ಇಬ್ಬರನ್ನು ಬಲಿ ಪಡೆದ ಮೇಲೆ ಕಾಡಾನೆಗಳ ಸೆರೆಗೆ ಕಾರ್ಯಾಚರಣೆ – ಕಡಬಕ್ಕೆ ಬಂದಿಳಿದ ಅಭಿಮನ್ಯು ಮತ್ತು ತಂಡ
ದಕ್ಷಿಣ ಕನ್ನಡ ಜಿಲ್ಲೆ ಕಡಬ ತಾಲೂಕಿನಲ್ಲಿ ಇಬ್ಬರನ್ನು ಬಲಿ ಪಡೆದ ಕಾಡಾನೆಯನ್ನು ಸೆರೆ ಹಿಡಿಯಲು ಕಾರ್ಯಾಚರಣೆ ಶುರುವಾಗಿದೆ. ನಾಗರಹೊಳೆ ಹಾಗೂ ದುಬಾರೆ ಸಾಕಾನೆ ಶಿಬಿರದಿಂದ ಕಡಬಕ್ಕೆ ಐದು ಸಾಕಾನೆಗಳು ಆಗಮಿಸಿದ್ದು ಅಭಿಮನ್ಯು, ಪ್ರಶಾಂತ್, ಹರ್ಷ, ಕಂಜನ್, ಮಹೇಂದ್ರ ಹೆಸರಿನ ಆನೆಗಳು ಕಾರ್ಯಾಚರಣೆ ಆರಂಭ ಮಾಡಿವೆ. ಐದು ತಂಡಗಳ ನೇತೃತ್ವದಲ್ಲಿ ರೆಂಜಿಲಾಡಿ, ಕುಟ್ರುಪಾಡಿ ಗ್ರಾಮದ ಅರಣ್ಯ ವ್ಯಾಪ್ತಿಯಲ್ಲಿ ಕಾರ್ಯಚರಣೆ ನಡೆಸಲಾಗುತ್ತಿದೆ. ಮಂಗಳೂರು ವಿಭಾಗದ ಡಿಸಿಎಫ್ ಡಾ. ದಿನೇಶ್ ಕುಮಾರ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಲಾಗುತ್ತಿದೆ. 50 ಕ್ಕೂ ಹೆಚ್ಚು ಸಿಬ್ಬಂದಿ, ಮಾವುತರು, ಕಾವಾಡಿಗರು, ಸ್ಥಳೀಯರ ಮೂಲಕ ಕಾರ್ಯಾಚರಣೆ ಮುಂದುವರೆದಿದೆ. ಅಲ್ಲದೆ ಇದರಲ್ಲಿ ನಾಗರಹೊಳೆ ಹಾಗೂ ಮಂಗಳೂರಿನ ತಜ್ಞ ವೈದ್ಯಾಧಿಕಾರಿಗಳ ತಂಡವು ಭಾಗಿಯಾಗಿದೆ.
ಇದನ್ನೂ ಓದಿ: ಚಿರತೆ, ಹುಲಿ ದಾಳಿ ಬಳಿಕ ಕಾಡಾನೆ ಅಟ್ಟಹಾಸ – ಕಡಬದಲ್ಲಿ ಇಬ್ಬರನ್ನ ಕೊಂದು ಹಾಕಿದ ಮದಗಜ
ಡ್ರೋನ್ ಕ್ಯಾಮೆರಾ ಮೂಲಕ ಕಾಡಾನೆಗಳ ಚಲನವಲನ ಟ್ರ್ಯಾಕ್ ಮಾಡಿ ಕಾಡಾನೆ ಸೆರೆಗೆ ಪ್ಲಾನ್ ಮಾಡಲಾಗಿದೆ. ಅರಣ್ಯ ಇಲಾಖೆಯ ಪ್ರಕಾರ ನಾಲ್ಕು ಕಾಡಾನೆ ಇರುವ ಬಗ್ಗೆ ಮಾಹಿತಿ ಸಿಕ್ಕಿದೆ. ಫೆಬ್ರವರಿ 20ರಂದು ಎರಡು ಕಾಡಾನೆಗಳು ಕಾಣಿಸಿಕೊಂಡಿದ್ದವು.
ಪೇರಡ್ಕ ಸೊಸೈಟಿ ಸಿಬ್ಬಂದಿಯಾಗಿರುವ ರಂಜಿತಾ ಎಂದಿನಂತೆ ತನ್ನ ಕೆಲಸಕ್ಕೆ ಹೊರಟ್ಟಿದ್ದಳು. ಆದರೆ ಮಾರ್ಗಮಧ್ಯದಲ್ಲಿ ಎದುರಿಗೆ ಆನೆ ಪ್ರತ್ಯಕ್ಷವಾಗಿದೆ. ಇದರಿಂದ ಭಯಗೊಂಡ ರಂಜಿತಾ ಕಿರುಚುತ್ತಾ ಓಡಲು ಆರಂಭಿಸಿದ್ದಾರೆ. ಮನೆಯ ಸಮೀಪ ಯುವತಿ ಕಿರುಚುವ ಧ್ವನಿ ಕೇಳಿ ಒಬ್ಬಂಟಿಯಾಗಿ ವಾಸಿಸುತ್ತಿದ್ದ ರಮೇಶ್ ರೈ ಕೂಡ ಮನೆಯಿಂದ ಹೊರ ಬಂದಿದ್ದಾರೆ. ಆದರೆ ಅಲ್ಲೇ ಇದ್ದ ಇನ್ನೊಂದು ಆನೆ ರಮೇಶ್ ರೈನನ್ನು ಬೆನ್ನಟ್ಟಿದೆ. ಆನೆಯ ಅಟ್ಟಹಾಸಕ್ಕೆ ರಮೇಶ್ ರೈ ಸ್ಥಳದಲ್ಲೇ ದಾರುಣವಾಗಿ ಸಾವನ್ನಪ್ಪಿದ್ರೆ ಇತ್ತ ಆನೆ ದಾಳಿಗೆ ಒಳಗಾದ ರಂಜಿತಾ ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯದಲ್ಲಿ ಮೃತಪಟ್ಟಿದ್ದರು.
ಮೀನಾಡಿ ಪ್ರದೇಶ ಅರಣ್ಯ ಸಂರಕ್ಷಿತ ಪ್ರದೇಶವಲ್ಲದೇ ಇದ್ದರೂ ಸಹ ಕಳೆದ ಅನೇಕ ದಿನಗಳಿಂದ ಇಲ್ಲಿ ಕಾಡಾನೆ ಉಪಟಳ ಹೆಚ್ಚಾಗಿದೆ. ಪ್ರತಿನಿತ್ಯ ವಿದ್ಯಾರ್ಥಿಗಳು ಓಡಾಡುವ ಈ ಮಾರ್ಗದಲ್ಲಿ ಆನೆಗಳು ಓಡಾಡುವುದನ್ನ ಸ್ಥಳೀಯರು ನೋಡಿದ್ದಾರೆ. ಈ ಬಗ್ಗೆ ಅರಣ್ಯ ಇಲಾಖೆಗೆ ದೂರು ಕೂಡಾ ನೀಡಿದ್ದಾರೆ. ಆದರೆ ಅರಣ್ಯ ಇಲಾಖೆಯ ಬೇಜವಾಬ್ದಾರಿಗೆ ಇಬ್ಬರು ಅಮಾಯಕರು ಬಲಿಯಾಗಿದ್ದಾರೆ.