಿಕ ಅಲ್ಕರಾಝ್‌ಗೆ ‘ಸ್ಪ್ಯಾನಿಷ್ ಬುಲ್’ ಎಂದ ಜೊಕೊವಿಕ್ – ಮಗನಿಗಾಗಿ ಕಣ್ಣೀರಿಟ್ಟ ಟೆನಿಸ್ ದೈತ್ಯ

ಸೋತ ಬಳಿಕ ಅಲ್ಕರಾಝ್‌ಗೆ ‘ಸ್ಪ್ಯಾನಿಷ್ ಬುಲ್’ ಎಂದ ಜೊಕೊವಿಕ್ – ಮಗನಿಗಾಗಿ ಕಣ್ಣೀರಿಟ್ಟ ಟೆನಿಸ್ ದೈತ್ಯ

ಟೆನಿಸ್ ದೈತ್ಯ, ಸರ್ಬಿಯಾದ ಸೂಪರ್‌ಸ್ಟಾರ್ ನೊವಾಕ್ ಜೊಕೊವಿಕ್‌ರನ್ನು ಮಣಿಸಿದ ಯುವ ಆಟಗಾರ ಕಾರ್ಲೋಸ್ ಅಲ್ಕರಾಝ್ ವಿಂಬಲ್ಡನ್ ಕಿರೀಟ ಮುಡಿಗೇರಿಸಿಕೊಂಡಿದ್ದಾರೆ. ದಿಗ್ಗಜ ಆಟಗಾರನನ್ನು ಸೋಲಿಸಿದ ಈ ಅಲ್ಕರಾಝ್ ಯಾರು?, ಸೋತ ಬಳಿಕ ಜೊಕೊವಿಕ್ ಯುವ ಆಟಗಾರನಿಗೆ ಏನು ಹೇಳಿದರು. ಪ್ರತಿಷ್ಠಿತ ವಿಂಬಲ್ಡನ್ ಪಂದ್ಯ ಮುಗಿದ ನಂತರ ಜೊಕೊವಿಕ್ ತನ್ನ ಮುದ್ದಿನ ಮಗನ ಬಗ್ಗೆ ಮಾತನಾಡುವಾಗ ಭಾವುಕರಾಗಿದ್ದು ಯಾಕೆ ಅನ್ನೋ ವಿವರ ಇಲ್ಲಿದೆ.

ಇದನ್ನೂ ಓದಿ: ಟೆನಿಸ್ ದೈತ್ಯ ಜೊಕೊವಿಕ್ ಗೆಲುವಿನ ಓಟಕ್ಕೆ ಬ್ರೇಕ್..! – ಚೊಚ್ಚಲ ವಿಂಬಲ್ಡನ್ ಗೆದ್ದ ಅಲ್ಕರಾಝ್

20ರ ಹರೆಯದ ಕಾರ್ಲೋಸ್ ಅಲ್ಕರಾಝ್, ಸ್ಪೇನ್ ದೇಶದ ಸ್ಟಾರ್ ಟೆನಿಸ್ ಆಟಗಾರ. 2018 ರಲ್ಲಿ ತನ್ನ ವೃತ್ತಿಪರ ಟೆನಿಸ್ ಲೋಕದ ಮೊದಲ ಪಂದ್ಯವನ್ನಾಡಿದರು. ಆ ಬಳಿಕ ಅಂದರೆ 4 ವರ್ಷಗಳ ನಂತರ 2022 ರಲ್ಲಿ ಯುಎಸ್ ಓಪನ್ ಗೆಲ್ಲುವ ಮೂಲಕ ತಮ್ಮ ಮೊದಲ ಗ್ರ್ಯಾಂಡ್ ಸ್ಲಾಮ್ ಪ್ರಶಸ್ತಿಗೆ ಮುತ್ತಿಟ್ಟರು. ಆಗಲೇ ಅಲ್ಕರಾಝ್ ಎಂಬ ಚುರುಕುಮತಿಯ ಆಟಗಾರ ಎಲ್ಲರಿಗೂ ಚಿರಪರಿಚಿತರಾದರು. ಸುಮಾರು 24,000 ಜನಸಂಖ್ಯೆಯನ್ನು ಹೊಂದಿರುವ ಸಣ್ಣ ಹಳ್ಳಿಯಾದ ಎಲ್ ಪಾಲ್ಮಾರ್ ನಲ್ಲಿ ಜನಿಸಿದ ಅಲ್ಕಾರಾಝ್, ಟೆನ್ನಿಸ್ ಕಡೆಗೆ ಒಲವು ಹೊಂದಿರುವ ಕುಟುಂಬದಲ್ಲಿ ಬೆಳೆದರು. ಅವರ ಅಜ್ಜ ಮತ್ತು ತಂದೆ, ಇಬ್ಬರೂ ವೃತ್ತಿಪರವಾಗಿ ಟೆನಿಸ್ ಆಡಿದ್ದು, ಅವರ ತಂದೆ ಟೆನಿಸ್ ಅಕಾಡೆಮಿಯನ್ನೂ ನಡೆಸುತ್ತಿದ್ದಾರೆ. ಇನ್ನು ಅಲ್ಕರಾಜ್ ಅವರ ತರಬೇತುದಾರರಾಗಿರುವ ಜುವಾನ್ ಕಾರ್ಲೋಸ್ ಫೆರೆರೊ ಕೂಡ ಮಾಜಿ ವಿಶ್ವದ ನಂ. 1 ಶ್ರೇಯಾಂಕಿತರಾಗಿದ್ದು, ಎರಡು ಬಾರಿ ಒಲಿಂಪಿಯನ್ ಆಗಿರುವುದರೊಂದಿಗೆ, 2003 ರಲ್ಲಿ ಫ್ರೆಂಚ್ ಓಪನ್ ಪ್ರಶಸ್ತಿಯನ್ನು ಕೂಡ ಗೆದ್ದಿದ್ದಾರೆ.

ಅಲ್ಕರಾಝ್‌ಗೆ ರಾಫೆಲ್ ನಡಾಲ್ ರೋಲ್ ಮಾಡೆಲ್ ಅಂತೆ. ನನ್ನ ಆಟ ರೋಜರ್ ಫೆಡರರ್ ಅವರಂತೆಯೇ ಇದ್ದರೂ, ನಾನು ಮಾತ್ರ ನನ್ನ ರೋಲ್ ಮಾಡೆಲ್ ಆಗಿರುವ ರಾಫೆಲ್ ನಡಾಲ್ ಅವರಂತೆ ಇರಲು ಬಯಸುತ್ತೇನೆ ಎಂದಿದ್ದರು ಅಲ್ಕರಾಝ್.

ಫೈನಲ್ ಸೋಲಿನ ಬಳಿಕ ಮಾತನಾಡಿದ ಮಾತನಾಡಿದ 23 ಗ್ರ್ಯಾಂಡ್‌ ಸ್ಲ್ಯಾಮ್‌ಗಳ ಒಡೆಯ ನೊವಾಕ್ ಜೊಕೊವಿಕ್‌, ಅಲ್ಕರಾಝ್ ರನ್ನು ಸ್ಪ್ಯಾನಿಷ್ ಬುಲ್ ಎಂದು ಹೊಗಳಿದ್ದಾರೆ. ತಮ್ಮ ವೃತ್ತಿಬದುಕಿನಲ್ಲಿ ಕಾರ್ಲೊಸ್‌ ಅಲ್ಕರಾಝ್‌ ಮಾದರಿಯ ಆಟಗಾರ ಎದುರಾಗೇ ಇಲ್ಲ ಎಂದು ಗುಣಗಾನ ಮಾಡಿದ್ದಾರೆ. ನಂತರ ಮಾತನಾಡಿದ ಜೊಕೊವಿಕ್, ತಮ್ಮ ಕಿರಿಯ ಮಗ ಸ್ಟೀಫನ್ ಉದ್ದೇಶಿಸಿ ಭಾವುಕರಾದರು. ನಾಲ್ಕು ಗಂಟೆ 42 ನಿಮಿಷಗಳ ಸುದೀರ್ಘ ಪಂದ್ಯದುದ್ದಕ್ಕೂ ಕುಳಿತು ನಗುತ್ತಾ ಪಂದ್ಯ ನೋಡುತ್ತಿದ್ದ ಮಗನ ಬಗ್ಗೆ ಹೇಳುತ್ತಾ ಕಣ್ಣೀರು ಸುರಿಸಿದರು. “ನನ್ನ ಮಗ ಇನ್ನೂ ನಗುತ್ತಿರುವುದನ್ನು ನೋಡಲು ಸಂತೋಷವಾಗುತ್ತಿದೆ. ಐ ಲವ್‌ ಯೂ, ನನ್ನನ್ನು ಬೆಂಬಲಿಸಿದ್ದಕ್ಕಾಗಿ ಧನ್ಯವಾದ. ನಾನು ನಿನಗೆ ಬಿಸಿ ಅಪ್ಪುಗೆಯನ್ನು ನೀಡುತ್ತೇನೆ. ನಾವೆಲ್ಲರೂ ಪರಸ್ಪರ ಪ್ರೀತಿಸೋಣ” ಎಂದು ಹೇಳಿದ್ದಾರೆ.

suddiyaana